ಲಗ್ನಕ್ಕೆ ಅಥವಾ ಲಗ್ನಾಧಿಪತಿಗೆ ಹನ್ನೊಂದರಲ್ಲಿ ನಿಪುಣ(ಬುಧಾದಿತ್ಯ) ಯೋಗ ಇದ್ದರೆ ಉನ್ನತ ಸ್ಥಾನಮಾನ ಎಂದಿದೆ ಜ್ಯೋತಿಷ್ಯ. ಇದರ ಪ್ರಮಾಣ ಪರಿಧಿ ಹೆಚ್ಚಿಸಿಕೊಂಡಷ್ಟು ಉನ್ನತಾಧಿಕಾರ ಲಭಿಸಬಹುದು.
ಒಂದು ವೇಳೆ ಆ ವ್ಯಕ್ತಿ corrupted ಆಗಿದ್ದರೆ ಅಲ್ಲೂ ಉನ್ನತ ಅಧಿಕಾರಿಗಳ ಕೈಗೆ ಬಿದ್ದು(ಮಾಮೂಲಿ out post police ಅಲ್ಲ)ಅಲ್ಲಿಯೂ ಉನ್ನತ ಸೆರೆಮನೆ ಲಭಿಸುತ್ತದೆ! ನಾನು ವಿಮರ್ಷಿಸಿವ ಜಾತಕದಲ್ಲಿ ಲಗ್ನಾಧಿಪತಿ ಕುಜನು ನೀಚನಾಗಿ ಕರ್ಕದಲ್ಲಿದ್ದು, ಅವನಿಗೆ ಲಾಭದಲ್ಲಿ ಬುಧಾದಿತ್ಯ ಯೋಗ ಇದೆ. ಆದರೆ ಲಗ್ನಾಧಿಪತಿ ಕುಜನಿರುವ ಕ್ಷೇತ್ರ ಕರ್ಕ ರಾಶಿಗೆ ಋಣಾಧಿಪತಿ ಗುರುವಾಗಿ ಆತನು ನೀಚ ಕ್ಷೇತ್ರ ಗತನಾಗಿ, ಬಂಧನ ದ್ರೇಕ್ಕಾಣಾಧಿಪತಿ ಶನಿಯೊಡನೆ ಕುಜ ವೀಕ್ಷಣೆ ಮಾಡುತ್ತಿದ್ದಾನೆ. ಇದು ಉನ್ನತ ಯೋಗವನ್ನು ಹರಣ ಮಾಡಿ, ಉನ್ನತ ಯೋಗದ ದುರುಪಯೋಗವಾಗಿ ಉನ್ನತ ತಿಹಾರ್ ಜೈಲಿಗೆ ತಳ್ಳಿ ಬಿಟ್ಟಿದೆ. ಅಂದರೆ ಜ್ಞಾನದ ರೂಪ ಬದಲಾಗಿ ಅಜ್ಞಾನದ ಫಲ ಪ್ರಾಪ್ತಿಯಾಯ್ತು.
ಪಕ್ಷದ ಬಲವರ್ಧನೆಗೆ trouble shooter ಆಗಿ ನಿಲ್ಲಬೇಕೆಂದುಕೊಂಡು, ಅಪಾಯ ತಂದುಕೊಂಡಂತಾಯ್ತು. ಮಾತ್ರವಲ್ಲ ಲಗ್ನನ ದ್ವಿತೀಯದ ನಿಪುಣ ಯೋಗವೂ ಮಾರಕವಾಯ್ತು. ಇದೆಲ್ಲ ಯಾವಾಗ ಪ್ರಾಪ್ತಿಯಾಗುತ್ತದೆ ಎಂದರೆ ಚಂದ್ರಾಷ್ಟಮದಲ್ಲಿ ಶನಿ ಸಂಚಾರ ಕಾಲ, ಕೇತು ಸಂಚಾರ ಕಾಲದಲ್ಲಿ ಸಂಭವಿಸುತ್ತದೆ. ಯಾವ ಯೋಗಗಳೂ ಕೆಟ್ಟದ್ದೂ ಅಲ್ಲ, ಒಳ್ಳೆಯದ್ದೂ ಅಲ್ಲ. ಒಳ್ಳೆಯದ್ದಕ್ಕೆ ಕೆಟ್ಟದ್ದು ಮಾಡಿಕೊಂಡಾಗ, ಕೆಟ್ಟದ್ದೆಂದು ಅದನ್ನು ಉಪಯೋಗಿಸಿಕೊಳ್ಳದಿದ್ದಾಗ ಅದು ಸಮಸ್ಯೆ ತರುತ್ತದೆ.
