ಶ್ರೀ ವಾಯು ಪುರಾಣಾಂತರ್ಗತ ಶ್ರೀವೇದವ್ಯಾಸ ದೇವರು ಹೇಳಿದ ಮಾತೃ ವೈಭವಮ್. ಅಮ್ಮ ಎನ್ನುವ ಅಕ್ಷರದಲ್ಲಿ ಅಮೃತ ವಿದೆ. ಅಮ್ಮ ಎಂಬ ಎರಡಕ್ಷರದಲ್ಲಿ ಅಪ್ಯಾಯತೆ – ಅಂತಃಕರಣ – ವಾತ್ಸಲ್ಯ ತುಂಬಿದೆ. ಅಮ್ಮ ಅಂದರೆ….. ಗಾಳಿಗೆ ಗೊತ್ತು. ನಕ್ಷತ್ರಗಳಿಗೆ ಗೊತ್ತು. ಆ ಚಂದಮಾಮ ಬಲ್ಲ. ಧರೆ ಬಲ್ಲಳು. ಪ್ರೀತಿ – ತ್ಯಾಗ – ಸಹನೆ – ಧೈರ್ಯ – ಕಳಕಳಿಯ ರೂಪ ಅವಳು.
ಸಂಪೂರ್ಣ ಸ್ತ್ರೀ ಆದಾಗ ತನ್ನನ್ನು ಮರೆಯುತ್ತಾಳೆ. ಬರುವ ಕಂದನನ್ನು ಮರೆತೂ ಮರೆಯಳು. ಒಂದೊಂದು ಕ್ಷಣವನ್ನೂ ಅನುಭವಿಸುತ್ತಾಳೆ. ಕಲ್ಪನೆ – ಸ್ಪರ್ಶ – ನೋವುಗಳು ಒಟ್ಟೊಟ್ಟಿಗೆ. ಒಂದು ಆಕೃತಿಯ ರಚನೆಯನ್ನು ಎಳೆಎಳೆಯಾಗಿ ಬಿಡಿಸಿಕೊಳ್ಳುತ್ತಾಳೆ. ಹೊಟ್ಟೆ ತುಂಬಿದ್ದರೂ ತುಸು ಹೆಚ್ಚಾಗಿಯೇ ಆಹಾರವನ್ನು ತೆಗೆದುಕೊಳ್ಳುತ್ತಾಳೆ.
ಅಷ್ಟು ವರುಷ ತನಗಾಗಿ ತೋರದ ಕಾಳಜಿಯನ್ನು ಜೋಪಾನವಾಗಿ ಪ್ರಕಟಿಸುತ್ತಾಳೆ. ಬಾಳಿನಲ್ಲಿ ಬಂದು ಹೋದ ಕೆಲವೇ ಕೆಲವು ನೆನಪುಗಳನ್ನು ಆಹ್ವಾನಿಸಿಕೊಳ್ಳುತ್ತಾ ವಾಸ್ತವಿಕವಾಗಿ ಯಾವುದೇ ತೊಂದರೆ ಇದ್ದರೂ ಗಮನಿಸದೇ ಹಣನ್ಮುಖತೆಯೆಡೆಗೆ ಜಾರುತ್ತಾಳೆ. ಎದ್ದಾಗ – ಬಿದ್ದಾಗ – ಒದ್ದಾಗ ಸದ್ದಾಗದಂತೆ ಅವಡುಗಚ್ಚುತ್ತಾಳೆ. ಮಗುವಿಗಾಗಿ ನಗುತ್ತಾಳೆ.
ಸೃಷ್ಟಿಯಾದಾಗ ದೃಷ್ಟಿಸಿ ನೋಡುತ್ತಾ ಬಿಂಬ – ಪ್ರತಿಬಿಂಬ – ರೂಪ – ಅನುರೂಪಗಳ ಎಣಿಕೆಯ ಪ್ರಾಣಗಳನ್ನು ಕಣ್ಣಿನಲ್ಲಿ – ತುಟಿಯಲ್ಲಿ – ಕರಗಳಲ್ಲಿ – ಅಪ್ಪುಗೆಯಲ್ಲಿ – ಎದೆಯಲ್ಲಿ ತೋರುತ್ತಾಳೆ.
