ನಮ್ಮ ಹಿಂದಿನವರು ಎಷ್ಟು ವ್ಯವಸ್ಥಿತವಾಗಿ ಕಾಲ ಚಕ್ರವನ್ನು ಹೊಂದಾಣಿಕೆ ಮಾಡಿದ್ದಾರೆ ಅಂದರೆ ಯಾವ ವಿಜ್ಞಾನಕ್ಕೂ ನಿಲುಕದ ಅತ್ಯದ್ಭುತ ಕಲ್ಪನೆ. ನಾಲ್ಕು ತಿಂಗಳು ಮಳೆಗಾಲ, ನಾಲ್ಕು ತಿಂಗಳು ಚಳಿಗಾಲ, ನಾಲ್ಕು ತಿಂಗಳು ಬೇಸಿಗೆ ಕಾಲ ಅಂತ ವಿಂಗಡಿಸಿದ್ದಾನೆ. ಜಗತ್ತಿನ ಸೃಷ್ಟಿಕರ್ತ ಭಗವಂತನ ಅಮೋಘವಾದ ಯೋಚನಾ ಲಹರಿಗೆ ನಾವೆಲ್ಲರೂ ಮಂಡಿಯೂರಲೇಬೇಕು.
ಯಾರ ಆಜ್ಞೆಗೂ ಕಾಯದೆ, ಯಾರ ಅನುಮತಿಗೂ ನಿಲುಕದೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿರುವ ಕಾಲಚಕ್ರವನ್ನು ಬದಲಾಯಿಸುವ ಶಕ್ತಿ ಯಾವ ಆಧುನಿಕ ವಿಜ್ಞಾನಕ್ಕೂ ಇಲ್ಲ. ಮುಂಜಾನೆಯ ಹೊತ್ತಿನಲ್ಲಿ ಪೂರ್ವ ದಿಕ್ಕಿನಲ್ಲಿ ಸೂರ್ಯ ಉದಯಿಸಿ ಮುಸ್ಸಂಜೆ ಹೊತ್ತಿನಲ್ಲಿ ಪಶ್ಚಿಮದಲ್ಲಿ ಮರೆಯಾಗುತ್ತಾನೆ.
ಹುಣ್ಣಿಮೆಯ ದಿನ ಚಂದ್ರ ಬಾನಲ್ಲಿ ಬೆಳದಿಂಗಳನ್ನು ನೀಡುತ್ತಾನೆ. ಅಮಾವಾಸ್ಯೆಯ ದಿನ ಕತ್ತಲು ಕವಿದು ಬಿಡುತ್ತದೆ. ಗಾಳಿ ಯಾರ ಹಿಡಿತಕ್ಕೂ ಸಿಗದೇ ತನ್ನಿಚ್ಚೆಯಂತೆ ಸುಳಿದಾಡುತ್ತ ಇರುತ್ತದೆ. ಮಳೆಗಾಲದಲ್ಲಿ ವರುಣನು ಅಂಬರದಿಂದ ಕುಂಭಿನಿಗೆ ನೆಗೆದು ವರ್ಷದ ಹೊಳೆ ಹರಿಸಿ ಹರ್ಷ ತರುತ್ತಾನೆ.
ಮನುಷ್ಯನ ಅತಿಯಾಸೆ, ಸ್ವಾರ್ಥ, ಸುತ್ತಮುತ್ತಲಿನ ಪರಿಸರದ ಬಗ್ಗೆ ತೋರುತ್ತಿರುವ ಅಸಡ್ಡೆ ಇಂದು ಕಾಲಚಕ್ರದ ಮೇಲೆ ಪರಿಣಾಮವನ್ನು ಬೀರುತ್ತಿದೆ. ಈ ಭಾರಿ ಮಳೆರಾಯ ಮುನಿಸಿಕೊಂಡಿದ್ದಾನೆ. ಹೌದು ಜೀವ ಜಲಕ್ಕಾಗಿ ಹಾಹಾಕಾರ ಪ್ರಾರಂಭವಾಗಿದೆ. ಅಂತರ್ಜಲದ ಮಟ್ಟ ಕುಸಿದು ಹೋಗಿದೆ. ನೀರು ಸಿಗದಾಗ ಅಯ್ಯೋ ನೀರಿಲ್ಲ ಎನ್ನುವ ಜನರು ನೀರಿನ ಬಗೆಗೆ ಜೀವ ಜಲದ ಉಳಿವಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಗಮನ ಹರಿಸುತ್ತಿಲ್ಲ.
