ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೋಟೆ ಗದ್ದೆ ಎಂದ ಕೂಡಲೇ ನೀವು ಸುತ್ತಲೂ ಕೋಟೆ ಇದೆಯೇ ಎಂದು ನಿಮ್ಮ ಮನದಲ್ಲಿ ಮಿಂಚಿನಂತೆ ಒಂದು ಪ್ರಶ್ನೆ ಓಡಿರಬಹುದು. ಆದರೆ ಅಲ್ಲಿ ಮುಂಚೆ ಕೋಟೆ ಇತ್ತು ಈಗ ಬರಿ ಅಲ್ಲಿ ಅವಶೇಷಗಳು ಮಾತ್ರ ಲಭ್ಯ. ಸುಂದರವಾದ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದಿಗೂ ನಿಮಗೆ ನೋಡಲು ಲಭ್ಯ, ದಟ್ಟ ಕಾಡು, ಕಾಡಿನ ನಡುವೆ ಒಂದಿಷ್ಟು ಮನೆಗಳು ಪ್ರಶಾಂತ ವಾತಾವರಣ ಎನ್ನುತ್ತಾರೆ ಇಂದಿನ ನಮ್ಮ ಲೇಖನದ ನಾಯಕ ಮಲೆನಾಡಿನ ಕುಂಚ ಮಾಂತ್ರಿಕ ಕೋಟೆ ಗದ್ದೆ ರವಿ.
ಸಾಮಾನ್ಯವಾಗಿ ಛಲವಿರುವ ಮಂದಿ ಸಾಧನೆಯ ಹಿಂದೆ ಓಡುತ್ತಲೇ ಇರುತ್ತಾರೆ. ಗುರಿ ತಲುಪಲು ಊಟ, ನಿದ್ದೆಗಳನ್ನು ತ್ಯಜಿಸಿ, ಅವಿರತ ಶ್ರಮಿಸುತ್ತಲೇ ಇದ್ದರೂ, ಸಾಧನೆಯನ್ನು ಒಲಿಸಿಕೊಳ್ಳುವಲ್ಲಿ ಹಲವರು ಹಿಂದೆ ಬೀಳುತ್ತಾರೆ. ಆದರೆ, ಮಲೆನಾಡಿನ ಈ ಕುಂಚ ಮಾಂತ್ರಿಕನಿಗೆ ಸಾಧನೆಯೇ ತಲೆದೂಗಿದೆ.
ಶಿವಮೊಗ್ಗ ಜಿಲ್ಲೆಯ ಮಲ್ಲಿಕಟ್ಟೆ ಎಂಬಪುಟ್ಟ ಗ್ರಾಮದಲ್ಲಿ ರವಿಯವರು ಜನಸಿದ ನಂತರ ಅವರ ಕುಟುಂಬ ಕೋಟೆಗದ್ದೆಗೆ ಸ್ಥಳಾಂತರವಾಯಿತು. ಶ್ರೀ ಶೀನ ನಾಯ್ಕ ಮತ್ತು ಶ್ರೀಮತಿ ಕರಿಯಮ್ಮ ದಂಪತಿಗಳ ಸುಪುತ್ರ ರವಿ 1976 ರ ಜನವರಿ 8 ರಂದು ಜನಿಸಿದ ಇವರದ್ದು, ಕೃಷಿ ಕುಟುಂಬ ಇವರ ತಂದೆ ಚಿಕ್ಕ ರೈತರು, ನಮ್ಮದು ಶ್ರಮದ ಬದುಕು.
ಮಲೆನಾಡಿನ ಚಿತ್ರ ಕಲಾವಿದರಾದ ಹಾಗೂ ಸಿಲಿಕಾನ್ ಸಿಟಿ ಮಾಯನಗರಿಯಲ್ಲಿ ಬದುಕು ಕಟ್ಟಿಕೊಂಡ ರವಿ ಬೆಂಗಳೂರಿನ ಫಿಡಿಲಿಟಸ್ ಕಲಾ ಗ್ಯಾಲರಿ, ಸಂಸ್ಥೆಯಲ್ಲಿ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಕಲೆ ವಿಭಿನ್ನ ರೀತಿಯಲ್ಲಿ ಸಾಗುತ್ತದೆ. ಇವರು ಬಿಡಿಸಿರುವ ಚಿತ್ರಗಳಲ್ಲಿ ಧಾರ್ಮಿಕವಾಗಿ ಹೆಚ್ಚು ಒತ್ತು ನೀಡಿದ್ದಾರೆ ಹಾಗೂ ದೇಶದ ಸಂಸ್ಕೃತಿ ಬಿಂಬಿಸುವ ಅನೇಕ ಕಲಾ ಪ್ರಕಾರಗಳು ಹೊರಹೊಮ್ಮಿದ್ದು, ಇವರ ಕಲಾ ಕೃತಿಗಳು ದೇಶ ಹಾಗೂ ವಿದೇಶಗಳಲ್ಲಿ ಪ್ರದರ್ಶನಗೊಂಡಿವೆ.
