ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಇದೊಂದು ಕನಸಿಗಾಗಿಯೇ ಬದುಕಿದ ಮಹಿಳೆಯ ಕಥೆ. ನಿಜಕ್ಕೂ ಇದು ಕಥೆಯಲ್ಲ, ದಂತಕಥೆ. ಅಲ್ಲೊಂದು ಅದ್ಭುತ ಕನಸಿತ್ತು, ಅದರಲ್ಲಿ ಖುಷಿಯಿತ್ತು, ನೋವಿತ್ತು, ನಲಿವಿತ್ತು, ಬವಣೆಗಳನ್ನು ಮೀರಿ ನಿರ್ದಾಕ್ಷಿಣ್ಯವಾಗಿ ಅಂದುಕೊಂಡಿದ್ದು ಸಾಧಿಸುವ ಛಲವಿತ್ತು. ಗೊತ್ತಿರಲಿ ಅವರ ಬಳಿ ಆಗುವುದಿಲ್ಲ ಎನ್ನಲು ಕಾರಣಗಳ ಸಾಲೇ ಇತ್ತು. ಆದರೆ ತಮ್ಮಿಂದ ಆಗುತ್ತದೆ ಎನ್ನಲು ಇದ್ದಿದ್ದು ಆ ಆತ್ಮವಿಶ್ವಾಸ ಒಂದೇ. ಮನೆಯಿಂದ ಎಷ್ಟೋ ದೂರ ಇರುವ ಶಾಲೆ, ಅದರಲ್ಲೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅದರಲ್ಲೂ ಏಕೋಪಾಧ್ಯಾಯ ಶಾಲೆ.
ಶಾಲೆಯ ಅಂಗಳದಿ ಬೀಳುವ ಕಸದಿಂದ ಹಿಡಿದು, ಅಡಿಗೆ ಮನೆಯಲ್ಲಿ ಬೀಳುವ ಅಕ್ಕಿಯ ತನಕ, ಒಂದನೆಯ ತರಗತಿಗೆ ಬರುವ ಅಳುವ ಕಂದನಿಂದ ಹಿಡಿದು, ಪ್ರತಿ ತಿಂಗಳೂ ಎಡತಾಕುವ ಸಭೆಗಳ ತನಕ ಪ್ರತಿಯೊಂದರಲ್ಲೂ ಭಾಗವಹಿಸಿ ತಮ್ಮ ಇರುವಿಕೆಯನ್ನು ಸಾಬೀತು ಪಡಿಸಿದವರು. ಸರ್ಕಾರಿ ಕನ್ನಡ ಶಾಲೆಗಳ ಉಳಿವು ತೀರಾ ಅಂಚಿಗೆ ಬಂದು ನಿಂತಿದೆ. ಅಲ್ಲದೆ ಶೈಕ್ಷಣಿಕೇತರ ಕೆಲಸಗಳೇ ಅಧಿಕವಾಗಿವೆ. ಅದೆಲ್ಲವನ್ನೂ ಶಾಲೆಯ ಏಕ ಶಿಕ್ಷಕಿಯಾಗಿ ನಿಭಾಯಿಸಿದ್ದಾರೆ. ಕುಟುಂಬದ ಜವಾಬ್ದಾರಿ, ಶಾಲೆಯ ಜವಾಬ್ದಾರಿ ಜೊತೆಯಲ್ಲಿ ಪುಟ್ಟ ಕಂದ, ಮನೆಯಿಂದ ದೂರದಲ್ಲಿ ವಾಸ. ಇದೆಲ್ಲಾ ಜವಬ್ದಾರಿಗಳ ನಡುವೆ ಓದು, ಅದು ನಿರಂತರವಾದ ಓದು. ಯಾವ ಯಶಸ್ಸಿಗೆ ಲಕ್ಷ ಲಕ್ಷ ರೂಪಾಯಿಗಳ ವ್ಯಯಿಸಿ ದೂರದ ತರಬೇತಿ ಕೇಂದ್ರಗಳ ಎದುರುಗೊಳ್ಳುತ್ತಾರೋ ಅದನ್ನು ಸವಿತಾರವರು ನಮ್ಮ ನಡುವೆಯೇ ನಿಂತು ಪಡೆದಿದ್ದಾರೆ. ಕೊನೆಯ ಕ್ಷಣದ ತನಕವೂ ಜೊತೆಗೆ ನಿಂತದ್ದು ಪತಿ ನವೀನ್.
