ಹೌದು… ಕರಾವಳಿಯ ಈ ಬಾಲಕ ಇಡಿಯ ದೇಶವೇ ಹೆಮ್ಮೆ ಪಡುವಂತಹ ಪ್ರತಿಭೆ ಎಂಬುದನ್ನು ಆರಂಭದಲ್ಲೇ ಹೇಳುತ್ತೇನೆ.
ಆತ ಐದು ವರ್ಷ ಪ್ರಾಯದ ಬಾಲಕ ತಕ್ಷೀಲ್ ಎಂ ದೇವಾಡಿಗ. ಮಂಗಳೂರಿನ ದೇರೆಬೈಲ್ ಕೊಂಚಾಡಿಯ ವೃತ್ತಿಯಲ್ಲಿ ಉಪನ್ಯಾಸಕರಾದ ಮಹೇಶ್ ದೇವಾಡಿಗ ಹಾಗೂ ವೃತ್ತಿಯಲ್ಲಿ ವಕೀಲರಾದ ಕಿರಣ ದೇವಾಡಿಗ ಅವರ ಸುಪುತ್ರ.
ವೃಂದಾವನ ಪ್ಲೇ ಮತ್ತು ನರ್ಸರಿ ಶಾಲೆಯಲ್ಲಿ ವ್ಯಾಸಂಗ ಕಲಿಯುತ್ತಿರುವ ತಕ್ಷೀಲ್ ಎಂ. ದೇವಾಡಿಗ, ತನ್ನ 6 ತಿಂಗಳ ವಯಸ್ಸಿನಲ್ಲಿಯೇ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಬಹುಮಾನವನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದಾನೆ.
ಅತೀ ಕಿರಿಯ ವಯಸ್ಸಿನಲ್ಲಿ ಎರಡು ವರ್ಷ ವಯಸ್ಸಿನಲ್ಲೇ ಈ ಬಾಲಕ ಪ್ರಪಂಚದ ಯಾವುದೇ ದೇಶದ ಭೂಪಟವನ್ನು ತೋರಿಸಿದರೆ ಅದರ ದೇಶದ ಹೆಸರು ಮತ್ತು ಅದರ ರಾಜಧಾನಿಯನ್ನು ಹಾಗೂ ಬಾಹ್ಯಾಕಾಶದ ಗ್ರಹಗಳ ಬಗ್ಗೆ ಹೇಳುವಲ್ಲಿ ನಿಪುಣರಾಗಿದ್ದ ಎನ್ನುವುದು ಪ್ರಶಂಸನೀಯ ವಿಚಾರ. ಈತನ ಈ ಜ್ಞಾಪಕ ಶಕ್ತಿ ಕಂಡು ಅವರ ಎರಡು ವರ್ಷ ವಯಸ್ಸಿಗೆ ಕರಾವಳಿ ಲಿಟಲ್ ಸ್ಟಾರ್ ಅವಾರ್ಡ್ 2017 ಅತೀ ಕಿರಿಯ ವಯಸ್ಸಿನಲ್ಲಿ ಇವರ ಮುಡಿಗೇರಿತು.
ಇನ್ನು ಕೃಷ್ಣವೇಷ ಸ್ಪರ್ಧೆ, ಛದ್ಮವೇಷ, ಸಂಗೀತ, ಯಕ್ಷಗಾನ, ಸ್ಯಾಕ್ಸೊಫೋನ್ ಮುಂತಾದ ಕಲೆಗಳನ್ನು ಈ ಚಿಕ್ಕ ವಯೋಮಾನದಲ್ಲೇ ಕರಗತ ಮಾಡಿಕೊಂಡಿದ್ದಾನೆ ಈತ. ಇದರೊಂದಿಗೆ ಯಕ್ಷಗಾನವನ್ನು ಕಟೀಲು ಮಕ್ಕಳ ಮೇಳದ ರಾಜೇಶ್ ಕಟೀಲ್ ಅವರಲ್ಲಿ ಹಾಗೂ ಸ್ಯಾಕ್ಸೋಫೋನ್ ವಾದನವನ್ನು ಕೆಲ ಸುಧಾಕರ್ ಅವರಿಂದ ಪಡೆಯುತ್ತಿದ್ದಾನೆ.
ಅತೀ ಕಿರಿಯ ವಯಸ್ಸಿನಿಂದ ಅಂದರೆ ನಾಲ್ಕು ವರ್ಷ ಪ್ರಾಯದಿಂದಲೇ ಚೆಸ್ ತರಬೇತಿಯನ್ನು ನಗರದ ಕಿಂಗ್ಸ್ ಚೆಸ್ ಅಕಾಡೆಮಿಯಲ್ಲಿ ಪಡೆಯುತ್ತಿದ್ದಾರೆ. ಚೆಸ್ ಆಟದಲ್ಲಿ ಈಗಾಗಲೇ ಅಂತರ್ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಆಟ ಆಡಿ 10ಕ್ಕೂ ಮಿಕ್ಕಿ ಬಹುಮಾನವನ್ನು ಪಡೆದುಕೊಂಡ ಸಾಧನೆ ಈ ಪೋರನದು.