ಸೃಜನಾತ್ಮಕ ಕಲಾಕೃತಿಗಳ ಮೂಲಕವೇ ಹೆಸರು
ಸಮಕಾಲೀನ ಶೈಲಿಯಲ್ಲಿ ಕ್ಯಾನ್ವಾಸ್‌ನ ಮೇಲೆ ಸೃಜನಾತ್ಮಕ ಕಲಾಕೃತಿಗಳ ಮೂಲಕವೇ ಹೆಸರು ಮಾಡಿರುವ ರವಿ, ಪ್ರಯೋಗಶೀಲ ಕಲಾವಿದ ಕೂಡ.
ಭಾರತೀಯ ಕಲಾಪ್ರಕಾರದಲ್ಲಿ ಸಾಕಷ್ಟು ಹೆಸರು ಮಾಡಿರುವ ರವಿ ದೇಶದ ಮೂಲೆಮೂಲೆಗಳಲ್ಲಿ ಚಿತ್ರಕಲೆಯಲ್ಲಿ ಹೆಸರು ಮಾಡಿದ್ದಾರೆ. ಕುಂಚದ ಜೊತೆ ಜೊತೆಗೆ ಬ್ಲೇಡ್ ಮತ್ತಿತರ ವಸ್ತುಗಳಿಂದ ಚಿತ್ರ ಬಿಡಿಸುವುದು ಇವರ ಹೆಗ್ಗಳಿಕೆ.
ತಮ್ಮೂರಲ್ಲೇ ಶಿಕ್ಷಣ ಮುಗಿಸಿ ನಂತರ ಮೈಸೂರಿನ ಡಿಎಂಎಸ್ ಲಲಿತ ಕಲಾ ಮಹಾ ಸಂಸ್ಥಾನದಿಂದ ಲಲಿತಕಲೆಯಲ್ಲಿ ಪದವಿ ಪಡೆದರು. ರವಿ ಅವರೊಂದಿಗಿನ ಮಾತುಕತೆ ಹೀಗಿತ್ತು:
ಕಲ್ಪ ನ್ಯೂಸ್: ಕಲೆ ಎಂದರೇನು ?
ರವಿ: ಕಲೆ ಎಂದರೇನು ಅನ್ನುವುದು ಇದುವರೆಗೆ ಬಗೆ ಹರಿಯದ ಮೂಲಭೂತ ಇದುವರೆಗೆ ಅನೇಕ ಜನ ಪ್ರಸಿದ್ದ ಚಿಂತಕರು ಅವರವೇ ಆದ ಸಿದ್ದಾಂತವನ್ನು ಈ ಪ್ರಶ್ನೆಗೆ ಉತ್ತರವಾಗಿ ನೀಡಿದ್ದಾರೆ. ನನ್ನ ಪ್ರಕಾರ ಕಲೆ ಎಂದರೆ ಯಾವುದು ನೈಜವಲ್ಲವೋ ಆದರೆ ನೈಜತೆಯ ಹಾಗೆ ಕಾಣುವುದೋ ಅದೇ ಕಲೆ.
ಕಲ್ಪ ನ್ಯೂಸ್: ಚಿತ್ರ ಕಲೆ ಎಂದರೇನು ?
ರವಿ: ಚಿತ್ರಕಲೆ ಅನ್ನುವುದನ್ನು ನಾವಿಂದು ದೃಶ್ಯಕಲೆ ಎನ್ನುವ ಹೆಸರಿನಿಂದ ಗುರುತಿಸುತ್ತೇವೆ. ಕಣ್ಣಿನ ಮೂಲಕ ಮನಸ್ಸನ್ನು ಮುಟ್ಟುವುದು ಚಿತ್ರಕಲೆಯ ವಿಶೇಷ.
