ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ಸಂಸ್ಕೃತಿಯು ಮನುಕುಲಕ್ಕೆ ಕೊಟ್ಟ ಅಮೋಘ ಕೊಡುಗೆಗಳಲ್ಲಿ ಪ್ರಮುಖವಾದುದು ಭಗವದ್ಗೀತೆ ಎಂದರೆ ಅತಿಶಯೋಕ್ತಿಯೇನಲ್ಲ.ಇದನ್ನು ಯಶಸ್ವಿಯಾಗಿ ಜನರಿಗೆ ತಲುಪಿಸಲು ಇಡೀ ಜೀವನವನ್ನೇ ಸಮರ್ಪಿಸಿಕೊಂಡಿರುವ ಸಾರ್ಥಕ ಜೀವನ ಗುರುಗಳಾದ ಕೆ.ವಿ. ಶಿವಸ್ವಾಮಿಯವರದು.
ಶಿವಮೊಗ್ಗದಲ್ಲಿ ಶಿವಸ್ವಾಮಿಯವರ ಹೆಸರು ಕೇಳದವರೇ ವಿರಳ ಎನ್ನಬಹುದು. ಭಗವದ್ಗೀತೆಯನ್ನು ಸರಳ ರೀತಿಯಲ್ಲಿ ಬೋಧಿಸುತ್ತಾ, ಜನತೆಗೆ ಅತ್ಯಂತ ಹತ್ತಿರವಾಗಿದ್ದಾರೆ. ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡು ಆನ್ ಲೈನ್ ಮುಖಾಂತರ ಶುಲ್ಕ ರಹಿತ ತರಗತಿಗಳನ್ನು ನಡೆಸಿ ದೇಶ ವಿದೇಶಗಳಲ್ಲಿನ ಆಸಕ್ತ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಮೌಲ್ಯಗಳನ್ನು ಉಣಬಡಿಸುತ್ತಿದ್ದಾರೆ.
ಜೆ.ಸಿ.ಬಿ.ಎಂ. ಕಾಲೇಜು, ಶೃಂಗೇರಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಸ್ನಾತಕೋತ್ತರ ಪದವಿಗಳೊಂದಿಗೆ ಅವರ ಶೈಕ್ಷಣಿಕ ಪ್ರಯಾಣ ಆರಂಭವಾಯಿತು. 1973ರಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶಿವಸ್ವಾಮಿ ಅವರು ವಿವಿಧ ಜ್ಯೂನಿಯರ್ ಕಾಲೇಜುಗಳಲ್ಲಿ ತರ್ಕಶಾಸ್ತ್ರದ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಕ್ಕಳಿಗೆ ಭಾರ್ಗವ ಟ್ಯೂಟೋರಿಯಲ್ಸ್ ಮುಖಾಂತರ ಸ್ಪೋಕನ್ ಇಂಗ್ಲೀಷ್ ತರಗತಿಗಳನ್ನು ನಡೆಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಶಿವಮೊಗ್ಗದ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲೀಷ್ ವಿಷಯದಲ್ಲಿ ಸಂಪನ್ಮೂಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ.
Also read: ಶಿಮುಲ್ ಚುನಾವಣೆ | ಅಧ್ಯಕ್ಷರಾಗಿ ವಿದ್ಯಾಧರ್, ಉಪಾಧ್ಯಕ್ಷರಾಗಿ ಚೇತನ್ ಆಯ್ಕೆ
ಉಪನ್ಯಾಸದ ಸ್ವಾದವನ್ನು ಅರಿತಿದ್ದ ಶಿವಸ್ವಾಮಿಯವರು ಅಧ್ಯಾತ್ಮ ಹಾಗೂ ಅಧ್ಯಾಪನಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇದಕ್ಕೆ ಭಗವದ್ಗೀತೆಯೇ ಇವರನ್ನು ಆಯ್ಕೆ ಮಾಡಿಕೊಂಡಿತೋ ಅಥವಾ ಇವರೇ ಭಗವದ್ಗೀತೆಯನ್ನು ಆಯ್ಕೆ ಮಾಡಿಕೊಂಡರೋ ಎಂಬುದು ಮಿಳಿತವಾದ ವಿಷಯವಾಗಿದೆ. ವಿದ್ವಾಂಸರಾದ ಕೆ.ವಿ. ಶಿವಸ್ವಾಮಿಯವರು ಭಗವದ್ಗೀತೆಯ ಸಾರವನ್ನು ಕಲಿಸುವ ಹಾಗೂ ಕೃಷ್ಣನ ಸಂದೇಶವನ್ನು ಎಲ್ಲರ ಮನೆ ಮನಗಳಿಗೆ ತಲುಪಿಸುತ್ತಾ ಆದರ್ಶಯುಕ್ತವಾದ ಸರಳ ಜೀವನವನ್ನು ನಡೆಸುತ್ತಿದ್ದಾರೆ.
