ಕಲ್ಪ ಮೀಡಿಯಾ ಹೌಸ್ | ಮೈಸೂರು |
ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನಿಂದ ನಗರದಲ್ಲಿ ಮೂರು ದಿನಗಳ ಕಾಲ ಆಯೋಜಿಸಿದ್ದ 9ನೇ ವಾರ್ಷಿಕ ಸಮ್ಮೇಳನಕ್ಕೆ ಭಾನುವಾರ ರಾತ್ರಿ ಮಂಗಳ ಹಾಡಲಾಯಿತು.
ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಮಾರೋಪ ಭಾಷಣ ಮಾಡಿ, ಸ್ವಾಮಿ ವಿವೇಕಾನಂದರು ಷಿಕಾಗೋ ಧಾರ್ಮಿಕ ಸಮ್ಮೇಳನಕ್ಕೆ ತೆರಳುವ ಮುನ್ನ ಮೈಸೂರಿನಲ್ಲಿ ತಂಗಿದ್ದ ಸ್ಥಳದಲ್ಲಿ ಯುವಕರ ಮನಸ್ಸನ್ನು ವಿಕಸನಗೊಳಿಸುವ ಸೌಧ ನಿರ್ಮಿಸಲು ಹೋದಾಗ ಹಲವು ಅಡ್ಡಿಗಳು ಉಂಟಾಗಿ ಕಾರ್ಯ ನಿಧಾನವಾಗುತ್ತಿದೆ. ಆದರೆ ಯುವ ಜನಾಂಗವನ್ನು ವಿಕೃತಿಗೆ ತಳ್ಳುವ ಮಾಲ್‌ಗಳು ಅಲ್ಲಲ್ಲಿ ತಲೆ ಎತ್ತುತ್ತಿದ್ದರೂ ಯಾವುದೇ ಚಕಾರ ಎತ್ತುತ್ತಿಲ್ಲ. ನಮ್ಮ ಸಂಸ್ಕೃತಿ, ಧರ್ಮ, ಆಚಾರ ವಿಚಾರ ಎಲ್ಲಿಗೆ ಹೋಗಿ ನಿಂತಿದೆ ಎನ್ನುವುದು ಕಂಡು ಬೇಸರವಾಗುತ್ತದೆ ಎಂದರು.
ಭಾರತವನ್ನು ಮತ್ತೆ ಕಟ್ಟಬೇಕಿದೆ
ಅಧ್ಯಕ್ಷತೆ ವಹಿಸಿದ್ದ ಮೈಸೂರು ಶ್ರೀರಾಮಕೃಷ್ಣ ಆಶ್ರಮದ #RamakrishnaAshrama ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಮಾತನಾಡಿ, ಧರ್ಮ ನೆಲೆಯಲ್ಲಿ ಭವ್ಯವಾಗಿದ್ದ ಭಾರತವನ್ನು ನಾವು ಮತ್ತೆ ಕಟ್ಟಬೇಕಿದೆ. ಪ್ರಜಾಪ್ರಭುತ್ವದಲ್ಲಿ ಆಳುವ ವರ್ಗದವರ ದಾಸ್ಯ, ಆಮಿಷಕ್ಕೆ ಬಲಿಯಾಗಿ ಧರ್ಮ, ಐಕ್ಯತೆ, ಸಂಸ್ಕೃತಿ ಕ್ಷೀಣಿಸುತ್ತದೆ ಎಂದು ಬೇಸರಿಸಿದರು.
ಇನ್ನೂ ಜಾಗೃತವಾಗಿಲ್ಲ
ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ನಮ್ಮ ಸರ್ಕಾರಗಳು ಇನ್ನೂ ಜಾಗೃತ ಆಗಿಲ್ಲ. ಹೀಗಾಗಿ, ಪ್ರಜ್ಞಾವಂತ ಸಮಾಜದವರೇ ಇಂತಹ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಯ ಸದುದ್ದೇಶವನ್ನು ಮನಗಾಣಬೇಕು. ಸಮಾಜಕ್ಕೆ ಉಪಯುಕ್ತವಾದ ಆಲೋಚನೆ, ಯೋಜನೆಗಳನ್ನು ನೀಡಬೇಕು ಎಂದರು.