ಹಗಲು – ರಾತ್ರಿ – ನಿದ್ದೆ – ಆಯಾಸಗಳು ಅಲ್ಲಿ ಇಲ್ಲ! ಅಲ್ಲಿರುವುದು ಬರೀ ಪ್ರೀತಿ!!! ತನಗಾಗಿ ಬಂದ ಮಗು ದೇವರು ಕೊಟ್ಟ ಹೂವು. ತಾಯ್ತನ ತುಂಬಿದ ಆ ಕಂದನನ್ನು ಎವೆಯಿಕ್ಕದೆ ಸಮಯದ ಪರಿವೆಯಿಲ್ಲದ ಕಣ್ತುಂಬಕೊಳ್ಳುತಾಳೆ.. ಆಕೆ ಅಮ್ಮ…….. !!
ಅಮ್ಮ ಮೊದಲೇ? ದೇವರು ಮೊದಲೇ? ವೇದ ಹೇಳುತ್ತದೆ ಅಮ್ಮನೇ ದೇವರು! ಆಕೆಗೆ ಮಗುವಿನ ನಾಡಿ ಮಿಡಿತ ಗೊತ್ತು.
ಉಸಿರಿನ ವೇಗ ಕೊಂಬೆ ಬಲ್ಲದು. ಬಳ್ಳಿಗೆ ನೀರುಣಿಸುವಂತೆ ದೃಷ್ಟಿಯಾಗದಿರಲೆಂದು ಸೆರಗು ಮುಚ್ಚಿ ಅಮೃತ ಕುಡಿಸುತ್ತಾಳೆ. ಮಗು ನಿದ್ರಿಸುತ್ತೆ. ತಾಯಿಯ ಮನ – ತನು ಎಚ್ಚರವಿರುತ್ತೆ. ಮತ್ತೆ ಮತ್ತೆ ಏಳುತ್ತದೆ. ತಾಯಿ ಇಂಪಾದ ದನಿ; ತೂಗುವಾಗ ಮಧ್ಯದಲ್ಲಿ ಬೇಕಂತಲೇ ಅಳುವುದು. ಅಮ್ಮನ ಮೊಗ ಮತ್ತೆ ದಿಟ್ಟಿಸಲು ಆ ತಾಯಿಗೂ ಗೊತ್ತು ಮಗು ಆಟವಾಡುತ್ತಿದೆಯೆಂದು. ಆದರ ಜೊತೆ ಆ ಮಾತೃ ಹೃದಯವೂ ಆಟವಾಡುತ್ತದೆ. ಮಧುರ ಸ್ವರ, ಹುಸಿ ಮುನಿಸು, ತೋರೆಗೊಡದ ನಗು ಇಬ್ಬರಿಗೂ ಬೇಕು. ಪ್ರಕೃತಿಯ ನಿಯಮದಂತೆ ಬೆಳೆಯುತ್ತದೆ. ಆದರೆ ಆ ತಾಯಿ ಅಲ್ಲಿಯೇ ನಿಲ್ಲುತ್ತಾಳೆ. ಕ್ರಮೇಣ ಮಾಡು ಮರೆತು ಬಿಡುತ್ತದೆ. ಗೆಳತಿ – ಸಂಗಾತಿ ದೊರೆತಾಗ ಅಮ್ಮನಿಂದ ಅದು ಬಹುದೂರ. ಮಾತೃ ಹೃದಯ ಮಮತೆಯಿಂದ ಮನದಲ್ಲಿ ಮಗುವಿಗೆ ಜೋಕಾಲಿ ತೂಗುತ್ತಲೇ ಇರುತ್ತಾಳೆ. ಅದು ನಿರಂತರ. ಅಂತಹಾ ಕರುಣಾಮಯಿಯಾದ ತಾಯಿ ಋಣವನ್ನು ತೀರಿಸಲು ಅಸಾಧ್ಯ! ಆದುದರಿಂದ ಮುತ್ತೈದೆಯಾಗಿ ಮರಣ ಹೊಂದಿದ ತಾಯಿಗೆ ಅವಿಧವಾ ನವಮೀಯಂದೇ ಶ್ರಾದ್ಧ ಮಾಡಬೇಕು. ಎಲ್ಲಿ ತಾಯಿಯ ಋಣದ ಪರಿಹಾರ ನೆನಿಸಿ 16 ಪಿಂಡಗಳನ್ನು ಇಡಲಾಗುತ್ತದೆಯೋ ಅದನ್ನು ನೆನೆಸಿಕೊಂಡಾಗ ಕರುಳು ಕಿವಿಚಿದಂತಾಗುತ್ತದೆ. ಕಲ್ಲೆದೆಯ ಮನಸ್ಸು ಕೂಡಾ ಕರಗುತ್ತದೆ. ನಿಮ್ಮ ತಂದೆ – ತಾಯಿಗಳು ನಿಮ್ಮನ್ನು ನೋಡಿಕೊಂಡಂತೆ ನೀವು ನಿಮ್ಮ ಮಕ್ಕಳನ್ನು ನೋಡಿಕೊಳ್ಳಲಾರಿರಿ. ಅವರು ತಮ್ಮ ಸುಖವನ್ನು ತ್ಯಾಗ ಮಾಡಿ ನಿಮಗೆ ಸುಖ ಕೊಟ್ಟರು. ಹೀಗಾಗಿ ಅರ್ಥ ತಿಳಿದು ಪಿಂಡ ಪ್ರದಾನ ಮಾಡಿ!!
