ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಾರ್ಚ್ 2020 ರಿಂದ ಭಾರತಾದ್ಯಂತ ಕೊರೋನಾದ ಆತಂಕ ಹಾವಳಿ ಮರಣ ಮೃದಂಗ ರಣಕೇಕೆ ಎಲ್ಲಾ ವರ್ಗದ ವೃತ್ತಿ ಬದುಕಿನ ಜನ ಅನುಭವಿಸಿದ ಕಷ್ಟ ಹೇಳತೀರದು, ಸತತ ಆರು ತಿಂಗಳ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವಲ್ಲಿ ನಾವು ಖಂಡಿತ ವಿಫಲರಾದೆವು.
ಶಿಕ್ಷಣ ಅತ್ಯಂತ ಪವಿತ್ರವಾದ ಮತ್ತು ಅಮೂಲ್ಯವಾದ ಒಂದು ಶಕ್ತಿ, ಮಕ್ಕಳಿಗೆ ಅದರ ಅವಶ್ಯಕತೆ ಮತ್ತು ಅನಿವಾರ್ಯತೆ ಬಹಳವಿದೆ. ಕೊರೋನಾ ಆರಂಭದಿಂದ ಈ ವಿಚಾರದಲ್ಲಿ ಆದ ಗೊಂದಲಗಳು ಚರ್ಚೆಗಳು ಆರೋಗ್ಯ ಇಲಾಖೆಯಲ್ಲೂ ಆಗಲಿಲ್ಲವೇನೋ? ಶಾಲೆಗೆ ಪ್ರವೇಶ ಪಡೆಯುವುದರಿಂದ ಹಿಡಿದು ಪರೀಕ್ಷೆ ಬರೆಯುವ ತನಕ ಎಲ್ಲವೂ ಗೋಜಲೇ, ಎಲ್ಲದಕ್ಕೂ ಮಾನ್ಯ ಶಿಕ್ಷಣ ಸಚಿವರೇ ಸ್ಪಷ್ಟನೆ ಕೊಡಬೇಕು, ಅಧಿಕಾರಿಗಳು ನಾಪತ್ತೆಯಾಗಿದ್ದರೋ ಅಥವಾ ಅವರಿಗೆ ಅಧಿಕಾರವಿರಲಿಲ್ಲವೋ ಎಂಬುದು ಯಕ್ಷಪ್ರಶ್ನೆ.
ಎಸ್’ಎಸ್’ಎಲ್’ಸಿ ಪರೀಕ್ಷೆ ವಿಚಾರದಲ್ಲಿ ಮಾತ್ರ ಸಚಿವರ ಕಾಳಜಿ ಮತ್ತು ಜವಾಬ್ದಾರಿ ಮೆಚ್ಚುವಂತದ್ದು, ಕೊರೋನಾ ಉತ್ತುಂಗದಲ್ಲಿದ್ದಾಗ ನಿರಾತಂಕವಾಗಿ ಪರೀಕ್ಷೆ ನಡೆಸಿ ಮಾದರಿಯಾದರು. ಆದರೆ ಶಾಲೆ ತೆರೆಯುವ ವಿಚಾರದಲ್ಲಿ ಅಥವಾ ವಿದ್ಯಾಗಮದ ತಾತ್ಕಾಲಿಕ ಸ್ಥಗಿತದ ವಿಚಾರದಲ್ಲಿ ಇಲಾಖೆಯೇ ಖುದ್ದಾಗಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಸಚಿವರ ತಾಳ್ಮೆ ಮತ್ತು ಜಾಣ್ಮೆಯನ್ನು ಪ್ರತಿಹಂತದಲ್ಲೂ ಪರೀಕ್ಷಿಸುವಂತಿದೆ ಈ ವಿಚಾರ.

