ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರದಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿರುವ ವಿಷ್ಣು ಅಳಿಯ ಅನಿರುದ್, ಈ ವಿಚಾರದಲ್ಲಿ 9 ವರ್ಷ ನಾವು ಕಾದಿದ್ದೇವೆ. ಇನ್ನೆಷ್ಟು ವರ್ಷ ಕಾಯಬೇಕು ಎಂದು ಕಿಡಿ ಕಾರಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸ್ಮಾರಕ ನಿರ್ಮಾಣಕ್ಕಾಗಿ 9 ವರ್ಷದಿಂದ ನಿರಂತರವಾಗಿ ಸರ್ಕಾರದ ಬಳಿ ಅಲೆದಾಡುತ್ತಿದ್ದೇವೆ. ಆದರೆ, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯಮಂತ್ರಿಗಳು ಬದಲಾದರೆ ವಿನಾ ಒಂದು ಹೆಜ್ಜೆಯೂ ಸಹ ಮುಂದೆ ಹೋಗಿಲ್ಲ. ಸ್ಮಾರಕ ನಿರ್ಮಾಣಕ್ಕಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಅಭಿಮಾನಿಗಳು ಸಾಕಷ್ಟು ಬಾರಿ ಆಕ್ರೋಶ ವ್ಯಕ್ತಪಡಿದ್ದಾರೆ. ಆದರೆ, ನಮ್ಮ ಮಾವನವರ ಆಶಯದಂತೆ ಶಾಂತ ರೀತಿಯಿಂದಲೇ ನಾವು ಮುಂದುವರೆಯಬೇಕು ಎಂದು ನಾವು ತಡೆದಿದ್ದೇವೆ. ಇನ್ನೂ ವಿಳಂಬವಾಗಿ ಅಭಿಮಾನಿ ಸಿಂಹಗಳು ಕೆರಳಿದರೆ ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಷ್ಣುವರ್ಧನ್ ಅವರ ಸಮಾಧಿ ಅಭಿಮಾನ್ ಸ್ಟುಡಿಯೋದಲ್ಲಿದೆ ಎಂಬ ಕಾರಣಕ್ಕಾಗಿ ಉತ್ತರಹಳ್ಳಿ ಮುಖ್ಯರಸ್ತೆಗೆ ಡಾ.ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ವರ್ಷಗಟ್ಟಲೆ ನಾವು ಅಲೆದಾಡಿ, ಅನಂತ ಕುಮಾರ್ ಅವರ ಮೂಲಕ ಅಂತಿಮವಾಗಿ ಈ ಕಾರ್ಯವಾಯಿತು. ಆದರೆ, ಇದರ ಹೆಸರಿನ ಲಾಭವನ್ನು ಬೇರೆಯವರು ಪಡೆಯುತ್ತಿದ್ದಾರೆ ಎಂದು ಕಿಡಿ ಕಾರಿದ ಅವರು, ಮುಂದೆ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಕೆಲವರು, ಮಾಧ್ಯಮಗಳ ಮುಂದೆ ಹೋಗಿ ನಮ್ಮ ವಿರುದ್ದವೇ ಮಾತನಾಡುತ್ತಾರೆ ಎಂದು ಕಿಡಿ ಕಾರಿದರು.
ಮೈಸೂರನಲ್ಲೇ ವಿಷ್ಣುವಧನ್ ಸ್ಮಾರಕ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿರುವ ಅವರು, ಕಳೆದ ಎರಡು ವರ್ಷಗಳ ಹಿಂದೆ ಮೈಸೂರಿನಲ್ಲಿ ಜಮೀನು ಮಂಜೂರು ಮಾಡಲಾಗಿದೆ. ಅಲ್ಲಿಯೇ ಸ್ಮಾರಕ ನಿರ್ಮಾಣವಾಗಬೇಕು ಎಂದರು.
ನಾನು ಎಚ್.ಡಿ. ಕುಮಾರಸ್ವಾಮಿ ಅವರನ್ನು ವೈಯಕ್ತಿಕವಾಗಿ ಟೀಕಿಸುತ್ತಿಲ್ಲ. ಆದರೆ, ವಿಳಂಬದ ಹಿನ್ನೆಲೆಯಲ್ಲಿ ಸರ್ಕಾರವನ್ನು ಟೀಕಿಸುತ್ತಿದ್ದೇನೆ ಎಂದರು.
Discussion about this post