ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಗ್ಯಾರಂಟಿಗಳಿಗೂ ಕುಮಾರಸ್ವಾಮಿಗೂ ಏನು ಸಂಬಂಧ ಎಂದಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ #DKShivakumar ಅವರಿಗೆ ತೀಕ್ಷ್ಣ ತಿರುಗೇಟು ಕೊಟ್ಟಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, #HDKumaraswamy ಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್ ಅಲ್ಲ ಎಂದು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ಜಾಲತಾಣದಲ್ಲಿ ಕಿಡಿಕಾರಿರುವ ಅವರು, ಜನರು ಆಡಳಿತ ಪಕ್ಷದಲ್ಲಿ ಕೂರಿಸಿದ್ದಾರೆ ಎಂದಷ್ಟಕ್ಕೇ ಇವರ ತಲೆ ನಿಲ್ಲುತ್ತಿಲ್ಲ. ಚಕ್ರ ತಿರುಗಲು ಶುರು ಮಾಡಿದೆ. ಅದು ಕೆಳಕ್ಕೆ ಬಂದೇ ಬರುತ್ತದೆ. ಸ್ವಲ್ಪ ಸಮಯ ಬೇಕಷ್ಟೇ, ಆಗ ತಿರುಗುವ ತಲೆ ತಾನಾಗಿಯೇ ನಿಲ್ಲುತ್ತದೆ ಎಂದು ಮಾರ್ಮಿಕವಾಗಿ ಚುಚ್ಚಿದ್ದಾರೆ.
ಡೂಪ್ಲಿಕೇಟ್ ಸಿಎಂ ಬಹಳ ಆವೇಶದಲ್ಲಿದ್ದಾರೆ. ಅತಿಯಾದ ಆವೇಶ ಆರೋಗ್ಯಕ್ಕೆ ಹಾನಿಕಾರಕ! ಈ ಎಚ್ಚರಿಕೆ ನೆನಪಿದ್ದರೆ ಕ್ಷೇಮ. ಎಚ್.ಡಿ. ಕುಮಾರಸ್ವಾಮಿಗೂ ಗ್ಯಾರಂಟಿಗಳಿಗೂ ಏನು ಸಂಬಂಧ? ಎಂಬ ಆಣಿಮುತ್ತು ಉದುರಿಸಿದ್ದಾರೆ. ಅಧಿಕಾರದ ಪಿತ್ತ ನೆತ್ತಿಗೇರಿ ಮಿದುಳು ಕೆಲಸ ಮಾಡದಿದ್ದರೆ ನಾಲಿಗೆ ಹೀಗೆ ಮಾತನಾಡುತ್ತದೆ. ಅಚ್ಚರಿಯೇನೂ ಇಲ್ಲ ಎಂದು ಅವರು ಹೇಳಿದ್ದಾರೆ.
ಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್ ಅಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ, ಪ್ರತಿಪಕ್ಷ ಇರುತ್ತವೆ. ಇದು ಗೊತ್ತಿಲ್ಲದಷ್ಟು ಅಜ್ಞಾನವೇ? ಪ್ರಶ್ನೆ ಮಾಡಬೇಕು ಎಂತಲೇ ಜನ ನನ್ನನ್ನು ವಿರೋಧಪಕ್ಷದಲ್ಲಿ ಕೂರಿಸಿದ್ದಾರೆ. ಇವರನ್ನು ಆಡಳಿತ ಪಕ್ಷದಲ್ಲಿ ಕೂರಿಸಿದ್ದಾರೆ ಎಂದಷ್ಟಕ್ಕೇ ತಲೆ ನಿಲ್ಲುತ್ತಿಲ್ಲ. ಚಕ್ರ ತಿರುಗಲು ಶುರು ಮಾಡಿದೆ. ಅದು ಕೆಳಕ್ಕೆ ಬಂದೇ ಬರುತ್ತದೆ. ಸ್ವಲ್ಪ ಸಮಯ ಬೇಕಷ್ಟೇ, ಆಗ ತಿರುಗುವ ತಲೆ ತಾನಾಗಿಯೇ ನಿಲ್ಲುತ್ತದೆ ಎಂದು ಅವರು ಡಿಕೆಶಿಗೆ ಕುಟುಕಿದ್ದಾರೆ.
ಗ್ಯಾರಂಟಿಗಳ ಬಗ್ಗೆ ಶ್ವೇತಪತ್ರ ಹೊರಡಿಸಿ
ಗ್ಯಾರಂಟಿಗಳು ಹಳ್ಳ ಹಿಡಿದು ವಿಫಲವಾಗಿವೆ. ಅನುಮಾನವೇ ಇಲ್ಲ. ಯಾವ ಗ್ಯಾರಂಟಿಯೂ ಸಮರ್ಪಕ ಜಾರಿ ಆಗಿಲ್ಲ. ಎಷ್ಟು ಜನರಿಗೆ ಫಲ ಸಿಕ್ಕಿದೆ? ಆರ್ಥಿಕವಾಗಿ ಹೊರೆ ಎಷ್ಟು ಬಿದ್ದಿದೆ? ಹೊರಡಿಸಿ ಶ್ವೇತಪತ್ರವನ್ನು. ಬನ್ನಿ ಚರ್ಚೆಗೆ, ನಾನು ತಯಾರಿದ್ದಾನೆ. ಅಧಿವೇಶನದಲ್ಲೂ ದಾಖಲೆ ಸಮೇತ ಚರ್ಚೆಗೆ ಸಿದ್ಧನಿದ್ದಾನೆ, ಉತ್ತರಿಸಿ. ಚನ್ನಪಟ್ಟಣದ ನನ್ನ ಜನರೂ ಮಾಹಿತಿ ನೀಡಿದ್ದಾರೆ, ರಾಜ್ಯದ ಉಳಿದ 223 ಕ್ಷೇತ್ರಗಳ ಜನರು ಕೊಟ್ಟ ವಿವರವೂ ನನ್ನಲ್ಲಿದೆ. ನೀವು ಒಳಗೊಳಗೆ ಮಾಡುತ್ತಿರುವ ಗಿಲೀಟುಗಳ ಮಾಹಿತಿಯೂ ಇದೆ. ಚರ್ಚೆ ಮಾಡೋಣಂತೆ ಎಂದು ಉಪ ಮುಖ್ಯಮಂತ್ರಿಗಳಿಗೆ ನೇರ ಸವಾಲು ಹಾಕಿದ್ದಾರೆ
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post