ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ನಾಟ್ಯವೇದಂ ತತಶ್ಚಕ್ರೇ ಚತುರ್ವೇದಾಂಗ ಸಂಭವಂ
ಜಗ್ರಾಹ ಪಾಠಮೃಗ್ವೇದಾತ್ ಸಾಮಭ್ಯೋ ಗೀತಮೇವ ಚ
ಯಜುರ್ವೇದಾದಭಿನಯಾನ್ ರಸಾನಾರ್ಥವಣಾದಪಿ
ಇಂದ್ರಾದಿ ದೇವತೆಗಳು ತಮ್ಮ ವಿರಾಮದ ವೇಳೆಯಲ್ಲಿ ವಿನೋದಕ್ಕಾಗಿ ಒಂದು ವಿಶಿಷ್ಟ ವಿಧಾನವನ್ನು ಹೇಳಿಕೊಡಬೇಕೆಂದು ಸೃಷ್ಠಿ ಕರ್ತ ಬ್ರಹ್ಮದೇವರಲ್ಲಿ ಒಮ್ಮೆ ಕೇಳುತ್ತಾರಂತೆ. ಆಗ, ಬ್ರಹ್ಮ ದೇವರು ಋಗ್ವೇದದಿಂದ ಪಠ್ಯವನ್ನೂ, ಸಾಮವೇದದಿಂದ ಗೀತವನ್ನೂ, ಯಜುರ್ವೇದದಿಂದ ಅಭಿನಯವನ್ನೂ ಹಾಗೂ ಅಥರ್ವಣವೇದದಿಂದ ರಸಗಳನ್ನೂ ಆಯ್ದುಕೊಂಡು ನಾಟ್ಯವೇದವೆಂಬ ಐದನೆಯ ವೇದವೊಂದನ್ನು ರಚಿಸಿ, ತಮ್ಮ ಮಗನಾದ ಭರತನಿಗೆ ನೀಡುತ್ತಾರಂತೆ.
ಇದಕ್ಕೆ ಶಾಸ್ತ್ರ ರೂಪ ನೀಡಿದ ಭರತ ಈ ವಿದ್ಯೆಯನ್ನು ಗಂಧರ್ವ, ಅಪ್ಸರೆಯರಿಗೂ ಹೇಳಿಕೊಡುತ್ತಾನೆ. ಈ ವಿದ್ಯೆಯನ್ನು ಸಾಕ್ಷಾತ್ ಈಶ್ವರ ದೇವರ ಮುಂದೆ ನರ್ತಿಸಿದಾಗ ಸ್ವಯಂ ನಟರಾಜ ಎನಿಸಿದ ಶಿವ ಸಂತೃಪ್ತಿಗೊಂಡು ಈ ವಿಶಿಷ್ಠ ಕಲೆಯನ್ನು ತನ್ನ ಗಣಗಳಿಗೆ ಬೋಧಿಸುವಂತೆ ಸೂಚಿಸುತ್ತಾರೆ.
ಪಾರ್ವತಿ ದೇವಿಯು ಭರತನಿಗೆ ಲಾಸ್ಯ ನೃತ್ಯವನ್ನು ಹೇಳುತ್ತಾರೆ. ಶಿವನ ತಾಂಡವ ಗಂಡು ನೃತ್ಯ, ಪಾರ್ವತಿಯ ಲಾಸ್ಯ ಹೆಣ್ಣು ನೃತ್ಯ. ಅನಂತರ ಪಾರ್ವತಿ ದೇವಿಯು ಈ ಲಾಸ್ಯ ನೃತ್ಯವನ್ನು ಬಾಣಾಸುರನ ಮಗಳಾದ ಉಷೆಗೆ ಹೇಳಿದರು. ಇದೇ ನೃತ್ಯ ಶಾಸ್ತ್ರ ಸನಾತನ ನೆಲವಾದ ಭಾರತದಲ್ಲಿ ಭರತನಾಟ್ಯವೆಂದು ಪ್ರಸಿದ್ದಿ ಪಡೆದಿದೆ ಎಂಬುದೊಂದು ಸುಂದರ ಕಥೆಯಿದೆ.
