ಪ್ರಕೃತಿ ಸೌಂದರ್ಯ ಅಗಾಧ ಗಣಿ ಮಲೆನಾಡು ಎಂದೆಂದಿಗೂ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಲೇ ಇರುತ್ತದೆ. ಹಸಿರು ಸೌಂದರ್ಯವನ್ನು ಹೊದ್ದುಕೊಂಡಿರುವ ಇಂತಹ ಮಲೆನಾಡು ಹಲವು ಪ್ರದೇಶಗಳಲ್ಲಿ ಒಂದು ಹಲವರು ನೋಡಿರದ ಬಾಳೆಗೆರೆ ಅಥವಾ ಗಿಂಡಿಮನೆ.ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪುಟ್ಟಹಳ್ಳಿ ಬಾಳೆಗೆರೆ. ಸಾಗರದಿಂದ 23 ಕಿಮೀ ಮತ್ತು ತಾಳಗುಪ್ಪದಿಂದ 11 ಕಿಮೀ ದೂರದಲ್ಲಿದ್ದು, ಶರಾವತಿ ಹಿನ್ನೀರಿನ ಮಡಿಲಿನಲ್ಲಿದೆ. ಬಾಳೆಗೆರೆಯ ಹಿನ್ನೀರು 2 ಕಿಮೀ ದೋಣಿಯಲ್ಲಿ ದಾಟಿದರೆ ಸಿಗಂದೂರು, 3 ಕಿಮೀ ಅಂದರೆ, ಸಾಗರದಿಂದ ಸಿಗಂದೂರು 27 ಕಿಮೀ ಈಗಿರುವ ದೂರ 45 ಕಿಮೀ. ಮಲೆನಾಡಿಗರು ಗಿಂಡಿಮನೆ ಎಂದೂ ಸಹ ಈ ಸ್ಥಳಕ್ಕೆ ಹೆಸರಿಟ್ಟಿದ್ದಾರೆ.
ಸಾಗರ ಅರಣ್ಯ ವಿಭಾಗದ ವತಿಯಿಂದ ಇಲ್ಲಿ ಸುಮಾರು 50 ಎಕರೆ ವಿಸ್ತೀರ್ಣದಲ್ಲಿ 300ಕ್ಕೂ ಅಧಿಕ ಔಷಧೀಯ ಸಸಿಗಳನ್ನು ನೆಡಲಾಗಿದ್ದು, ಇದೊಂದು ಔಷಧೀಯ ವನವಾಗಿ ಮಾರ್ಪಟ್ಟಿದೆ.
ಇನ್ನು, ಪ್ರವಾಸೀ ಆಕರ್ಷಣೆಯ ಭಾಗವಾಗಿ ಈ ಸ್ಥಳದಲ್ಲಿ ಪರ್ಗೋಲ ನಿರ್ಮಾಣ ಮಾಡಲಾಗಿದ್ದು, ಬೋರ್ ವೆಲ್ ಮತ್ತು ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ. ಆದರೆ ಹಲವು ವರ್ಷಗಳಿಂದ ಮೇಲ್ವಿಚಾರಣೆ ಕೊರತೆಯಿಂದಾಗಿ ಈ ಸ್ಥಳ ಪಾಳು ಬಿದ್ದಿದ್ದು, ಪ್ರಕೃತಿ ಸಹಜವಾದ ಪರಿಸರದಲ್ಲಿರುವ ಈ ತಾಣವನ್ನು ಈಗ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕಾಗಿದೆ.
ಏನು ಮಾಡಬಹುದು?
ಹಿನ್ನೀರಿನ ಮೂಲಕ ಬೋಟಿಂಗ್ ಸೌಲಭ್ಯ ಕಲ್ಪಿಸಿದರೆ ಸಿಗಂಧೂರಿಗೆ ತುಸು ಹತ್ತಿರವಾಗುತ್ತದೆ. ಜಲ ಸಾಹಸಿಗರಿಗೆ, ನಿಸರ್ಗಪ್ರಿಯರಿಗೆ ಈ ಬೋಟಿಂಗ್ ನಿಜಕ್ಕೂ ಮುದ ನೀಡುವುದರಲ್ಲಿ ಸಂಶಯವಿಲ್ಲ. ಅಲ್ಲದೇ, ಯಾತ್ರಾ ಸ್ಥಳ ಸಿಗಂಧೂರಿಗೆ ಒಂದು ಅಪೂರ್ವ ಬೋಟಿಂಗ್ ಮಾರ್ಗವನ್ನೂ ಸಹ ರೂಪಿಸಿದಂತಾಗುತ್ತದೆ. ಸಿಗಂಧೂರು ಕೊಂಚ ಸಮೀಪವೂ ಆಗುತ್ತದೆ.
ಬಾಳೆಗೆರೆ ಗ್ರಾಮವು ಒಂದು ಪ್ರವಾಸಿ ಕೇಂದ್ರವಾಗಿ ರೂಪುಗೊಂಡರೆ ಸ್ಥಳೀಯರಿಗೆ ಪ್ರವಾಸೋದ್ಯಮದಲ್ಲಿ ತೊಡಗಿಕೊಳ್ಳಲು ಪ್ರೇರೇಪಣೆ ಸಿಗುತ್ತದೆ. ಸ್ವಂತ ಜಾಗವುಳ್ಳವರು ಹೋಮ್ ಸ್ಟೇ ಮತ್ತು ಕ್ಯಾಂಟೀನು ನಡೆಸಲು ಸರ್ಕಾರವು ಅನುದಾನ ನೀಡಬೇಕು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಸ್ಥಳೀಯರು ಸಿದ್ಧರಿದ್ದಾರೆ. ಇದರಿಂದ ಸ್ಥಳೀಯ ಮಟ್ಟದಲ್ಲೇ ಯುವಜನಕ್ಕೆ ಉದ್ಯೋಗಾವಕಾಶ ಕಲ್ಪಿಸಿ, ಪ್ರೋತ್ಸಾಹ ನೀಡಿದಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್ ಫೋರ್ಸ್ ಗಮನ ವಹಿಸಿ, ಈ ಸ್ಥಳಕ್ಕೆ ಸೂಕ್ತ ಯೋಜನೆ ಮಂಜೂರು ಮಾಡಬೇಕು. ಅದು ಸಾಕಾರವಾದಾಗ ಈ ಮೂಲಕ ಬಾಳೆಗರೆ (ಗಿಂಡಿಮನೆ) ಯು ಪ್ರವಾಸಿ ಕೇಂದ್ರವಾಗಿ ನಿಸರ್ಗಪ್ರಿಯರನ್ನು ಆಕರ್ಷಿಸುವುದರಲ್ಲಿ ಸಂಶಯವಿಲ್ಲ.
Discussion about this post