ಚೂರಿ ಹರಿತವಾಗಿದೆ, ದೇಹವನ್ನು ಕೊಯ್ಯಬಹುದು ಎಂದು ಬಿಸಾಡಿದರೆ ಒಂದು ಹಣ್ಣನ್ನು ತುಂಡು ಮಾಡಲು tool ಇಲ್ಲದಂತಾದೀತು. ಬೇಕಾದಲ್ಲಿ, ಬೇಕಾದ್ದನ್ನು, ಬೇಕಾದ ಹಾಗೆ ಉಪಯೋಗಿಸಿಕೊಂಡರೆ ಸ್ವಚ್ಛ ಜೀವನ ಸಿಗುತ್ತದೆ. ಡಿಕೆಶಿ ತಾವು ಡಾನ್ ಆಗಿ ಮೆರೆಯಲು ಬಯಸಿದರು. ಗುರು ನೀಚನಾಗಿದ್ದುದರಿಂದ ಹೇಗೆ, ಏನು, ಎತ್ತ ಎಂಬ ಪರಿಜ್ಞಾನ ಕಡಿಮೆಯಾಯ್ತು. ಪರಿಣಾಮ ಆಪತ್ತನ್ನು ಇದಿರಿಸಲೇ ಬೇಕಾಯ್ತು.
ಡಿಕೆಶಿ ಒಂದು ಸಿಂಹ ಎಂಬುದಕ್ಕೆ ಎರಡು ಮಾತಿಲ್ಲ. ಆದರೆ ಸಿಂಹವೂ ಕೂಡಾ ಜ್ಞಾನ ಇಲ್ಲದೆ ಹೋದಾಗ (Application of Defence) ಬೋನಿಗೆ ಬೀಳಬೇಕಷ್ಟೆ. ದೇವರ ಕಾರ್ಯ, ಪೂಜೆ ಮಾಡಿಸುವವರೆಲ್ಲ ಭಕ್ತಿಯುಳ್ಳವರು ಎಂದು ಹೇಳಲಾಗದು. ಭಕ್ತಿ ಎಂದರೆ ದೇವರೆಂದರೇನು? ಆ ದೇವ ಪ್ರೀತ್ಯರ್ಥ ಹೇಗೆ ನಡೆದುಕೊಳ್ಳಬೇಕು ಎಂಬ ಪರಿಜ್ಞಾನ. ಒಬ್ಬ ಸಜ್ಜನ ವಿದ್ವಾಂಸನ ಶಿಷ್ಯನು ಆ ಸಜ್ಜನನಿಗೋಸ್ಕರ ಬದುಕಿದಾಗ ಮಾತ್ರ ಅವನು ಆ ಸಜ್ಜನನ ಶಿಷ್ಯ ಎಂಬುದಕ್ಕೆ ಅರ್ಥ ಬರುತ್ತದೆ. ಅವನು ಆ ಗುರುವಿಗೆ ಕಳಂಕ ತರುವವನಾದರೆ ಯಾವ ಪೂಜೆ ನಮಸ್ಕಾರಗಳೂ ಶೂನ್ಯ ಫಲವೇ.