ಇಂತಿಪ್ಪ ಕಥೆಗಳ ಮೂಲಕ ದೇವಾನುದೇವತೆಗಳಿಂದ ವರವಾಗಿ ಬಂದಿರುವ ಈ ಅತಿ ಪ್ರಾಚೀನ ಕಲೆ ಭರತನಾಟ್ಯ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ #Karnataka ಹಾಗೂ ತಮಿಳುನಾಡಿನಲ್ಲಿ #Tamilnadu ಅತ್ಯಂತ ಹೆಚ್ಚು ಪ್ರಚಲಿತದಲ್ಲಿದೆ. ನಮ್ಮ ರಾಜ್ಯದ ಮಟ್ಟಿಗೆ ನೋಡುವುದಾದರೆ ದಶಕಗಳ ಕಾಲ ಭರತನಾಟ್ಯ ಕಲಿತು, ಈ ಶಾಸ್ತ್ರವನ್ನೇ ತಮ್ಮ ಉಸಿರಾಗಿಸಿಕೊಂಡು, ಸಾವಿರಾರು ವಿದ್ಯಾರ್ಥಿಗಳಿಗೆ ಕಲಿಸುತ್ತಾ ಸಾಕ್ಷಾತ್ ನಟರಾಜನಂತೆ ಪ್ರಜ್ವಲಿಸುತ್ತಿರುವ ಸಾಧಕ, ಹಿರಿಯ ಭರತನಾಟ್ಯ ಕಲಾವಿದ, ನೃತ್ಯ ಸಂಯೋಜಕ, ನೃತ್ಯ ಗುರುಗಳಾದ ದಕ್ಷಿಣ ಕನ್ನಡ #DakshinaKannada ಜಿಲ್ಲೆಯ ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್.
ವಿದ್ವಾನ್ ದೀಪಕ್ ಕುಮಾರ್ ಕುರಿತು…
ಕಲಾ ಕ್ಷೇತ್ರದಲ್ಲಿ ಅದರಲ್ಲೂ ಭರತನಾಟ್ಯದಲ್ಲಿ #Bharatanatya ರಾಜ್ಯದಲ್ಲೇ ಪ್ರಸಿದ್ಧಿ ಪಡೆದ ವಿದ್ವಾನ್ ದೀಪಕ್ ಕುಮಾರ್ ಅವರು ತಮ್ಮ ಇಡೀ ಜೀವನವನ್ನೇ ಭರತನಾಟ್ಯದ ಮೂಲಕ ಕಲಾಸರಸ್ವತಿಯ ಸೇವೆಗಾಗಿ ಮುಡಿಪಾಗಿಟ್ಟ ಕಲಾವಿದರು.
ಬ್ಯಾಂಕ್ ಉದ್ಯೋಗಿಯಾಗಿದ್ದ ದಿ.ಭವಾನಿ ಶಂಕರ್ ಹಾಗೂ ಶ್ರೀಮತಿ ಶಶಿಪ್ರಭ ದಂಪತಿಯ ಪುತ್ರರಾದ ದೀಪಕ್ ಕುಮಾರ್ ಅವರಿಗೆ ಬಾಲ್ಯದಿಂದಲೇ ಶಾಸ್ತ್ರೀಯ ನೃತ್ಯಗಳಲ್ಲಿ ವಿಶೇಷವಾದ ಆಸಕ್ತಿ ಹಾಗೂ ಸೆಳೆತವಿತ್ತು.
ವಿಶೇಷ ಎಂದರೆ, ದೀಪಕ್ ಕುಮಾರ್ #VidwanDeepakKumar ಅವರ ಕುಟುಂಬಕ್ಕೆ ಯಾವುದೇ ನೃತ್ಯದ ಹಿನ್ನೆಲೆ ಇರಲಿಲ್ಲ. ಆದರೆ, ಇವರ ತಂದೆ ತಾಯಿಯರಿಗೆ ಭರತನಾಟ್ಯದ ಕುರಿತಾಗಿ ಆಸಕ್ತಿ ಹಾಗೂ ಗೌರವ ಇತ್ತು. ಇದೇ ದೀಪಕ್ ಅವರಿಗೆ ದಾರಿದೀಪವಾಯಿತು.
