ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಮಹಾಭಾರತದಲ್ಲಿ ಬರುವ ಪ್ರಧಾನ ಘಟ್ಟ ಎಂದರೆ ಅದು ಯುದ್ಧದ ಸಂದರ್ಭ. ಈ ಯುದ್ಧದಲ್ಲಿ ಪ್ರಧಾನವಾಗಿ ಕಂಡುಬರುವುದು ಪಾಂಡವರ ವಿಜಯ. ಈ ವಿಜಯದ ಫಲ ಯಾರಿಗೆ ಸೇರಬೇಕು ಎಂದು ಕೇಳಿದರೆ, ಕೆಲವರು ಧರ್ಮರಾಜನೆಂದೂ, ಇನ್ನು ಕೆಲವರು ಅರ್ಜುನನೆಂದೂ, ಮತ್ತೆ ಕೆಲವರು ಭೀಮಸೇನನೆಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ನಿಜವಾಗಿ ವಿಜಯದ ಫಲ ಯಾರಿಗೆ ಸೇರಬೇಕು ಎಂಬುದನ್ನು ತಿಳಿಯಬೇಕಾದರೆ ನಾವು ಯುದ್ಧದ ಆದಿ-ಅಂತ್ಯಗಳ ವಿಚಾರವನ್ನು ಮಾಡಬೇಕು.
ಉದಾಹರಣೆಗೆ: ಯಾವುದೇ ಒಂದು ಕೆಲಸ ಮಾಡುವಾಗ ಸಂಕಲ್ಪ ಹಾಗೂ ಸಮರ್ಪಣೆಯನ್ನು ಯಾರು ನಿಸ್ಸಂಶಯವಾಗಿ ಮಾಡುತ್ತಾರೋ ಅವರಿಗೆ ಕರ್ಮದ ಸಂಪೂರ್ಣ ಪುಣ್ಯ ಲಭಿಸುತ್ತದೆ. ಅಂದರೆ ನಾವು ಮಾಡುವ ಕೆಲಸದಲ್ಲಿ ಸಂಶಯವಿದ್ದರೆ ನಮಗೆ ಆ ಕರ್ಮದ ಸಂಪೂರ್ಣ ಫಲ ಬರುವುದಿಲ್ಲ. ಅದೇ ರೀತಿ ಯುದ್ಧ ಎಂಬ ಕರ್ಮವನ್ನು ಮಾಡುವಾಗಲೂ ಕೂಡ ಯಾರು ನಿಶ್ಶಂಕೆಯಿಂದ ಇದು ಭಗವತ್ಸೇವಾ ರೂಪವಾದ ಒಂದು ಯಜ್ಞ ಎಂಬುದಾಗಿ ತಿಳಿಯುತ್ತಾರೋ ಅವರಿಗೆ ಯುದ್ಧದ ಸಂಪೂರ್ಣ ಫಲ ಹೋಗುತ್ತದೆ.
ಪ್ರಕೃತ ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಯುದ್ಧದ ಪ್ರಾರಂಭದಲ್ಲಿ “ನಾವು ಯುದ್ಧ ಮಾಡುವುದು ಸರಿಯೇ? ಎಂಬುದಾಗಿ ಸಂಶಯಕ್ಕೊಳಗಾದ. ಅವನ ಸಂಶಯವನ್ನು ಪರಿಹರಿಸಲು ಕೃಷ್ಣನು ಭಗವದ್ಗೀತೆಯ ಉಪದೇಶವನ್ನು ಮಾಡಬೇಕಾಯಿತು. ಅದೇ ರೀತಿಯಾಗಿ ಧರ್ಮರಾಜನಿಗೆ ಯುದ್ಧ ಮುಗಿದ ನಂತರ “ನಾವು ಅನೇಕ ಜನರನ್ನು ಕೊಂದಿದ್ದರಿಂದ ಪಾಪವುಂಟಾಯಿತು. ಹೀಗಾಗಿ ನಾವು ಯುದ್ಧ ಮಾಡಿದ್ದು ಅಧರ್ಮ” ಎಂಬುದಾಗಿ ಸಂಶಯ ಉಂಟಾಯಿತು. ಅವನಲ್ಲಿ ಉಂಟಾದ ಸಂಶಯವು ಭೀಷ್ಮಾಚಾರ್ಯರ ಉಪದೇಶದ ಮೂಲಕವೂ ಕೂಡ ಪೂರ್ಣವಾಗಿ ನಿವಾರಣೆಯಾಗಲಿಲ್ಲ.
ಹೀಗಾಗಿ ಮಹಾಭಾರತ ಯುದ್ಧದಲ್ಲಿ ಪ್ರಧಾನರಾದ ಧರ್ಮರಾಜ ಹಾಗೂ ಅರ್ಜುನರಿಗೆ ಯುದ್ಧದ ಸಂಪೂರ್ಣ ಫಲ ದೊರೆಯುವುದಿಲ್ಲ. ಏಕೆಂದರೆ ಅವರಲ್ಲಿ ಸುದೃಢವಾದ ಭಗವಾದಾರಾಧನಾ ರೂಪವಾದ ಕರ್ಮಸಂಕಲ್ಪ ಹಾಗೂ ಭಗವದರ್ಪಣಾ ಮನೋಭಾವ ಇರಲಿಲ್ಲ.
ಆದರೆ ಭೀಮಸೇನ ಮಾತ್ರ ಯುದ್ಧದ ಎಲ್ಲ ಸಂದರ್ಭದಲ್ಲಿ “ಯುದ್ಧ ಎಂಬುದು ಅಧರ್ಮವಲ್ಲ. ದುಷ್ಟರಾಜರ ದಮನ ಎಂಬುದು ಕ್ಷತ್ರಿಯರು ಅವಶ್ಯವಾಗಿ ಪಾಲಿಸಲೇಬೇಕಾದ ಒಂದು ಧರ್ಮ” ಎಂಬುದಾಗಿ ತಿಳಿದಿದ್ದ ಭೀಮಸೇನನು ಭಗವತ್ಪ್ರೀತಿಗಾಗಿ ಯುದ್ಧವನ್ನು ಮಾಡಿದನು. ಹೀಗಾಗಿ ಭೀಮಸೇನನಿಗೇ ಯುದ್ಧದ ಸಂಪೂರ್ಣ ಫಲವು ದೊರಕಿತು.
(ನಾಳಿನ ಲೇಖನ: ಮರಣವೆಂದರೆ ಎಲ್ಲರಿಗೂ ಭಯವೇಕೆ?)
(ನಾಳಿನ ಲೇಖನ: ಮಹಾಭಾರತ ಯುದ್ಧದ ವಿಜಯದ ಮುಖ್ಯ ಫಲ ಯಾರಿಗೆ ?)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post