ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಾ ’ಅನ್ನ’ದೆ
ನೀ ’ಅನ್ನ’ದೆ
ಅವ ’ಅನ್ನ’ದೆ
’ಅನ್ನ’ದ ಮುಂದೆ
ನಾವೆಲ್ಲ ಒಂದೇ
ಹುಟ್ಟಿದ ಮೊದಲ ಮಾತು ಅಮ್ಮ ಅಂದರೂ, ಕುಡಿಯೋ ಮೊದಲ ಹನಿ ಹಾಲು ಅನ್ನವೇ. ಕಟ್ಟ ಕಡೆಯ ಉಸಿರು ಎಳೆಯುವ ಮುನ್ನ ಎದೆಯ ಗೂಡೊಳಗೆ ಇನಿತು ಅನ್ನ ಇರಲೇಬೇಕು. ಅದಕ್ಕೆ ಅಲ್ಲವೇ ಅನ್ನ ಬ್ರಹ್ಮ. ಅನ್ನವೇ ದೈವ. ಹೌದು ಈಗ ಜಗತ್ತೇ ಈ ಚೀನೀ ವೈರಸ್ಸಿನ ವಿರುದ್ಧದ ಮಹಾಸಮರದಲ್ಲಿ ಹೆಣಗುತ್ತಿದೆ. ಆರೋಗ್ಯ ಹೋಗಲಿ, ಆಹಾರಕ್ಕೂ ಬಡಿದಾಡುವ ಪರಿಸ್ಥಿತಿ. ಯಾಕಾದರೂ ಬಂತೋ ಈ ಹೆಮ್ಮಾರಿ. ಅಮ್ಮ ತನ್ನ ಕಂದನ ಮುಟ್ಟುವ ಹಾಗಿಲ್ಲ, ಅಪ್ಪ ಮಗುವ ಹೆಗಲಿಗೆ ಹಾಕಿಕೊಳ್ಳುವಂತಿಲ್ಲ, ಅಜ್ಜಿ ಕೆಮ್ಮುತ್ತಾ ಕತೆ ಹೇಳುವಂತಿಲ್ಲ, ಅಜ್ಜನ ಊರಿಗೆ ಕಂದ ಓಟಕೀಳುವಂತಿಲ್ಲ.
ಉಳಿತಾಯದ ಊರುಗೋಲಲ್ಲಿ ಎಷ್ಟು ದಿನ ಬದುಕಲು ಸಾಧ್ಯ? ಅದು ಎಷ್ಟು ದಿನ ತಡೆದೀತು? ಇಡೀ ಪರಿವಾರ ಮನೆಯೊಳಗೆ ಬಂಧಿಯಾಗಿ ಕುಳಿತು ಇನ್ನೆಂತು ಬದುಕಲು ಆಗಬಹುದು? ಅಂತಹ ಸಂದರ್ಭದಲ್ಲಿ ಭದ್ರಾವತಿಯ ಒಂದಿಷ್ಟು ಹೃದಯಗಳು ಮಿಡಿದವು. ಅವರಿಗೆ ತಾವು ಸುರಕ್ಷಿತವಾಗಿ ಇರಬೇಕು ಅನ್ನಿಸಲಿಲ್ಲ, ಊರ ಚಿಂತೆ ಯಾಕೆ ಎಂದು ಕೈ ಕಟ್ಟಿ ಕೂರುವ ಮನಸಿರಲಿಲ್ಲ. ಆಗ ಹುಟ್ಟಿದ್ದು ಸಾಮೂಹಿಕ ಅನ್ನದಾನ. ಅದು ಕರುನಾಡಷ್ಟು ಜನಸಂಖ್ಯೆ ಹೊಂದಿದ ಇಟಲಿ ಕೊರೋನಾ ವೈರಸ್ಸಿಗೆ ತತ್ತರಿಸಿದ ಸಮಯ. ಭಾರತ ಪ್ರತಿ ದೇಶಗಳ ಕ್ರಮಗಳನ್ನು ಅಧ್ಯಯನ ಮಾಡಿ ಕೊನೆಗೆ ಲಾಕ್ ಡೌನ್ ಅಂತಹ ಕಠಿಣ ಕ್ರಮ ಕೈಗೊಂಡಿತು. ಆಗ ದಿನಗೂಲಿ ನೌಕರರು ಸೇರಿದಂತೆ ಹಲವು ರೀತಿಯ ಜನರು ತಮ್ಮ ಆಹಾರಕ್ಕಾಗಿ ತೊಂದರೆಗೊಳಗಾದರು. ಅದು ಇವರನ್ನು ತುಂಬಾ ಚಿಂತನೆಗೆ ಪ್ರೇರೇಪಿಸಿತು. ಹಾಗಿದ್ದಾಗ ಅನ್ನದಾನ ಮಾಡುವ ಬಯಕೆ ಉಂಟಾಯಿತು. ಅಲ್ಲಿಂದಲೇ ಆರಂಭವಾಗಿದ್ದು ಇವರ ದಾಸೋಹ ಯಜ್ಞ.
