ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಎಚ್.ಎಸ್. ವೆಂಕಟೇಶಮೂರ್ತಿ ಅವರ ಕವನದಲ್ಲಿ ಬರುವ ಕೆಲವು ಸಾಲುಗಳು ಇಂತಿವೆ. ಮರಿ ಹಕ್ಕಿ ತನ್ನ ಅಮ್ಮನನ್ನು ಕೇಳುತ್ತದೆ, ಅಮ್ಮಾ ಹಕ್ಕಿ ಮೊಟ್ಟೆಯನ್ನು ಹಾವು ತಿಂದರೆ, ಹಾವಿನ ಹೊಟ್ಟೆಯಲ್ಲಿ ಹಕ್ಕಿಯೇ ಹುಟ್ಟುತ್ತದೆ ಅಲ್ಲವೇನಮ್ಮ? ಎಂದು. ಆಗ ತಾಯಿ ಹಕ್ಕಿ ಹೇಳುತ್ತದೆ.
ಇನ್ನೂ ನಿನಗೆ ತಿಳೀದಮ್ಮ ಹಾವಿನ ಹುನ್ನಾರ
ಹಾವಿನ ಹೊಟ್ಟೆ ಸೇರಿದ್ಮೇಲೆ ಹೇಳೋದಿನ್ನೇನು?
ಹಾವಿನ ಮೊಟ್ಟೆ ಆಗ್ಬಿಡತ್ತೆ ಹಕ್ಕಿ ಮೊಟ್ಟೇನು..
ಅದೇ ಮರಿ ಹಕ್ಕಿಯ ಮುಗ್ಧತೆ, ಅದೇ ದಡ್ಡತನ ನಮ್ಮಲ್ಲೂ ಇದೆ, ನಾವು ಇಂದೂ ಅದೇ ಮರಿಗಳಾಗಿಯೇ ಉಳಿದಿದ್ದೇವೆ. ಆಂಗ್ಲ ಶಿಕ್ಷಣ ಪದ್ಧತಿಯ ಪಡೆದರೇನಾಯ್ತು ನಾವು ಭಾರತೀಯರೇ, ಮಕ್ಕಳು ಪಾಕಿಸ್ತಾನಕ್ಕೆ ಜೈ ಅಂದರೇನಾಯ್ತು ನಾವು ಭಾರತೀಯರೇ, ಭಾರತವನ್ನು ಕತ್ತರಿಸಿ ಬಿಡೋಣ ಎಂದರೇನಾಯ್ತು ನಾವು ಭಾರತೀಯರೇ. ನಮ್ಮ ತಲೆಗಳನ್ನು ತಿದ್ದಲು ಅವರಿಗೆ ನೀಡಿ ಎಷ್ಟೋ ದಶಕಗಳು ಉರುಳಿಹೋಗಿವೆ. ಆದರೆ ಹಕ್ಕಿ ಮೊಟ್ಟೆಯಾಗಿ ಹಾವಿನ ಹೊಟ್ಟೆಯೊಳಗೆ ಹೋಗೋಣ, ನಂತರವೂ ನಾವು ಹಕ್ಕಿಯಾಗಿಯೇ ಹೊರ ಬರುವೆವು ಎಂಬ ಭಾವನೆ. ಅದೇ ಅವಶ್ಯಕ ಶಿಕ್ಷಣದ ಅನಿವಾರ್ಯತೆ. ನಮಗೆ JNU ಮೇಲಿರುವಷ್ಟು ಅಕ್ಕರೆ ನಲಂದದ ಮೇಲಿಲ್ಲ, ನಮಗೆ ಪೊಳ್ಳು ಕಾಲ್ಪನಿಕ ಐತಿಹಾಸಿಕ ಸಿನಿಮಾಗಳ ಮೇಲಿರುವಷ್ಟು ಅಭಿಮಾನ ನೈಜ ಇತಿಹಾಸ ಅರಿಯುವುದರಲಿಲ್ಲ. ಹಾಗಾದರೆ ಎಲ್ಲಿ ಹೋಯಿತು ಆ ಅಭಿಮಾನ? ದೇಶಭಕ್ತಿ? ಉತ್ತರಗಳನ್ನು ಹುಡುಕಿ ಹೊರಟಾಗ ನಮ್ಮ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಕಡೆ ಸಾಗುತ್ತದೆ ನಮ್ಮ ಹಾದಿ.
ಆ ದಿನ ಆಂಗ್ಲರು ಅದನ್ನೇ ಹೇಳಿದ್ದು ಭಾರತೀಯರ ತುಳಿಯಲು ತಮ್ಮ ಸೈನ್ಯ, ಯುದ್ಧ, ಆಮಿಷಗಳಿಂದ ಸಾಧ್ಯವಿಲ್ಲ. ಅವರ ಶಿಕ್ಷಣ ಪದ್ಧತಿಯ ಮೇಲೆ ಆಕ್ರಮಣ ಮಾಡೋಣ ಎಂದು. ಆಗ ಶುರುವಾದ ನಕಲಿ ಇತಿಹಾಸಕಾರರ, ಮಧ್ಯವರ್ತಿಗಳ ಪೀಳಿಗೆ ಇಂದಿಗೂ ಜೀವಂತವಾಗಿದೆ. ಭವ್ಯ ಭಾರತದ ರಾಜಧಾನಿಯಲ್ಲಿ ನಿಂತು ಒಬ್ಬ ದ್ರೋಹಿ ಭಾರತದ ಕುತ್ತಿಗೆಯ ತರಿಯೋಣ ಎಂದರೆ ಅವನ ಸುತ್ತಲಿನ ಜನ ಅಹುದಹುದು ಎನ್ನುತ್ತಾರೆ. ಅದಕ್ಕೆ ಮತ್ತೆ ಕೆಲವರ ಸ್ವಘೋಷಿತ ಪ್ರಮುಖರ ಬೆಂಬಲ. ಇಂತಹ ಮೌಢ್ಯರ ತುಳಿದು ಮುನ್ನಡೆಯಲು ನಮಗೆ ನಮ್ಮ ನೈಜ ಭಾರತವನ್ನು ಪಸರಿಸುವ ಅವಶ್ಯಕತೆ ಇದೆ. ಅಂತಹುದೇ ಒಂದು ಪ್ರಯತ್ನ ವಿಹಿತವಿದ್ಯಾ.
ವಿಹಿತವಿದ್ಯಾ ಇದನ್ನು ಪುಸ್ತಕ ಎಂದು ಕರೆಯಲು ಆಗುವುದೇ ಇಲ್ಲ. ಇದೊಂದು ಗ್ರಂಥವೇ ಸರಿ. ಸನಾತನ ಧರ್ಮ ಮತ್ತು ಸಂಘಕ್ಕಾಗಿ ಇಡೀ ಜೀವನವನ್ನು ಸವೆಸಿದ ಶ್ರೀಯುತ ನಾರಾಯಣ ಶೇವಿರೆಯವರ ಅನುಭವದ ಧಾರೆ. ನಿಜ ಇದು ಒಂದೇ ಗುಕ್ಕಿಗೆ ಓದಿ ಮುಗಿಸುವ/ಮುಗಿಸಬಹುದಾದ ಕೃತಿಯಲ್ಲ. ಒಂದು ಅನನ್ಯ ಸಂಗ್ರಹಯೋಗ್ಯ ಗ್ರಂಥ. ಶ್ರೀಗಂಧದ ಮರದ ಎಲೆ, ಕೊಂಬೆ, ತೊಗಟೆ, ಕಾಂಡ, ಬೇರು ಅಂತೆ ಅದರ ಅಣು ರೇಣು ತೃಣಕಾಷ್ಠ ಎಲ್ಲವೂ ಗಂಧವೇ. ಹಾಗೆಯೇ ಈ ಕೃತಿ. ಇದರ ಪ್ರತಿ ಪದವೂ ಅನುಭವದ ಎರಕವೇ. ಪ್ರತಿ ಅಧ್ಯಾಯವನ್ನು