ಶ್ರೀ ವೇದವ್ಯಾಸದೇವರು ವಾಯುಪುರಾಣದಲ್ಲಿ ಮಾತೃ ವೈಭವವನ್ನು ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ. ವಾಯುಪುರಾಣದಲ್ಲಿ ಶ್ರೀ ವೇದವ್ಯಾಸದೇವರು ತಾಯಿಯ ವೈಭವವನ್ನು ಸಜ್ಜನರ ಮಾಹಿತಿಗಾಗಿ…
ಗರ್ಭೇ ಚ ವಿಷಮೇ ದುಃಖಂ ವಿಷಮೇ ಭೂಮಿವರ್ತ್ಮನಿ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್॥1॥
ನಾನು ಗರ್ಭದಲ್ಲಿರುವುದರಿಂದ ನಿನಗೆಷ್ಟು ಕಷ್ಟವಾಯಿತು? ಅತಿಥಿಗಳು ಮನೆಗೆ ಬಂದರೇನೇ ಮನೆಯವರ ಸ್ವಾತಂತ್ರ್ಯ ಹೋಗುವುದು. ಹೀಗಿರುವಾಗ 9 ತಿಂಗಳು ನಿನ್ನೊಳಗೆ ಬಂದುದರಿಂದ ನಿನ್ನ ದೇಹಕ್ಕೆ ಎಷ್ಟೊಂದು ವಿಕಾರವಾಯಿತು ಮತ್ತು ದುಃಖವಾಯಿತು. ಊಟವಾದಾಗ ತಿಂದಿದ್ದೆಲ್ಲಾ ವಾಂತಿ, ಹೊಟ್ಟೆ ಹೊತ್ತು ಸಮಾರಂಭದಲ್ಲಿ ಭಾಗವಹಿಸಲು ಆಗಲಿಲ್ಲ. ಮನೆ – ಸಮಾರಂಭ – ಸಮಾಜದಲ್ಲಿ ಮುಜುಗರವಾದರೂ ನನಗಾಗಿ ಅದನ್ನು ಸಹಿಸಿಕೊಂಡಿರುವ ನಿನಗೆ ನಮನ! ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!
ಯಾವತ್ಪುತ್ರೋ ನ ಭವತಿ ತಾವನ್ಮಾತುಶ್ಚ ಶೋಚನಮ್
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ॥2॥
ಗರ್ಭದಲ್ಲಿ ನಾನು ಹೊರಗೆ ಬರುವ ತನಕ ನಿನಗಾದ ಶೋಕಕ್ಕೆ ಕೊನೆಯಿಲ್ಲ. ಸಿಕ್ಕಾಪಟ್ಟೆ ತಿರುಗಾಡಲಾಗದು. ಮಗುವಿಗೆ ಏನಾದೀತೋ ಎಂಬ ಭಯ. ಅಡ್ಡಾದಿಡ್ಡಿಯಾಗಿ ಬಂದರಂತೂ ನನಗಾಗಿ ನಿನ್ನ ಪ್ರಾಣವೇ ಹೋದರೆ ಎಂಬ ಭಯ ಬೇರೇ. ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!