ಮದುವೆಯ ನಂತರ ಹೆಚ್ಚಿನ ಗಂಡಂದಿರು ತಮ್ಮ ಹೆಂಡತಿಯರ ಆಸೆಗಳನ್ನು ಬದಿಗೊತ್ತಿ ಬಿಡುತ್ತಾರೆ. ಅಡಿಗೆ ಮನೆ, ಸಂಸಾರವೇ ಪ್ರಪಂಚವಾಗುವ ಈ ಕಾಲದಲ್ಲಿ ಇಷ್ಟು ದೊಡ್ಡ ಕನಸಿಗೆ ಬೆಂಗಾವಲಾಗಿ ನಿಂತ ನವೀನರ ಮನಸ್ಸು ದೊಡ್ಡದು. ಯಶಸ್ಸಿನ ಏಣಿಯ ಕಟ್ಟಿ ನಿಲ್ಲಿಸಲು ಪರಿಶ್ರಮದ ಕಾಣಿಕೆ ನೀಡಬೇಕಾಗುತ್ತದೆ. ಅದಕ್ಕೆ ತೆರೆಮರೆಯ ಬೆಂಬಲವೂ ಬೇಕು. ಆತ್ಮವಿಶ್ವಾಸ ತುಂಬುತ್ತಾ, ಸವಿತಾರೊಂದಿಗೆ ತೆರಳುತ್ತಾ ಇಂದಿನ ಖುಷಿಗೆ ಅವರು ಕಾರಣರಾಗಿ ನಿಲ್ಲುತ್ತಾರೆ.
ಸವಿತಾ ಅವರು ಜನಿಸಿದ್ದು ಮಲೆನಾಡಿನ ಸಾಗರ ತಾಲೂಕಿನ ಒಂದು ಪುಟ್ಟ ಹಳ್ಳಿ. ಅರಸಲು ಒಂದಷ್ಟು ಸಮಯವನ್ನು ಪಡೆಯುವ ಕಂಚಿಕೇರಿ ಗ್ರಾಮ. ತಂದೆ ರೈತರಾದ ಜಯೇಂದ್ರ ಜೈನ್, ತಾಯಿ ಪುಷ್ಪಾವತಿ. ಒಂದಿನಿತೂ ವಿದ್ಯಾಭ್ಯಾಸಕ್ಕೆ ಕೊಂಕಾಗದಂತೆ ನೋಡಿಕೊಂಡ ಶ್ರೇಯ ಅವರಿಗೆ ಸಲ್ಲಬೇಕು. ವಿಶೇಷವೆಂದರೆ ಇಂಗ್ಲೀಷ್ ಅಷ್ಟೇ ಮುಖ್ಯವಾಗಿರುವ ಈ ಕಾಲದಲ್ಲಿ ಸವಿತಾರವರು ಪ್ರತಿ ಹಂತದಲ್ಲೂ ಕನ್ನಡ ಮಾಧ್ಯಮದಲ್ಲಿಯೇ ಪಡೆದವರು. ಸಾಮರ್ಥ್ಯ ಇದ್ದಲ್ಲಿ ಅಲ್ಲಿ ಭಾಷೆಯ ಊರುಗೋಲು ಬೇಕಾಗುವುದಿಲ್ಲ. ಮತ್ತೊಂದು ವಿಷಯವೆಂದರೆ ಜಗತ್ತಿಗೆ ವಿದ್ಯುತ್ ನೀಡಿದ ಸಾಗರದವರಾದ ಇವರ ಮನೆಯಲ್ಲಿ ಪಿಯುಸಿ ಮುಗಿಯುವ ತನಕವೂ ವಿದ್ಯುತ್ ಸುಳಿವೂ ಇರಲಿಲ್ಲ. ಮೊದಲೇ ಹೇಳಿದಂತೆ ಅವರಿಗೆ ನನ್ನಿಂದ ಸಾಧ್ಯವಿಲ್ಲ ಎನ್ನಲು ಸಾವಿರ ಕಾರಣಗಳಿದ್ದವು. ಆಗುತ್ತದೆ ಎನ್ನಲು ಇದ್ದಿದ್ದು ದಿಟ್ಟ ಮನವೊಂದೇ. ಪ್ರತಿ ನಿತ್ಯ ಶಾಲೆಗೆ ತೆರಳಲು ಹನ್ನೆರಡು ಕಿಮೀ ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು. ಪುಟ್ಟ ವಯಸ್ಸು, ದೊಡ್ಡ ಕನಸು. ಇನ್ನು ಈ ಕಿಮೀಗಳೆಲ್ಲಾ ಯಾವ ಲೆಕ್ಕ? ಹತ್ತನೆಯ ತರಗತಿ, ಪಿಯುಸಿಗಳನ್ನು ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆ ಮಾಡಿದ್ದು ಇವರ ಹೆಗ್ಗಳಿಕೆ.
ನಂತರ 2010ರಲ್ಲಿ ಶಿವಮೊಗ್ಗ ಜಿಲ್ಲೆಗೆ ಏಳನೆಯ ರ್ಯಾಂಕ್ ಗಳಿಸಿ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರು. ಮೊದಲ ಅವಧಿಯಲ್ಲಿ ಶಿಕಾರಿಪುರ ತಾಲೂಕಿನಲ್ಲಿ 2014ರ ತನಕವೂ ಕಾರ್ಯ ನಿರ್ವಹಿಸಿದ ಅವರು ನಂತರ ಸಾಗರ ತಾಲ್ಲೂಕಿನ ಏಕೋಪಾಧ್ಯಾಯ ಶಾಲೆ ಸಾಡಗಳಲೆ ಶಾಲೆಗೆ ವರ್ಗಾವಣೆ ಹೊಂದಿದರು. ಆಗ ಅವರ ಮೇಲಿನ ಜವಾಬ್ದಾರಿ ದ್ವಿಗುಣಗೊಳ್ಳುತ್ತದೆ. ಆದರೂ ಕನಸು ಅವರನ್ನು ಸುಮ್ಮನಾಗಲು ಬಿಡಲೇ ಇಲ್ಲ. ಈ ನಡುವೆ ವೈವಾಹಿಕ ಜೀವನದಲ್ಲಿ ಕಾಲಿಟ್ಟ ಅವರು 2011ರಲ್ಲಿ ಸಾಗರ ತಾಲೂಕಿನ ಕೋಗಾರಿನ ಕೃಷಿಕ ನವೀನ್ ಕುಮಾರ್ ಅವರನ್ನು ವಿವಾಹವಾದರು. ಅದೇ ಸಂದರ್ಭದಲ್ಲಿ ಒಮ್ಮೆ ಕೆಎಎಸ್ ಪರೀಕ್ಷೆ ಬರೆದಿದ್ದ ಸವಿತಾ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ಮೊದಲ ಪ್ರಯತ್ನದಲ್ಲೇ ಎನ್ನುವುದು ವಿಶೇಷ. ಯಶಸ್ಸು ಎದುರುಗೊಳ್ಳಲು ಅವರಿಗೆ ಇಷ್ಟು ಸಾಕಿತ್ತು. ತಯಾರಿ ಮಾಡಿಕೊಂಡಿರಲಿಲ್ಲ ಹಾಗಾಗಿ ಮುಖ್ಯ ಪರೀಕ್ಷೆಯಲ್ಲಿ ಹಿಂದುಳಿಯಬೇಕಾಯಿತು ಎನ್ನುತ್ತಾರೆ.