ಸಂದೇಶ ಎಲ್ಲರನ್ನೂ ತಲುಪಲಿ
ರಾಣೆಬೆನ್ನೂರಿನ ಸ್ವಾಮಿ ಪ್ರಕಾಶಾನಂದಜೀ ಮಾತನಾಡಿ, ಸಮಾಜಕ್ಕೆ ಮಹಾತ್ಮರ ಸಂದೇಶಗಳು ಹಿಂದಿಗಿಂತ ಹೆಚ್ಚು ಅಗತ್ಯ ಇದೆ. ಯಾವುದೇ ಜಾತಿ ಭೇದವಿಲ್ಲದೆ ವಿವೇಕಾನಂದರ ಸಂದೇಶಗಳು ಎಲ್ಲರನ್ನೂ ತಲುಪಬೇಕಿದೆ. ಕುವೆಂಪು ಅವರಿಗೆ ವಿಶ್ವಮಾನವ ತತ್ವಕ್ಕೆ ವಿವೇಕಾನಂದರೇ ಪ್ರೇರಣೆ. ವಿವೇಕಾನಂದರ ಸಂಪರ್ಕಕ್ಕೆ ಬಂದ ಎಲ್ಲರೂ ವಿಶ್ವಮಾನವರಾಗಬೇಕು. ಆಗಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ತ್ಯಾಗ ಬಹಳ ಮುಖ್ಯ
ಮನುಷ್ಯತ್ವದಿಂದ ದೈವತ್ವಕ್ಕೇರಲು ತ್ಯಾಗ ಬಹಳ ಮುಖ್ಯ ಎಂದು ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಜ್ಞಾನಯೋಗಾನಂದಜೀ ಮಹಾರಾಜ್ ಹೇಳಿದರು. ಸಮ್ಮೇಳನದಲ್ಲಿ ‘ಶ್ರೀ ರಾಮಕೃಷ್ಣ ವಚನವೇದದ ಸಾರಸೂಚಿ’ ಕುರಿತು ಉಪನ್ಯಾಸ ನೀಡಿದರು.
ಪ್ರಪಂಚದಲ್ಲಿ ಅನೇಕ ಸಂಗತಿಗಳಿವೆ. ಆದರೆ, ಅವುಗಳು ಮನುಷ್ಯನನ್ನು ಬಲವಾಗಿ ಬಂಧಿಸುವುದಿಲ್ಲ. ‘ನಾನು- ನನ್ನದು ಎನ್ನುವುದನ್ನು ಅನುಸರಿಸಿಕೊಂಡು ಇಡೀ ಪ್ರಪಂಚವೇ ನಡೆಯುತ್ತದೆ. ಆದ್ದರಿಂದ ‘ನಾನು- ನನ್ನದು ಎನ್ನುವುದು ಮನುಷ್ಯನನ್ನು ಬಂಧಿಸುವ ವಸ್ತು’ ಎಂದು ಶಂಕರ ಭಗವತ್ಪಾದರು ಹೇಳಿದ್ದಾರೆ. ಅದನ್ನು ಶ್ರೀರಾಮಕೃಷ್ಣರು ಮತ್ತೊಂದು ರೀತಿ ‘ಕಾಮ- ಕಾಂಚನ’ ಎಂದು ಹೇಳಿದ್ದಾರೆ. ಪ್ರಪಂಚದಲ್ಲಿನ ಎಲ್ಲ ವಸ್ತುಗಳನ್ನೂ ತನ್ನದಾಗಿ ಮಾಡಿಕೊಳ್ಳಲು ಇರುವ ಸಾಮಗ್ರಿಯೇ ಕಾಂಚನ (ಹಣ). ಹಾಗಾಗಿ, ‘ಕಾಮ- ಕಾಂಚನ’ ಎರಡನ್ನೂ ತ್ಯಜಿಸಿದರೆ ನಿಜವಾದ ತ್ಯಾಗ ಮಾಡಿದಂತಾಗುತ್ತದೆ ಎಂದರು.