ಶೈಥಿಲ್ಯೇ ಪ್ರಸವೈಃ ಪ್ರಾಪ್ತೆ ಮಾತಾ ವಿಂದಂತಿ ತತ್ಕೃತಂ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ॥3॥
ತಾಯಿಯಾದ್ದರಿಂದ ನಿನ್ನ ದೇಹ ಸೌಷ್ಠವ ಹಾಳಾಗುತ್ತದೆ. ಹಾಳಾದರಾಗಲಿ ಮಗು ಮುದ್ದಾಗಿರಬೇಕು ಎಂದು ನನಗಾಗಿ ನಿನ್ನ ತ್ಯಾಗ ಎಷ್ಟು ದೊಡ್ಡದು. ನಾನು ಇದ್ದುದ್ದು 9 ತಿಂಗಳು. ನೀ ಒದ್ದಾಡಿದ್ದು ಅದಕ್ಕಾಗಿ ಜೀವನ ಪರ್ಯಂತ! ಪ್ರೇಮಮಯಿಯೇ ಆದರೂ ನನ್ನನ್ನು ನೀನು ನಲಿವಿನಿಂದ ಕಾಪಾಡಿದೆ! ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!
ಸಂಪೂರ್ಣೇ ದಶಮೇ ಮಾಸೀ ಮಾತಾ ಕ್ರಂದಂತಿ ದುಷ್ಕೃತಂ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ॥4॥
ತಿಂಗಳು ತುಂಬಿದಂತೆ ನಾನಂತೂ ಗರ್ಭದಲ್ಲಿ ಬೆಳೆಯುತ್ತಿದ್ದೆ. ನಿನ್ನ ಚಿಂತೆ, ಯೋಚನೆ ದುಪ್ಪಟ್ಟು ಬೆಳೆಯುತ್ತಿತ್ತು. ನೀನು ಆಗ ಯಾರ ಬಳಿ ಹೇಳಿಕೊಳ್ಳದೆ ಒಳಗೊಳಗೆ ಅತ್ತೆ. ನಾನು ಸತ್ತರೂ ಸರಿ ಮಗು ಬದುಕಿದರೆ ಸಾಕು ಎಂದುಕೊಂಡಿ! ಅಮ್ಮಾ! ಆ ನಿನ್ನ ತ್ಯಾಗಕ್ಕೆ ನಾನೇನು ನೀಡಲಿ! ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!
ದಿವಾ ರಾತ್ರೌ ಚ ಯಾ ಮಾತಾ ಸ್ತನಂ ದತ್ವಾ ಚ ಪಾಲಿತಾ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ॥5॥
ಹಗಲೂ ರಾತ್ರಿ ಹಾಲಿಗಾಗಿ ಅತ್ತೆ. ನಿನ್ನ ಸವಿ ನಿದ್ದೆ ಧ್ವಂಸವಾಯಿತು. ಆದರೂ ನನಗೆ ಹಾಲು ನೀಡಿ ನನ್ನ ಓಲೈಸಿದೆ. ನಿನ್ನ ನಿದ್ದೆ ಹಾಳಾದರೂ ನಾನು ಮತ್ತೆ ಮಲಗಿದ್ದ ಕಂಡು ಒಳಗೊಳಗೇ ಖುಷಿ ಪಟ್ಟೆ! ಅಮ್ಮಾ ನಿನ್ನ ಋಣಕ್ಕೆ ಸರಿಸಾಟಿ ಏನಿದೆ? ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!
ಅಗ್ನಿನಾ ಶೋಚ್ಯತೇ ದೇಹೇ ತ್ರಿರಾತ್ರೋ ಪೋಷಣೇನ ಚ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್॥6॥
ನಾನು ಹಾಲು ಕುಡಿದಾಗ ಶೀತ ಹೋಗಿ ನಿನ್ನ ದೇಹವೇ ಉಷ್ಣವಾಗುತ್ತಿತ್ತು. ಆದರೂ ನೀನು ಹಾಲು ಕುಡಿಸುವುದು ನಿಲ್ಲಿಸಲಿಲ್ಲ. ದೇಹ ಬಿಸಿ ಕಾಪಾಡಿ ಬಿಸಿ ಬಿಸಿ ಹಾಲು ಕೊಟ್ಟೆ. ಆದರೆ ಈಗ ನಾನು ಅದನ್ನು ನೆನಿಪಿಸಿ ಋಣ ಪರಿಹಾರಕ್ಕಾಗಿ ಪಿಂಡ ಪ್ರದಾನ ಮಾಡುತ್ತಿರುವೆ.