ಮತ್ತೊಂದಷ್ಟು ಶಾಲೆಗಳು ಕೊರೋನಾ ಅದು ಇದು ಅಂತ ಕಾರಣ ಹೇಳುತ್ತಾ ಶಿಕ್ಷಕರಿಗೆ ಸರಿಯಾಗಿ ಸಂಬಳವನ್ನು ನೀಡದೆ ಅವರ ಬದುಕನ್ನು ಆತಂಕಕ್ಕೆ ದೂಡಿತು. ಸರ್ಕಾರ ಶಿಕ್ಷಕರಿಗೆ ಮಾನವೀಯತೆಯ ಪಾಠಮಾಡಿತು ಸಮಸ್ಯೆ ಬಗೆಹರಿಯಲಿಲ್ಲ. ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆನೋ ಪಾಠ ಪ್ರವಚನ ನಡೆಯಿತು. ಆದರೆ ಸರ್ಕಾರಿ ಶಾಲೆ ಮಕ್ಕಳು, ಗ್ರಾಮೀಣ ಮಕ್ಕಳ ಕಥೆಯೇನು? ಆನ್‌ಲೈನ್ ತರಗತಿಗಳಿಗೆ ಹಳ್ಳಿಮಕ್ಕಳಿಗೆ ಮೊಬೈಲ್ ಸಿಕ್ಕರೂ ನೆಟ್‌ವರ್ಕ್ ಸಿಗಬೇಕಲ್ಲಾ? ಅಪ್ಪಿತಪ್ಪಿ ಮನೆಯೊಳಗೆ ನೆಟ್‌ವರ್ಕ್ ಸಿಕ್ಕರೂ ವೇಗದ ಇಂಟರ್ ನೆಟ್ ಸಿಗುವುದು ಕನಸಿನ ಮಾತು. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಆನ್‌ಲೈನ್ ತರಗತಿಯಲ್ಲಿ ಕಲಿಯುವುದಾದರೂ ಹೇಗೆ? ಒಮ್ಮೆ ಇವೆಲ್ಲಾ ಒದಗಿದರೂ ಮಕ್ಕಳು ಮೇಷ್ಟ್ರ ಬೆತ್ತದ ಏಟಿನ ಭಯವಿಲ್ಲದೆ ಏಕಾಗ್ರತೆಯಿಂದ ಪಾಠ ಕಲಿಯುವುದು ಒಂದು ಸವಾಲಿನ ಪ್ರಶ್ನೆ. ಇದನ್ನು ಅರಿತ ಸರ್ಕಾರವು ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ವಿದ್ಯಾಗಮವೆಂಬ ನೂತನ ಪದ್ದತಿಯನ್ನು ಜಾರಿಗೊಳಿಸಿತು. ಆದರೆ ಅದರ ಅನುಷ್ಠಾನವನ್ನು ಸ್ವಲ್ಪ ಜಾಗರೂಕತೆಯಿಂದ ಮಾಡಬಹುದಿತ್ತು. ದೇವಸ್ಥಾನ, ಒಠಾರ, ಮೈದಾನಗಳಲ್ಲಿ ಪಾಠ ಮಾಡುವ ಬದಲು ಮಕ್ಕಳನ್ನು ಶಾಲೆಯ ಆವರಣದಲ್ಲೇ ಕೂರಿಸಿ ಮಾಡಬಹುದಿತ್ತು.
ಉಪಚುನಾವಣೆ ಸಮೀಪಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿಗಳೀರ್ವರು ಸರ್ಕಾರವನ್ನು ದೂಷಿಸಲು ಆಯ್ಕೆ ಮಾಡಿಕೊಂಡಿದ್ದೇ ಪಾಪ ಬಡಮಕ್ಕಳ ವಿದ್ಯೆಗೆ ಆಸರೆಯಾಗಿದ್ದ ವಿದ್ಯಾಗಮವನ್ನು, ಮಾನ್ಯ ಸಚಿವರ ಸರ್ವಶ್ರಮವನ್ನು ನೀರುಪಾಲು ಮಾಡಲು ಸಂಚು ಹಾಕಿದರು. ಚುನಾವಣೆ ಸಂದರ್ಭದಲ್ಲಿ ಯಾರೋ ಒಂದಿಬ್ಬರು ಕೊರೋನಾಕ್ಕೆ ಬಲಿಯಾದ ಕಾರಣ ಹಿಡಿದು ಜರಿಯಬಹುದೆಂದು ಭಾವಿಸಿ ಸರ್ಕಾರವೂ ವಿದ್ಯಾಗಮವನ್ನು ಸ್ಥಗಿತಗೊಳಿಸಿತು. ತಿಂಗಳುಗಳ ಗಟ್ಟಲೆ ಮಕ್ಕಳು ಶಿಕ್ಷಣದಿಂದ ವಿಮುಖರಾದರೆ ಅಂತಹ ಮಕ್ಕಳನ್ನು ಮತ್ತೆ ಶಿಕ್ಷಣದ ಕಡೆಗೆ ತರುವುದು ಬಹಳ ಕಷ್ಟಕರವಾದ ಕೆಲಸ. ಕುಟುಂಬದಲ್ಲಿ ಬಡತನವಿದ್ದರೆ ಮಕ್ಕಳನ್ನು ಪೋಷಕರೇ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ. ಪ್ರೌಢಶಿಕ್ಷಣದ ಹಂತದಲ್ಲಿನ ವಿದ್ಯಾರ್ಥಿ/ನಿ ಒಮ್ಮೆ ದುಡಿಮೆಗೆ ಹೋಗಿ ನಾಲ್ಕು ಕಾಸು ಸಂಪಾದಿಸದರೆ ಮುಂದಿನ ಅವರ ಗುರಿ ಸಂಪಾದನೆಯೇ ಆಗಿರುತ್ತದೆಯೇ ಹೊರೆತು ಶಿಕ್ಷಣವಲ್ಲ ಎಂಬುದು ಸತ್ಯ.