ಹಾಗಾದರೆ ಜೀವಜಲಕ್ಕೆ ಕುತ್ತುಬರದ ಹಾಗೆ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವುದು ಹೇಗೆ. ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವೆಲ್ಲ ಕೆಲಸವನ್ನು ಮಾಡಬೇಕು, ಅಂತರ್ಜಲ ಬತ್ತಿ ಬರಿದಾಗಲು, ಭೂಮಿ ಒಣಗಿ ಜಡವಾಗಲು, ಮಳೆ ಬಾರದಿರಲು ಬಹಳಷ್ಟು ಕಾರಣಗಳಿವೆ. ಅವುಗಳನ್ನು ಒಂದೊಂದಾಗಿ ನೋಡುವುದಾದರೆ…..
1) ವಿಪರೀತ ಕಾಡುಗಳ ನಾಶ:
ನಾಡು ಸುಭಿಕ್ಷವಾಗಿರಬೇಕಾದರೆ ಕಾಡು ಸುಭದ್ರವಾಗಿರಬೇಕು. ಆಧುನಿಕತೆಯ ಸೋಗಿನಲ್ಲಿ ವಿಪರೀತ ಕಾಡುಗಳನ್ನು ನಾಶ ಮಾಡುತ್ತಿದ್ದಾರೆ. ಇರುವ ಮರಗಿಡಗಳನ್ನು ಕಡಿಯುತ್ತಿದ್ದಾರೆ ಹೊರತು ಹೊಸ ಗಿಡಗಳನ್ನು ನೆಡುವ ಪ್ರಯತ್ನಗಳು ಎಲ್ಲಿಯೂ ಆಗುತ್ತಿಲ್ಲ. ಇಂದು ಕಾಡು ನಾಶವಾದರೆ ಮುಂದೆ ನಾಡು ಕೂಡ ನಾಶವಾಗುತ್ತದೆ ಎನ್ನುವ ಸಣ್ಣ ಕಲ್ಪನೆಯು ಇರದೇ ನಿರಂತರ ಕಾಡು ಕಡಿದು ಬಯಲು ಪ್ರದೇಶವಾಗಿ ಮಾರ್ಪಾಡು ಮಾಡುತ್ತಿರುವುದು ಮಳೆ ಪ್ರಮಾಣ ಕಡಿಮೆಯಾಗಲು ಬಹುಮುಖ್ಯ ಕಾರಣವಾಗಿದೆ.
2)ಬೋರವೆಲ್’ಗಳ ಕೊರೆತ:
ಕಂಡ ಕಂಡಲ್ಲಿ ಮನೆಗೊಂದರಂತೆ ಕೊಳೆವೆ ಬಾವಿಗಳನ್ನು ಕೊರೆಯುತ್ತಿರುವುದು ಬಾವಿ ಕೆರೆಗಳಲ್ಲಿ ನೀರಿನ ಮಟ್ಟ ಕುಂಟಿತವಾಗಲು ಬಹುಮುಖ್ಯ ಕಾರಣಗಳಲ್ಲಿ ಒಂದಾಗಿದೆ. ಬೋರವೆಲ್’ಗಳು ಅಂತರ್ಜಲವನ್ನು ಹೀರಿ ತೆಗೆದು ಬಿಡುತ್ತವೆ. ನೀರಿನ ಮಟ್ಟ ಹೆಚ್ಚಾಗದಿರಲು ಈ ಬೋರವೆಲ್’ಗಳ ಬಳಕೆ ಮಾರಕವಾಗಿದೆ. ಸರ್ಕಾರ ಗ್ರಾಮೀಣ ಭಾಗದಲ್ಲಿ ಕೊಳವೆ ಬಾವಿಯನ್ನು ಕೊರೆಯಿಸಲು ಅನುಮತಿಯನ್ನು ನೀಡುವ ಮೊದಲು ಯೋಚನೆಯನ್ನು ಮಾಡಬೇಕಾಗಿದೆ.
3)ಅವಶ್ಯಕತೆಗಿಂತ ಅಧಿಕ ನೀರಿನ ಬಳಕೆ:
ವ್ಯವಸ್ಥಿತ ನೀರಾವರಿ ಮೂಲವನ್ನು ಹೊಂದಿರುವರು ತಮ್ಮ ಅವಶ್ಯಕತೆಗಿಂತ ಅಧಿಕ ನೀರನ್ನು ಬಳಸುತ್ತಿರುವುದು ಕೂಡ ನೀರಿನ ಸಮಸ್ಸೆಗೆ ಕಾರಣವಾಗಿದೆ. ರೈತರ ತೋಟಕ್ಕೆ ನೀರು ಹರಿಸಲು ಪಂಸೆಟ್’ಗಳಿಗೆ ಉಚಿತ ಕರೆಂಟ್ ನಿಡಗಳಾಗುತ್ತಿದ್ದು. ಕೆಲವು ರೈತರು ಅವಶ್ಯಕತೆಗಿಂತ ಅಧಿಕ ನೀರನ್ನು ಬಳಸಿ ನೀರನ್ನು ಪೋಲು ಮಾಡುತ್ತಿದ್ದಾರೆ.