ಸಂಪತ್ತು ಇರುವುದು ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕೆ ದೇವರು ನೀಡಿರುವಂತದ್ದು. ಅದರ ದುರುಪಯೋಗವಾದಾಗ ದೇವ ಕೋಪವಾಗುತ್ತದೆ, ಬ್ರಾಹ್ಮಣ ಶಾಪವಾಗುತ್ತದೆ. ಇವರ ಜಾತಕದಲ್ಲಿ ಮೇಷ ಲಗ್ನಕ್ಕೆ ಬಾಧಾಧಿಪತಿ ಶನಿಯು ಕರ್ಮದಲ್ಲಿ ವ್ಯಯಾಧಿಪತಿ ಮತ್ತು ಧರ್ಮಾಧಿಪತಿಯ ಜತೆಗೆ ಇದ್ದು, ಅದೇ ಲಗ್ನಾಧಿಪತಿಯನ್ನು ನೋಡುವುದರಿಂದ ಇದು ದೇವ ಕೋಪ ಮತ್ತು ಬ್ರಾಹ್ಮಣ ಕೋಪವಾಗುತ್ತದೆ.
ಇಷ್ಟೆಲ್ಲ ವ್ಯವಹಾರ ನಡೆದ ಮೇಲೆ ಪರಿಹಾರ ಇದೆಯಾ ಎಂದರೆ ಏನು ಹೇಳಬೇಕು? ಆದರೂ ಒಂದು ಸಲಹೆ ಎಂದರೆ ದೇವ ಕೋಪ, ಬ್ರಾಹ್ಮಣ ಕೋಪ ಪರಿಹಾರ ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅನಾಹುತ ಆಗದಂತೆ ರಕ್ಷಣೆ ಸಿಗಬಹುದು. ಕಾನೂನು ಎಂಬುದು ಒಂದು ವಿಗ್ರಹವಲ್ಲ. ಅದು ವಿಚಾರ. ಅದಕ್ಕೆ ತಲೆಬಾಗುತ್ತಾ, ದೋಷ ಪರಿಹರಿಸಿಕೊಂಡರೆ ಮುಂದಿನ ಜೀವನ ಸುಗಮ.
ಬಂಧನ ಬಿಡಿಸಿಕೊಳ್ಳಲು ಏನೇನೋ ವಾಮ ಮಾರ್ಗದ ಮೂಲಕ ಪ್ರಯತ್ನಿಸುವುದಕ್ಕಿಂತ, legally ದೋಷ ನಿವಾರಿಸಿಕೊಂಡಾಗ ಶಿಕ್ಷೆಯನ್ನು ತಡೆ ಹಿಡಿಯಲೂಬಹುದು ಅಥವಾ ಪ್ರಮಾಣ ಕಡಿಮೆಯಾಗಿ ಮುಂದಿನ ಜೀವನ ಸುಗಮವಾಗಬಹುದು.
ಕರ್ಮ ನಮ್ಮದು, ಫಲ ದೇವರದ್ದು. ಸಜ್ಜನರ ಮೇಲೆ ಕರುಣೆಯು ಯಾವಾಗಲೂ ಇದ್ದೇ ಇದೆ. ಮೊದಲು ಸಜ್ಜನನಾಗು. ಆಗ ಅನುಗ್ರಹವೂ, ಅನುಕೂಲವೂ ಸಿಗುತ್ತದೆ. ಶಿಕ್ಷೆ ಅನುಭವಿಸುವುದೂ ಒಂದು ದೋಷ ಪ್ರಾಯಶ್ಚಿತ್ತ ಪೂಜೆಯೇ ಎಂಬುದು ನಮ್ಮೊಳಗಿದ್ದಾಗ ದೇವರ ದಯೆ ಖಂಡಿತವಾಗಿಯೂ ನಮಗಿರುತ್ತದೆ.
Discussion about this post