ಒಂದು ಕನಸು ಕಂಡರೆ ಎಷ್ಟು ಖುಷಿ ಎನ್ನಿಸುತ್ತದೆ ಅಲ್ಲವೇ? ಅಂತಹ ರಾಶಿ ಕನಸುಗಳ ಒತ್ತಟ್ಟಿಗೆ ನೋಡಿದರೆ ಹೇಗೆ ಆಗಬೇಡ? ಅಂತಹ ಕನಸುಗಳ ಬುತ್ತಿಯ ಕುರಿತು ನಿಮಗೆ ಹೇಳಬೇಕಿದೆ.
ಸಾಗರದ ಜೋಗ ರಸ್ತೆಯಲ್ಲಿ ಹೊರಟು ವರದಳ್ಳಿ ಆಶ್ರಮಕ್ಕೆ ಹೋಗುವ ರಸ್ತೆಯಲ್ಲಿ ಮುನ್ನಡೆದರೆ ನಿಮಗೆ ಬಲಭಾಗದಲ್ಲಿ ಒಂದು ಕಡೆ ದಯಾಶಂಕರ ವನವಾಸಿ ವಿದ್ಯಾರ್ಥಿಗಳು ನಿಲಯ ಎಂಬ ಫಲಕ ಸಿಗುತ್ತದೆ. ಅಲ್ಲಿಯೇ ಬಲಕ್ಕೆ ತಿರುಗಿ 1 ಕಿಮೀ ಸಾಗಿದರೆ ಅಲ್ಲೊಂದು ಅದ್ಭುತ ಸ್ಥಳ ಸಿಗುತ್ತದೆ. ಒಂದು ಸ್ವಚ್ಛ ಅಂಗಳ, ಅದರ ತುಂಬ ಚಿಣ್ಣರು. ಗೇಟ್ ತೆರೆದು ಮುಂದೆ ಹೆಜ್ಜೆ ಇಟ್ಟೊಡನೆ ನಮಸ್ತೆ ಜಿ, ನಮಸ್ತೆ ಜಿ ಎಂದು ಮನಃಪೂರ್ವಕ ವಂದನೆ ಸಲ್ಲಿಸುವ ಅರಳು ಕಂಗಳ ಚಂದದ ಬಾಲಕರು. ಅದೊಂದು ಕಿನ್ನರ ತಾಣವೇ ಸರಿ. ಅವರ ವಿನಯಕ್ಕೆ ಒಂದು ದೊಡ್ಡ ಸಲಾಮ್. ಸುಮಾರು ಇಪ್ಪತ್ತು ಪುಟ್ಟ ಪುಟ್ಟ ಬಾಲಕರ ನಿಲಯವದು. ಇಷ್ಟೆಲ್ಲಾ ಹೇಳುತ್ತಿರುವುದು ವನವಾಸಿ ಮಕ್ಕಳ ನಿಲಯದ ಬಗ್ಗೆ. ನೀವು ಬಿಡುವಿಲ್ಲದ ಬದುಕಿನಲ್ಲಿ ಕೊಂಚ ಬಿಡುವು ಮಾಡಿಕೊಂಡು ಅಲ್ಲಿಗೆ ಹೋಗಿ ಬಂದರೆ ಒಂದು ಮಾಯಾ ನಗರಿಯೇ ನಿಮ್ಮ ಕಣ್ಣ ಮುಂದೆ ನಿಲ್ಲುತ್ತದೆ.