4)ಮಳೆಗಾಲದಲ್ಲಿ ಮಳೆನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿರುವುದು:
ಮಳೆಗಾಲದಲ್ಲಿ ಮೂರು ತಿಂಗಳು ಧಾರಾಕಾರ ಮಳೆ ಸುರಿದರು ಆ ಮಳೆ ನೀರು ಭೂಮಿಯಲ್ಲಿ ಇಂಗದೆ ನೇರ ಸಮುದ್ರ ಸೇರುವುದರಿಂದ ಅಂತರ್ಜಲದ ಮಟ್ಟ ಹೆಚ್ಚುತ್ತಿಲ್ಲ. ಸಾಧ್ಯವಾದಷ್ಟು ಗುಂಡಿಗಳನ್ನು ತೆಗೆದು ನೀರು ಭೂಮಿಯ ಆಳಕ್ಕೆ ಇಂಗುವಂತೆ ವ್ಯವಸ್ಥೆ ಮಾಡಬೇಕು. ಮಳೆ ನೀರು ಕೊಯ್ಲು ಕಾರ್ಯಕ್ರಮವನ್ನು ಪ್ರತಿಯೊಬ್ಬರು ಪಾಲಿಸಬೇಕು.
5) ಅಂತರ್ಜಲಕ್ಕೆ ಮಾರಕವಾಗುವ ಸಸ್ಯ ಪ್ರಭೇದ:
ಅಂತರ್ಜಲ ಬತ್ತಿ ಹೋಗಲು ರಬ್ಬರ್, ಅಕೇಶಿಯಾ, ನೀಲಗಿರಿ ಮುಂತಾದ ಸಸ್ಯ ಪ್ರಭೇದಗಳು ಕೂಡ ಬಹುಮುಖ್ಯ ಕಾರಣವಾಗಿದೆ. ಈ ಮರಗಳು ಭೂಗರ್ಭದ ತನಕ ತಮ್ಮ ಬೇರುಗಳನ್ನು ಚಾಚಿ ಭೂಮಿಯ ವೊಡಲಲ್ಲಿ ಇರುವ ಜಲವನ್ನು ಹೀರಿ ತೆಗೆಯುತ್ತವೆ. ಈ ಮರಗಳು ಹೆಚ್ಚಾಗಿ ಇರುವ ಪ್ರದೇಶದಲ್ಲಿ ಅತೀ ಹೆಚ್ಚು ನೀರಿನ ಸಮಸ್ಯೆ ಇರುತ್ತದೆ.
ಮನುಷ್ಯ ಪ್ರಕೃತಿಯ ಕೋಪಕ್ಕೆ ತುತ್ತಾಗುದರಲ್ಲಿ ಸಂಶಯವಿಲ್ಲ. ತನ್ನ ಸ್ವಾರ್ಥ ಸಾಧನೆಗೆ ಮುಂದಿನ ಪೀಳಿಗೆಯ ಬಗ್ಗೆ ಕಿಂಚಿತ್ತು ಯೋಚನೆ ಮಾಡಿದೆ ಪ್ರಕೃತಿಯನ್ನು ನಾಶ ಮಾಡಲು ಹೋರಾಟ ಮನುಷ್ಯನೆಂಬ ಹೆಸರಿನ ಮೃಗೀಯ ಮನಸ್ಥಿತಿಯ ಹೂಲು ಮಾನವನೇ ಇನ್ನಾದರೂ ಪ್ರಕೃತಿಯನ್ನು ಉಳಿಸುವ ದೃಷ್ಟಿಯಲ್ಲಿ ಯೋಚನೆ ಮಾಡಿ.
