ಶಿವಮೊಗ್ಗ: ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರಕ್ಕೇ ಮಾದರಿಯಾಗಬಲ್ಲ ಪ್ರವಾಸಿತಾಣಗಳಿವೆ. ದೂರದರ್ಶಿ ಆಲೋಚನೆ ಮತ್ತು ಸೂಕ್ತ ಯೋಜನೆಗಳ ಮೂಲಕ ಪ್ರವಾಸಿತಾಣ ಅಭಿವೃದ್ಧಿಪಡಿಸಿದರೆ ರಾಜ್ಯವು ವಿಶ್ವಪ್ರಸಿದ್ಧವಾಗಲು ಸಾಧ್ಯ. ಆ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಹಾಗೂ ಪರಂಪರೆಗಳಿಗೆ ಧಕ್ಕೆಬಾರದಂತೆ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಸೌಲಭ್ಯ ಕಲ್ಪಿಸುವ ದಿಶೆಯಲ್ಲಿ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಚಿಂತಿಸಲಿ ಎಂದು ಶ್ರೀಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಳದ ಧರ್ಮಾಧಿಕಾರಿ ಡಾ. ಭೀಮೇಶ್ವರ ಜೋಷಿ ಕರೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ರಾಜ್ಯ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಸದಸ್ಯ ಶ್ರೀ ಲಕ್ಷ್ಮೀನಾರಾಯಣ ಕಾಶಿ ಅವರನ್ನು ಅಭಿನಂದಿಸಿ ಅವರು ಮಾತನಾಡುತ್ತಿದ್ದರು.
ಸಂಯುಕ್ತ ಕರ್ನಾಟಕ ದಿನಪತ್ರಿಕೆ ಪ್ರತಿನಿಧಿ ಕೆ.ತಿಮ್ಮಪ್ಪ ಅವರ ಸ್ವಗೃಹದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಖ್ಯಾತ ನ್ಯಾಯವಾದಿ ಶ್ರೀಪಾದ ಅವರ ನೇತೃತ್ವದಲ್ಲಿ ಸಮಾರಂಭ ಏರ್ಪಡಿಸಲಾಗಿತ್ತು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಾಶಿ ಅವರು, ರಾಜ್ಯದಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಆಕರ್ಷಣೀಯವಾಗಿಸಲು ಸೌಲಭ್ಯ- ಸಂಪರ್ಕಗಳನ್ನು ಕಲ್ಪಿಸಿ ಪ್ರವಾಸಿಗರನ್ನು ಸೆಳೆಯುವುದು ಸರ್ಕಾರದ ಹಾಗೂ ಮಾನ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆಶಯವಾಗಿದೆ. ಅಂತಹ ಸ್ಥಳಗಳನ್ನು ಗುರುತಿಸಿ ಕಲ್ಪಿಸಬೇಕಾದ ಸೌಕರ್ಯಗಳ ಬಗ್ಗೆ ವರದಿ ನೀಡಲು ಡಾ.ಸುಧಾ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚನೆಯಾಗಿದ್ದು, 2-3 ಸಭೆಗಳು ಈಗಾಗಲೇ ನಡೆದಿವೆ ಎಂದರು.
ಪರಂಪರೆ, ಇತಿಹಾಸ, ಪರಿಸರ ಸ್ನೇಹಿ, ಧಾರ್ಮಿಕ ಕ್ಷೇತ್ರ, ಸಾಂಸ್ಕೃತಿಕ ಮೇಲ್ಮೈಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಟೂರಿಸಂ ಸರ್ಕ್ಯೂಟ್ ರಚಿಸಲಾಗಿದೆ. 2-3 ಹಂತಗಳಲ್ಲಿ ಪ್ರವಾಸಿತಾಣಗಳನ್ನ ಅಭಿವೃದ್ಧಿಪಡಿಸಿ, ಸೌಲಭ್ಯ ಕಲ್ಪಿಸಿ ಪ್ರವಾಸಿಗರ ಸಂಖ್ಯೆ ಹೆಚ್ಚಿಸಲು ಮುಂದಿನ ಯೋಜನೆ ರೂಪುಗೊಳ್ಳುತ್ತಿದೆ ಎಂದರು.
ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಈ ದಿಶೆಯಲ್ಲಿ ಬೆಂಬಲವಾಗಿ ನಿಂತು ಕಾರ್ಯಸಾಧನೆಗೆ ಪ್ರಯತ್ನಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ – ಸಂಸತ್ ಕ್ಷೇತ್ರದಲ್ಲಿ ನಡೆಯಬೇಕಾದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸಂಸದ ಬಿ.ವೈ. ರಾಘವೇಂದ್ರ ಅವರು ಒತ್ತಾಸೆಯಾಗಿ ನಿಂತು ಅವಿರತ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದಾರೆ. ಎಲ್ಲಾ ಪ್ರಯತ್ನಪಟ್ಟು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರ ಅಭಿಲಾಷೆಯಂತೆ ಕರ್ನಾಟಕ ರಾಜ್ಯವನ್ನು ರಾಷ್ಟ್ರ ಪ್ರವಾಸೋದ್ಯಮ ನಕ್ಷೆಯಲ್ಲಿ ಮುಂಚೂಣಿಯಲ್ಲಿ ತರಲು ಶ್ರಮಿಸಲಾಗುವುದು ಎಂದರು.
ಪ್ರಾರಂಭದಲ್ಲಿ ಸುಮಾ ಅವರು ಪ್ರಾರ್ಥಿಸಿ, ನ್ಯಾಯವಾದಿ ಶ್ರೀಪಾದ ಅವರು ಸ್ವಾಗತ -ಪ್ರಸ್ತಾವನೆ ನಡೆಯಿತು. ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡರು ಮತ್ತು ಹವ್ಯಕ ಸಮಾಜದವರು ಪತ್ರಕರ್ತರು ಉಪಸ್ಥಿತರಿದ್ದರು.
ಡಾ.ಜೋಷಿ ಅವರಿಗೆ ಫಲಸಮರ್ಪಿಸಿ ಗೌರವಿಸಲಾಯಿತು. ಕೆ. ತಿಮ್ಮಪ್ಪನವರು ಎಲ್ಲರಿಗೂ ವಂದಿಸಿದರು.
(ವರದಿ: ಡಾ.ಸುಧೀಂದ್ರ)
Get In Touch With Us info@kalpa.news Whatsapp: 9481252093, 94487 22200
Discussion about this post