ರಾತ್ರೌ ಮೂತ್ರ ಪರೀಷಾಭ್ಯಾಂ ಭಿದ್ಯತೇ ಮಾತೃಕರ್ಪಟೈಃ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ॥7॥
ರಾತ್ರಿ ಮಲ ಮೂತ್ರ ವಿಸರ್ಜಿಸಿ ಅತ್ತೆ. ಆಗ ನಿನ್ನ ನಿದ್ದೆ ಹಾಳಾಯಿತು. ಹಾಸಿಗೆಯೆಲ್ಲಾ ಒದ್ದೆ. ದುರ್ಗಂಧ ಮುಜುಗರ ಎಲ್ಲಾ ನಿನಗೆ ತಂದೆ. ಕಸ ಮಾಡಿದ ನನ್ನನ್ನು ನೀನು ತಳ್ಳದೇ ಎತ್ತಿಕೊಂಡೆ. ಅಸಹ್ಯ ಮಾಡಿದ ನನ್ನನ್ನು ಎತ್ತಿಕೊಂಡೆ. ತೊಡೆ ಏರಿದ ನಾನು ನಿನ್ನ ಸೀರೆಯನ್ನೆಲ್ಲಾ ತೋಯಿಸಿದೆ. ಆದರೆ ನೀನು ಬೇಸರ ಮಾಡಿಕೊಳ್ಳದೆ ನನ್ನ ಬೆಚ್ಚಿಗಿಟ್ಟೆ. ಇದು ನಿನ್ನ ದಿನಗಟ್ಟಲೆಯಲ್ಲ! ವರ್ಷಗಟ್ಟಲೆ ನನಗೆ ಹರ್ಷ ತಂದು ಕೊಟ್ಟೆ. ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ.
ಮಾಸಿ ಮಾಸಿ ವಿದಾಘೇ ಚಶರೀರ ತಾಪ ದುಃಖಿತಾ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ॥8॥
ಚಳಿ, ಬಿಸಿಲು, ಮಳೆ, ಗಾಳಿಯಿಂದ ಋತು ಬದಲಾದಂತೆ ನನ್ನ ಆರೋಗ್ಯ ಏರು ಪೇರಾಯಿತು ಆದರೂ ನನ್ನನ್ನು ಹೆಗಲೇರಿಸಿ ಕೊಳ್ಳುವುದನ್ನು ನೀನು ಬಿಡಲಿಲ್ಲ. ನಿನಗೆ ಜ್ವರ ಬಂದರೂ ನನ್ನನ್ನು ಜೋಪಾನ ಮಾಡಿದೆ. ಚಳಿ ಆದರೂ ನೀನು ನನ್ನ ಬಳಿಯೇ ಇದ್ದೆ. ಅಮ್ಮಾ! ನನಗಾಗಿ ನೀನು ನರಳಿದೆ. ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!!
ಗಾತ್ರಭಂಗೋ ಭವೇನ್ಮಾತು: ಘೋರ ಬಾಧೇ ಪ್ರಪೀಡಿತೇ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ॥9॥
ನಾನು ನಿನಗೆಷ್ಟು ಬಾರಿ ತುಂಟತನ ಮಾಡಿಲ್ಲ. ನಾನೇನೋ ನಿನ್ನ ದೇಹದ ಮೇಲೆ ಕಾಲಿನಿಂದ ನಲಿದೆ. ನನಗೆ ನಲಿವು. ನಿನಗೆ ನೋವು. ಆದರೂ ನೀನು ನನ್ನನ್ನು ಕೆಳಗಿಳಿಸಲಿಲ್ಲ. ಬದಿಗಿಡಲಿಲ್ಲ. ಬಾಧೆ ಬಂದರೂ ಸಹ ಪೀಡೆಯಾದರೂ ಸಹಾ ಪ್ರೀತಿಸಿದೆ. ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!
ಪಾದಾಭ್ಯಾಂ ಜನಯೇತ್ಪುತ್ರೋ ಜನನೀ ಪರಿವೇದನಮ್
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ॥10॥
ಗರ್ಭದಲ್ಲಿದ್ದಾಗ ನಿನಗೆ ಒದ್ದೆ. ಮಗುವಾಗಿದ್ದಾಗ ಕಾಲಿಂದ ಜಾಡಿಸಿದೆ. ಬೆಳೆದ ನಂತರವೂ ನಿನಗೆ ಕಾಲು ತೋರಿಸಿದ್ದುಂಟು. ನೀ ಮಾಡಿದ್ದೆಲ್ಲಾ ಕಾಲು ಕಸ ಎಂದು ಕಡೆಗಾಣಿಸಿದೆ. ಕಾಲಿಂದ ನಿನಗೆ ಕೊನೆಗಾಣದ ಕಂಬನಿ ನೀಡಿದೆ. ಅಮ್ಮಾ ನನ್ನ ತುಂಟತನದಿಂದ ನಿನ್ನನ್ನು ಗೋಳಾಡಿಸಲಿಲ್ಲವೇ? ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!
