ಯಮ್ಮೋ, ಅಸಾಧ್ಯ ಹೊಟ್ಟೆನೋವು, ಸ್ವಲ್ಪವೂ ಮಿಸುಕಾಡುವಂತಿಲ್ಲ. ಚೂರಿ ಇರಿದ ಅನುಭವ, ಪ್ರಾರಂಭದಲ್ಲಿ ಹೀಗೆ ನೋವು ಕಾಣಿಸಿಕೊಂಡ್ರೆ, ಸ್ವಲ್ಪ ಹೊತ್ತು ಕಳೆದ್ರೆ, ಕಾಲೆಲ್ಲಾ ನಿತ್ರಾಣವಾದ ಅನುಭವ. ಎಲ್ಲಾ ಸುಸ್ತು ಒಟ್ಟಾಗಿ ಆವರಿಸಿಕೊಂಡಂತೆ, ವಿಪರೀತ ಸಂಕಟ, ಕಂಗಾಲು ಮಾಡೋ ತಲೆಶೂಲೆ, ಅದು ಹಸಿವಲ್ಲ, ಆದ್ರೂ ಹೊಟ್ಟೆ ಎಲ್ಲಾ ಧಗಧಗ, ಅದು ಆಲಸ್ಯವಲ್ಲ, ಆದ್ರೂ ಏನ್ಮಾಡೋದೂ ಬೇಡ ಅನ್ನೋಷ್ಟು ಅನ್ಯಮನಸ್ಕತೆ, ಯಾರು ಏನೇ ಮಾತಾಡಿದ್ರೂ ಕಿರಿಕಿರಿ, ಮುಟ್ಟಿದ್ರೆ ಸಿಟ್ಟು, ತನ್ನ ಮೇಲೇ ತನಗೆ ಅಸಹ್ಯ, ಮನೆಯಲ್ಲೂ, ಹೊರಗೂ ಕೆಲಸ ಮಾಡಬೇಕಾದ ಅನಿವಾರ್ಯತೆ, ಹೇಳೋ ಹಾಗಿಲ್ಲ. ಮಾಡದಿರೋ ಹಾಗೂ ಇಲ್ಲ. ಕೆಲವೊಮ್ಮೆ, ಹರಿವು ಹೆಚ್ಚಾಗಿ, ತಲೆ ಸುತ್ತಿ ಬೀಳೋದೂ ಇದೆ. ಇದು ಅನೈಚ್ಛಿಕ. ದಣಿವು ಹೊಟ್ಟೆನೋವು, ಹಸಿವು ಅಸಹನೆ, ನಿಶ್ಯಕ್ತಿ. ಹೌದು. ಇದು ಮುಟ್ಟಿನ ನೋವು. ಆ ಮೂರು ದಿನಗಳ ಸಂಕಟ. ನಾಲ್ಕನೆ ದಿನವಾಯ್ತೋ ಮತ್ತೆ ಛಂಗನೆ ನೆಗೆವ ಜಿಂಕೆಮರಿ.
ಟಿವಿ ಜಾಹೀರಾತುಗಳಲ್ಲಿ ಬರೋ ಹಾಗೆ, ಅದನ್ನು ಬಳಸಿದ್ರೆ ಮತ್ತೆಲ್ಲಾ ನೋವು ಕಿರಿಕಿರಿಗಳೇ ಇಲ್ಲ ಅಂತ ತೋರಿಸುವ ಹಾಗೆ, ಜಿಗಿಯುವ, ಕಾಂಪೌಂಡ್ ಹಾರುವ ಶಾರ್ಟ್ಸ್ ಧರಿಸಿ ನಿರ್ಭಿಡೆಯಿಂದ ಟೆನಿಸ್ ಆಡುವ, ಕುದುರೆ ಸವಾರಿ ಮಾಡುವ, ಧೀಂಕಿಟ ಅಂತ ಬಾಡಿ ಸ್ಟ್ರೆಚ್ ಮಾಡುವಷ್ಟು ಈ ಮೂರು ದಿನಗಳು ಈಝಿಯಾಗಿದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು. ಆದ್ರೆ ನಿಜಕ್ಕೂ ಹಾಗಿದ್ಯಾ? ಊಂ ಹೂಂ. ಇಲ್ಲ. ಹೊಟ್ಟೆ ಒಳಗೆ ಭಯಂಕರ ನೋವಿದ್ರೂ ಹೊರಗಡೆ ನಗ್ ನಗ್ತಾ ಇರ್ಬೇಕು. ಎಲ್ಲ ಕೆಲಸವನ್ನು ಎಂದಿನ ಹಾಗೆ ನಿಭಾಯಿಸ್ಬೇಕು.
