ಕಲ್ಪ ಮೀಡಿಯಾ ಹೌಸ್ | ಗೋಕರ್ಣ (ಉತ್ತರಕನ್ನಡ) |
ನೀರನ್ನು (Water) ದೇಹಕ್ಕೆ ಅಗತ್ಯವಿದ್ದಾಗ ಕುಡಿಯಬೇಕೇ ಹೊರತು ಮನಸ್ಸಿಗೆ ಬೇಕಾದಾಗ ಕುಡಿಯಬಾರದು. ಅನಗತ್ಯವಾಗಿ ಆಗಾಗ ನೀರು ಕುಡಿಯುವ ಹವ್ಯಾಸ ಸರಿಯಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ (Gokarna) ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆ.17ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ನೀರಿನ ಮಹತ್ವ ಹಾಗೂ ಸೇವನೆಯ ಕುರಿತು ಪ್ರವಚನ ಅನುಗ್ರಹಿಸಿದ ಅವರು, ಜೀವನದಲ್ಲಿ ಯಾವುದೇ ವಸ್ತು ಅತಿಯಾದರೂ ಅಥವಾ ಕಡಿಮೆಯಾದರೂ ಅನರ್ಥಕ್ಕೆ ಕಾರಣವಾಗುತ್ತದೆ. ಅದೇ ರೀತಿ ನೀರಿನ ಸೇವನೆಯಲ್ಲಿಯೂ ಸಮತೋಲನ ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಸೇವಿಸಿದ ಆಹಾರ ಸಮರ್ಪಕವಾಗಿ ಜೀರ್ಣವಾಗದಿರಬಹುದು. ಅತಿಯಾಗಿ ನೀರು ಸೇವಿಸುವುದು ವಿವಿಧ ರೀತಿಯ ಅನಾರೋಗ್ಯಗಳಿಗೆ ಕಾರಣವಾಗುವ ಸಾಧ್ಯತೆಯೂ ಇದೆ. ಅಸಮರ್ಪಕವಾಗಿ ಸೇವಿಸುವ ಔಷಧ ಹಾಗೂ ಆಹಾರದಿಂದ ಅಡ್ಡಪರಿಣಾಮ ಉಂಟಾಗುವಂತೆ, ನೀರನ್ನು ಅಸಮರ್ಪಕವಾಗಿ ಸೇವಿಸಿದರೂ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ದೇಹದ ಅಗತ್ಯಕ್ಕೆ ಅನುಗುಣವಾಗಿ ನೀರನ್ನು ಸಮರ್ಪಕ ಪ್ರಮಾಣದಲ್ಲಿ ಸೇವಿಸಬೇಕು ಎಂದು ಎಚ್ಚರಿಸಿದರು.
ದೇಹ ಕೇಳಿದಷ್ಟು ನೀರು ಸೇವನೆ
ಪ್ರಾಣ ಇರುವ ಪ್ರತಿಯೊಂದು ಜೀವಿಗೂ ನೀರೇ ಪ್ರಾಣವಾಗಿದೆ. ದೇಹ ನೀರನ್ನು ಕೇಳಿದಾಗ ಹಾಗೂ ಎಷ್ಟು ಅಗತ್ಯವಿದೆಯೋ ಅಷ್ಟೇ ಪ್ರಮಾಣದಲ್ಲಿ ನೀರನ್ನು ಸೇವಿಸಬೇಕು ಎಂಬುದು ಆಯುರ್ವೇದದ ಆಚಾರ್ಯರ ಅಭಿಮತವಾಗಿದೆ. ನೀರನ್ನು ದಿನಕ್ಕೆ ಇಷ್ಟೇ ಪ್ರಮಾಣದಲ್ಲಿ ಸೇವಿಸಬೇಕು ಎಂಬ ನಿರ್ದಿಷ್ಟ ಪ್ರಮಾಣ ಆಯುರ್ವೇದದಲ್ಲಿ ಇಲ್ಲ ಎಂದು ಶ್ರೀಗಳು ವಿವರಿಸಿದರು.