ಆಗ ಇವರು ಕುಟುಂಬ ಕೊಡಗಿನಲ್ಲಿ ವಾಸವಿದ್ದ ಕಾಲಘಟ್ಟ. ತಮ್ಮ ಮಗನ ಆಸಕ್ತಿಯನ್ನು ಗಮನಿಸಿದ ತಾಯಿಯವರು ಮಡಿಕೇರಿಯ ಖ್ಯಾತ ಭರತನಾಟ್ಯ ಗುರುಗಳಾದ ಅಂಬಳೆ ರಾಜೇಶ್ವರಿ ಅವರ ಬಳಿ ಸೇರಿಸುತ್ತಾರೆ. ಅಲ್ಲಿಂದ ಅತೀವ ಆಸಕ್ತಿ ಹಾಗೂ ಶ್ರದ್ಧೆಯಿಂದ ಕಲಿಯಲು ಆರಂಭಿಸಿದ ಇವರು ಭರತನಾಟ್ಯದ ಜೂನಿಯರ್ ಹಾಗೂ ಸೀನಿಯರ್ ಪರೀಕ್ಷೆಗಳನ್ನು ಪೂರೈಸುತ್ತಾರೆ.
ನಂತರ ಭರತನಾಟ್ಯದ ಉನ್ನತ ಅಭ್ಯಾಸಕ್ಕಾಗಿ ರಾಜ್ಯದಲ್ಲೇ ದೊಡ್ಡ ಹೆಸರು ಗಳಿಸಿದ ಬೆಂಗಳೂರಿನ #Bengaluru ಪ್ರಖ್ಯಾತ ಗುರು ನರ್ಮದಾ ಅವರಲ್ಲಿ ಅಭ್ಯಾಸ ಮುಂದುವರೆಸುತ್ತಾರೆ. ಅವರ ಮಾರ್ಗದರ್ಶನದಲ್ಲೇ ಭರತನಾಟ್ಯದ ವಿದ್ವತ್ ಪರೀಕ್ಷೆಯನ್ನೂ ಸಹ ತೇರ್ಗಡೆ ಹೊಂದಿ, 1996ರಲ್ಲಿ ರಂಗ ಪ್ರವೇಶ ಮಾಡುತ್ತಾರೆ.
ಶ್ರೀಮತಿ ನರ್ಮದಾ (ತಂಜಾವೂರು ಶೈಲಿ) ಅವರ ಬಳಿ ಮಾತ್ರವಲ್ಲದೇ ಶ್ರೀ ಉಳ್ಳಾಲ್ ಮೋಹನ್ ಕುಮಾರ್ (ಪಂದನಲ್ಲೂರು ಶೈಲಿ) ಅವರಲ್ಲಿ ಸಮಗ್ರ ತರಬೇತಿ ಪಡೆದಿದ್ದಾರೆ. ಮಾತ್ರವಲ್ಲದೇ, ಸಾವಿತ್ರಿ ಜಗನ್ನಾಥನ್, ಪ್ರಿಯದರ್ಶಿನಿ ಗೋವಿಂದ್, ಸಿ.ವಿ. ಚಂದ್ರಶೇಖರ್ ಮತ್ತು ಪದ್ಮಶ್ರೀ ಅಡೆಯರ್ ಕೆ. ಲಕ್ಷ್ಮಣ್ ಮುಂತಾದ ಗಣ್ಯರ ಕಾರ್ಯಾಗಾರಗಳಿಂದ ತಮ್ಮ ಕಲೆಯನ್ನು ಮತ್ತಷ್ಟು ಗಾಢಗೊಳಿಸಿದ್ದಾರೆ. ಕೂಚುಪುಡಿಯನ್ನು ಶ್ರೀಮತಿ ವೀಣಾ ಮೂರ್ತಿ ವಿಜಯ್ ಮತ್ತು ಸಂಧ್ಯಾರಾಣಿ ಅವರ ಬಳಿ ಅಭ್ಯಾಸ ಮಾಡಿದ್ದಾರೆ.
ಶಿಕ್ಷಣದಲ್ಲೂ ಸಹ ಎತ್ತಿದ ಕೈ
ಆಧುನಿಕ ಶಿಕ್ಷಣದ ವಿಚಾರದಲ್ಲಿ ನೋಡುವುದಾದರೆ ಬಿಕಾಂ ಮುಗಿಸಿದ ದೀಪಕ್ ಕುಮಾರ್ ಅವರು, ಮಂಗಳೂರು ವಿಶ್ವವಿದ್ಯಾಲಯದಿಂದ ಎಂಕಾಂ, ಬೆಂಗಳೂರು ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಇನ್ ಕೊರಿಯಾಗ್ರಫಿ ಸಹ ಪಡೆದಿದ್ದಾರೆ.
