ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪೋಲಿಯೋ ನಿರ್ಮೂಲನೆಗಾಗಿ ಸರ್ಕಾರ ಹಮ್ಮಿಕೊಂಡಿರುವ ಪಲ್ಸ್ ಪೋಲಿಯೋ ಅಭಿಯಾನ ಡಿ.21ರ ನಾಳೆ ನಡೆಯಲಿದೆ.
ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದ್ದು, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ 2 ಹನಿ ಲಸಿಕೆ ಹಾಕಿಸಿ.
ಶಿವಮೊಗ್ಗ ಡಿಸಿ ಮನವಿ
ಡಿ.21 ರ ಭಾನುವಾರದಂದು ಶಿವಮೊಗ್ಗ ಜಿಲ್ಲೆಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, 0 ರಿಂದ 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕೆಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಕೋರಿದ್ದಾರೆ.
ಜಿಲ್ಲೆಯಲ್ಲಿ 0 ರಿಂದ 5 ವರ್ಷದ ಒಳಗಿನ 145255 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜೊತೆಗೆ ಅತೀ ಸೂಕ್ಷ್ಮ ಪ್ರದೇಶಗಳೆಂದು ಗುತುತಿಸಲ್ಪಟ್ಟ ಕೊಳಚೆ ಪ್ರದೇಶ, ಅಲೆಮಾರಿ ಜನಾಂಗ, ಇಟ್ಟಿಗೆ ಬಟ್ಟಿಗಳು, ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರ ವಸತಿ ಪ್ರದೇಶಗಳನ್ನೊಳಗೊಂಡು ಬಸ್ಸು ನಿಲ್ದಾಣ, ರೈಲ್ವೆ ನಿಲ್ದಾಣಗಳು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 1016 ಲಸಿಕಾ ಬೂತ್’ಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇದರಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಯವರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಇತರೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ವ್ಯಾಕ್ಸಿನೇಟರ್’ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಪಲ್ಸ್ ಪೋಲಿಯೋ ಲಸಿಕೆ ನೀಡಲು ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ, ಅಂಗನವಾಡಿಗಳಲ್ಲಿ, ಶಾಲೆಗಳಲ್ಲಿ ಲಸಿಕಾ ಬೂತ್’ಗಳನ್ನು ತೆರೆಯಲಾಗುತ್ತದೆ.
ಪ್ರತಿಯೊಂದು ತಾಲೂಕುಗಳಿಗೆ ನೋಡಲ್ ಅಧಿಕಾರಿಗಳನ್ನು ಮತ್ತು ಮೇಲ್ವಿಚಾರಕರನ್ನು ನೇಮಿಸಿ ಕಾರ್ಯಕ್ರಮ ಮೇಲ್ವಿಚಾರಣೆ ಮಾಡಲು ನಿಯೋಜಿಸಲಾಗಿದೆ. ಸಾರ್ವಜನಿಕರು ಈ ಹಿಂದೆ 5 ವರ್ಷದ ಒಳಗಿನ ಮಕ್ಕಳಿಗೆ ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಡಿಸೆಂಬರ್ 21 ರ ಭಾನುವಾರದಂದು ಪುನಃ ಪೋಲಿಯೋ ಲಸಿಕೆ ಹಾಕಿಸಬೇಕು.
ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಎಲ್ಲಾ ಲಸಿಕಾ ಬೂತ್’ಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆಯನ್ನು 0-5 ವರ್ಷದ ಮಕ್ಕಳಿಗೆ ಉಚಿತವಾಗಿ ನೀಡಲಾಗುವುದು.
ಸಾರ್ವಜನಿಕರು ಭಾನುವಾರದಂದು ತಮ್ಮ 0 ರಿಂದ 5 ವರ್ಷದ ಎಲ್ಲಾ ಮಕ್ಕಳನ್ನು ಕರೆತಂದು ಪೋಲಿಯೋ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿಗಳು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















