ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹೊಸಪೇಟೆ: ಸಚಿವ ಆನಂದ್ ಸಿಂಗ್ ಅವರ ಬಹು ದಿನದ ಬೇಡಿಕೆ ಕೊನೆಗೂ ಈಡೇರಿದೆ. ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಲಾಗಿದೆ.
ಹೊಸದಾಗಿ ವಿಜಯನಗರ ಜಿಲ್ಲೆ ಸ್ಥಾಪನೆಗೆ ಇಂದು ರಾಜ್ಯ ಸಚಿವ ಸಂಪುಟದಲ್ಲಿ ಅಧಿಕೃತವಾಗಿ ಅನುಮೋದನೆ ಪಡೆದುಕೊಂಡ ಬಳಿಕ ಸಚಿವ ಸಂಪುಟದ ಮುಂದೆ ವಿಜಯನಗರ 31ನೆಯ ಜಿಲ್ಲೆ ಎಂದು ಸಚಿವ ಮಾಧುಸ್ವಾಮಿ ಅವರು ಘೋಷಣೆ ಮಾಡಿದ್ದಾರೆ.
ಈ ಮೂಲಕ ಸಚಿವ ಆನಂದ್ ಸಿಂಗ್ ಅವರ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದೆ. ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ವಿಜಯನಗರ ಜಿಲ್ಲೆ ರಚನೆ, ರೂಪುರೇಷೆಗಳ ಬಗ್ಗೆ ಚರ್ಚಿಸಲಾಗಿತ್ತು. ಈ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದ್ದು, ಇದೀಗ ವಿಜಯನಗರ ನೂತನ ಜಿಲ್ಲೆಯಾಗಲಿದೆ.
ರೈತರಿಗೆ, ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಜನಸಾಮಾನ್ಯರೆಲ್ಲರಿಗೂ ತಮ್ಮ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರ ತಲುಪುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟಕರವಾಗಿತ್ತು. ಸುಮಾರು 200 ಕಿಮೀ ದೂರ ಕ್ರಮಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಬೇಡಿಕೆಗೆಯನ್ನು ಮನ್ನಿಸಿ ಹೊಸ ಜಿಲ್ಲೆ ಉದಯಕ್ಕೆ ನಾಂದಿ ಹಾಡಿದೆ.
\ನೂತನ ಜಿಲ್ಲೆಯ ಗಡಿಗಳ ರೂಪುರೇಷೆಗೆ ಸಚಿವ ಸಂಪುಟದಲ್ಲಿ ಸಮ್ಮತಿ ಸಿಕ್ಕಿದೆ. ಬಳ್ಳಾರಿ ಜಿಲ್ಲೆಯಿಂದ ವಿಭಜಿಸಿ ಹೊಸ ಜಿಲ್ಲೆ ರೂಪುಗೊಂಡಿದೆ. ನೂತನ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ಜಿಲ್ಲಾ ಕೇಂದ್ರವಾಗಿರಲಿದ್ದು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನ ಹಡಗಲಿ ತಾಲೂಕುಗಳು ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತವೆ.
ಬಳ್ಳಾರಿ 11 ಕಂದಾಯ ತಾಲೂಕು, 3 ಕಂದಾಯ ಉಪ ವಿಭಾಗಗಳನ್ನು ಹೊಂದಿರುವ ದೊಡ್ಡ ಜಿಲ್ಲೆಯಾಗಿತ್ತು. ಈಗ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಸಂಡೂರು ಹಾಗೂ ಕಂಪ್ಲಿ ತಾಲೂಕು ಉಳಿಸಿಕೊಳ್ಳಲಾಗುತ್ತದೆ.
ವಿಜಯನಗರ ಜಿಲ್ಲೆ ಬಳ್ಳಾರಿಯಿಂದ ಬೇರ್ಪಡುವುದರಿಂದ ಸವಲತ್ತು ಸಿಗಲಿದೆ ಎನ್ನುವುದು ಜನರ ಆಸೆ. ಆದರೆ, ಸಂವಿಧಾನ ತಿದ್ದುಪಡಿಯಾಗದ ಹೊರತು ಸವಲತ್ತು ತಕ್ಷಣ ಕಷ್ಟಕರ. ಆದರೂ ಬಳ್ಳಾರಿ ಜಿಲ್ಲೆ ವಿಭಜನೆಯಾಗಿದ್ದು, ಬೇಕಾದ ಸವಲತ್ತುಗಳು ಮುಂದೆ ಸಿಗುತ್ತವೆ ಎಂಬುದು ಜನರ ನಂಬಿಕೆ.
ಅಂತಿಮವಾಗಿ ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಉಳಿಸಿಕೊಂಡು ಜನರ ವಿಜಯನಗರ ಕ್ಷೇತ್ರದ ಜನರಲ್ಲಿ ನಂಬಿಕೆ ಉಳಿಸಿಕೊಂಡು ನುಡಿದಂತೆ ನಡೆದ ಮುಖ್ಯಮಂತ್ರಿಯಾಗಿದ್ದಾರೆ.
(ವರದಿ: ಮುರುಳೀಧರ್ ನಾಡಿಗೇರ್, ಹೊಸಪೇಟೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post