ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೊನಾದ ಇಂದಿನ ದಿನಮಾನಗಳಲ್ಲಿ ಜಿಲ್ಲಾ ಮಟ್ಟದ ಪತ್ರಿಕೆಗಳು ಉಳಿಯುವುದೇ ಕಷ್ಟವಾಗಿದೆ. ರಾಜ್ಯ ಸರ್ಕಾರ ಕೂಡಲೇ ರಾಜ್ಯಮಟ್ಟದ ಪತ್ರಿಕೆಗಳಿಗೆ ಜಾಹೀರಾತು ನೀಡುವಂತೆ ಜಿಲ್ಲಾ ಮಟ್ಟದ ಪತ್ರಿಕೆಗಳಿಗೂ ಜಾಹೀರಾತು ನೀಡಬೇಕು ಎಂದು ಹಿರಿಯ ಸಂಪಾದಕ ಎಸ್. ಚಂದ್ರಕಾತ್ ಒತ್ತಾಯಿಸಿದರು.
ಅವರು ತುಂಗಾ ತರಂಗ ಕನ್ನಡ ದಿನಪತ್ರಿಕೆ ಹೊರತಂದಿರುವ 2021ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ, ಇಂದಿನ ದಿನಗಳಲ್ಲಿ ಕಾಗದ ಹಾಗೂ ಮುದ್ರಣದ ವೆಚ್ಚ ದುಬಾರಿಯಾಗಿದ್ದು, ನಿಗದಿತ ಕಾಯ್ದೆಯಂತೆ ಜಿಲ್ಲಾ ಮಟ್ಟದ ಹಾಗೂ ಸ್ಥಳೀಯ ಪತ್ರಿಕೆಗಳನ್ನು ಉಳಿಸಲು ರಾಜ್ಯ ಸರ್ಕಾರ ವಿಶೇಷ ಜಾಹೀರಾತುಗಳ ರೂಪದಲ್ಲಿ ನೆರವು ನೀಡುವ ಅಗತ್ಯವಿದೆ ಎಂದು ಹೇಳಿದರು.
ಮಾಜಿ ನಗರಸಭಾ ಅಧ್ಯಕ್ಷ ಹಾಗೂ ಉದ್ಯಮಿ ಎಲ್.ಸತ್ಯನಾರಾಯಣ ರಾವ್ ಅವರು ಮಾತನಾಡುತ್ತಾ, ಕಳೆದ ದಶಕದಿಂದ ತುಂಗಾ ತರಂಗ ಪತ್ರಿಕೆಯ ಹೊಸ ಬಳಗ ಪತ್ರಿಕೆಯನ್ನು ಉಚಿತವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರತೆ ಕಾಯ್ದುಕೊಂಡು ನೀಡುತ್ತಿದೆ. ಇದು ಪತ್ರಿಕಾ ಶಕ್ತಿಯನ್ನು ಹೆಚ್ಚಿಸುತ್ತಿದೆಯಾದರೂ ಸಹ ಆರ್ಥಿಕವಾಗಿ ಧೈರ್ಯ ನೀಡುವಂತಹ ಕೆಲಸವನ್ನು ಸರ್ಕಾರ ಹಾಗೂ ಜನ ನಾಯಕರು ಮಾಡಬೇಕಿದೆ ಎಂದರು.

ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಯ ಇನ್ಸ್‌ಪೆಕ್ಟರ್ ಮಾದಪ್ಪ, ನಿವೃತ್ತ ಹಿರಿಯ ಪತ್ರಕರ್ತರಾದ ಕೆ.ಬಿ. ರಾಮಪ್ಪ ಹಾಗೂ ಜೇವಿಯರ್ ಡೇವಿಡ್ ಅವರು 2021ರ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಪತ್ರಿಕೆಯ ಸಂಪಾದಕ ಎಸ್.ಕೆ. ಗಜೇಂದ್ರ ಸ್ವಾಮಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 2011ರಿಂದ ತುಂಗಾ ತರಂಗ ಪತ್ರಿಕೆ ಹೊಸ ಬಳಗದಿಂದ ವಿನೂತನವಾಗಿ ಹೊರಬರುತ್ತಿರುವುದನ್ನು ಗಮನಿಸುತ್ತಿದ್ದೀರಿ. ಕಷ್ಟ, ನಷ್ಟದ ಬಗ್ಗೆ ಚಿಂತಿಸದೇ ಪ್ರತಿ ವರ್ಷದಂತೆ ಈ ವರ್ಷವೂ ಉಚಿತ ಕ್ಯಾಲೆಂಡರ್ ನೀಡುತ್ತಿದೆ ಇದರಲ್ಲಿ ದಿನದ ಸಮಗ್ರ ಮಾಹಿತಿ ಚಿಕ್ಕ ಚೌಕಟ್ಟಿನಲ್ಲಿಯೇ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಕೆ.ಬಿ.ರಾಮಪ್ಪ, ಜೇವಿಯರ್ ಡೇವಿಡ್, ಎಸ್. ಚಂದ್ರಕಾಂತ್ ಮತ್ತು ಫೋಟೋಗ್ರಾಫಿಯಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದ ಶಿವಮೊಗ್ಗ ನಾಗರಾಜ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರದಲ್ಲಿ ಶಿವಮೊಗ್ಗ ಪತ್ರಕರ್ತರು, ಮಾನವ ಹಕ್ಕುಗಳ ಕಮಿಟಿಯ ಪದಾಧಿಕಾರಗಳು ಹಾಗೂ ಪತ್ರಿಕೆಯ ಅಭಿಮಾನಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post