ಎರಡು ಬಾರಿ ಓದಿ ಮುಂದಕ್ಕೆ ಹೋಗುವಷ್ಟು ವಿಚಾರ. ಎಲ್ಲಿಯೂ ವಿಡಂಬನೆಯ, ವಿಕಟತೆಯ ಅಥವಾ ಅಪಹಾಸ್ಯದ ಕಿಂಚಿತ್ತೂ ಕಾಣಬರುವುದಿಲ್ಲ. ಏನೂ ಹೇಳಬೇಕೋ ಅದನ್ನು ಅತ್ಯಂತ ಸರಳವಾಗಿ, ಅದಿಷ್ಟನ್ನೇ ಹೇಳಲಾಗಿದೆ. ನಾವು ಧರ್ಮವನ್ನು, ಪರಂಪರೆಯನ್ನು ದಾಟಿ ಬಂದಿದ್ದೇವೆ, ನಮಗದರ ಅವಶ್ಯಕತೆಯೂ ಇಲ್ಲ ಎನ್ನುವ ಈ ಕಾಲದಲ್ಲಿ ನಾವು ಅದನ್ನು ಮುಟ್ಟುವುದಲ್ಲ, ನಾವದರ ಹಾದಿಯಲ್ಲೂ ಇಲ್ಲ ಎಂದರಿಯಲು ಈ ಕೃತಿ ಬೇಕು.
ಒಂದಿಷ್ಟು ಸಾಲುಗಳು ನಿಮಗಾಗಿ..
- ಗುರು ಎಂದರೆ ದೊಡ್ಡದು ಎಂದರ್ಥವಷ್ಟೆ. ದೊಡ್ಡ ಕುಲ ಗುರುಕುಲ. ಅಲ್ಲಿ ದೊಡ್ಡವರಿರುತ್ತಾರೆ. ದೊಡ್ಡವರಿಗೆ ಎಲ್ಲರನ್ನೂ ದೊಡ್ಡವರಾಗಿಸುವ ಜವಾಬ್ದಾರಿ, ಹುಮ್ಮಸ್ಸು. ಅವರ ಸನ್ನಿಧಿಯಲ್ಲಿ ಉಳಿದವರಿಗೆ ದೊಡ್ಡವರಾಗುವ ಅವಕಾಶ. ಅದಕ್ಕಾಗಿಯೇ ಜತೆಜತೆಗೆ ಇರಬೇಕು. ಆಗದು ಗುರುಕುಲವಾಗುತ್ತದೆ. ಅಂಥ ಗುರುಕುಲಗಳ ದೇಶ ಭಾರತ.
- ಶಿಕ್ಷಣವೆಂದರೆ ಉದ್ಯೋಗಾರ್ಥಿಯ ತರಬೇತಿಯಲ್ಲ.
- ಅದು ದುರ್ಲಾಭವನ್ನು ಕೊಳ್ಳೆ ಹೊಡೆವ ವಾಣಿಜ್ಯ ವ್ಯವಹಾರವಲ್ಲ.
- ಶಿಕ್ಷಣವೆಂದರೆ ವ್ಯಕ್ತಿಯನ್ನು ಮನುಷ್ಯನಾಗಿಸುವ ಸಂಸ್ಕಾರವಿಶೇಷ.
- ರಾಷ್ಟ್ರದುನ್ನತಿಯ ಕಾರ್ಯದಲ್ಲಿ ತೊಡಗುವುದಕ್ಕಾಗಿ ಭವಿಷ್ಯದ ಪೀಳಿಗೆಯನ್ನು ತಯಾರಿಸುವ ಸಾಮಾಜಿಕ ಜವಾಬ್ದಾರಿ.