ಶಾಲೆಗಳಿಲ್ಲ ಎಂಬ ಕುಂಟುನೆಪವೊಡ್ಡಿ ಕೆಲವರು ಬಾಲ್ಯವಿವಾಹಕ್ಕೆ ಮುಂದಾಗುತ್ತಾರೆ. ಶಾಲೆ ಇಲ್ಲದಿದ್ದರೆ ಬಾಲಕಾರ್ಮಿಕರ ವರ್ಗವೇ ಮುಂದಿನ ದಿನಗಳಲ್ಲಿ ದೊಡ್ದದಾಗಿರುತ್ತದೆ. ಮಕ್ಕಳು ಮನೆಯಲ್ಲಿ ಸುರಕ್ಷಿತವಾಗಿರಲಿ ಒಂದು ವರ್ಷವೆಂದು ನಾವು ಅವರನ್ನು ಶಾಲೆಗೆ ಕಳುಹಿಸಲು ಅಥವಾ ಶಿಕ್ಷಣ ಕೊಡಿಸಲು ಹಿಂಜರಿದರೆ ಅದರ ಅಡ್ಡಪರಿಣಾಮವನ್ನು ಸರಿದಾರಿಗೆ ತರಲು ಹಲವು ವರ್ಷಗಳೇ ಬೇಕಾಗುತ್ತದೆ ಎಂಬುದು ಮಾತ್ರ ಸತ್ಯ.

ರಾಜಕೀಯ ಲೆಕ್ಕಚಾರದಲ್ಲಿ ವಿದ್ಯಾಗಮ ನಿಲ್ಲಿಸಿದ್ದರೆ ಅದು ಅಕ್ಷಮ್ಯ ಅಪರಾಧ. ಸಹೃದಯಿಯಾದ ಶಿಕ್ಷಣ ಸಚಿವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆ ತೆರೆಯುವ ತನಕ ವಿದ್ಯಾಗಮ ಪದ್ದತಿ, ದೂರದರ್ಶನ ಹಾಗೂ ಆಕಾಶವಾಣಿಗಳನ್ನು ಸಾಮಾಜಿಕ ಜಾಲತಾಣಗಳೊಂದಿಗೆ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು. ಸೋಮಾರಿ ಶಿಕ್ಷಕರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದರೆ ಆಯಾ ಗ್ರಾಮಗಳಲ್ಲಿರುವ ವಿದ್ಯಾವಂತ ಯುವಕರನ್ನು ಬಳಸಿ ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಬಹುದು. ಪ್ರತಿ ತರಗತಿಯ ಪಾಠಗಳನ್ನು ಉತ್ತಮ ಶಿಕ್ಷಕರಿಂದ ಪಾಠ ಮಾಡಿಸಿ ಅದನ್ನು ರೆಕಾರ್ಡ್ ಮಾಡಿ ಶಿಕ್ಷಣ ಇಲಾಖೆಯ ವೆಬ್‌ಸೈಟ್’ನಲ್ಲಿ ಹಾಕಬಹುದು. ಇದು ಕೇವಲ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಎಲ್ಲಾ ಶಿಕ್ಷಕರಿಗೂ ಅನುಕೂಲವಾಗುತ್ತದೆ. ವಿದ್ಯಾವಂತ ಯುವಕರು ಆ ವಿಡೀಯೋಗಳನ್ನು ನೋಡಿ ತಮ್ಮ ಗ್ರಾಮದ ಮಕ್ಕಳಿಗೆ ಪಾಠ ಮಾಡಬಹುದು, ಆ ಯುವಕರಿಗೆ ಮಾಸಿಕ ಇಷ್ಟು ಅಂತ ಗೌರವ ಧನ ನೀಡಿ, ಇದಕ್ಕೆ ಸ್ವಯಂ ಸೇವಕರಾಗಿ ನೊಂದಾಯಿಸಿಕೊಳ್ಳಲು ಒಂದು ಅಂತರ್ಜಾಲವನ್ನು ತೆರೆಯಿರಿ, ಆ ಯುವಕರಿಗೂ ಸಮಯ ಸಾಗುತ್ತದೆ ಮತ್ತು ಈ ಕಷ್ಟದ ಸಂದರ್ಭದಲ್ಲಿ ಒಂದಷ್ಟು ಹಣವೂ ಸಿಗುತ್ತದೆ, ಮಕ್ಕಳಿಗೆ ಶಿಕ್ಷಣವೂ ಸಿಗುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post