ಭಗವದ್ಗೀತೆಯಲ್ಲಿ ಅವರ ಸೇವೆಯು ವಿಶೇಷವಾಗಿ ಗಮನಾರ್ಹವಾಗಿದೆ. ಪ್ರೊ. ಕೆ.ಬಿ. ರಾಮಕೃಷ್ಣ ರಾವ್ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ ನಂತರ ಅವರ ಭೋದನೆಯ ಸಕ್ಷಮತೆಯನ್ನು ಗುರುತಿಸಿದ ಹಂಸ ಆಶ್ರಮದ ಶ್ರೀ ವಿರಾಜೇಶ್ವರ ಸ್ವಾಮಿಗಳು ಗೀತೆಯ ಬೋಧನೆಯನ್ನು ಸಾಮಾನ್ಯ ಜನತೆಗೆ ತಲುಪಿಸುವ ಅಪ್ಪಣೆಯನ್ನು ಕೊಟ್ಟರು. ಹದಿನೆಂಟು ಅಧ್ಯಾಯಗಳ ಸಂಪೂರ್ಣ ಭಗವದ್ಗೀತೆಯ ನಿತ್ಯ ಪಾರಾಯಣ, ದಿನಕ್ಕೆರಡು ಬಾರಿ ಆನ್ಲೈನ್ ತರಗತಿಗಳು, ರಾಜ್ಯದಾದ್ಯಂತ ಗೀತಾ ಪ್ರಚಾರಗಳಿಗೆ ಕೊಡುಗೆ ನೀಡುವುದು, ಶಿಕ್ಷಣ ಸಂಸ್ಥೆಗಳು ಮತ್ತು ಆಶ್ರಮಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಭಾಷಣಗಳು ಮತ್ತು ಉಪನ್ಯಾಸಗಳನ್ನು ಕೊಡುವುದು ಶಿವಸ್ವಾಮಿಯವರ ಜೀವನದ ಅವಿಭಾಜ್ಯ ಅಂಗಗಳಾಗಿವೆ.
ಶ್ರೀ ಶಿವಸ್ವಾಮಿರವರ ಸಂಪರ್ಕ ಸಂಖ್ಯೆ: 9481252454
ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಗೀತಾ ಅಧ್ಯಾಯಗಳ ವಿವರಣೆಯನ್ನು ನೀಡುವ ಅವರ ಯೂಟ್ಯೂಬ್ ಚಾನೆಲ್, ಜಾಗತಿಕವಾಗಿ ಸಾವಿರಾರು ಚಂದಾದಾರರು ಮತ್ತು ವೀಕ್ಷಕರನ್ನು ಆಕರ್ಷಿಸಿದೆ. ಶಿವಸ್ವಾಮಿಯವರ ಭಗವದ್ಗೀತೆ ತರಗತಿಗಳು, ಸರ್ವರಿಗೂ ಮುಕ್ತಾಹ್ವಾನದೊಂದಿಗೆ ತೆರೆದಿರುತ್ತವೆ. ಅವರ ದೈನಂದಿನ ಜೀವನ ಶೈಲಿ ಅಧ್ಯಾತ್ಮಿಕ ಶಿಕ್ಷಣದ ಅಂತರ್ಗತ ತಿರುಳನ್ನು ಪ್ರತಿಬಿಂಬಿಸುತ್ತದೆ. ಅವರ ನಿಸ್ವಾರ್ಥ ಸೇವೆಯನ್ನು ಹಲವಾರು ಗೌರವಗಳು ಮತ್ತು ಪ್ರಶಸ್ತಿಗಳೊಂದಿಗೆ ದೇಶ ವಿದೇಶಗಳಲ್ಲಿ ಗುರುತಿಸಲಾಗಿದೆ.