ಅಲ್ಪಾಹಾರಗತಾ ಮಾತಾ ಯಾವತ್ಪುತ್ರೋಠಸ್ತಿ ಬಾಲಕಃ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ॥11॥
ಅಂದು ನಾನು ಮಲಗಿದ್ದಾಗ ನನಗಾಗಿ ನಿನ್ನ ಊಟದ ಸಮಯ ಎಷ್ಟು ಬಾರಿ ಮುಂದೆ ಹೋಗಿಲ್ಲವೇ? ತೊಡೆಯ ಮೇಲೆ ಮಲಗಿಕೊಂಡಾಗ ನಿನ್ನ ಊಟಕ್ಕೆ ಅಡ್ಡಿಯಾಗಲಿಲ್ಲವೇ? ಊಟದ ವೇಳೆಯಲ್ಲಿ ಮಲ ವಿಸರ್ಜನೆ ಮಾಡಿ ನಿನಗೆ ಮುಜುಗರ ಮಾಡಲಿಲ್ಲವೇ? ಬಡತನದಲ್ಲಿ ನನಗಾಗಿ ಊಟ ಮಾಡದೇ ನೀನು ಉಪವಾಸ ಮಲಗಿರಬಹುದು. ಮತ್ತಾರು ಅಡಿಗೆ ಮಾಡುವವರು ಎಂದು ಹಾಗೆಯೇ ಮಲಗಿರಬಹುದು. ಊಟದ ವೇಳೆ ರಂಪ ಮಾಡಿ ಎಷ್ಟು ಬಾರಿ ನಿನ್ನ ಊಟ ತಪ್ಪಿಸಲಿಲ್ಲ? ಅಂತೂ ಅಲ್ಪನಾದ ನನ್ನಿಂದ ನಿನ್ನ ಆಹಾರ ಸ್ವಲ್ಪವಾಯಿತು. ನೆನಿಸಿಕೊಂಡಾಗ ಮನಸ್ಸು ಸಂಕೋಚದ ಮುದ್ದೆಯಾಗುವುದು. ಅದರ ಮುಂದೆ ಪಿಂಡ ರೂಪವಾದ ಅನ್ನದ ಮುದ್ದೆ ಕೇವಲ ಸಾಂಕೇತಿಕ ಅಲ್ಲವೇ? ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!
ಪಿಬಂತಿ ಕಟುಕ ದ್ರವ್ಯಂ ಮಾತಾ ಯಸ್ಯ ಹಿತಾಯ ಚ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್ ॥12॥
ಬೇಗ ಪ್ರಸವವಾಗಲೀ ಎಂದು ಕಹಿಯ ಜೀರಿಗೆ ಕಷಾಯ ಕುಡಿದೆ. ಮಗುವಿಗೆ ನೆಗಡಿಯಾಗದಿರಲಿ ಎಂದು ಮೆಣಸಿನ ಸಾರು ನೀ ಕುಡಿದೆ. ಮಗುವಿಗೆ ಆರೋಗ್ಯವಿರಲಿ ಎಂದು ತಲೆಗೆಲ್ಲಾ ಸುತ್ತಿಕೊಂಡು ಒದ್ದಾಗಿದೆ. ನಾನು ಬರುವ ತನಕ ನಿನಗೆ ಬಂಧನ. ಬಂದ ಮೇಲೆ ಆಹಾರ ನಿಬಂಧನ. ಆದರೂ ತಪ್ಪಲಿಲ್ಲ ನಿನ್ನ ಪ್ರೀತಿಯ ಬಾಹು ಬಂಧನ. ಎರಡೂ ಕೈಯಿಂದ ಎರಡು ಮಾತಾಡದೇ ಮಾಡಿರುವ ಸೇವೆಗೆ ಒಂದೇ ಕೈಯಿಂದ ಪಿಂಡ ಪ್ರದಾನ ಮಾಡುವುದು ನಿಜವಾಗಲೂ ಋಣ ತೀರಿಸಲು ಅಲ್ಲ! ಕರ್ತವ್ಯದ ಸಂಕೇತಕ್ಕಾಗಿ! ನನಗಾಗಿ ನೀನು ಔಷಧ ಕುಡಿದೆ. ನಿದ್ದೆಗೆಟ್ಟು ನೀನು ಒದ್ದಾಡಿದೆ. ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!
