ಕಲ್ಪ ಮೀಡಿಯಾ ಹೌಸ್ | ಬಾರಕೂರು/ಉಡುಪಿ |
ವೇದದ ಪ್ರತಿಯೊಂದು ಅಕ್ಷರವೂ ಪರಮಾತ್ಮನ ಗುಣಗಾನವನ್ನು ಮಾಡುತ್ತದೆ. ಆದ್ದರಿಂದ ವೇದಗಳ ಪಾರಾಯಣವು (Veda Chanting) ಮಹಾಪುಣ್ಯಪ್ರದವಾಗಿದೆ ಎಂದು (Udupi) ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ಬಾರಕೂರಿನ ಶ್ರೀ ಮಠದಲ್ಲಿ 47 ನೇ ಚಾತುರ್ಮಾಸ್ಯದ ಸಂದರ್ಭ ಯಜುರ್ವೇದ ಅಧ್ಯಯನ ಮಾಡಿದ 12 ವಿದ್ವಾಂಸರಿಗೆ ಮಾಧ್ವರಾದ್ಧಾಂತ ಸಂವರ್ಧಕ ಸಭಾ ವತಿಯಿಂದ ಶನಿವಾರ ಸಂಜೆ ಪ್ರಶಸ್ತಿ ಸಹಿತ ಸನ್ಮಾನ ನೆರವೇರಿಸಿ ಅವರು ಅನುಗ್ರಹ ಸಂದೇಶ ನೀಡಿದರು.
Also Read>> ಸೊರಬ | ಗಣೇಶೋತ್ಸವ ಈದ್ ಮಿಲಾದ್ ಹಿನ್ನೆಲೆಯಲ್ಲಿ ಪೊಲೀಸ್ ರೂಟ್ ಮಾರ್ಚ್
ವೇದ, ಶಾಸ್ತ್ರಗಳನ್ನು ಅಧ್ಯಯನ ಮಾಡುವವರು, ಅದಕ್ಕಾಗಿ ತಮ್ಮ ಮಕ್ಕಳನ್ನು ಸಂಸ್ಕೃತ ಪಾಠಶಾಲೆಗಳಿಗೆ ಕಳಿಸುವವರು ಇಂದು ಬಹು ಅಪರೂಪವಾಗುತ್ತಿದ್ದಾರೆ. ಇಂಥ ಕಾಲಘಟ್ಟದಲ್ಲಿ ಸನಾತನವಾದ ವೇದ ಪರಂಪರೆಯನ್ನು ಉಳಿಸಲು ಎಲ್ಲ ವೇದ ವಿದ್ವಾಂಸರೂ ಕನಿಷ್ಠ ಒಬ್ಬ ವಿದ್ಯಾರ್ಥಿಗಾದರೂ ವೇದವಿದ್ಯೆಯನ್ನು ಧಾರೆ ಎರೆಯುವ ಸಂಕಲ್ಪವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ವರ್ತಮಾನದಲ್ಲಿ ಅನೇಕ ವೇದ ವಿದ್ವಾಂಸರು ವೇದಪಾಠ ಮತ್ತು ಪಾರಾಯಣಗಳನ್ನು ಬಿಟ್ಟು ಪೌರೋಹಿತ್ಯ, ಹೋಮ ಮತ್ತು ಮಂಗಳ ಕಾರ್ಯ ಮುಂತಾದವುಗಳಲ್ಲೇ ಜೀವನ ನಡೆಸುತ್ತಾರೆ. ಬಹು ಮುಖ್ಯವಾಗಿ ವೇದ ಪಾರಾಯಣ ಮಾಡುವವರನ್ನು ಬೆಮಬಲಿಸಬೇಕು. ಅವರಿಗೆ ಸೂಕ್ತ ಸಂಭಾವನೆ ನೀಡಿ ನಮ್ಮ ಪರಂಪರೆ ಉಳಿಯಲು ಪ್ರೋತ್ಸಾಹಿಸಬೇಕು ಎಂದು ಸ್ವಾಮೀಜಿ ಸಂದೇಶ ನೀಡಿದರು.