ಶ್ರೀಕೃಷ್ಣಾಷ್ಟಮಿಯ #KrishnaJanmashtami ಈ ಶುಭ ಸಂಧರ್ಭದಲ್ಲಿ,ಕೃಷ್ಣ ಪರಮಾತ್ಮನ ಚಿಂತನೆಗಳನ್ನು,ಮೌಲ್ಯಗಳನ್ನು ಪುನರಾವರ್ತನೆ ಮಾಡುವ ಸದಾವಕಾಶ ನಮ್ಮೆಲ್ಲರಿಗೂ ಸಿಕ್ಕಿದೆ. ಈ ನಿಟ್ಟಿನಲ್ಲಿ ಗುರುಗಳಾದ ಶಿವಸ್ವಾಮಿಯವರ ಭಗವದ್ಗೀತಾ ತರಗತಿಗಳಿಗೆ ಇಚ್ಛೆಯಿದ್ದಲ್ಲಿ ತಾವುಗಳು ಸೇರ್ಪಡೆಯಾಗಿ, ಬದುಕನ್ನು ಮತ್ತಷ್ಟು ಸುಂದರ, ಅರ್ಥಪೂರ್ಣ ಹಾಗೂ ಸುಲಲಿತವಾಗಿಸಿಕೊಳ್ಳಬಹುದು.
ಭಗವದ್ಗೀತೆ ಪ್ರಚಾರದ ಪ್ರಮುಖ ಘಟ್ಟಗಳು
- 1965ರಲ್ಲಿ ಪ್ರಥಮ ಬಾರಿಗೆ ಭಗವದ್ಗೀತೆ – ಅಧ್ಯಾತ್ಮಿಕ ವಿಷಯದಲ್ಲಿ ಪದವಿ ಪುರಸ್ಕಾರ.
- 1996ರಿಂದ 18 ಅಧ್ಯಾಯಗಳ ಸಂಪೂರ್ಣ ಗೀತಾ ನಿತ್ಯ ಪಠಣ.
- 2016ರಲ್ಲಿ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಭಗವದ್ಗೀತೆಯ ವ್ಯಕ್ತಿಗತ ತರಗತಿಗಳ ಆರಂಭ.
- 2020ರಲ್ಲಿ ಅಮೇರಿಕಾದ ಕನ್ನಡಿಗರ ಬೇಡಿಕೆಯ ಮೇರೆಗೆ ಆನ್ಲೈನ್ ತರಗತಿಗಳ ಪ್ರಾರಂಭ.
- ವಿಶ್ವದಾದ್ಯಂತ ಸುಮಾರು 2500 ವಿದ್ಯಾರ್ಥಿಗಳು ಗೀತೆಯ ಯಜ್ಞದಲ್ಲಿ ಭಾಗವಹಿಸಿದ್ದಾರೆ.
- ಪ್ರಸ್ತುತವಾಗಿ 24 ಹಾಗೂ 25ನೆಯ ಬ್ಯಾಚ್ ಗಳು ಜಾರಿಯಲ್ಲಿವೆ.
- ಪ್ರತಿ ಶುಕ್ಲ ಏಕಾದಶಿಯಂದು ಛಾತ್ರ ವರ್ಗದಿಂದ ಸಂಪೂರ್ಣ ಗೀತಾ ಪಾರಾಯಣ.
- ಭಗವದ್ಗೀತೆ ಕುರಿತು ಹಲವಾರು ಕಡೆ ಉಪನ್ಯಾಸ ಸರಣಿಗಳು.
- ವಿದ್ಯಾರ್ಥಿ ಬಳಗಕ್ಕೆ ನೈತಿಕ ಜೀವನ ನಡೆಸಲು ಸಹಕಾರವಾಗುವ ಹಾಗೆ ಡಾ. ಗುರುರಾಜ್ ಕರ್ಜಗಿ, ಶತಾವಧಾನಿ ಗಣೇಶ್, ಇಬ್ರಾಹಿಂ ಸುತಾರ, ಚಕ್ರವರ್ತಿ ಸೂಲಿಬೆಲೆ, ಡಾ. ನಾ. ಸೋಮೇಶ್ವರ ಮುಂತಾದ ಗಣ್ಯರಿಂದ ರಚಿತವಾದ ವಿಶೇಷ ಉಪನ್ಯಾಸ ಮಾಲಿಕೆಗಳು.
- ಪ್ರತಿ ವರ್ಷ ಗೀತಾ ಜಯಂತಿಯಂದು ದೇಶ ವಿದೇಶದ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಸೇರಿ ಗೀತಾ ಪಾರಾಯಣ, ಸಂಭ್ರಮದ ಆಚರಣೆ.