ಕಳೆದ ವರ್ಷ 2018ರ ಜೂನ್ 24 ರಂದು ಹನ್ನೆರಡು ವಿದ್ಯಾರ್ಥಿಗಳೊಂದಿಗೆ ಈ ವನವಾಸಿ ಮಕ್ಕಳ ನಿಲಯ ಈಗ ಒಟ್ಟು ಇಪ್ಪತ್ತು ಮಕ್ಕಳ ಹೊರೆಯುತ್ತಿದೆ. ಕರ್ನಾಟಕದ ಐದು ಜಿಲ್ಲೆಗಳ (ಚಿಕ್ಕಮಗಳೂರು, ಕಲಬುರ್ಗಿ, ಬೆಳಗಾವಿ, ಉತ್ತರ ಕನ್ನಡ ಮತ್ತು ಶಿವಮೊಗ್ಗ) ಎಂಟು ತಾಲೂಕುಗಳಾದ ತರೀಕೆರೆ, ಮುಂಡಗೋಡ, ಯಲ್ಲಾಪುರ, ಖಾನಾಪುರ, ಹೊಸನಗರ, ಹಳಿಯಾಳ, ಕುಮಟಾ ಮತ್ತು ಕಲಬುರ್ಗಿಗಳ ಮಕ್ಕಳಿದ್ದಾರೆ. ಅವರೆಲ್ಲರೂ ಪ್ರೌಢಶಾಲಾ ವಿದ್ಯಾರ್ಥಿಗಳು. ಸದ್ಯಕ್ಕೆ ಸಮೀಪದ ಕರ್ಕಿಕೊಪ್ಪ ಶಾಲೆಗೆ ಇವರ ಪಯಣ. ಏನಿದು? ವಿದ್ಯಾರ್ಥಿ ನಿಲಯಗಳು ಎಲ್ಲೆಡೆ ಇರುತ್ತವೆ. ಅದರಲ್ಲೇನಿದೆ ವಿಶೇಷ ಅನ್ನಿಸಬಹುದು. ಆದರೆ ಇಲ್ಲಿರುವ ಪ್ರತಿ ವಿದ್ಯಾರ್ಥಿಯೂ ಬುಡಕಟ್ಟು ಮೂಲದವನು ಮತ್ತು ಬಡತನದ ಹಿನ್ನೆಲೆಯಿಂದ ಬಂದವನು.
ಛತ್ರಪತಿ ಶಿವಾಜಿ ಮಹಾರಾಜರ ಸಮಯ. ಬೆರಳೆಣಿಕೆಯಷ್ಟು ಸೈನಿಕರೊಂದಿಗೆ ಅವರು ಲಕ್ಷಾಂತರ ಶತ್ರುಗಳ ಎದುರಿಸಿದ ಹಲವು ಉದಾಹರಣೆಗಳು ದೊರಕುತ್ತವೆ. ನೀವೇ ಊಹಿಸಿ ಆ ಪಡೆಗಳ ತಾಕತ್ತು ಏನಿತ್ತು ಎಂಬುದು. ಅವರು ಕಾಡುಗಳನ್ನು ಅರೆದು ಕುಡಿದಿದ್ದರು. ಗುಡ್ಡ ಬೆಟ್ಟಗಳ ಲೀಲಾಜಾಲವಾಗಿ ಹತ್ತುತ್ತಿದ್ದರು. ಅವರ ಆಹಾರ ಪದ್ಧತಿಯೇನೋ ಜಿಗುಟು ವ್ಯಕ್ತಿತ್ವ ಎನಿಸುವುದಕ್ಕೆ ತಕ್ಕನಾಗಿ ಅವರ ದೈಹಿಕ ಬಲ. ಶಿವಾಜಿ ಮಹಾರಾಜರ ಬೆಳೆಸಿದ ಎರಡನೆಯ ಹಂತದ ನಾಯಕರಲ್ಲಿ ಅಂತಹ ಗುಡ್ಡಗಾಡು ವೀರರ ದೊಡ್ಡ ದಂಡೇ ಇತ್ತು. ಅವರುಗಳೆಂದರೆ ಸೂರ್ಯಾಜಿ, ಯೆಸಾಜಿ ಕಂಕ, ಹಂಬಿರ್ ರಾವ್ ಮೋಹಿತೆ, ಸಂಭಾಜಿ ಕಾವ್ಜಿ, ತಾನಾಜಿ ಮಾಲ್ಸುರೆ, ಬಾಜಿಪ್ರಭು ದೇಶಪಾಂಡೆ, ಬಾಜಿ ಪಸರ್ಲ್ಕ, ದಾದಾಜಿ ಕೊಂಡದೇವ, ಬಹಿರ್ಜಿ ನಾಯ್ಕ್, ಸರ್ನೋಬಾತ್ ನೇತಾಜಿ ಪಾರ್ಲ್ಕ, ದತ್ತಾಜಿ ರಾವ್ ಸಿಂಧ್ಯಾ, ದರ್ಯಾ ಸಾರಂಗ್, ಫಿರಂಗೋಳಿ ನಾರ್ಸಾಲಾ, ಧನಾಜಿ ಜಾಧವ್, ಗೋಮಾಜಿ ನಾಯ್ಕ್, ಕೊಂಡಾಜಿ ಫರ್ಜಾಂದ್ (ಅರವತ್ತು ಮಾವಳಿಗಳೊಂದಿಗೆ ಪನಹಾಲ್ ಕೋಟೆ ವಶಪಡಿಸಿಕೊಂಡ ಧೀರ), ಮುನರಾಬಾಜಿ ದೇಶಪಾಂಡೆ (ಕೇವಲ ಮುನ್ನೂರು ಮಾವಳಿಗಳೊಂದಿಗೆ ಮೊಘಲರ ವಿರುದ್ಧ ಕಾದು ಹುತಾತ್ಮನಾದ ಮಾವಳಿ ವೀರ, ಇದರಿಂದ ಶಿವಾಜಿ ಮಹಾರಾಜರು ನೊಂದಿದ್ದರು.) ಈ ವೀರರು ಕೇವಲ ಐವತ್ತು, ನೂರು, ಸಾವಿರ ಆದಿವಾಸಿ ವೀರರೊಂದಿಗೆ ಶತೃ ಸೇನೆಗಳ ಹಿಮ್ಮೆಟ್ಟಿಸುತ್ತಿದ್ದರು ಎಂದರೆ ಅವರ ವೀರತ್ವಕ್ಕೆ ಅವರೇ ಸಾಟಿ.
ಅಂತಹ ವೀರರು 1650 ಸುಮಾರಿನಲ್ಲಿ ಮರಾಠ ಸಾಮ್ರಾಜ್ಯದ ಅವನತಿ ಆರಂಭವಾಗಿ ದಿಕ್ಕಾಪಾಲಾಗಿ ಹೋದರು. ಆದರೆ ಅವರ ಭಾಷೆ ಮತ್ತು ಸಂಸ್ಕೃತಿ ಅವರನ್ನು ಬಿಟ್ಟು ಹೋಗಲಿಲ್ಲ. ಈಗಲೂ ಅವರು ಮರಾಠಿ ಭಾಷೆಯಲ್ಲಿಯೇ ವ್ಯವಹರಿಸುತ್ತಾರೆ. ಅಂತಹ ವೀರರ ಹೆತ್ತ ಸಂತತಿಗಳು ಅನ್ಯರ ಆಕ್ರಮಣಕ್ಕೆ ಭಯಾನಕವಾಗಿ ತುತ್ತಾದವು. ಆಗ ಅವರಿಗೆ ಮತ್ತೆ ತಮ್ಮ ಕಾನನಗಳ ಆಸರೆ ಅರಸಿ ತೆರಳಬೇಕಾಯಿತು. ಆ ಹಾದಿಯಲ್ಲಿ ಅವರು ದಕ್ಷಿಣ ಭಾರತದ ಹಲವು ಪ್ರದೇಶಗಳಿಗೆ ವಲಸೆ ಬಂದರು. ಈಗಲೂ ಕರ್ನಾಟಕದ ಹಲವೆಡೆ ವಾಸಿಸುತ್ತಿದ್ದಾರೆ. ಕಾಡನ್ನು ಬಿಟ್ಟು ಬೇರೇನನ್ನೂ ಅರಿಯದ ಇವರು ಜಾಗತೀಕರಣದ ಅಲೆಗೆ ಸಿಕ್ಕು ತೊಂದರೆ ಅನುಭವಿಸಬೇಕಾಯಿತು. ಕೆಲವೆಡೆ ನಕ್ಸಲರ ಆಹಾರವಾದರು. ಈಗಲೂ ಕೆಲವು ಕಡೆ ಅವರನ್ನು ಮರಳು ಮಾಡಿ ಮತಾಂತರ ಮಾಡುತ್ತಿರುವ ದೊಡ್ಡ ಜಾಲವೇ ಇದೆ. ಇಂತಹ ಸಂದರ್ಭದಲ್ಲಿ ಅವರ ಅನಾನುಕೂಲತೆಗಳ, ಅವಶ್ಯಕತೆಗಳನ್ನು ದುರುಪಯೋಗ ಮಾಡಿಕೊಳ್ಳದಂತೆ ತಡೆಯಲು ಸಂಘ ಸೆಟೆದು ನಿಂತಿತು. ಸದಾ ಸೇವೆಯ ಪ್ರತೀಕವಾದ ಸಂಘವು ಅಂತಹ ವೀರರ ಕುಲಸ್ಥರಿಗೆ ಮತ್ತು ಧರ್ಮ ರಕ್ಷಣೆಯ ಜವಾಬ್ದಾರಿಗೆ ಹೆಗಲಾಗಿ ಹಲವು ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿತು.