ಅಲ್ಲದೇ, ತಿರುಚನಾಪಲ್ಲಿಯ ಭಾರತಿದಾಸನ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂಎಫ್’ಎ/ಎಂಎ ಇನ್ ಭರಟನಾಟ್ಯ ಪದವಿ ಪಡೆದಿದ್ದಾರೆ. ಭರತನಾಟ್ಯದಲ್ಲಿ ಕೇಂದ್ರ ಸರ್ಕಾರ ನೀಡುವ ಸಿಸಿಆರ್’ಟಿ ಎಂಬ ರಾಷ್ಟ್ರ ಮಟ್ಟದ ಶಿಷ್ಯವೇತನವನ್ನು ಪಡೆದಿದ್ದಾರೆ.
ಇದರೊಟ್ಟಿಗೆ ಸಂಗೀತದಲ್ಲೂ ಸಹ ಸೀನಿಯರ್ ಪರೀಕ್ಷೆ ತೇರ್ಗಡೆ ಹೊಂದಿರುವುದು ವಿಶೇಷ.
ಎ ಗ್ರೇಡ್ ಕಲಾವಿದ
ದೀಪಕ್ ಕುಮಾರ್ ಅವರು ಭರತನಾಟ್ಯದಲ್ಲಿ ದೂರದರ್ಶನದಲ್ಲಿ ಎ ಗ್ರೇಡ್ ಕಲಾವಿದರಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಎ ಗ್ರೇಡ್ ಪಡೆದ ಕಲಾವಿದ ಎಂಬ ಗರಿಯೂ ಸಹ ಇವರ ಕಿರೀಟಕ್ಕೇರಿದೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲೂ ಸೇವೆ
ಮೂಡಬಿದರೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಿರಂತರವಾಗಿ 18-20 ವರ್ಷಗಳಿಂದ ವಿಶೇಷ ಭರತನಾಟ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮಗಳು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿವೆ. ಇದರಲ್ಲಿಯೂ ದೀಪಕ್ ಕುಮಾರ್ ಅವರ ಕೊಡುಗೆಯಿದೆ ಎನ್ನುವುದು ವಿಶೇಷ. ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಭರತನಾಟ್ಯದ ನವದುರ್ಗ, ಅಷ್ಟಲಕ್ಷ್ಮಿ, ಭೋ ಶಂಭೋ, ನವಗ್ರಹ ಹೀಗೆ ಹಲವು ಜನಪ್ರಿಯ ನೃತ್ಯ ಸಂಯೋಜನೆಗಳನ್ನು ಮಾಡಿದ್ದು, ಇವುಗಳು ಯಶಸ್ವಿಯಾಗಿ ನೂರಾರು ಪ್ರದರ್ಶನ ಕಂಡಿವೆ.
ಬಹುಮುಖ ಪ್ರತಿಭೆ
ನಿಪುಣ ಚಿತ್ರಕಾರ, ಪಕ್ಕಾ ನಟ್ಟುವನಾರ ಹಾಗೂ ಬಹುಮುಖ ಸೃಜನಶೀಲ ಕಲಾವಿದರಾಗಿರುವ ದೀಪಕ್ ಕುಮಾರ್, ಭಾರತೀಯ ನೃತ್ಯ ಪರಂಪರೆಯ ಸಮರ್ಪಿತ ಸಂರಕ್ಷಕರೂ, ಅನುಭಾವಿಕ ಸಾಂಸ್ಕೃತಿಕ ರಾಯಭಾರಿಗಳೂ ಆಗಿದ್ದಾರೆ.
ಕುಟುಂಬದ ಸಹಕಾರ
ಯಾವುದೇ ರೀತಿಯಲ್ಲೂ ಶಾಸ್ತ್ರೀಯ ನೃತ್ಯದ ಹಿನ್ನೆಲೆಯಿಲ್ಲದ ಕುಟುಂಬವಾದರೂ ದೀಪಕ್ ಕುಮಾರ್ ಅವರಿಗೆ ಅವರ ಪೋಷಕರು ಬಾಲ್ಯದಿಂದಲೇ ಸಹಕಾರ, ಪ್ರೇರಣೆ ನೀಡುತ್ತಿದ್ದರು.