ಇನ್ನು ಈತನಲ್ಲಿ ವಿಶೇಷ ಪ್ರತಿಭೆಯೊಂದಿದೆ. ಅದೇನೆಂದರೆ ತುಳು ಭಾಷೆಯನ್ನು ಮೂಲ ಸೊಗಡಿನಲ್ಲಿ ಮಾತನಾಡಿ ದೈವದ ಪಾರಿ, ದೈವದ ನುಡಿ, ಬಲೀಂದ್ರ ಲೆಪ್ಪುನು, ತುಳು ನಿರೂಪಣೆ, ಪಾರ್ದನ, ಪೊಲಿ ಲೆಪ್ಪುನು, ಸಿರಿ ಪಾರ್ದನ ಹೀಗೆ ಅನೇಕ ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಅನೇಕ ವಿಷಯವನ್ನು ತಿಳಿದುಕೊಂಡು ಪ್ರದರ್ಶನವನ್ನು ನೀಡುತ್ತಾ ಬಂದಿದ್ದಾನೆ.
200 ಕ್ಕೂ ಅಧಿಕ ಪ್ರದರ್ಶನ ಹಾಗೂ 180 ಬಹುಮಾನವನ್ನು ಪಡೆದಿರುವ ಈ ಬಾಲಕ ಅಂತಾರಾಷ್ಟ್ರೀಯ ಕೃಷ್ಣ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ಉಡುಪಿ ಸ್ವಾಮೀಜಿಯವರಿಂದ ಬೆಳ್ಳಿ ತುಳಸಿ ಮಾಲೆಯನ್ನು ಬಹುಮಾನವನ್ನು ಪಡೆದುಕೊಂಡು ಶ್ರೀಗಳವರ ಮೆಚ್ಚುಗೆಗೆ ಪಾತ್ರರಾಗಿದ್ದಾನೆ.
ತುಳು ಭಾಷೆಯಲ್ಲಿ ಈತ ಹೊಂದಿದ ಜ್ಞಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ 2018ರಲ್ಲಿ ಪಡೆದು ಜಿಲ್ಲೆಯಲ್ಲಿ ಅತೀ ಕಿರಿಯ ವಯಸ್ಸಿನಲ್ಲಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾನೆ. ತುಳುನಾಡ ಸಿರಿ ಕುರಲ್, Thawlava ಕುಮಾರ ಪ್ರಶಸ್ತಿ ಹಾಗೂ ಮೇ ತಿಂಗಳಲ್ಲಿ ಹಾಗೂ ಜೂನ್ ಎರಡು ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆಯಲಿದ್ದಾನೆ ಎಂದು ಹೇಳಲು ಇಡಿಯ ತುಳುನಾಡು ಹೆಮ್ಮೆ ಪಡುತ್ತದೆ.
ಮೊನ್ನೆ ನಡೆದ ಕರಾವಳಿ ಯಕ್ಷ ಮಿತ್ರರು (ವಾಟ್ಸಪ್ ಬಳಗ) ಮತ್ತು ಬಹುಮುಖ ಪ್ರತಿಭೆಗಳ ಸಂಗಮ (ವಾಟ್ಸಪ್ ಬಳಗ) ಇವರಿಂದ ಕರಾವಳಿ ಸಿರಿ ಎಂಬ ಬಿರುದನ್ನು ಪಡೆದಿದ್ದು, ಈತನ ಅಪ್ರತಿಮ ಸಾಧನೆ ಕಂಡು ಬಹುಮುಖ ಪ್ರತಿಭೆ ಎಂಬುದಾಗಿ 12 ಸನ್ಮಾನ ಅರಸಿ ಬಂದಿದೆ. ಇಂತಹ ಕರಾವಳಿಯ ಪೋರನ ಈ ಸಾಧನೆ ಇನ್ನೂ ಉನ್ನತ ಮಟ್ಟಕ್ಕೆ ಏರಲಿ ಎಂದು ಹಾರೈಸುತ್ತೇವೆ.
ಲೇಖನ, ಚಿತ್ರಕೃಪೆ, ವೀಡಿಯೋ: ಪ್ರಕಾಶ್ ಶೆಟ್ಟಿ ತುಳುವೆ
ಮಾಹಿತಿ ಸಂಗ್ರಹ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
Discussion about this post