ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಕಾಲೇಜುಗಳನ್ನು ಆರಂಭಿಸಲಾಗಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಕೊರೋನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಕರೋನಾ ತಪಾಸಣಾ ಫಲಿತಾಂಶವನ್ನು ನೇರವಾಗಿ ವೆಬ್‌ಸೈಟ್‌ನಲ್ಲಿ ಸಹ ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ತಿಳಿಸಿದ್ದಾರೆ.
ಕಾಲೇಜು ಅಥವಾ ಹಾಸ್ಟೆಲ್‌ಗೆ ಪ್ರವೇಶಿಸುವ 72 ಗಂಟೆ ಪೂರ್ವದಲ್ಲಿ ನಡೆಸಲಾದ ಆರ್‌ಟಿಪಿಸಿಆರ್ ತಪಾಸಣಾ ವರದಿಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕಾಗಿದೆ. ತಪಾಸಣಾ ವರದಿ ಐಸಿಎಂಆರ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಲಾಗಿರುವ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಕಳುಹಿಸಲಾಗುತ್ತಿದೆ. ಇದೇ ರೀತಿ ವರದಿಯನ್ನು https://covidwar.karnataka.gov.in/service1 ಲಾಗ್‌ಇನ್ ಆಗುವ ಮೂಲಕ ಸಹ ಪಡೆಯಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಕೊರೋನಾ ತಪಾಸಣಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಆರ್‌ಟಿಪಿಸಿಆರ್ ಸ್ಯಾಂಪಲ್ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಪರೀಕ್ಷೆ ಫಲಿತಾಂಶವನ್ನು ತಕ್ಷಣ ಐಸಿಎಂಆರ್ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಮಾರ್ಗಸೂಚಿ ಪಾಲನೆ
ಎಲ್ಲಾ ಕಾಲೇಜುಗಳಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ ತರಗತಿಗಳನ್ನು ನಡೆಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಸೇರಿದಂತೆ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಎಲ್ಲಾ ಕಾಲೇಜುಗಳಲ್ಲಿ ಒಂದು ಐಸೋಲೇಶನ್ ಕೊಠಡಿ ಸಜ್ಜುಗೊಳಿಸಲಾಗಿದೆ. ಕೋವಿಡ್ ಪರೀಕ್ಷೆ ನಡೆಸಿಕೊಂಡು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸಲು ಆರಂಭಿಸಿದ್ದಾರೆ. ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಯನ್ನು ಸಹ ಮುಂದುವರಿಸಲು ನಿರ್ದೇಶನ ನೀಡಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಕೆ.ಸಿ. ವೀರಭದ್ರಯ್ಯ ಅವರು ತಿಳಿಸಿದ್ದಾರೆ.
ಕಾಲೇಜುಗಳಲ್ಲಿ ತಪಾಸಣೆ
ಕಾಲೇಜುಗಳಲ್ಲಿ ಕರೋನಾ ಸ್ಯಾಂಪಲ್ ಸಂಗ್ರಹಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದುವರೆಗೆ 2440 ವಿದ್ಯಾರ್ಥಿಗಳು ಮತ್ತು 1430 ಶಿಕ್ಷಕರು, ಸಿಬ್ಬಂದಿಗಳ ಕರೋನಾ ಪರೀಕ್ಷೆ ನಡೆಸಲಾಗಿದೆ. ಕೇವಲ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಾತ್ರವಲ್ಲದೆ ಹಾಸ್ಟೆಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಹ ಕರೋನಾ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶಂಕ್ರಪ್ಪ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post