ಪುತ್ರೋ ವ್ಯಾಧಿ ಸಮಾಯುಕ್ತೋ ಮಾತಾಕ್ರಂದನಕಾರಿಣೇ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃಪಿಂಡಂ ದದಾಮ್ಯಹಮ್ ॥13॥
ನನಗೆ ರೋಗ ಬಂದಾಗ ಅತ್ತು ದೇವರಲ್ಲಿ ಬೇಡಿ ಔಷಧಿಗಾಗಿ ಅಲೆದಾಡಿ ರಾತ್ರಿ ನಿದ್ದೆಗೆಟ್ಟಿದ್ದು ನೀನು. ನಾನು ಅಳುವುದಕ್ಕೆ ಮೊದಲು ನೀನು ಅತ್ತೆ. ತಿಳುವಳಿಕೆಯಿಲ್ಲದ ನನಗಾಗಿ ನೀನು ಅಷ್ಟು ಮಾಡಿರುವಾಗ ಈಗ ನಾನು ನಿನಗೆ ಏನು ಕೊಡಲಿ? ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!
ಮಾಸೇ ಮಾಸೇ ಕೃತಂ ಕಷ್ಟಂ ವೇದನಾ ಪ್ರಸವೇಷು ಚ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್॥14॥
ತಿಂಗಳು ಉರುಳುತ್ತಿದ್ದಂತೆ ನಿನ್ನ ಮುಜುಗರ ಹೆಚ್ಚಾಯಿತು. ಮಗು ಬರುವ ತನಕ ಹೆಜ್ಜೆ ಹೆಜ್ಜೆಗೂ ಗಾಬರಿ. ಬರುವ ದಿನ ಬದುಕುವುದೇ ಕಷ್ಟ. ತಾಯಿಯಾದ ನೀನು ಸತ್ತರೂ ಪರವಾಗಿಲ್ಲ ಮಗು ಬದುಕಿದರೆ ಸಾಕು ಎಂದು ಒದ್ದಾಡಿದವಳು ನೀನು. ನಾನು ಬಂದ ಮೇಲೆ ನಿನಗೆ ಎತ್ತಿಕೊಳ್ಳುವ ಭಾರ. ನನಗಾಗಿ ಮೆಲ್ಲಗೆ ನಡೆಯುವ ದಾಕ್ಷಿಣ್ಯ. ಬೆಳೆಯುವಾಗ ನನ್ನನ್ನು ಬೆಳೆಸಲು ನೀನು ಒಳವೊಳಗೆ ಒದ್ದಾಡಿದ್ದು. ಅಮ್ಮಾ! ಆ ಋಣ ಪರಿಹಾರಕ್ಕಾಗಿ ನಿನಗೆ ಪಿಂಡ ಪ್ರದಾನ ಮಾಡುತ್ತಿರುವೆ!
ಯಮದ್ವಾರೇ ಪಥೇ ಘೋರೇ ಮಾತುಶ್ಚ ಶೋಚನಮ್
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್॥15॥
ನನಗಾಗಿ ನೀನು ಎಷ್ಟು ಕಷ್ಟ ಅನುಭವಿಸಿಲ್ಲ? ಸಾಯುವಾಗ ನಿನಗೆ ಎಂತಹ ವೇದನೆ ಆಗಿರಬಹುದು? ಆಗ ನಾನು ಬಳಿಯಲ್ಲಿರಲಿಲ್ಲ. ಇದ್ದರೂ ಏನು ಮಾಡಬೇಕೆಂದು ತೋಚಲಿಲ್ಲ. ಬದುಕಿನಲ್ಲೂ, ಸಾವಿನಲ್ಲೂ ನೋವನ್ನುಂಡು, ನಲಿವು ತಂದ ನಲ್ಮೆಯ ತಾಯಿ ನೀನು. ನೀನು