ಅನೇಕ ದ್ವಂದ್ವ, ವಿರುದ್ಧ ಭಾವ, ದೃಷ್ಟಿಕೋನಗಳು ನಮ್ಮಲ್ಲಿ ಇವೆ. ಅವುಗಳನ್ನು ಸಮನ್ವಯಗೊಳಿಸಿ, ಏಕದೃಷ್ಟಿಯಿಂದ ನೋಡಬೇಕು. ಕಲಿಯುಗಕ್ಕೆ ಭಕ್ತಿಮಾರ್ಗವೇ ಸೂಕ್ತ ಎಂದು ರಾಮಕೃಷ್ಣರು ಪ್ರತಿಪಾದಿಸಿದ್ದಾರೆ. ಒಂದೊಂದು ಯುಗಕ್ಕೆ ಒಂದೊಂದು ಮಾರ್ಗ ವಿಶೇಷ. ಕಲಿಯುಗದಲ್ಲಿ ನಮ್ಮ ದೃಷ್ಟಿ ದೇಹದ ಕಡೆಗೆ ಇರುತ್ತದೆ. ಭಕ್ತಿಮಾರ್ಗ ಸುಲಭ ಹಾಗೂ ಸರಳ. ಅದನ್ನು ಅನುಸರಿಸಿ. ಧರ್ಮಗಳ ನಡುವೆ ಕಲಹ ಬೇಡ. ಧರ್ಮಗಳು ಪರಸ್ಪರ ಗೌರವದಿಂದ ಇರಬೇಕು. ಒಳ್ಳೆಯ ಅಂಶ ಎಲ್ಲಿದ್ದರೂ ಸ್ಪೀಕರಿಸಬೇಕು. ಇತರರನ್ನು ಗೌರವಿಸಬೇಕು ಎಂಬುದೇ ರಾಮಕೃಷ್ಣರ ಉಪದೇಶ ಸಾರ ಎಂದು ತಿಳಿಸಿದರು.
ಉಪನ್ಯಾಸ
ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜೀ ‘ಶ್ರೀ ರಾಮಕೃಷ್ಣರ ದೈವತ್ವ-ನೇರ ಶಿಷ್ಯರು ಕಂಡಂತೆ’ ಕುರಿತು, ಪಾವಗಡ ತಾಲೂಕಿನ ವೆಂಕಟಾಪುರ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಅಮೂರ್ತಾನಂದಜೀ ಅವರು ‘ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ಕಂಡ ಭಾರತ’ ವಿಷಯ ಕುರಿತು ಉಪನ್ಯಾಸ ನೀಡಿದರು. ವಿವಿಧ ಮಠಾಧೀಶರು, ಮಾತಾಜಿಯವರು ಹಾಜರಿದ್ದರು.
ಆಂಧ್ರಪ್ರದೇಶ ವಿಜಯವಾಡದ ರಾಮಕೃಷ್ಣ ಮಿಷನ್‌ನ ಸ್ವಾಮಿ ವಿನಿಶ್ಚಲಾನಂದಜೀ, ದಾವಣಗೆರೆ ರಾಮಕೃಷ್ಣ ಮಿಷನ್ ಅಧ್ಯಕ್ಷ ಸ್ವಾಮಿ ತ್ಯಾಗೀಶ್ವರಾನಂದಜೀ, ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ, ಹಲಸೂರು ಮಠದ ಶ್ರೀ ಬೋಧ ಸ್ವರೂಪಾನಂದಜೀ, ಮಾಜಿ ಮೇಯರ್ ಸುನಂದಾ ಪಾಲನೇತ್ರ, ಶ್ರೀ ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಎಂ.ಪಾಪೇಗೌಡ ಇದ್ದರು.
ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿದಾನಂದಗೌಡ, ಶಿವಮೊಗ್ಗದ ಸ್ವಾಮಿ ವಿನಯಾನಂದಜೀ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post