- ಗುರುಗಳ ಪ್ರೇರಣೆಯಿಂದ ಅಮೆರಿಕಾದ ಸಿಯಾಟಲ್ ನಗರದಲ್ಲಿ ಹಾಗೂ ಯುರೋಪ್ ನ ಸ್ವೀಡನ್ ನಲ್ಲಿ ಪ್ರತಿ ಮಾಸ ಗೀತಾ ಪಾರಾಯಣ
- ಗುರುಗಳ ಕೋರಿಕೆಯ ಮೇರೆಗೆ ಡಾ. ರಾಜು, ಹರಿ ರವಿಕುಮಾರ್ ಮತ್ತು ಕೋಟಿ ಶ್ರೀಕೃಷ್ಣ ಅವರುಗಳಿಂದ ಇಂಗ್ಲಿಷ್ ನಲ್ಲಿ ಆನ್ಲೈನ್ ಭಗವದ್ಗೀತಾ ತರಗತಿಗಳ ಸೇರ್ಪಡೆ.
- 2023ರಲ್ಲಿ ಗುರುಗಳ ಪ್ರೇರಣೆಯಿಂದ ಅವರ ವಿದ್ಯಾರ್ಥಿನಿಯರಾದ ಶ್ರೀಮತಿ ಶಿಲ್ಪ ಶರ್ಮ, ಶ್ರೀಮತಿ ಶಿವರಂಜನಿ ಬಂಕೊಳ್ಳಿ ಹಾಗೂ ಶ್ರೀಮತಿ ಶ್ರೀಲಕ್ಷ್ಮಿ ಅವರಿಂದ 7 ರಿಂದ 15 ವರ್ಷದ ಮಕ್ಕಳಿಗೆ ಕಥೆಗಳ ಮುಖಾಂತರ ಗೀತೆಯ ಆನ್ಲೈನ್ ಇಂಗ್ಲೀಷ್ ತರಗತಿಗಳ ಆರಂಭ. ಪ್ರಸ್ತುತವಾಗಿ ಬ್ಯಾಚ್ 8 ನಡೆಯುತ್ತಿದೆ.
- 2023ರಲ್ಲಿ ವಿದ್ಯಾರ್ಥಿನಿಯಾದ ಶ್ರೀಮತಿ ಚೈತ್ರ ಅವರಿಂದ ದೀಪಾ ಅಕಾಡೆಮಿಯ ದಿವ್ಯಾಂಗ ಮಕ್ಕಳಿಗೆ ವ್ಯಕ್ತಿಗತ ಗೀತ ಕಲಿಕೆಯ ತರಗತಿಗಳ ಆರಂಭ.
- 2024ರಲ್ಲಿ ಗುರುಗಳ ವಿದ್ಯಾರ್ಥಿಯಾದ ಶ್ರೀಯುತ ನಾಗೇಂದ್ರ ಅವರಿಂದ ಯುವ ಸಮೂಹಕ್ಕೆ ವಿಶೇಷ ತರಗತಿಗಳ ಆರಂಭ.
- 2024ರಲ್ಲಿ ವಿದ್ಯಾರ್ಥಿ ವೃಂದದಿಂದ ಬೆಂಗಳೂರಿನ ಎಸ್ ವಿ ವಿ ಎಸ್ ಶಾಲೆಯ ಶಿಕ್ಷಕರ ತರಬೇತಿ.
- 2024ರಲ್ಲಿ ವಿದ್ಯಾರ್ಥಿ ವೃಂದದಿಂದ ಶಿವಮೊಗ್ಗದ ಡಾ. ರಜನಿ ಪೈ ಸಾರಥ್ಯ ದ ಮನಸ್ಫೂರ್ತಿ ಸಂಸ್ಥೆಯ ಶಿಕ್ಷಕರು ಹಾಗು ದಿವ್ಯಾಂಗ ಮಕ್ಕಳಿಗೆ ಆನ್ಲೈನ್ ತರಗತಿಗಳ ಮುಖಾಂತರ ಗೀತಾ ಕಲಿಕೆಯ ಆರಂಭ.
- 2024ರಲ್ಲಿ ಶ್ರೀಮತಿ ಶ್ರೀಲಕ್ಷ್ಮಿಯವರಿಂದ ಚಾಮರಾಜ ನಗರದ ದೀನಬಂಧು ಆಶ್ರಮದ ಮಕ್ಕಳಿಗೆ ವ್ಯಕ್ತಿಗತ ಗೀತಾ ಕಲಿಕೆಯ ಆರಂಭ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post