ಇಂತಹ ಮಾದರಿ ಕಾರ್ಯದ ಬಗ್ಗೆ ಅವರ ಮಾತುಗಳಲ್ಲೇ ಓದಿ:
ಹಿಂದೊಮ್ಮೆ ಮಾಜಿ ಸೈನಿಕರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಹೇಳಿದ್ದೆ. ಭದ್ರಾವತಿ ಅಷ್ಟೇ ಉಕ್ಕಿನ ನಗರಿ. ಅಲ್ಲಿರುವ ಪ್ರತಿ ಹೃದಯವೂ ಬೆಣ್ಣೆಗಿಂತ ಮೃದು. ಕಷ್ಟ ಅಂದಾಗ ದೇಶದ ಗಡಿಯಲ್ಲೂ ಭದ್ರೆಯ ನಾವಿದ್ದೇವು, ಇವತ್ತು ಅಂತಹ ಕಷ್ಟ ಬಂದಿದೆ, ಭದ್ರೆಯ ಮಕ್ಕಳು ಮತ್ತೆ ನಾವು ಗಡಿಯೊಳಗೂ ನಾವಿದ್ದೇವೆ. ಏನಾದರೂ ಅನ್ನ ತೀರದೆ ಸಾವು ಬರಬಾರದು ಅದೇ ನಮ್ಮ ಮನದ ಮಾತಾಗಿತ್ತು. ಸ್ವರ್ಣ ಟ್ರಾವೆಲ್ಸ್, ಮರ್ಚೆಂಟ್ ಅಸೋಸಿಯೇಷನ್ ಮತ್ತು ಸ್ವಯಂ ಸೇವಕರು. ಒಂದು ವಿಚಾರ ನೆನಪಿದೆ. ಇಂತಹ ಒಂದು ಘನ ಉದ್ದೇಶ ಹೊತ್ತಾಗ ಆಧಾರ ಸ್ಥಂಭಗಳ ಅವಶ್ಯಕತೆ ತುಂಬಾ ಇರುತ್ತದೆ. ಯಾರೆಲ್ಲ ಅಂತ ಯೋಚಿಸಿದರೆ ಒಂದು ದಿನವೂ ಅವರ ಕೊರತೆ ಬೀಳಲಿಲ್ಲ. ಅದು ಭದ್ರಾವತಿಯ ಹೆಮ್ಮೆಯ ಮಕ್ಕಳು ಅಂದರೆ. ಇಲ್ಲಿರುವುದು ಬರೀ ಕಬ್ಬಿಣ ಉಕ್ಕಿನ ಕಾರ್ಖಾನೆಯಲ್ಲ, ಚಿನ್ನದ ಮನದ ಜನಗಳು.
ಕೇಳಿದರೆ ಆಶ್ಚರ್ಯ ಹುಟ್ಟಿಸುವಂತೆ ಇಡೀ ದಾಸೋಹ ನಡೆದು ಹೋಯಿತು. ವಿದೇಶಗಳಿಂದ ದೇಶಕ್ಕೆ ಓಗೊಟ್ಟವರೆಷ್ಟೋ, ಪುಟ್ಟ ಉಳಿತಾಯಗಳ ಗಂಟು ಬಿಚ್ಚಿ ಕೊಟ್ಟವರೆಷ್ಟೋ, ನನ್ನಂತೆಯೇ ಅವರು ಎಂದು ಕರೆದುಕೊಟ್ಟ ವರ್ತಕರೆಷ್ಟೋ, ಇನ್ನು ಇರುಳರಿಯದೆ ದುಡಿದ ಸ್ವಯಂ ಸೇವಕರ ದಂಡು.. ಹೇಳತೀರದು ಆ ಸಂಭ್ರಮ.
