ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲರ ಹಾಗೂ ಬಡವರಿಗಾಗಿ ರೂಪಿಸಿರುವ ಯೋಜನೆಗಳು ಹಾಗೂ ವೈಯಕ್ತಿಕ ಫಲಾನುಭವಿಗಳಿಗಾಗಿ ರೂಪಿಸಿ ಅನುಷ್ಠಾನಗೊಳಿಸಲಾಗಿರುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ನಡೆ ಪ್ರಶ್ನಾರ್ಹವೂ ಹಾಗೂ ದಂಡನಾರ್ಹವೂ ಆಗಿದ್ದು, ಸಂಬಂಧಿತ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕೂಡಲೇ ಗಮನಹರಿಸಿ, ಯೋಜನೆಗಳ ಸಕಾಲಿಕ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರ ಯೋಜನಾ ನಿರ್ದೇಶಕ ಡಾ. ನಾಗೇಂದ್ರ ಎಫ್ ಹೊನ್ನಳ್ಳಿ ಅವರು ಸೂಚಿಸಿದರು.
ಅವರು ಇಂದು ನಗರದ ಜಿಲ್ಲಾಡಳಿತ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ಕ್ಷಮಿಸಲಾಗುವುದಿಲ್ಲ. ಈ ಕುರಿತು ಈಗಾಗಲೇ ಸಂಬಂಧಿತ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ನೋಟೀಸ್ ಜಾರಿಮಾಡಲಾಗಿದೆ ಎಂದ ಅವರು, ನೋಟೀಸ್‌ಗಳಿಗೆ ಉತ್ತರಿಸುವುದರ ಜೊತೆಗೆ ತಮ್ಮ ಜವಾಬ್ದಾರಿಯರಿತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಅಲ್ಲದೇ ಈಗಾಗಲೇ ಸಂಸ್ಥೆಗಳಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳ ಪ್ರಗತಿ, ಪೂರ್ಣಗೊಂಡ ಕಾಮಗಾರಿಗಳು, ಹಣಕಾಸು ಸ್ಥಿತಿಗತಿ ಮುಂತಾದವುಗಳ ಮಾಹಿತಿಯನ್ನು ಜಾಲತಾಣದಲ್ಲಿ ಉನ್ನತೀಕರಿಸುವಂತೆ ಸೂಚಿಸಿದ ಅವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್’ಪಿಎಸ್ ನೌಕರರ ವೇತನದ ವಂತಿಗೆಯ ಹಣ ಕಟಾವಣೆ ಆಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಒಂದು ವೇಳೆ ಅಂತಹ ನೌಕರರು ಆಕಸ್ಮಿಕ ಅವಘಡಗಳಿಗೆ ತುತ್ತಾದಲ್ಲಿ ಎದುರಾಗುವ ಸಮಸ್ಯೆಗಳಿಗೆ ಅಧಿಕಾರಿಗಳೆ ಹೊಣೆಗಾರರಾಗಲಿದ್ದಾರೆ ಎಂದವರು ಎಚ್ಚರಿಸಿದರು.
ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚರಂಡಿಗಳನ್ನು ಸ್ವಚ್ಚಗೊಳಿಸುವುದನ್ನು ನಿರಂತರವಾಗಿಸಬೇಕು. ಮಳೆಗಾಲದ ಸಮಯವಾದ್ದರಿಂದ ಯಾವುದೇ ಚರಂಡಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇದರೊಂದಿಗೆ ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ತಮ್ಮ ಆರೋಗ್ಯವನ್ನು ನೋಡಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಕೆಲವು ಘಟಕಗಳನ್ನು ಹೊರತುಪಡಿಸಿದರೆ ಘನತ್ಯಾಜ್ಯ ವಿಲೇವಾರಿ ಘಟಕಗಳ ನಿರ್ವಹಣೆ ತೃಪ್ತಿದಾಯಕವಾಗಿಲ್ಲ. ಎಲ್ಲಾ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅವುಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು. ಸಂಗ್ರಹಿಸಿದ ತ್ಯಾಜ್ಯವನ್ನು ಬೇರ್ಪಡಿಸಿ ವಿಲೇವಾರಿ ಮಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ ಅವರು, ಪ್ರತಿನಿತ್ಯದ ಕಾರ್ಯನಿರ್ವಹಣೆಗೆ ಅಗತ್ಯವಾಗಿರುವ ಪರಿಕರಗಳನ್ನು ಖರೀದಿಸಿ ಬಳಸುವಂತೆ ಸೂಚಿಸಿದರು.
ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಈ ಹಿಂದಿನ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನ ಹಲವು ವರ್ಷಗಳಿಂದ ಬಳಕೆಯಾಗದೆ ಹಾಗೇಯೇ ಉಳಿಸಿಕೊಂಡಿರುವ ಬಗ್ಗೆ ಮಾಹಿತಿ ಇದೆ. ಅಂತಹ ಅಧಿಕಾರಿಗಳು ಉಳಿಸಿಕೊಂಡಿರುವ ಹಣವನ್ನು ನಿಗಧಿಪಡಿಸಿದ ಉದ್ಧೇಶಕ್ಕಾಗಿಯೇ ವಿನಿಯೋಗಿಸಿ ವರದಿ ನೀಡಿ, ತಪ್ಪಿದಲ್ಲಿ ನಿಯಮಾನುಸಾರ ಅಂತಹ ಅಧಿಕಾರಿಗಳನ್ನು ದಂಡನೆಗೆ ಗುರಿಪಡಿಸಲಾಗುವುದು ಎಂದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ಚಿದಾನಂದ ಎಸ್. ವಟಾರೆ, ಮಂಜುನಾಥ್, ಮೋಹನ್ ಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post