ಕರ್ನಾಟಕದಲ್ಲಿ ಒಟ್ಟು ಎಂಟು ವಿದ್ಯಾರ್ಥಿ ನಿಲಯಗಳಿದ್ದು, ಕುಮಟಾ, ದಾಂಡೇಲಿ, ಯಲ್ಲಾಪುರ, ಚಿಪಗೇರಿ, ಮೈಸೂರು, ಗುಂಡ್ಲುಪೇಟೆ, ಸುಳ್ಯ ಮತ್ತು ಸಾಗರ ತಾಲೂಕುಗಳಲ್ಲಿವೆ. ಅವರಲ್ಲಿಯ ಶಿಕ್ಷಣದ ಕನಸಿಗೆ ಧಾರೆ ಎರೆಯಲಾಗುತ್ತಿದೆ. ಇಲ್ಲಿರುವ ಯಾವ ವಿದ್ಯಾರ್ಥಿಯೂ ಬಂದು ಸೇರಿದುದಲ್ಲ. ಸ್ವತಃ ನಿಲಯದ ಮುಖ್ಯಸ್ಥರೇ ಹೋಗಿ ಪೋಷಕರ ಮಾತನಾಡಿಸಿ ಕರೆ ತಂದಿರುವುದು. ಇನ್ನು ಸಾಗರದ ನಿಲಯದ ವಿಚಾರಕ್ಕೆ ಬಂದರೆ ಸ್ವಾಮಿ ಚಿದೃಪಾನಂದ ಸರಸ್ವತಿ ಸ್ವಾಮಿಗಳು ಒಂದು ಹೆಮ್ಮೆಯ ಕಾರಣಕ್ಕಾಗಿ ವಿದ್ಯಾರ್ಥಿ ನಿಲಯದ ಜಾಗವನ್ನು ನೀಡಿದ್ದಾರೆ. ಸದ್ಯಕ್ಕಂತೂ ಪ್ರೌಢಶಾಲೆ ವಿದ್ಯಾರ್ಥಿಗಳು ಮಾತ್ರ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿ ನಿಲಯದಲ್ಲಿ ಮುಂದೆ ಹಲವು ವಿದ್ಯಾರ್ಥಿಗಳ ಮುನ್ನಡೆಸುವ ಆಶಯವಿದೆ. ಸರ್ಕಾರಗಳಿಂದ ಕಿಂಚಿತ್ತೂ ಪಡೆಯದೆ ತನ್ನ ಪಾಡಿಗೆ ವನವಾಸಿ ಮಕ್ಕಳ ಬದುಕು ಕಟ್ಟಿಕೊಡುವ ಈ ಪ್ರಯತ್ನದ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘವಿದೆ.
ದಯಾಶಂಕರ ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ಒಂದು ದಿನಚರಿಯಿರುತ್ತದೆ. ಮುಂಜಾವಿನ 5.15 ಕ್ಕೆ ಆರಂಭವಾಗಿ ರಾತ್ರಿ 10 ಘಂಟೆಗೆ ಮುಕ್ತಾಯವಾಗುತ್ತದೆ.
ಬೆಳಿಗ್ಗೆ
5.15 – ಏಳುವುದು
5.15 – 6 ದಿನವಹಿ
6 – 6.15 ಏಕಾತ್ಮ ಸ್ತೋತ್ರ
6.20 – 6.50 ವ್ಯಾಯಾಮ
7 – 8 ಓದುವುದು
8.30 – 9 ಸ್ನಾನ ತಿಂಡಿ
9 – ಶಾಲೆಗೆ
4.30 – 5.15 ಶಾಲೆಯಿಂದ ಮರಳಿದಾಗ ಉಪಹಾರ
5.30 – 6.30 ಶಾಖೆ
6.45 – 7.15 ಭಜನೆ
7.15 – 8.30 ಓದುವುದು
8.30 – 9 ಊಟ
9.15 – 10 ಅನೌಪಚಾರಿಕ
10 – ಮಲಗುವುದು
ಇಷ್ಟೇ ಅಲ್ಲದೆ ವಾರ್ಷಿಕ ಎರಡು ಬಾರಿ ಪೋಷಕರ ಸಭೆ ಕರೆಯಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸಮಿತಿಯವರು ನಿಲಯದ ಕುಂದು ಕೊರತೆ ಆಲಿಸಲು ಮೇಲ್ವಿಚಾರಕರನ್ನು, ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಪ್ರತ್ಯೇಕವಾಗಿ ಕರೆದು ಕೇಳುತ್ತಾರೆ. ಅಲ್ಲಿ ಎಲ್ಲರಿಗೂ ಅವರ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ಅವಕಾಶವಿದೆ.
