ಕೆಲವು ಮಾತುಗಳು ಹಾಗೆ, ಮರೆಯಲು ಸಾಧ್ಯವೇ ಇಲ್ಲ. ಅದೆಷ್ಟೋ ವರ್ಷಗಳು ಕಳೆದರೂ ಅವರ ಆ ಸಾಲುಗಳು ಮಾರ್ದನಿಸುತ್ತಲೇ ಇವೆ. ‘ಯಾರು ಸನಾತನ ಹಿಂದೂ ಧರ್ಮವನ್ನು ತುಳಿಯಲು ಪ್ರಯತ್ನ ಮಾಡುತ್ತಿದ್ದರೋ, ಅವರೇ ಮುಂದೆ ಕೋಟುಗಳ ಮೇಲೆ ಜನಿವಾರ ಧರಿಸುತ್ತಾರೆ’. ಆ ವೀರನ ಮಾತುಗಳು ಅಕ್ಷರಶಃ ಸತ್ಯವಾದವು. ಇದೇ ಯುವ ನಾಯಕ ಜುಲೈ 20, 2009 ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಮ್ಮುಖದಲ್ಲಿ ಅಮೆರಿಕಾದ ರಾಯಭಾರಿಗೆ ‘ಲಷ್ಕರ್-ಎ-ತೋಯ್ಬಾಗಿಂತಲೂ ಹಿಂದೂ ಭಯೋತ್ಪಾದನೆ ಹೆಚ್ಚು ಅಪಾಯಕಾರಿ’ ಎಂದಿದ್ದ.
ಬದಲಾದ ಪರಿಸ್ಥಿತಿಯಲ್ಲಿ ಸಂಸ್ಕೃತಿಯ ಸಹ ಕೂಡ ಗೊತ್ತಿರದ ಆತ ತಾನೊಬ್ಬ ದತ್ತಾತ್ರೇಯ ಗೋತ್ರದ ಕೌಲ ಬ್ರಾಹ್ಮಣ ಎಂದು ಘೋಷಿಸಿಕೊಂಡ, ಕೈಲಾಸ-ಮಾನಸ ಸರೋವರ ತಿರುಗಿ ಬಂದ, ಸಾಲು ಸಾಲು ದೇವಾಲಯಗಳಲ್ಲಿ ಪಂಚೆ ತೊಟ್ಟುಕೊಂಡು ತೊಡರುಗಾಲು ಹಾಕಿದ. ಅದೇನೇ ಮಾಡಿದರೂ ಸರಿ ಮತ್ತೆ ಬಂದು ನಿಂತದ್ದು ಅದೇ ತಲೆ ಬುಡವಿಲ್ಲದ ಪ್ರಲಾಪಕ್ಕೆ.
ಹೊಗಳುಭಟ್ಟರಿಂದಲೇ ಧೀಮಂತ ರಾಜಕಾರಣಿ ಆದ ಆ ವ್ಯಕ್ತಿ, ಇಂದು ತಾನೊಬ್ಬ ಶ್ರೀಮಂತ ಹಿನ್ನೆಲೆಯ ಸಾಮಾನ್ಯ ಎಂದು ತೋರಿಸಿಕೊಂಡಿದ್ದಾನೆ. ತಾನೊಬ್ಬ ವಿದ್ವತ್ಪೂರ್ಣ ರಾಜಕಾರಣಿ ಎನಿಸಿಕೊಳ್ಳಲು ಮಾಡದ ಪ್ರಯತ್ನಗಳೇ ಇಲ್ಲ. ಒಂದು ಸುಳ್ಳನ್ನು ಪದೇ ಪದೇ ಹೇಳುವುದರಿಂದ ಸತ್ಯ ಮಾಡಬಹುದು ಎನ್ನುವಂತಿತ್ತು ಆ ನಡುವಳಿಕೆ. ಹಾಗೆ ಅಂದುಕೊಂಡದ್ದು ತಪ್ಪೇನಿಲ್ಲ ಬಿಡಿ. ಅಟಲ್ ಬಿಹಾರಿ ವಾಜಪೇಯಿಯವರ ವಿರುದ್ಧ ಅವರು ಪ್ರಯೋಗಿಸಿದ್ದು ಇದೇ ಅಸ್ತ್ರವನ್ನೇ ಅಲ್ಲವೇ?
ಆ ಕಾಲದಲ್ಲೇ ಅಂತಹ ಅಣು ಪರೀಕ್ಷೆಯಂಥ ಜಗತ್ತು ನಿಬ್ಬೆರಗಾಗಿ ನೋಡುವ ಕಾರ್ಯಗಳನ್ನು ಮಾಡಿದ ವ್ಯಕ್ತಿಯ ಸುಳ್ಳು ಆಪಾದನೆಗಳ ಹೊರಿಸಿ ಹಿನ್ನೆಲೆಗೆ ತಳ್ಳಿಬಿಟ್ಟರು. ಈಗಲೂ ಅದೇ ಕಥೆ. ರಫೇಲ್ ಎಂಬ ಸುಳ್ಳು ಹಗರಣ ಸೃಷ್ಟಿಸಿ, ಜನಮಾನಸದಲ್ಲಿ ಏನೋ ಬಿತ್ತಲು ಪ್ರಯತ್ನಿಸಲಾಯಿತು. ಏನು ಮಾಡುವುದು? ಹತ್ತು ಭಾಷಣಗಳಲ್ಲಿ ಹತ್ತು ಅಂಕಿ ಅಂಶಗಳು ಆ ವ್ಯಕ್ತಿಯ ಬಾಯಿಂದ ಉದುರಿದವು! ಜನ ನಂಬಲೇ ಇಲ್ಲ. ಸ್ವತಃ ಭಾರತದ ಸರ್ವೋಚ್ಚ ನ್ಯಾಯಾಲಯ ಬಂದು ಛೀಮಾರಿ ಹಾಕಿತು.