ದೂರವಾಗಿ ಯಮಲೋಕದ ದಾರಿಯಲ್ಲಿ ಮಕ್ಕಳೇನಾದರೂ ಮಾಡಿಯಾರೆಂದು ಮೂಟೆಯಷ್ಟು ಆಸೆ ಹೊತ್ತಿರಬಹುದು. ಮೂರ್ಖರಾದ ನಾವು ಈಗ ನೇಣಿಪಿಸಿಕೊಳ್ಳುತ್ತಿದ್ದೇವೆ. ತಾಯಿ ಆಗ ಆದ ನಿರಾಶೆ ದುಃಖಗಳಿಗೆ ದುಡ್ಡು – ಮಾತು ಯಾವುದೂ ಪರಿಹಾರವಲ್ಲ. ನಾಚಿಕೆಯಿಂದ ಮನಸ್ಸು ಸಂಕೋಚದ ಮುದ್ದೆಯಾಗಿದೆ. ಕೈಹಿಸುಕಿ ಕೊಳ್ಳುವಷ್ಟು ಇಡೀ ಜೀವ ಹಿಡಿಯಾಗಿದೆ. ಹೀಗಾಗಿ ನಾನು ಕೈಯಿಂದ ಈ ಪಿಂಡವನ್ನು ಸಾಂಕೇತಿಕವಾಗಿ ನೀಡುತ್ತಿರುವೆ. ನನ್ನನ್ನು ಕ್ಷಮಿಸು! ಮಾತೃ ಋಣದಿಂದ ಮೋಚನೆಗೊಳಿಸು. ಅಮ್ಮಾ! ದೇವರ ಸ್ಮರಣೆಯಿಂದ ನನ್ನ ಮಾನವ ಜನ್ಮ ಸಾರ್ಥಕವೆನಿಸು.
ಯಾವತ್ಪುತ್ರೋ ಗಯಾಂ ಗತ್ವಾ ಶ್ರಾದ್ಧಂ ಕುರ್ಯಾತ್ ವಿಧಾನತಃ
ತಸ್ಯಾ ನಿಷ್ಕ್ರಮಣಾರ್ಥಾಯ ಮಾತೃ ಪಿಂಡಂ ದದಾಮ್ಯಹಮ್॥16॥
ತಾಯಿಯಾದ ನಿನ್ನ ಮರಣದ ನಂತರ ಮಗನು ಮಾತೃ ಗಯಾಕ್ಕೆ ಹೋಗಿ ವಿಧಿ ವಿಧಾನ ಪೂರ್ವಕವಾಗಿ ಶ್ರಾದ್ಧ ಮಾಡುತ್ತಾನೆ ಎಂದು ಭಾರೀ ಆಸೆ ಹೊತ್ತುಕೊಂಡಿದ್ದಿ. ನಾನು ವಿಳಂಬವಾಗಿ ಈಗ ಅದನ್ನು ಪೂರೈಸುತ್ತಿರುವೆ. ಅಮ್ಮಾ! ದೇವರ ಸ್ಮರಣೆಯಿಂದ ನನ್ನ ಮಾನವ ಜನ್ಮ ಸಾರ್ಥಕವೆನಿಸು. ಹತ್ತಾರು ಅಪರಾಧಗಳು ಅಳಿಸಲೆಂದು 16 ಪಿಂಡಗಳನ್ನು ನಾ ನೀಡಿರುವೆ!
ಇಂಥಾ ಶ್ರೇಷ್ಠ ಸ್ಥಾನದಲ್ಲಿರುವ – ನಮಗಾಗಿ ಅನೇಕ ಕಷ್ಟಗಳನ್ನು ಎದುರಿಸಿ ನನ್ನನ್ನು ಉತ್ತಮ ಸ್ಥಾನದಲ್ಲಿ ನಿಲ್ಲುವಂತೆ ಮಾಡಿ ಸಮಾಜ ಮೆಚ್ಚುವಂಥಾ ವ್ಯಕ್ತಿಯನ್ನಾಗಿ ಮಾಡಿದ ತಾಯಿಗೆ ಭಕ್ತಿ ಶ್ರದ್ಧೆಗಳಿಂದ ಪಿಂಡ ಪ್ರದಾನ ಪೂರ್ವಕ ಶ್ರಾದ್ಧ ಕರ್ಮ ಮಾಡಿ ತಾಯಿಯ ಆಶೀರ್ವಾದಕ್ಕೆ ಪಾತ್ರರಾಗೋಣ.
ನಾಳಿನ ಲೇಖನ: ದರ್ಶನ ಕಾಲದ ಆಚರಣೆ, ಶ್ರಾದ್ದ ಏಕೆ ಮಾಡಬೇಕು? ಅದರ ಮಹತ್ವವೇನು?
Discussion about this post