ಮೊದಲೇ ಹೇಳಿದಂತೆ ಅದೊಂದು ಕಿನ್ನರರ ಲೋಕ. ಎಳೆಯ ಹರೆಯದ ಸಾಧಕರೂ ಅಲ್ಲಿದ್ದಾರೆ. ಬಮ್ಮು ಭೈರು ಕಾತ್ರೋಟ್ – ಹತ್ತನೆಯ ತರಗತಿಯ ವಿದ್ಯಾರ್ಥಿ. ಯಲ್ಲಾಪುರ ತಾಲೂಕಿನ ಬಮ್ಮು ಪೋಲ್‌ವಾಲ್ಟ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸಿ ಗೆದ್ದಿದ್ದಾನೆ.
ಲಕ್ಷ್ಮೀಕಾಂತ್ ಗಣಪತಿ ಸಿದ್ಧಿ – ಈತನೂ ಹತ್ತನೆಯ ತರಗತಿ ವಿದ್ಯಾರ್ಥಿ. ಯಲ್ಲಾಪುರ ತಾಲೂಕಿನ ಈತ ಪೋಲ್‌ವಾಲ್ಟ್, ಹರ್ಡಲ್ಸ್ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸಿ ಯಶಸ್ಸು ಪಡೆದಿದ್ದಾನೆ.
ಇದು ಕೇವಲ ಕಿರು ಪರಿಚಯ ಅಷ್ಟೇ. ಇವರಲ್ಲದೇ ತಾಲ್ಲೂಕು, ಜಿಲ್ಲಾ ಮಟ್ಟಗಳಲ್ಲಿ ಕ್ರೀಡೆಗಳಲ್ಲಿ ಪ್ರತಿನಿಧಿಸಿ ಸಾಧನೆಗೈಯ್ಯುತ್ತಿರುವ ವಿದ್ಯಾರ್ಥಿಗಳ ದೊಡ್ಡ ಪಟ್ಟಿಯೇ ಇದೆ. ದಿನಾಂಕ 03.11.2019 ರಂದು ಹುಬ್ಬಳ್ಳಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ ಕಬ್ಬಡ್ಡಿಯಲ್ಲಿ ರಾಜ್ಯಕ್ಕೆ ಮೂರನೆಯ ಸ್ಥಾನ ಪಡೆದಿದ್ದಾರೆ. ಅಲ್ಲದೆ ಈ ಮಕ್ಕಳ ಜೊತೆ ಒಂದಾಗಿ ಸಲಹುತ್ತಿರುವ ಮೇಲ್ವಿಚಾರಕರಾದ ಓಂಕಾರಪ್ಪ ಅವರ ಕುರಿತು ಹೇಳಲೇಬೇಕು.