ನೀರಿನ ಸೇವನೆಗೆ ಸಂಬಂಧಿಸಿದಂತೆ ಆಧುನಿಕ ವಿಜ್ಞಾನ ಮತ್ತು ಆಯುರ್ವೇದದ ವಿಧಾನಗಳಲ್ಲಿ ವ್ಯತ್ಯಾಸವಿದೆ. ಆಧುನಿಕ ಪದ್ಧತಿಯಲ್ಲಿ ವ್ಯಕ್ತಿಯ ದೇಹದ ತೂಕವನ್ನು ಆಧರಿಸಿ ನೀರಿನ ಪ್ರಮಾಣವನ್ನು ಸೂಚಿಸಲಾಗುತ್ತದೆ. ಆದರೆ ಇದರಲ್ಲಿ ವ್ಯಕ್ತಿಯ ದೇಹ ಪ್ರಕೃತಿ ಹಾಗೂ ಜಠರಾಗ್ನಿಯ ಸಾಮರ್ಥ್ಯವನ್ನು ಪರಿಗಣಿಸಲಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಊಟದ ವೇಳೆ ನೀರು ಸೇವಿಸುವ ಕ್ರಮ
ಊಟಕ್ಕಿಂತ ಮೊದಲು ನೀರು ಸೇವಿಸಿದರೆ ಅಜೀರ್ಣಕ್ಕೆ ಕಾರಣವಾಗಬಹುದು ಹಾಗೂ ಊಟದ ಕೊನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿದರೆ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಊಟದ ಮಧ್ಯೆ ಮಧ್ಯೆ ಸೇವಿಸುವ ನೀರು ದೇಹಕ್ಕೆ ಹಿತಕರ ಎಂಬುದು ಆಯುರ್ವೇದ ಗ್ರಂಥಗಳ ಸಾರವಾಗಿದೆ ಎಂದು ರಾಘವೇಶ್ವರ ಶ್ರೀ ಹೇಳಿದರು.
ನೀರನ್ನು ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ಬದಲು, ಘನ ಆಹಾರವನ್ನು ನಿಧಾನವಾಗಿ ಸೇವಿಸುವ ರೀತಿಯಲ್ಲಿ ನೀರನ್ನೂ ಗುಟುಕು ಗುಟುಕಾಗಿ ನಿಧಾನವಾಗಿ ಕುಡಿಯಬೇಕು. ನೀರು ಸೇವಿಸುವ ಭಂಗಿಯೂ ಮುಖ್ಯವಾಗಿದ್ದು, ಕುಳಿತುಕೊಂಡೇ ನೀರನ್ನು ಸೇವಿಸುವುದು ಸೂಕ್ತ ಎಂದು ತಿಳಿಸಿದರು.
Also read>> ಕರಾವಳಿಯ ತುಳು ಭಾಷೆಗೆ ಬಿಗ್ ಅಪ್‌ಡೇಟ್: 2ನೇ ಅಧಿಕೃತ ಭಾಷೆಯಾಗಿ ಪರಿಗಣಿಸಲು ಸಂಪುಟ ಅಸ್ತು
ಪರಂಪರೆಯ ಪ್ರಕಾರ ನಿಂತು ನೀರು ಕುಡಿಯುವುದರಿಂದ ರಾಜಸ ಗುಣದ ವೃದ್ಧಿಯಾಗುತ್ತದೆ, ಮಲಗಿ ನೀರು ಕುಡಿಯುವುದರಿಂದ ತಮೋ ಗುಣದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸರಿಯಾದ ರೀತಿಯಲ್ಲಿ ಕುಳಿತು ನೀರು ಸೇವಿಸುವುದರಿಂದ ಸತ್ವ ಗುಣದ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ನೀರನ್ನು ಕುಳಿತು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸರಿಯಾದ ರೀತಿಯಲ್ಲಿ ಸೇವಿಸಿದ ನೀರು ಅಮೃತಕ್ಕೆ ಸಮಾನ ಎಂದು ಶ್ರೀಗಳು ತಿಳಿಸಿದರು.
ಯಾವ ಸಂದರ್ಭಗಳಲ್ಲಿ ನೀರು ಕುಡಿಯಬಾರದು?
ದೇಹಕ್ಕೆ ಹಸಿವಾಗಿರುವಾಗ, ಸಿಟ್ಟು ಬಂದಾಗ, ತುಂಬಾ ದಣಿದಿರುವಾಗ, ಅತಿಯಾಗಿ ಭಯಗೊಂಡಿರುವಾಗ ಹಾಗೂ ವ್ಯಾಯಾಮ ಮಾಡಿದ ತಕ್ಷಣ ನೀರನ್ನು ಸೇವಿಸಬಾರದು ಎಂದು ರಾಘವೇಶ್ವರ ಶ್ರೀ ಸಲಹೆ ನೀಡಿದರು.
ಮನಸ್ಸು ಪ್ರಸನ್ನವಾಗಿರುವ ಸಂದರ್ಭದಲ್ಲಿ ನೀರನ್ನು ಸೇವಿಸುವುದು ಸೂಕ್ತ. ದೇಹದ ಅಗತ್ಯವನ್ನು ಅರಿತು, ಸೂಕ್ತ ಸಮಯದಲ್ಲಿ ಹಾಗೂ ಸೂಕ್ತ ರೀತಿಯಲ್ಲಿ ನೀರನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಕೆ.ಟಿ. ಕುಟುಂಬದವರು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ದಿನಪ್ರಧಾನರಾಗಿ ರಾಮಮೂರ್ತಿ ಹೆದ್ಲಿ ದಂಪತಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