ಮೊದಲ ಯತ್ನದಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಪಡೆದವರು. ಒಂಬತ್ತು ವರ್ಷಗಳ ತಯಾರಿ ಎಂದರೆ ಹೇಗಿರಬೇಕು? ಕನಸುಗಳ ಪಕ್ಷಿ ಶ್ರಮದ ಕಾವಿಟ್ಟು ಯಶಸ್ಸಿನ ತತ್ತಿಯನ್ನು ಕಾಯ್ದಿತ್ತು. 2017 ರಲ್ಲಿ ಎರಡನೆಯ ಬಾರಿ ಪರೀಕ್ಷೆ ಎದುರಿಸಿದ ಅವರು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಆಯ್ಕೆ ಆಗಿದ್ದಾರೆ.
ಸವಿತಾರವರಿಗೆ ಸ್ಫೂರ್ತಿಯಾಗಿದ್ದವರು ನಿಟ್ಟೂರು ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದ ಪಿ. ರಾಮ್ ಕುಮಾರ್. ಕೆಎಎಸ್ ಕನಸು ಬಿತ್ತಿ ಬೆಳೆಸಿದವರು. ಮೊದಲು ಶಿಕ್ಷಕಿಯಾಗಿ ನಂತರ ಈ ಸಾಧನೆ ಮಾಡಲು ಪ್ರೇರಣೆ ಹಾಗೂ ಅದಕ್ಕೆ ಸಂಬಂಧಿಸಿದ ಆರಂಭಿಕ ಹಂತದಲ್ಲಿ ಸಂಪೂರ್ಣ ಸಹಕಾರ ನೀಡಿದವರು. ದ್ವಿತೀಯ ಪಿಯುಸಿಗೆ ಶಿಕ್ಷಣವನ್ನೇ ಮೊಟಕುಗೊಳಿಸುವ ಸಮಯ ಬಂದಾಗ ಹಣಕಾಸಿನ ನೆರವನ್ನೂ ನೀಡಿ ಡಿಇಡಿ ಶಿಕ್ಷಕಿಯಾಗಲು ಶ್ರಮಿಸಿದವರು. ಅವರು ಬರೀ ಶಿಕ್ಷಕರಾಗಿರಲಿಲ್ಲ, ಅವರೇ ದಾರಿದೀಪವಾಗಿದ್ದರು. ಇವರೊಂದಿಗೆ ಪಿಯುಸಿ ಕಾಲೇಜಿನ ಡಾ. ಪಿ. ಶಾಂತಾರಾಮ ಪ್ರಭು (ಇಂಗ್ಲಿಷ್) ಮತ್ತು ಡಿ. ನಂಜುಂಡ (ಅರ್ಥಶಾಸ್ತ್ರ) ಇವರುಗಳ ಸಹಕಾರವೂ ದೊಡ್ಡ ಮಟ್ಟದ ಬೆಂಬಲ ನೀಡಿತ್ತು. ಮುಂದಿನ ದಿನಗಳಲ್ಲಿ ಪ್ರತಿ ಹೆಜ್ಜೆಗೂ ಜೊತೆಯಾದ ಪತಿ ನವೀನ್ ಅವರನ್ನು ಮರೆಯಲು ಸಾಧ್ಯವೇ ಇಲ್ಲ.