ನಿಮ್ಮ ಮುಂದಿನ ಪೀಳಿಗೆಗೆ ಅಂದರೆ ನಿಮ್ಮ ಮಕ್ಕಳಿಗೆ ನಿಮ್ಮ ಮರಿ ಮಕ್ಕಳಿಗೆ ಏನು ಬಿಟ್ಟು ಹೋಗಬೇಕು ಎಂದು ಭಾವಿಸಿದ್ದೀರಿ. ನೀವು ಕೂಡಿಡುವ ಹಣದಿಂದ, ನೀವು ಸಂಪಾದಿಸುವ ಆಸ್ತಿ-ಅಂತಸ್ತಿನಿಂದ ಅವರ ಜೀವನ ನಡೆಸಬಹುದು ಎನ್ನುವ ಕಲ್ಪನೆ ಅನೇಕ ಜನರು ಹೊಂದಿದ್ದಾರೆ. ವಾಸ್ತವವಾಗಿ ಶುದ್ಧ ಗಾಳಿ, ಶುದ್ಧ ನೀರು, ಉತ್ತಮ ಸೂರ್ಯನ ಕಿರಣ, ಆರೋಗ್ಯಕರವಾದ ಮಣ್ಣು ಇಲ್ಲವಾದರೆ ಬದುಕಲು ಸಾಧ್ಯವಿಲ್ಲ.
ಹಣದಿಂದ ಎಲ್ಲವನ್ನು ಮಾಡಬಹುದು, ಹಣದಿಂದ ಪ್ರತಿಯೊಂದನ್ನು ಕೊಂಡುಕೊಳ್ಳಬಹುದು ಎನ್ನುವ ಬುದ್ದಿಗೇಡಿ ಮನೋಭಾವನೆ ಹೊಂದಿದ ಸ್ವಾರ್ಥಿಗಳೇ ಒಮ್ಮೆ ಯೋಚನೆ ಮಾಡಿ, ನೀರಿದ್ದರೆ ಇರುವ ನೀರನ್ನು ನಿಮ್ಮ ಹಣದಿಂದ ಶುದ್ಧ ನೀರಾಗಿ ಪರಿವರ್ತಿಸಬಹುದು ಆದರೆ ಹಣದಿಂದ ನೀರನ್ನು ಉತ್ಪಾದಿಸಲು ಸಾಧ್ಯವಿಲ್ಲ. ಹಣದಿಂದ ಮೇಲಿನಗೊಂಡ ಗಾಳಿಯನ್ನು ಶುದ್ದಗಾಳಿಯಾಗಿ ಪರಿವರ್ತಿಸಬಹುದು ಆದರೆ ಹಣದಿಂದ ಶುದ್ಧಗಾಳಿ ತಯಾರಿಸಲು ಸಾಧ್ಯವಿಲ್ಲ.
ಹಣದಿಂದ ಮಳೆ ಭರಿಸಲು ಸಾಧ್ಯವಿಲ್ಲ. ಹಣದಿಂದ ಸುಡುವ ಸೂರ್ಯನ ಕಿರಣವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಹಣದಿಂದ ಹಗಲು-ರಾತ್ರಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಹಣದಿಂದ ಮಲಿನಗೊಂಡ ಪ್ರಕೃತಿಯನ್ನು ಸರಿಪಡಿಸಲು ಸಾಧ್ಯವಿಲ್ಲ. ಹಣದಿಂದ ಸತ್ವ ಕಳೆದುಕೊಂಡ ಮಣ್ಣಿನ ಸತ್ವ ಮರಳಿ ಪಡೆಯಲು ಸಾಧ್ಯವಿಲ್ಲ. ನಿಜವಾಗಿ ಹಣ ಏನು ಅಲ್ಲ. ಪ್ರತಿಯೊಬ್ಬರೂ ಅದರ ಹಿಂದೆ ಬಿದ್ದು ಅದರ ಮಹತ್ವವನ್ನು ಹೆಚ್ಚಿಸಿದವರು ನಾವೇ.
ಮಳೆಯಿಲ್ಲದೆ ಜನರು ನೀರಿಗಾಗಿ ಪರದಾಡುತ್ತಿದ್ದಾರೆ ನಾವೆಲ್ಲರೂ ಒಟ್ಟಾಗಿ ನೀರಿನ ಮಹತ್ವವನ್ನು ನಮ್ಮವರಿಗೆ ತಿಳಿಹೇಳಬೇಕು. ಮುಂದಿನ ಪೀಳಿಗೆಗೆ ಜೀವಿಸುವುದಕ್ಕೆ ಯೋಗ್ಯ ಸಮಾಜವನ್ನು ಕೊಡಬೇಕು. ಸ್ವಾರ್ಥ ಬದಿಗಿಟ್ಟು ಸಮಾಜದ ಒಳಿತಿಗಾಗಿ ದುಡಿಯೋಣ. ಒಂದು ಹನಿ ನೀರು ಕೂಡ ಅಮೂಲ್ಯ. ಇನ್ನಾದರೂ ಜೀವ ಜಲದ ಉಳಿವಿಗಾಗಿ ಹೋರಾಡೋಣ.
ಲೇಖನ: ಗೌರೀಶ್ ಆವರ್ಸೆ
Discussion about this post