ಮೂಲತಃ ಸಾಗರದ ಜಿಗಳೇಮನೆಯವರಾದ ಇವರು ತಮ್ಮ ಜೀವನದ ಸುಮಾರು ನಾಲ್ಕು ದಶಕಗಳಷ್ಟನ್ನು ಸಂಘಕ್ಕಾಗಿಯೇ ಸವೆಸಿದ್ದಾರೆ. ಪ್ರಚಾರಕರಾಗಿ ಆರು ವರ್ಷ, ವಿಭಾಗ ಕಾರ್ಯಾಲಯ ಪ್ರಮುಖರಾಗಿ ಆರು ವರ್ಷ ಹೀಗೆ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಇವರ ಕೈಯಲ್ಲಿ ನಿಲಯದ ಹೊಣೆಗಾರಿಕೆ ಇರುವುದು ವಿದ್ಯಾರ್ಥಿಗಳ ಅದೃಷ್ಟವೇ ಸರಿ. ಮೊದಲಿಗೆ ಒಬ್ಬ ಯೋಗಪಟುವೂ ಆದ ಇವರು ಖಾಸಗಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುವಾಗ ಏಳು ಬಾರಿ ರಾಜ್ಯ ಮಟ್ಟಕ್ಕೆ ಯೋಗ ಸ್ಪರ್ಧೆಯಲ್ಲಿ ತಮ್ಮ ವಿದ್ಯಾರ್ಥಿಗಳನ್ನು ಕೊಂಡೊಯ್ದಿದ್ದರು. ಈಗಲೂ ಅಂತಹುದೇ ತಪಸ್ಸಿನಲ್ಲಿ ನಿರತರಾಗಿರುವ ಇವರು ಪ್ರತಿ ದಿನವನ್ನು ನಿಲಯಕ್ಕಾಗಿ ಮೀಸಲಿಟ್ಟು ಕಾಯುತ್ತಿದ್ದಾರೆ. ಬೆಳಿಗ್ಗೆ ವಿದ್ಯಾರ್ಥಿಗಳು ಶಾಲೆಗೆ ತೆರಳಿದ ನಂತರ ಪೇಟೆಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸುವುದು, ದಾನಿಗಳ ಭೇಟಿ ಮಾಡುವುದು, ಅಗತ್ಯ ವಸ್ತುಗಳನ್ನು ಪಟ್ಟಿ ಮಾಡುವುದು, ಬ್ಯಾಂಕ್ ವ್ಯವಹಾರ ಹೀಗೆ ನಿರಂತರವಾಗಿ ಅವರು ವ್ಯಸ್ಥರಾಗಿರುತ್ತಾರೆ.
ಇನ್ನು ಅದೇ ನಿಲಯದಲ್ಲಿ ಬೆಳೆಯುತ್ತಿರುವ ಓಂಕಾರಪ್ಪ ಅವರ ಮಗ ಹನ್ನೆರಡರ ಹರೆಯದ ಮುರಳೀಧರ. ಶಾಲೆಯಿಂದ ಮನೆಗೆ ಬಂದು ಮೊಬೈಲ್, ಟಿವಿ ನೋಡುತ್ತಾ ಕೂರುವ ಸಹ ವಯಸ್ಸಿನವರ ನಡುವೆ ಈತನ ಪ್ರತಿಭೆ ಅಮೋಘ. ರೇಡಿಯೋ, ಮೊಬೈಲ್ ಚಾರ್ಜರ್ ರಿಪೇರಿ, ಆಯಸ್ಕಾಂತ, ನೀರೆತ್ತುವ ಪಂಪ್ ತಯಾರಿಕೆ ಇದೆಲ್ಲಾ ಅವನ ಸಾಧನೆ ಎಂದರೆ ನೀವು ನಂಬಲೇಬೇಕು. ವಿದ್ಯಾರ್ಥಿ ನಿಲಯದ ನೀರಿನ ಟ್ಯಾಂಕ್ ತುಂಬಿದರೆ ಅದರಿಂದ ಒಳಗಿರುವ ಒಂದು ಬಲ್ಬ್ ಉರಿದು ಪಂಪ್ ಸ್ವಿಚ್ ಆರಿಸಲು ಸೂಚನೆ ಕೊಡುತ್ತದೆ. ಇದು ಮುರಳಿಯ ಪ್ರತಿಭೆಯ ಪ್ರಭಾವವೇ. ಸುಮಾರು ಅರ್ಧ ಕೊಠಡಿಗೆ ಆಗುವಷ್ಟು ಬರೀ ವ್ಯರ್ಥವೆನ್ನಿಸುವ ವಸ್ತುಗಳನ್ನು ಅವನು ಪೇರಿಸಿಟ್ಟುಕೊಂಡಿದ್ದಾನೆ. ಅದರಿಂದಲೇ ಏನನ್ನಾದರೂ ಮಾಡುತ್ತಿರುವುದು ಅವನ ಹವ್ಯಾಸ ಎನ್ನುತ್ತಾರೆ ಅವನ ತಂದೆ. ಇಂತಹ ಪ್ರತಿಭೆಗೆ ಬೆಂಬಲ ನೀಡಿದರೆ ದೊಡ್ಡ ಹೆಸರು ಮಾಡುವುದರಲ್ಲಿ ಅನುಮಾನವೇ ಇಲ್ಲ.