ಸಾವಿರಾರು ವರ್ಷಗಳಿಂದ ಪರಂಪರೆ ರಕ್ಷಣೆ
ಶ್ರೀ ಕ್ಷೇತ್ರ ಹೊರನಾಡು ಶ್ರೀ ಅನ್ನಪೂಣೇಶ್ವರಿ ದೇವಾಲಯದ ಧರ್ಮದರ್ಶಿ ಡಾ. ಜಿ ಭೀಮೇಶ್ವರ ಜೋಷಿ ಮಾತನಾಡಿ, ಭಾರತವು ಸಾವಿರಾರು ವರ್ಷಗಳಿಂದ ವೇದ ವಿದ್ಯೆಯನ್ನು ಕಾಪಾಡಿಕೊಂಡು ಬಂದಿದೆ. ಯಾವುದೇ ಪುಸ್ತಕ, ಲೇಖನಿ ಮತ್ತು ಮುದ್ರಣ ವ್ಯವಸ್ಥೆ ಇಲ್ಲದ ಕಾಲದಲ್ಲೂ ವೇದಾಧ್ಯಯನ ವಿದ್ವಾಂಸರಿಂದಲೇ ಮೌಖಿಕವಾಗಿ ವೇದ, ಶಾಸ್ತ್ರ ಮತ್ತು ಪುರಾಣಗಳು ಉಳಿದು ಬಂದಿರುವ ಕಾರಣ ನಮ್ಮ ನಾಡು ಪುಣ್ಯಭೂಮಿ ಎಂದು ವಿಶ್ವಖ್ಯಾತಿ ಪಡೆದಿದೆ ಎಂದರು.
ಶ್ರೀ ವಿದ್ಯೇಶ ತೀರ್ಥರು ಸ್ವಯಂ ವೇದ ಪಾರಾಯಣನ ಸೇವೆಯನ್ನು ಮಾಡುತ್ತಾ, ದೇಶದ ವಿವಿಧೆಡೆ ಇರುವ ಚತುರ್ವೇದ ವಿದ್ವಾಂಸರನ್ನು ಹುಡುಕಿ ಕರೆತಂದು ಗೌರವಾದರ ನೀಡುತ್ತಿರುವುದು ಮತ್ತು ಅವರಿಂದ ಪಾರಾಯಣ ಸಪ್ತಾಹ ಆಯೋಜನೆ ಮಾಡಿ ಚಾತುರ್ಮಾಸ್ಯಕ್ಕೆ ಹೊಸ ಭಾಷ್ಯ ಬರೆಯುತ್ತಿರುವುದು ಮಹೋನ್ನತ ಸೇವೆ ಎಂದರು.
Udupi – Sirsi : ಬಿರುದು- ಪ್ರಶಸ್ತಿ ಪ್ರದಾನ
ಶಿರಸಿ ಸಮೀಪದ ಸೋದೆ ವಾದಿರಾಜ ಮಠದ ಗುರುಕುಲದಲ್ಲಿ ಅಧ್ಯಾಪಕರಾಗಿರುವ ಯುವವಿದ್ವಾಂಸ ಶ್ರೀನಿಧಿ ಘನಪಾಠಿ ಅವರಿಗೆ ಯಜುರ್ನಿಗದಗೀಷ್ಪತಿ ಎಂಬ ಬಿರುದು ನೀಡಿ ಗೌರವಿಸಲಾಯಿತು. ವಿದ್ವಾಂಸರಾದ ಹರಿಪ್ರಸಾದ, ವೆಂಕಟೇಶ, ರಂಗನಾಥ, ಶ್ರೀ ಘನಪಾಠಿ ಎಂಬ ವಿದ್ವಾಂಸರಿಗೆ ಯಜುರುದ್ಗಾರದೇಶಿಕ ಎಂಬ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪಂಡಿತರಾದ ಅನಂತಪದ್ಮನಾಭ ಕ್ರಮಪಾಠಿ, ರಘುಪ್ರೇಮಾಚಾರ್ಯ, ಗುರುಪ್ರಸಾದ ಶರ್ಮಾ, ನಂದಳಿಕೆ ವಿಠ್ಠಲಾಚಾರ್ಯ, ಕಾರ್ತಿಕಾಚಾರ್ಯ, ಹರೀಶಾಚಾರ್ಯ ಸರಳಾಯ, ವಿಶ್ವ ವಿಜಯಾಚಾರ್ಯರಿಗೆ ‘ ಯಜುಃ ಪಾಠದೃಢವ್ರತ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಲ್ಲ ವಿದ್ವಾಂಸರಿಗೂ ಶ್ರೀ ವಿದ್ಯೇಶ ತೀರ್ಥರು ಸನ್ಮಾನ ಪತ್ರ, ಸ್ಮರಣಿಕೆ, ಫಲಕ, ಹಾರ, ಸಂಭಾವನೆ ಸಹಿತ ಸನ್ಮಾನ ಮಾಡಿದ್ದು ಗಮನ ಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