ಇವರ ಭರತನಾಟ್ಯ ಕಲಿಕೆ, ಅಭ್ಯಾಸ ಸೇರಿದಂತೆ ಪ್ರತಿಯೊಂದು ಹೆಜ್ಜೆಯಲ್ಲೂ ಸಹ ಇವರ ತಾಯಿ ಶ್ರೀಮತಿ ಶಶಿಪ್ರಭ ಶಕ್ತಿಯಾಗಿ ನಿಂತಿದ್ದಾರೆ.
ಅದೇ ರೀತಿಯಲ್ಲಿ ದೀಪಕ್ ಅವರ ಧರ್ಮಪತ್ನಿ ವಿದುಷಿ ಪ್ರೀತಿಕಲಾ ಅವರೂ ಸಹ ಭರತನಾಟ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದುಷಿಯಾಗಿದ್ದು, ಪತಿಯ ಸಾಧನೆಯ ಹಾದಿಯ ಪ್ರತಿಯೊಂದು ಹೆಜ್ಜೆಗೂ ಸಹ ಹೆಜ್ಜೆ ಹಾಕುವ ಮೂಲಕ ಸಪ್ತಪದಿಯ ಅರ್ಥವನ್ನು ಸಾಕಾರಗೊಳಿಸಿದ್ದಾರೆ.
ಇದೇ ರೀತಿಯಲ್ಲಿ ಕಲಾ ಸರಸ್ವತಿಯ ಸೇವಾ ಕಾರ್ಯದ ಪ್ರತಿ ಹಂತದಲ್ಲೂ ದೀಪಕ್ ಅವರ ಕಿರಿಯ ಸಹೋದರ ವಿದ್ವಾನ್ ಗಿರೀಶ್ ಕುಮಾರ್ ಅವರು ಬೆನ್ನೆಲುಬಾಗಿ ಸಹಕಾರ ನೀಡುತ್ತಿದ್ದಾರೆ.
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ
ತಾವು ಕಲಿತ ವಿದ್ಯೆಯನ್ನು ಆಸಕ್ತ ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು ಎಂಬ ಸುದುದ್ದೇಶದಿಂದ ಇವರು ಸ್ಥಾಪಿಸಿ, ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಸಂಸ್ಥೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ. #ShreeMookambikaCulturalAcademy
ನರ್ತನಾವರ್ತನ ಎಂಬ ರಾಷ್ಟ್ರ ಮಟ್ಟದ ನೃತ್ಯೋತ್ಸವದ ಮೂಲಕ ಅಂತಾರಾಷ್ಟ್ರೀಯ ಕಲಾವಿದರನ್ನು ಪುತ್ತೂರಿಗೆ ಪರಿಚಯಿಸುತ್ತಿದ್ದೇವೆ. ಹಾಗೆಯೇ Nrithyothkrama ಎಂಬ ಮತ್ತೊಂದು ಉತ್ಸವದ ಮೂಲಕ ಅನೇಕ ವಿಶೇಷ ಪ್ರಯೋಗಗಳನ್ನು ಮಾಡುತ್ತಿದ್ದೇವೆ. ಈ ನಮ್ಮ ಕಲೆಯ ಕೈಂಕರ್ಯಕ್ಕೆ ಸರ್ವ ಕಲಾಸಕ್ತರ ತನು ಮನ ಧನದ ಸಹಕಾರ ಸದಾ ಇರಲಿ.
-ವಿದ್ವಾನ್ ದೀಪಕ್ ಕುಮಾರ್
ಪುತ್ತೂರಿನಲ್ಲಿ ಸುಮಾರು 30 ವರ್ಷಗಳಿಂದ ಈ ಅಕಾಡೆಮಿಯ ಮೂಲಕ ಸಾವಿರಾರು ಕಲಾವಿದರನ್ನು ರೂಪಿಸಿ, ಕಲಾ ಕ್ಷೇತ್ರಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವರ ಬಳಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಹ ತಮ್ಮ ಛಾಪು ಮೂಡಿಸಿದ್ದಾರೆ.
