ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಲೋಕೋಗೆ ಸಂಬಂಧಿಸಿದ ತಾಂತ್ರಿಕ ದೋಷದಿಂದಾಗಿ ವಿಜಯಪುರ–ಯಶವಂತಪುರ (16548) ರೈಲು ಮಾರ್ಗಮಧ್ಯದಲ್ಲಿ ಕೆಲಕಾಲ ಸ್ಥಗಿತಗೊಂಡು, ಸುಮಾರು ಮೂರು ಗಂಟೆಗಳ ಕಾಲ ವಿಳಂಬಗೊಂಡಿದೆ ಎಂದು ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ ಸ್ಪಷ್ಟಪಡಿಸಿದೆ.
ವಿಜಯಪುರದಿಂದ ಹೊರಟಿದ್ದ ರೈಲು ಮಾರ್ಗಮಧ್ಯದಲ್ಲಿ ಲೋಕೋಗೆ ತಾಂತ್ರಿಕ ದೋಷ ಉಂಟಾದ ಹಿನ್ನೆಲೆಯಲ್ಲಿ ರೈಲಿನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ತಾಂತ್ರಿಕ ದೋಷ ಗಮನಕ್ಕೆ ಬರುತ್ತಿದ್ದಂತೆಯೇ ರೈಲ್ವೆ ಇಲಾಖೆ ತ್ವರಿತವಾಗಿ ಕ್ರಮ ಕೈಗೊಂಡು, ಪರ್ಯಾಯ ಲೋಕೋ ವ್ಯವಸ್ಥೆ ಮಾಡಿದೆ. ಬಳಿಕ ರೈಲಿನ ಸಂಚಾರವನ್ನು ಪುನರಾರಂಭಿಸಲಾಯಿತು.
ರೈಲು ವಿಳಂಬದಿಂದ ಬೆಂಗಳೂರಿನಲ್ಲಿ ನಡೆಯಲಿದ್ದ **CAR ಹಾಗೂ DAR ಪರೀಕ್ಷೆಗಳಿಗೆ** ತೆರಳುತ್ತಿದ್ದ ಕೆಲವು ಪರೀಕ್ಷಾರ್ಥಿಗಳಲ್ಲಿ ಆತಂಕ ಉಂಟಾಗಿತ್ತು. ಪರೀಕ್ಷಾರ್ಥಿಗಳ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ರೈಲಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಾಧ್ಯವಾದಷ್ಟು ಬೇಗ ಗಮ್ಯಸ್ಥಾನ ತಲುಪುವಂತೆ ರೈಲಿನ ಸಂಚಾರವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಕಲ್ಲು ತೂರಾಟದ ವರದಿ ಇಲ್ಲ
ಇದೇ ವೇಳೆ, ರೈಲು ಐದು ಗಂಟೆಗಳಷ್ಟು ವಿಳಂಬವಾಗಿದೆ ಹಾಗೂ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಆದರೆ, **ರೈಲು ತಾಂತ್ರಿಕ ದೋಷದಿಂದಾಗಿ ಸುಮಾರು ಮೂರು ಗಂಟೆಗಳಷ್ಟು ವಿಳಂಬಗೊಂಡಿದ್ದು, ಕಲ್ಲು ತೂರಾಟ ನಡೆದಿರುವ ಬಗ್ಗೆ ರೈಲ್ವೆ ಸಂರಕ್ಷಣಾ ಪಡೆ (RPF)ಯಿಂದ ಯಾವುದೇ ವರದಿ ಬಂದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹೀಗಾಗಿ, ರೈಲು ವಿಳಂಬಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾಧ್ಯಮಗಳು ಸೂಕ್ತವಾಗಿ ಪರಿಶೀಲಿಸಿದ ಬಳಿಕವೇ ಪ್ರಸಾರ ಮಾಡುವಂತೆ ನೈಋತ್ಯ ರೈಲ್ವೆ ಮನವಿ ಮಾಡಿದೆ.
ವಿಳಂಬದಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ರೈಲ್ವೆ ಇಲಾಖೆ ವಿಷಾದ ವ್ಯಕ್ತಪಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