ಕೆಲಸದೊತ್ತಡದಲ್ಲಿ ಕೆಲಬಾರಿ ಡೇಟ್ಸ್ ಮರೆತು ಹೋಗಿ, ’ಅದಕ್ಕಾಗಿ’ ಪರದಾಡೋದೂ ಇದೆ. ಆ ಸಮಯದಲ್ಲಿ ಮೆಡಿಕಲ್’ಗೆ ಹೋಗಿ ಅಪರಾಧ ಮಾಡಿದವರ ಹಾಗೆ ಕದ್ದು ಮುಚ್ಚಿ ಅದನ್ನು ಕೊಳ್ಳಬೇಕಾದ ಅನಿವಾರ್ಯತೆ, ಶ್! ಪೀರಿಯಡ್ಸ್ ಇದು ಗುಟ್ಟಿನ ವಿಷ್ಯ. ಹುಡುಗ್ರಿಗೆ ಈ ಸಂಕಟಗಳು ಅರ್ಥ ಆಗಲ್ಲ. ಆದ್ರೂ ಅರ್ಥ ಮಾಡ್ಕೋಬೇಕು. ಹುಡುಗ್ರೇ, ನಿಮ್ಮ ಅಕ್ಕ, ತಂಗಿ, ಸ್ನೇಹಿತೆ, ಹೆಂಡತಿ, ಅಮ್ಮ, ಒಟ್ಟಾರೆ ಹೆಣ್ಣುಮಕ್ಕಳ ಜತೆ ಮೃದುವಾಗಿ ವರ್ತಿಸಿ. ಯಾವ ಮೂರು ದಿನ ಅವಳು ಸೂತಕದಲ್ಲಿ ಕೂತಿರ್ತಾಳೋ ಗೊತ್ತಿಲ್ಲ. ಅವಳು ತುಂಬಾ ಹತ್ತಿರದವಳಾಗಿದ್ರೆ, ’ಆ ಗುಟ್ಟನ್ನ’ ನಿಮ್ಮ ಬಳಿ ಹೇಳಿಕೊಂಡಿದ್ರೆ, ಆ ದಿನಗಳಲ್ಲಿ ನಿಮ್ಮ ಪ್ರೀತಿ ಕೊಡಿ.
ಮನೆಗೆ ಯಾರಾದ್ರೂ ಬಂದ್ರೆ ಆಲೆನ್ ಮುಟ್ಟೊಡ್ಚಿ, ಆಲ್ ಪಿದೆಯಿ ಅಂತ ಅಮ್ಮ ಹೇಳಿದ್ರೆ (ಕೆಲವು ಮನೆಗಳಲ್ಲಿ) ಕೊತಕೊತ ಕುದಿವ ಸಿಟ್ಟು, ಬೇರೆಯವರಿಗೂ ಗೊತ್ತಾಗ್ಬೇಕಾ ಅಂತ.
ಅಮ್ಮ ಇಲ್ಲದ ನತದೃಷ್ಟರ ಬಗ್ಗೆ ಕನಿಕರವಾಗುತ್ತೆ. ಒಂದು ಹೆಣ್ಣು ಮತ್ತೊಂದು ಹೆಣ್ಣನ್ನು ಅರ್ಥ ಮಾಡಿಕೊಳ್ಳದೇ ಇರಬಹುದು. ಆದ್ರೆ ಅಮ್ಮ ಹಾಗಲ್ಲ. ಈ ದಿನಗಳಲ್ಲಿ ಅಮ್ಮನ ಅಕ್ಕರೆ ತುಂಬಾ ಅಪ್ಯಾಯಮಾನ. ಮಗಳ ಹೊಟ್ಟೆನೋವಿಗೆ ಅವಳು ವೈದ್ಯೆ. ಅವಳು ಮಾಡಿಕೊಡುವ ಬಿಸಿಗಂಜಿ, ಮೆಂತ್ಯದ ಅಡುಗೆ(ಮುಟ್ಟಿನ ದಿನಗಳಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು), ಕಷಾಯ, ನೆತ್ತಿಗೆ ಉಗುರು ಬೆಚ್ಚಗಿನ ತೆಂಗಿನೆಣ್ಣೆ, ಅವಳ ಪ್ರೀತಿಯ ತಂಪು, ಅವಳ ನರ್ಸಿಂಗ್, ಆರೈಕೆಗೆ ಮೂರು ದಿನಗಳು ಬೇಗ ಕಳೆದುಹೋಗುತ್ತೆ…
ಅಮ್ಮಾ.. ಈ ನೋವು ಯಮಯಾತನೆ
ನಾಲ್ಕನೆ ದಿನ ಆಗ್ಲಿ, ಮತ್ತೆ ರೆಡಿಯಾಗ್ತೀನಿ
Happy periods
ಜಿಂಕೆಮರಿ
Get In Touch With Us info@kalpa.news Whatsapp: 9481252093, 94487 22200
Discussion about this post