ನಮ್ಮಲ್ಲಿ ನಿರಂತರ ಕಲೆಯ ಪ್ರಸಾರವಾಗಬೇಕು. ಜನರಿಗೆ ಕಲೆಯ ನಿಜವಾದ ಪರಿಚಯವಾಗಬೇಕು ಎಂಬ ಆಶಯದೊಂದಿಗೆ `ನೃತ್ಯಂ ತರಂಗ’ ಎಂಬ ವಿಶೇಷ ಸರಣಿ ಕಾರ್ಯಕ್ರಮ ನಡೆಸಿ, ಆ ಮೂಲಕ ಪುಟಾಣಿ ಮಕ್ಕಳು, ಪ್ರಬುದ್ಧ, ಉದಯೋನ್ಮುಖ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಕಲಾವಿದರು ಹೀಗೆ ಬೇರೆ ಬೇರೆ ರೀತಿಯ ಕಲಾವಿದರನ್ನು ನಮ್ಮ ಪುತ್ತೂರಿನ ಜನತೆಗೆ ಪರಿಚಯಿಸಿ ಕಲೆಯ ರಸ ದೌತಣ ನೀಡುತ್ತಿದ್ದಾರೆ.
ನವ್ಯ ನವೀನ ಚಿಂತನೆಯ ನೃತ್ಯ ಸಂಯೋಜಕ
ಆರಂಭದಲ್ಲೇ ಹೇಳಿದಂತೆ ಭರತನಾಟ್ಯವನ್ನೇ ತಮ್ಮ ಉಸಿರಾಗಿಸಿಕೊಂಡಿರುವ ವಿದ್ವಾನ್ ದೀಪಕ್ ಕುಮಾರ್ ಅವರು ಅತ್ಯಂತ ನವ್ಯ ಚಿಂತನೆಯ, ಶ್ರೇಷ್ಠ ನೃತ್ಯ ಸಂಯೋಜಕರು.
ಇವರು ಸಂಯೋಜಿಸಿರುವ ರಾಮಾಯಣ, ಕೃಷ್ಣಲೀಲೆ, ದೇವಿ ಮಹಾತ್ಮೆ, ಪವನ ಗಂಗಾ, ಅಜೇಯ ಬಾಹುಬಲಿ, ಜೈನ ಪಂಚಕಲ್ಯಾಣ, ನವವಿಧ ಭಕ್ತಿ, ಯೇಸು ಜನನ, ಅಷ್ಟಲಕ್ಷ್ಮೀ ಸೇರಿದಂತೆ ಹಲವಾರು ಪ್ರಶಂಸಿತ ನೃತ್ಯನಾಟಕಗಳನ್ನು ರಚಿಸಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕೆ ಇವರ ಪ್ರಮುಖ ಸೃಜನಾ ಶಿಖರವಾಗಿ ವಿಶೇಷ ಪ್ರಶಂಸೆಯನ್ನು ಪಡೆದಿದೆ.
ಮೂಡಬಿದರೆಯ ಅಳ್ವಾಸ್ ಎಜುಕೇಶನ್ ಫೌಂಡೇಶನ್’ನಲ್ಲಿ ಹಿರಿಯ ಅಧ್ಯಾಪಕರಾಗಿರುವ ಇವರು ವಿಶ್ವ, ಅಷ್ಟದಿಗ್ಪಾಲಕ, ಪಂಚಾನನ, ನವಗ್ರಹ ಮತ್ತು ನವದುರ್ಗೆ ಸೇರಿದಂತೆ ಅನೇಕರ ಮೆಚ್ಚುಗೆ ಪಡೆದ ಮಹತ್ವದ ನೃತ್ಯ ಪ್ರದರ್ಶನಗಳನ್ನು ರೂಪಿಸಿದ್ದು, ಇವುಗಳಲ್ಲಿ ನೂರಾರು ಪ್ರದರ್ಶನಗಳನ್ನು ಕಂಡಿವೆ.