ಯಶಸ್ಸಿನ ಹಿನ್ನೆಲೆಯಲ್ಲಿ ಜೀವನವನ್ನು ಕುರಿತು ಕೇಳಿದಾಗ ತಾವು ಯಶಸ್ಸು ಪಡೆದೆ ಎನ್ನುವುದಕ್ಕಿಂತ ನನ್ನ ವಿಜ್ಞಾನ ಶಿಕ್ಷಕರಿಗೆ, ತಂದೆ ತಾಯಿಗೆ, ಪತಿಗೆ, ತಾವು ಕಲಿತ ಬೆಳೆದ ಊರುಗಳಿಗೆ ಅಪರಿಮಿತ ಖುಷಿ ನೀಡಿದ್ದು ಮರೆಯಲಾದ ಗಳಿಗೆ ಎನ್ನುತ್ತಾರೆ. ಈ ಸಂದರ್ಭದ ಶ್ರೇಯ ಸಂಪೂರ್ಣವಾಗಿ ಮೇಲಿನ ವ್ಯಕ್ತಿಗಳಿಗೆ ಸೇರಬೇಕು. ಸ್ವತಃ ಅನಕ್ಷರಸ್ಥರಾಗಿಯೂ ಇವರ ವಿದ್ಯಾಭ್ಯಾಸಕ್ಕೆ ತಂದೆ ತಾಯಿ ನೀಡಿದ ಕಾಳಜಿಯ ಋಣ ತೀರಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಯಶಸ್ಸಿನ ಕಿವಿಮಾತು ಕೇಳಿದಾಗ ’ಪರೀಕ್ಷೆ ಯಾವುದೇ ಇರಲಿ, ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಫಲಿತಾಂಶದ ಕುರಿತು ಗಮನ ನೀಡಲೇ ಬಾರದು. ಪ್ರಯತ್ನ ಪ್ರಾಮಾಣಿಕ ಎನಿಸಿದರೆ ಯಶಸ್ಸು ತಾನೇ ಅರಸಿ ಬರುತ್ತದೆ.’ ಸಮಯಕ್ಕೆ ಅತಿ ಹೆಚ್ಚಿನ ಗಮನ ನೀಡಬೇಕು ಎನ್ನುವುದು ಅವರ ಅಭಿಪ್ರಾಯ. ಅವರ ಬದುಕಿನ ಆಳಕ್ಕೆ ಇಳಿದರೆ ಅಲ್ಲಿ ಬರೀ ಹೋರಾಟ, ನೋವು ಮತ್ತು ಕಷ್ಟಗಳೇ ತುಂಬಿದೆ. ಆದರೆ ಕನಸ ಕಣ್ಮುಚ್ಚದಂತೆ ಕಾಪಿಟ್ಟ ಅವರು ಇಂದು ನಮ್ಮ ಮಾರ್ಗದರ್ಶಿ. ನಿಜ ಈಗ ಕಾಲ ಬದಲಾಗಿದೆ. ರಾಜನ ಮಗ ರಾಜನಾಗುವುದಿಲ್ಲ, ಯಾರಲ್ಲಿ ಸಾಮರ್ಥ್ಯ ಇದೆಯೋ ಅವನು ರಾಜನಾಗುತ್ತಾನೆ. ಅದನ್ನೇ ನಮ್ಮ ಉಪನಿಷತ್ತುಗಳಲ್ಲಿ ಹೇಳಿರುವುದು.
ನಾಭಿಷೆಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ವನೇ
ವಿಕ್ರಮಾರ್ಜಿತ ಸತ್ವಸ್ಯ ಸ್ವಯಂಮೇವ ಮೃಗೇಂದ್ರತಾ
ಸಿಂಹವನ್ನು ಯಾರೂ ಬಂದು ನೀನೇ ಕಾಡಿನ ರಾಜ ಎಂದು ಹೇಳುವುದೂ ಇಲ್ಲ ಅಥವಾ ಚುನಾಯಿಸಿ ಕಳಿಸುವುದೂ ಇಲ್ಲ. ಅದರಲ್ಲಿ ಶಕ್ತಿ ಸಾಮರ್ಥ್ಯ ಇದೆ. ಅದಕ್ಕೆ ಅದು ರಾಜ ಪದವಿಗೆ ಏರುತ್ತದೆ. ಕನಸು ಎಷ್ಟು ದೊಡ್ಡದೇ ಆಗಿರಲಿ ಅದರೊಂದಿಗೆ ಬದುಕುವುದನ್ನು ಬಿಡಗೊಡಬಾರದು. ಇದು ಭಾರತ, ಇಲ್ಲಿ ಯಾರು ಬೇಕಾದರೂ ರಾಜನಾಗಬಹುದು. ಕನಸುಗಳೂ ಕೀಳಲ್ಲ, ಕೆಲಸಗಳು ಕೀಳಲ್ಲ. ಕಾಣುವ, ಮಾಡುವ ದೊಡ್ಡ ಮನಸ್ಸು ಇರಬೇಕು ಅಷ್ಟೆ. ವಿದ್ಯುತ್ ಸಹ ಇಲ್ಲದ, ಕಾಡಿನ ಮಧ್ಯದ ಪುಟ್ಟ ಹಳ್ಳಿಯ ಸವಿತಾ ಇಂತಹ ಕನಸಿದೆ ಎಂದಾಗ ಕೆಲವರು ನಕ್ಕಿರಬಹುದು, ಕೆಲವರು ಆಡಿಕೊಂಡಿರಬಹುದು. ಅಂದು ಅವರು ಧೃತಿಗೆಟ್ಟಿದ್ದರೆ ಇಂದಿನ ಈ ಸ್ಥಾನ ಅವರಿಗೆ ಧಕ್ಕುತ್ತಿರಲಿಲ್ಲ. ಒಂದು ಮಾತಿದೆ ’ಗೆದ್ದವನಿಗೆ ಚರಿತ್ರೆಯಲ್ಲಿ ಗೆದ್ದವನು ಎಂಬ ಜಾಗವಿರುತ್ತದೆ. ಸೋತವನಿಗೂ ಇಂತಹವನೆದುರಿಗೆ ಸೆಣಸಾಡಿ ಸೋತವನು ಎಂಬ ಜಾಗವಿರುತ್ತದೆ. ಆದರೆ ನೋಡಿಕೊಂಡು ನಿಂತವನಿಗೆ, ಆಡಿಕೊಂಡು ನಕ್ಕವನಿಗೆ ಎಲ್ಲೂ ಜಾಗವಿಲ್ಲ. ಎಲ್ಲೆಲ್ಲೂ ಜಾಗವಿಲ್ಲ’. ಹಾಗೆಯೇ ಸಾಧನೆಯ ಹಾದಿ ಎಂಬುದು ಸವಿತಾರವರ ಜೀವನ. ಕನಸಿಗಿಂತ ಮೇಲೆ ಯಾರೂ ಇಲ್ಲ. ಅಂದು ಆಡಿಕೊಂಡು ನಕ್ಕವರಲ್ಲಿ ಕೆಲವರು ಇಂದು ಸವಿತಾರವರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನ ಮಾಡುತ್ತಿದ್ದಾರೆ. ಧ್ಯಾನಿಸಿದೆಡೆ ಧೈರ್ಯವಾಗಿ ಧಾವಿಸಿದಾಗ ದಾರಿ ದೂರವಾಗುವದೇ ಇಲ್ಲ. ಸವಿತಾ ಅವರೇ ಹೇಳುವಂತೆ ಪ್ರಾಮಾಣಿಕ ಪ್ರಯತ್ನವೇ ನಿಮ್ಮ ಶಕ್ತಿ, ನಿಮ್ಮ ಆಸ್ತಿ. ಯಶಸ್ಸು ಬೆನ್ನಟ್ಟಿ ಬರಲಿದೆ. ತಾಯಿ ಭಾರತಿ ಸವಿತಾರನ್ನು ಹರಸಲಿ. ಸಮಾಜಕ್ಕೆ ಅವರಿಂದ ಸಮೃದ್ಧ ಸೇವೆ ಸಿಗಲಿ.
Get in Touch With Us info@kalpa.news Whatsapp: 9481252093
Discussion about this post