ಒಟ್ಟು ಮೂವತ್ನಾಲ್ಕು ದಿನ, ಅವಿರತ ಶ್ರಮ. ಅಲ್ಲೊಂದು ಹುರುಪು, ಸಾಮಾಜಿಕ ಕಳಕಳಿಯ ಕನಸು, ಸ್ವಾರ್ಥ ರಹಿತ ಅರ್ಪಣೆ. 27 ಮಾರ್ಚ್ 2020 ನಾವೆಲ್ಲಾ ಕಲೆತು ಇಂತಹ ಕನಸಿದೆ ಎಂದಾಗ ಯಾರೂ ಇಲ್ಲ ಅನ್ನಲಿಲ್ಲ, ಹೇಗೆ ಶುರು ಮಾಡೋಣ ಎಂದವರೇ ಎಲ್ಲ. ನಮ್ಮ ಈ ಸದುದ್ದೇಶಕ್ಕೆ ಬೆನ್ನೆಲುಬಾಗಿ ಅಡುಗೆ ಭಟ್ಟರಾದ ಮುರಳಿ ಮತ್ತು ತಂಡದವರು, ಒಂದಲ್ಲ ಎರಡಲ್ಲ 7500 ಚಪಾತಿ ಮಾಡಿಕೊಟ್ಟ ಮಹಿಳಾ ಸಂಘದ ಸದಸ್ಯರು ಎಷ್ಟು ಅಂತ ಕೃತಜ್ಞತೆ ಸಲ್ಲಿಸಲು ಸಾಧ್ಯ? ಒಂದು ಮಾತಿದೆ ಒಳ್ಳೆಯ ಕಾರ್ಯಗಳನ್ನು ನಡೆಸಲು ದೇವರು ಜೊತೆ ನಿಲ್ಲುತ್ತಾರೆ ಎಂದು. ಹಾಗೆಯೇ ಆಯಿತು. ಇಲ್ಲಿರುವ ಪ್ರತಿ ಒಬ್ಬರೂ ಅಸಹಾಯಕ ನಿರಾಶ್ರಿತರಿಗೆ ದೇವರಂತೆ ಜೊತೆಯಾದರು.

ಕೊರೋನಾ ತುರ್ತು ಪರಿಸ್ಥಿತಿಯಲ್ಲೂ ಸಹ ಗಡಿಯಲ್ಲಿ ನಮ್ಮ ವೀರ ಯೋಧರು ತಾಯಿ ಭಾರತಿಯನ್ನು ರಕ್ಷಿಸುತ್ತಿದ್ದಾರೆ, ವೈದ್ಯರು ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದಾರೆ, ಪೊಲೀಸರು ತಮ್ಮ ಕುಟುಂಬಗಳನ್ನೇ ಪಕ್ಕಕ್ಕಿಟ್ಟು ಶ್ರಮಿಸುತ್ತಿದ್ದಾರೆ, ನರ್ಸ್‌ಗಳು-ಆಶಾ ಕಾರ್ಯಕರ್ತೆಯರು-ಪೌರ ಕಾರ್ಮಿಕರು ತಮ್ಮ ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ತ್ಯಾಗ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶದ ಹಿತಕ್ಕಾಗಿ ಕೈಜೋಡಿಸುವುದು ಎಷ್ಟು ಮುಖ್ಯವೋ, ಹಸಿದ ಹೊಟ್ಟೆಯನ್ನು ತುಂಬಿಸುವುದು ಅದಕ್ಕಿಂತಲೂ ಮುಖ್ಯ. ಇಂತಹ ಕಾರ್ಯವನ್ನು ಸತತ 38 ದಿನಗಳ ಕಾಲ ದಾಸೋಹ ಯಜ್ಞದಂತೆ ಯಶಸ್ವಿಯಾಗಿ ನಿರ್ವಹಿಸಿದ ಸ್ವರ್ಣ ಟ್ರಾವೆಲ್ಸ್ ಕಿಶೋರ್ ಹಾಗೂ ಸಂಗಡಿಗರು, ಮಾಜಿ ಸೈನಿಕರ ಸಂಘದ ಸದಸ್ಯರು, ಅಡುಗೆ ಮುರಳಿ ಹಾಗೂ ಸಂಗಡಿಗರು, ಇವರಿಗೆ ಸಹಕರಿಸಿದ ದಾನಿಗಳು ಸೇರಿದಂತೆ ಆಹಾರವನ್ನು ಪ್ರತಿ ವ್ಯಕ್ತಿಗೂ ತಲುಪಿಸಿದ ಪ್ರತಿಯೊಬ್ಬರಿಗೂ ತಾಯಿ ಭಾರತಿ, ತಾಯಿ ಚಾಮುಂಡೇಶ್ವರಿ ನೂರು ಕಾಲ ಸಂಮೃದ್ದಿಯಿಂದ ಬಾಳುವಂತೆ ಹರಸಲಿ ಎಂಬುದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಾರೈಕೆ…
Get in Touch With Us info@kalpa.news Whatsapp: 9481252093








Discussion about this post