ದೀಪಕ್ ಅವರ ಮನೆ, ಮನ ಅಲಂಕರಿಸಿದ ಪ್ರಶಸ್ತಿಗಳು
- ಪ್ರತಿಭಾ ದೀಪ (1992) – ಸುದ್ದಿ ಬಿಡುಗಡೆ
- ರಂಗ ಸುರಭಿ (1993) – ರಂಗ ಸುರಭಿ ಸಾಂಸ್ಕೃತಿಕ ಸಂಸ್ಥೆ, ಬೆಂಗಳೂರು
- ಔಟ್ ಸ್ಟಾಂಡಿಂಗ್ ಯಂಗ್ ಪರ್ಸನ್ ಅವಾರ್ಡ್ (1997) – ಮಂಗಳೂರು ಜೂನಿಯರ್ ಚೇಂಬರ್
- TOYI ಅವಾರ್ಡ್ (1997) – ಇಂಡಿಯನ್ ಜೂನಿಯರ್ ಚೇಂಬರ್, ವಲಯ XV
- ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ (1998) – ಪರ್ಯಾಯ ಶ್ರೀ ಕೃಷ್ಣ ಮಠ, ಉಡುಪಿ
- ಆರ್ಯಭಟ ಪ್ರಶಸ್ತಿ (1999) – ಆರ್ಯಭಟ ಸಾಂಸ್ಕೃತಿಕ ಸಂಸ್ಥೆ, ಬೆಂಗಳೂರು
- ಸೌರಭ ಪ್ರತಿಭಾ ಪ್ರಶಸ್ತಿ (2000) – ಸುಮಾ ಸೌರಭ
- ವಿಶ್ವೇಶ್ವರಯ್ಯ ಯುವ ಪ್ರಶಸ್ತಿ (2001) – ಡಾ.ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನ, ಬೆಂಗಳೂರು
- ರಾಷ್ಟ್ರೀಯ ರತ್ನ ಪ್ರಶಸ್ತಿ (2002) – ಗ್ಲೋಬಲ್ ಎಕನಾಮಿಕ್ ಕೌನ್ಸಿಲ್, ನವದೆಹಲಿ
- ಡಾ. ರಾಜಕುಮಾರ್ ರಾಜ್ಯೋತ್ಸವ ಪ್ರಶಸ್ತಿ (2007) – ಡಾ. ರಾಜಕುಮಾರ್ ಇಂಟರ್’ನ್ಯಾಷನಲ್ ಫೌಂಡೇಶನ್

ರಂಗ ಪ್ರವೇಶಕ್ಕೆ 30 ವರ್ಷ | ಐತಿಹಾಸಿಕ ಕಾಯಕ್ರಮ
ವಿದ್ವಾನ್ ದೀಪಕ್ ಕುಮಾರ್ ಅವರು ಪಿಯುಸಿ ಓದುತ್ತಿದ್ದ ಕಾಲ. ಭರತನಾಟ್ಯದ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಇವರು 1996ರಲ್ಲಿ ರಂಗ ಪ್ರವೇಶ ಮಾಡಿದ್ದರು. ಮಂಗಳೂರಿನ ಪುರಭವನದಲ್ಲಿ ಅಂದು ನಡೆದಿದ್ದ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಪ್ರಖ್ಯಾತ ನೃತ್ಯ ಗುರುಗಳು ಪಾಲ್ಗೊಂಡು, ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದ್ದರು.
ದೀಪಕ್ ಕುಮಾರ್ ಅವರು ಭರತನಾಟ್ಯ ರಂಗ ಪ್ರವೇಶ ಮಾಡಿ 30 ವರ್ಷ ಸಲ್ಲುತ್ತಿರುವ ಹಿನ್ನೆಲೆಯಲ್ಲಿ ಮೂರು ದಶಕದ ಹಿಂದೆ ನಡೆದ ಕಾರ್ಯಕ್ರಮದ ಮರುಸೃಷ್ಠಿ ಈಗ ಮತ್ತೆ ನಡೆಯಲಿದೆ.

ಜ.11ರ ಆದಿತ್ಯವಾರ ಪುತ್ತೂರು ತೆಂಕಿಲದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಸಂಜೆ 5 ಗಂಟೆಯಿಂದ `ನೃತ್ಯೋತ್ಕ್ರಮಣ` ಎಂಬ ಶೀರ್ಷಿಕೆಯಡಿಯಲ್ಲಿ ರಂಗಪ್ರವೇಶ ಸ್ಮೃತಿ ಸಂಧ್ಯಾ ವಿಶೇಷ ಕಾರ್ಯಕ್ರಮ ನಡೆಯಲಿದೆ. ಇಂತಹ ಕಾರ್ಯಕ್ರಮ ಬಹುತೇಕ ರಾಜ್ಯದಲ್ಲೇ ಪ್ರಥಮ ಎನ್ನಬಹುದಾಗಿದೆ.
ಪುತ್ತೂರಿನಲ್ಲಿ ನಡೆಯುತ್ತಿರುವ ಅಪರೂಪದ ಈ ವಿಭಿನ್ನ ಪ್ರಯತ್ನದ ಕಾರ್ಯಕ್ರಮಕ್ಕೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಾಕ್ಷಿಯಾಗಬೇಕು ಎಂದು ಕೋರಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















