ಕಲ್ಪ ಮೀಡಿಯಾ ಹೌಸ್ | ಉಡುಪಿ |
ಸಾರ್ವಜನಿಕರ ಆರೋಗ್ಯಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ (Banana) ಬಾಳೆಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸಲು ನಿಷೇಧಿತ ಮತ್ತು ಹಾನಿಕಾರಕ (Chemical) ರಾಸಾಯನಿಕಗಳನ್ನು ಬಳಸುತ್ತಿದ್ದ ಜಾಲದ ವಿರುದ್ಧ ಉಡುಪಿ (Udupi) ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಗುರುವಾರ ಮುಂಜಾನೆ ಅಲೆವೂರು, ಕೆಮ್ತೂರು ಹಾಗೂ ಮಣಿಪಾಲದ ದುಗ್ಲಿ ಪರಿಸರದಲ್ಲಿರುವ ಪ್ರಮುಖ ಬಾಳೆಹಣ್ಣು ದಾಸ್ತಾನು ಕೇಂದ್ರಗಳು ಮತ್ತು ಗೋದಾಮುಗಳ ಮೇಲೆ ಅಧಿಕಾರಿಗಳ ತಂಡ ಏಕಕಾಲದಲ್ಲಿ ಧಿಡೀರ್ ದಾಳಿ ನಡೆಸಿ ತಪಾಸಣೆ ನಡೆಸಿದೆ.
ಉಡುಪಿ ಸಹಾಯಕ ಆಯುಕ್ತೆ (ಎಸಿ) ರಶ್ಮಿ ಎಸ್.ಆರ್. ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ವಿವಿಧ ವ್ಯಾಪಾರಿಗಳು ಹಾಗೂ ಬಾಳೆಹಣ್ಣು ದಾಸ್ತಾನುದಾರರ ಗೋದಾಮುಗಳನ್ನು ತೀವ್ರವಾಗಿ ಪರಿಶೀಲಿಸಲಾಗಿದೆ.
ನಿಷೇಧಿತ ಕೆಮಿಕಲ್, ಕೃತಕ ಬಣ್ಣ ಜಪ್ತಿ
ದಾಳಿ ವೇಳೆ ಬಾಳೆಹಣ್ಣುಗಳಿಗೆ ಆಕರ್ಷಕ ಹಳದಿ ಬಣ್ಣ ನೀಡಲು ಹಾಗೂ ಅವುಗಳನ್ನು ಕೃತಕವಾಗಿ ಬೇಗ ಹಣ್ಣಾಗಿಸಲು ಬಳಸಲಾಗುತ್ತಿದ್ದ ನಿಷೇಧಿತ ರಾಸಾಯನಿಕಗಳು, ಕೃತಕ ಬಣ್ಣ ಹಾಗೂ ಸಂಬಂಧಿತ ಪರಿಕರಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬಾಳೆಹಣ್ಣುಗಳನ್ನು ಸ್ವಾಭಾವಿಕವಾಗಿ ಹಣ್ಣಾಗಿಸುವ ಬದಲು ರಾಸಾಯನಿಕಗಳ ಬಳಕೆಯ ಮೂಲಕ ಕಡಿಮೆ ಅವಧಿಯಲ್ಲಿ ಮಾರುಕಟ್ಟೆಗೆ ಸಿದ್ಧಪಡಿಸಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗೋದಾಮುಗಳ ಮೇಲೆ ದಾಳಿ ನಡೆಸಿದ್ದಾರೆ.
Also read>> Belgaum | ಘಟಪ್ರಭಾ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ | 8 ರೈಲುಗಳಿಗೆ ಪ್ರಾಯೋಗಿಕ ನಿಲುಗಡೆ
ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟದ ಆರೋಪ
ಸಾರ್ವಜನಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡಿದ ಆರೋಪದಡಿ ಹಲವು ವ್ಯಾಪಾರಿಗಳು ಮತ್ತು ಗೋದಾಮು ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಅಕ್ರಮ ಚಟುವಟಿಕೆ ಹಾಗೂ ಸಾಗಾಟಕ್ಕೆ ಬಳಸಲಾಗುತ್ತಿದ್ದ ಕೆಲವು ವಾಹನಗಳನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೃತಕವಾಗಿ ಹಣ್ಣುಗಳನ್ನು ಹಣ್ಣಾಗಿಸಲು ಬಳಸುವ ಕೆಲವು ಹಾನಿಕಾರಕ ರಾಸಾಯನಿಕಗಳು ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಈ ಕಾರ್ಯಾಚರಣೆ ಮಹತ್ವ ಪಡೆದುಕೊಂಡಿದೆ.
ಕಾರ್ಯಾಚರಣೆಗೆ ಸಾರ್ವಜನಿಕರಿಂದ ಬೆಂಬಲ
ಬಾಳೆಹಣ್ಣು ಸೇರಿದಂತೆ ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳ ಬಳಕೆಯ ಬಗ್ಗೆ ಆಗಾಗ್ಗೆ ಆತಂಕ ವ್ಯಕ್ತವಾಗುತ್ತಿರುವ ನಡುವೆಯೇ ಉಡುಪಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಈ ಕ್ರಮಕ್ಕೆ ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗಿದೆ.
ಇಂತಹ ಅಕ್ರಮ ಚಟುವಟಿಕೆಗಳ ವಿರುದ್ಧ ಮುಂದೆಯೂ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಆಹಾರ ವಸ್ತುಗಳ ಗುಣಮಟ್ಟ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ತಪಾಸಣೆಯನ್ನು ಮತ್ತಷ್ಟು ತೀವ್ರಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