ಪ್ರಧಾನಿಯನ್ನು ಒಬ್ಬ ಕಳ್ಳ ಎಂದು ವಿದೇಶಗಳಲ್ಲಿ ಸಾರಿ ಬಂದ ವ್ಯಕ್ತಿ ಇವನೇ ಇರಬೇಕು. ಎಷ್ಟು ನಿಕೃಷ್ಟ ರಾಜಕಾರಣ ಅಲ್ಲವೇ? ವಿದೇಶಿ ಸಂಸ್ಥೆಗಳ, ರಾಜಕಾರಣಿಗಳ, ಮಾಧ್ಯಮಗಳ ಸಹಾಯ ಪಡೆದದ್ದು ಆಯಿತು. ಚುನಾವಣೆಯಲ್ಲಿಯೇ ಪ್ರಧಾನಿ ಅವರನ್ನು ಒಡೆದು ಆಳುವ ಸರ್ವಾಧಿಕಾರಿ ಎಂದು ಪತ್ರಿಕೆ ಘೋಷಿಸಿತು. ಜನರ ಮನಸ್ಸಿನಲ್ಲಿ ನಿಂತ ಆ ಪ್ರಧಾನ ಸೇವಕ ಮತ್ತೆ ಗೆದ್ದು ಬಂದಾಗ ಆ ಪತ್ರಿಕೆ ಹೊಗಳಿದ ಪರಿ ನೋಡಿಯೇ ಆನಂದಿಸಬೇಕು. ಈಗಲೂ ಆ ವ್ಯಕ್ತಿಗೆ ತಾನೇಕೆ ಸೋತೆ ಎಂದು ಅರ್ಥವಾಗುತ್ತಲೇ ಇಲ್ಲ.
ತನ್ನ ರಾಜೀನಾಮೆ ನಂತರದ ಭಾಷಣದಲ್ಲೂ ತನ್ನ ಪಕ್ಷದ ದುಸ್ಥಿತಿಗೆ ಎದುರು ಪಾಳೆಯವೇ ಕಾರಣ ಎಂದ. ನಾಯಕತ್ವದ ಗುರುತರ ಜವಾಬ್ದಾರಿ ಮೊದಲು ಹೇಳಿ ಕೊಡುವುದೇ ಗೆಲುವನ್ನು ಹಂಚಿ, ಸೋಲನ್ನು ಸ್ವೀಕರಿಸಬೇಕು ಎಂಬುದು. ಅಂತಹ ಗುಣ ಒಮ್ಮೆಯಾದರೂ ಕಂಡಿತೇ? ಯಾವಾಗೆಲ್ಲಾ ಪಕ್ಷ ಮುಗ್ಗರಿಸಿದೆಯೋ ಆಗ ಈ ನಾಯಕ ನಾಪತ್ತೆ ಆಗಿದ್ದೇ ಜಾಸ್ತಿ. ಧ್ಯಾನಕ್ಕೆ ತೆರಳುವವರ ಬೆನ್ನಟ್ಟುವ ಮಾಧ್ಯಮಗಳು ಇವರೊಡನೆ ವಿದೇಶಗಳಿಗೆ ಹಿಂಬಾಲಿಸಿದ್ದು ಎಲ್ಲೂ ಇಲ್ಲ.
ರಾಜಕೀಯದಿಂದ ತನ್ನ ಕುಟುಂಬಸ್ಥರ ಕಳೆದುಕೊಂಡ ಇವರು, ರಾಜಕೀಯಕ್ಕೆ ಬರಲು ಬಯಸಿರಲಿಲ್ಲವೇನೋ? ಆದರೂ ದೇಶದ ಪ್ರತಿಷ್ಠಿತ ಪಕ್ಷದ ನಾಯಕನಾಗಿ, ಯುವ ಶಕ್ತಿಯಂತೆ ಬಿಂಬಿಸಿಕೊಂಡು ಸೋತಾಗಿದೆ. ಪ್ರತಿ ಯುವಕನಲ್ಲೂ ಪ್ರತಿಭೆ ಇರುತ್ತದೆ ಎನ್ನಲಾಗದು. ಅವರ ಆಯ್ಕೆಯ ಕ್ಷೇತ್ರ ಬೇರೆಯದೇ ಇರಬಹುದು. ಆದರೆ ಒಂದಂತೂ ನಿಜ, ಅವರ ಪಕ್ಷವನ್ನು ಈಗಲೂ ಮನಸಾರೆ ಆಧರಿಸುವ ಜನರಿದ್ದಾರೆ. ನೋಟು ಅಮಾನ್ಯೀಕರಣದಲ್ಲಿ ತೂತು ಜೇಬು ತೋರಿಸಿ ಅಪಹಾಸ್ಯ ಮಾಡಿದ, ವಿದೇಶಗಳಲ್ಲಿ ಭಾರತವನ್ನು ಹಳಿದ ಮತ್ತು ಘನ ಸಂಸತ್ತಿನಲ್ಲಿ ಕಣ್ಣು ಮಿಟುಕಿಸಿ ಅಗೌರವ ತೋರಿದ ವ್ಯಕ್ತಿ ಇನ್ನಾದರೂ ತಮ್ಮ ಪರಿಮಿತಿ ಅರಿಯಲಿ.
Discussion about this post