- ಸ್ವಾತಂತ್ರ ಹೋರಾಟಗಾರರಾದ ಶ್ರೀ ಧರ್ಮಪಾಲ್ ಅವರ ’ದಿ ಬ್ಯೂಟಿಫುಲ್ ಟ್ರೀ’ ಗ್ರಂಥದಲ್ಲಿ ಬರುವ ಸಾಲುಗಳು, ಬಂಗಾಳ-ಬಿಹಾರಗಳಲ್ಲಿ ಸಮೀಕ್ಷೆ ಮಾಡಿದ ವಿಲಿಯಂ ಆಡಂ, ಮದ್ರಾಸ್ ಪ್ರೆಸಿಡೆನ್ಸಿ ಬಗ್ಗೆ ಥಾಮಸ್ ಮನ್ರೋ, ಬಾಂಬೇ ಪ್ರೆಸಿಡೆನ್ಸಿ ಬಗ್ಗೆ ಪ್ರೆನ್ಡರ್ ಗಾಸ್ಟ್, ಪಂಜಾಬ್ ಪ್ರಾಂತ್ಯದ ಬಗ್ಗೆ ಜಿ. ಡಬ್ಲ್ಯೂ. ಲೈಟ್ನರ್ ಇವರು ’ಇಲ್ಲಿ ಪ್ರತಿಯೊಂದು ಹಳ್ಳಿಯೂ ಕನಿಷ್ಠ ಒಂದು ಶಾಲೆಯನ್ನು ಹೊಂದಿದೆ’ ಎಂದಿದ್ದಾರೆ. ಇದು 19ನೆಯ ಶತಮಾನದ ಅಂತ್ಯದ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಒಂದು ಚಿತ್ರಣ. ಅಂದರೆ ’1850ರವರೆಗೆ ನಮ್ಮ ದೇಶದಲ್ಲಿ ಪಾಠಶಾಲೆಗಳಿಲ್ಲದ ಹಳ್ಳಿಯೇ ಇರಲಿಲ್ಲ’. ಅಲ್ಲದೆ ಶಿಕ್ಷಣ ಬ್ರಾಹ್ಮಣರಿಗಷ್ಟೇ ಸೀಮಿತವಾಗಿರಲಿಲ್ಲ. ಶೂದ್ರರು, ಅವರಿಗಿಂತ ಕೆಳಗಿನ ಜಾತಿಯವರು, ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಎಲ್ಲರೂ ಶಿಕ್ಷಣ ಪಡೆಯುತ್ತಿದ್ದರು.
- ಶಿಕ್ಷಣ ಲಕ್ಷ್ಯದ ಕುರಿತು ಆಂಗ್ಲರೇ ಹೊರಡಿಸಿದ್ದ ಉದ್ಘೋಷವಿತ್ತು: ’ಕಾರಕೂನರ ನಿರ್ಮಾಣ’.
- ಅದೊಂದು ಐತಿಹಾಸಿಕ ಸ್ಥಳ. ಮಹಾಪುರುಷರು ಜನ್ಮ ತಾಳಿದ ಊರು. ಊರದರ್ಶನಕ್ಕೆಂದು ಪರ ಊರಿನ ಹಿರಿಯೊಬ್ಬರು ಬಂದರು. ಅಲ್ಲಿಯ ಕುರಿತಾಗಿ ಅಷ್ಟೊಂದು ಮಾಹಿತಿ ಇರಲಿಲ್ಲ. ಎದುರು ಸಿಕ್ಕ ಒಬ್ಬ ಹುಡುಗನಲ್ಲಿ ’ಇಲ್ಲಿ ಯಾರಾದರೂ ಮಹಾತ್ಮರು ಹುಟ್ಟಿದಾರೆಯೇ?’ ಎಂದು ಪ್ರಶ್ನಿಸಿದರು.
ಅದಕ್ಕಾತ ಸಹಜವಾಗಿಯೇ ಉತ್ತರಿಸಿದ: ’ಇಲ್ಲವಲ್ಲ! ಇಲ್ಲಿ ಯಾರೂ ಮಹಾತ್ಮರು ಹುಟ್ಟಿಲ್ಲ. ಇಲ್ಲಿ ಶಿಶುಗಳು ಮಾತ್ರ ಹುಟ್ಟುತ್ತವೆ’. ಇದೇ ಜ್ಞಾನದ ಕೊರತೆ.
‘ಮನುಷ್ಯನೊಬ್ಬ ಆರ್ಥಿಕ ಪ್ರಾಣಿ’ ಎನ್ನುವುದು ಪರಕೀಯ ದೃಷ್ಟಿ.