ಈಗಿರುವ ಹತ್ತೊಂಬತ್ತು ವಿದ್ಯಾರ್ಥಿಗಳು ಮತ್ತು ಮೇಲ್ವಿಚಾರಕರು, ಸಹಾಯಕರು ಸೇರಿ ಒಟ್ಟು ಇಪ್ಪತ್ನಾಲ್ಕು ಜನಕ್ಕೆ ತಿಂಗಳಿಗೆ 45000-50000 ಖರ್ಚು ಬೀಳುತ್ತದೆ. ಹಲವಾರು ದಾನಿಗಳು ತಾವಾಗಿಯೇ ಮುಂದೆ ಬಂದಿರುವುದು ಸಂತಸದ ಸಂಗತಿ. ಆದರೆ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳನ್ನು ತಲುಪುವುದು ನಿಲಯದ ಮತ್ತು ಸಂಘದ ಗುರಿ. ಅದು ನಾಗರೀಕರ ಮತ್ತು ಸಮಾಜದ ಜವಬ್ದಾರಿ ಕೂಡ ಆಗಿದೆ. ಬಹುಶಃ ಅಲ್ಲಿ ಹೋಗಿ ನಿಂತಾಗ ನಿಮ್ಮಲ್ಲಿ ಮೂಡುವ ಉತ್ಸಾಹ ಅಲ್ಲಿ ನಡೆಯುತ್ತಿರುವ ಮಹತ್ಕಾರ್ಯದ ಕುರಿತು ಹೇಳುತ್ತದೆ. ಧನ ಸಹಾಯ ಮಾಡಲು ಬಯಸುವವರು ವನವಾಸಿ ಕಲ್ಯಾಣ (Regd.) ಕರ್ನಾಟಕ ಹೆಸರಿನಲ್ಲಿ ಚೆಕ್ ನೀಡಬಹುದು. ಅಥವಾ ಮೇಲ್ವಿಚಾರಕರಾದ ಓಂಕಾರಪ್ಪ ಅವರನ್ನು ದೂರವಾಣಿ ಮೂಲಕ +917676147981 ಸಂಪರ್ಕಿಸಬಹುದು.
ಈ ಲೇಖನದಲ್ಲಿ ಖಾತೆ ಸಂಖ್ಯೆ ಹಾಕಲಾಗುವುದಿಲ್ಲ. ಕಾರಣ ಪ್ರತಿ ರೂಪಾಯಿಗೂ ರಶೀದಿ ನೀಡಿಯೇ ಪಡೆಯುವ ಆಶಯ ಅವರದು. ನಿಮ್ಮ ಒಂದು ರೂಪಾಯಿಯೂ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಮಿತಿಯದ್ದು. ಭವ್ಯ ಪರಂಪರೆಯ ಭಾರತ ದೇಶವನ್ನು, ಧರ್ಮವನ್ನು ಮತ್ತು ನಮ್ಮೆಲ್ಲರ ಪೂರ್ವಜರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದ, ಪೊರೆದ ಶಿವಾಜಿಯ ಸಂತಾನವನ್ನು ಹಾಗೆ ನಶಿಸಲು ಬಿಟ್ಟು ಬಿಡಲು ನಮ್ಮ ಸಂಸ್ಕೃತಿ ನಮಗೆ ಹೇಳಿಕೊಟ್ಟಿಲ್ಲ. ಅವರನ್ನು ಕಾಯುವ ಜವಾಬ್ದಾರಿ ನಮ್ಮದು, ಅದು ನಮ್ಮ ಅದೃಷ್ಟವೇ ಸರಿ.
ಜೈ ಛತ್ರಪತಿ ಶಿವಾಜಿ ಮಹಾರಾಜ್
ಜೈ ಅಂಬಾ ಭವಾನಿ
ಈ ಲೇಖನ ಆತ್ಮೀಯರಾದ ವಿವೇಕಾನಂದ ಶೆಟ್ಟಿ ಮತ್ತು ವೀರಣ್ಣರಿಗೆ ಅರ್ಪಣೆ.
Get In Touch With Us info@kalpa.news Whatsapp: 9481252093, 94487 22200
Discussion about this post