ಮಗು ಜನಿಸಲು ಮನೆ ಬೇಕು. ಮಹಾತ್ಮನಾಗಲು ಗುರುಕುಲ ಬೇಕು.
- ಭವತಿ ಭಿಕ್ಷಾಂ ದೇಹಿ ಎಂಬ ನಿವೇದನೆ. ಇದು; ಮನೆಯ ಯಜಮಾನನಲ್ಲಲ್ಲ, ಯಜಮಾನ್ತಿಯಲ್ಲಿ ಹೇಳುವ ಮಾತು. ದಾನದ ಅಧಿಕಾರ ಯಜಮಾನನದ್ದಲ್ಲ, ಮನೆಯ ತಾಯಂದಿರದು ಎಂದು ವ್ಯಕ್ತವಾಗಿಯೇ ಹೇಳುವ ಮಾತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಹಲವು ದಶಕಗಳಿಂದ ಸೇವೆ ಸಲ್ಲಿಸಿದ ಇವರಿಂದ ಇಂತಹ ಅನನ್ಯ ಕೃತಿಯಲ್ಲದೇ ಮತ್ತೇನು ನಿರೀಕ್ಷಿಸಲು ಸಾಧ್ಯ? ಅವರ ದಶಕಗಳ ಅನುಭವದ ಅಣಿಮುತ್ತುಗಳ ಸಂಗ್ರಹವೇ ವಿಹಿತವಿದ್ಯಾ. ಯಾವುದೇ ವಿಷಯವನ್ನು ಕುರಿತು ಅತ್ಯಂತ ಸರಳವಾಗಿ ಹೇಳಬೇಕೆಂದರೆ ಅದರಲ್ಲಿ ಅತ್ಯಂತ ಆಳವಾದ ಜ್ಞಾನ ಇದ್ದರಷ್ಟೇ ಸಾಧ್ಯ. ಸುಮಾರು 264 ಪುಟಗಳಲ್ಲಿ ಅಸಂಖ್ಯಾತ ಧನಾತ್ಮಕ ಆಲೋಚನೆಗಳ ಧಾರೆಯೇ ಇದೆ. ನಿಜ ಓದುಗನನ್ನು ಓದಿನ ಹಾದಿಯಲ್ಲಿ ಕ್ಷಣ ಕ್ಷಣಕ್ಕೂ ತಡೆ ಹಿಡಿವ, ನಿಲ್ಲಿಸಿ ನಡೆಸುವ ಬರವಣಿಗೆ ಇಲ್ಲಿದೆ. ತಾಯಿ ಭಾರತಿ ಅವರನ್ನು ಮನದುಂಬಿ ಹರಸಲಿ. ಮತ್ತು ಹರಿಹರಪುರದ ಗುರುಕುಲಕ್ಕೆ 24 ವರ್ಷಗಳು ತುಂಬಿವೆ. ಶ್ರೀ ನಾರಾಯಣ ಶೇವಿರೆಯವರು ಸೇರಿ ಅನ್ಯ ಹಲವು ಹಿರಿಯರ ಮಾರ್ಗದರ್ಶನದಲ್ಲಿ ಗುರುಕುಲಗಳು ರಾಜ್ಯದಾದ್ಯಂತ ಪಸರಿಸಲಿ. ಹಲವು ಪೂರ್ಣ ಮಂಡಲಗಳನ್ನು ಕಾಣಲಿ. ಭಾರತ ವಿಶ್ವಗುರುವಾಗಲಿ. ಇದು ನನ್ನ ಭಾರತ..
ಚಂದದ ನಾಡಿದು ಚಿನ್ನದ ಬೀಡಿದು ತಪೋಭೂಮಿ ಇದು ಭಾರತ
ಪ್ರತಿ ಬಾಲಕನೂ ರಾಮನಂತೆ, ಪ್ರತಿ ಬಾಲಿಕೆಯೂ ಸೀತೆಯು
Get in Touch With Us info@kalpa.news Whatsapp: 9481252093








Discussion about this post