ಕಲ್ಪ ನ್ಯೂಸ್: ಅಕ್ರಿಲಿಕ್ ಕಲೆ ಎಂದರೆ?
ರವಿ: ಅಕ್ರಿಲಿಕ್ ಕಲೆ ಅಂತ ಯಾವುದೂ ಇಲ್ಲ, ಅಕ್ರಿಲಿಕ್ ಬಣ್ಣವನ್ನು ಉಪಯೋಗಿಸಿ ಮಾಡುವ ಚಿತ್ರಕಲೆ ಅಕ್ರಿಲಿಕ್ ಮಾಧ್ಯಮದಲ್ಲಿ ರಚಿಸಿದ ಕಲಾಕೃತಿ ಅಂತಾರೆ. ಹೌದು. ಅಕ್ರಿಲಿಕ್, ಆಯಿಲ್ ಜಲವರ್ಣ ಮೊದಲಾದವು ವಿವಿಧ ಮಾಧ್ಯಮಗಳು.
ಕಲ್ಪ ನ್ಯೂಸ್: ಬದುಕಿನ ಮೆಚ್ಚಿನ ಕ್ಷಣ?
ರವಿ: ಮಹಾ ಮಸ್ತಕಾಭಿಷೇಕದಲ್ಲಿ ಭಗವಾನ್ ಬಾಹುಬಲಿಯ ಮುಂದೆ ಚಿತ್ರ ರಚಿಸಿದ ಕ್ಷಣ.
ಕಲ್ಪ ನ್ಯೂಸ್: ಹವ್ಯಾಸ-ವೃತ್ತಿ-ಪ್ರವೃತ್ತಿ?
ರವಿ: ಓದುವುದು, ಶಾಸ್ತ್ರೀಯ ಸಂಗೀತ ಕೇಳುವುದು.
ಕಲ್ಪ ನ್ಯೂಸ್: ಸಿಲಿಕಾನ್ ಸಿಟಿ ಬದುಕಿಗೂ ಮಲೆನಾಡಿನ ಬದುಕಿನ ಬಗ್ಗೆ ನಿಮ್ಮ ಮಾತು?
ರವಿ: ಮಲೆನಾಡು ನೆಮ್ಮದಿ ನೀಡಿದರೆ ಬೆಂಗಳೂರು ಅವಕಾಶಗಳನ್ನು ನೀಡುತ್ತೆ.
ಕಲ್ಪ ನ್ಯೂಸ್: ನಿಮ್ಮ ಮುಂದಿನ ಗುರಿ?
ರವಿ: ಚಿತ್ರಕಲೆಯಲ್ಲಿಯೇ ಮಹತ್ತರವಾದುದನ್ನು ಸಾಧಿಸಬೇಕು. ಕಲೆಯಲ್ಲಿ ಮತ್ತೊಂದು ಮಜಲನ್ನು ಮುಟ್ಟಬೇಕು.
ಕಲ್ಪ ನ್ಯೂಸ್: ಯುವ ಜನಾಂಗಕ್ಕೆ ನಿಮ್ಮ ಕಿವಿ ಮಾತು?
ರವಿ: ಯಾವುದರಲ್ಲಿಯೂ ತತಕ್ಷಣದ ಯಶಸ್ಸಿಗಾಗಿ ಹಂಬಲಿಸದೆ ನಿರಂತರ ಅಭ್ಯಾಸ ಮಾಡುವುದರ ಮೂಲಕ ಸಾಧನೆ ಮಾಡಬೇಕು, ಅದೇ ನಾವು ಮಾಡುವ ದೇಶ ಸೇವೆ.
ಕಲ್ಪ ನ್ಯೂಸ್: ಕಲೆಯನ್ನೇ ಉಸಿರಾಗಿಸಿ ಕೊಂಡ ನಿಮಗೆ ಕಲೆ ಏನೆಲ್ಲಾ ನೀಡಿದೆ?
ರವಿ: ಕಲೆಯನ್ನು ತೆಗೆದು ಹಾಕಿದರೆ ನಾನು ಯಾರೂ ಅಲ್ಲ. ಕಲೆ ನನಗೆ ಎಲ್ಲವನ್ನೂ ನೀಡಿದೆ. ನನ್ನ ಉಸಿರೇ ಅದಾಗಿದೆ ಎಂದರೆ ನನ್ನ ಜೀವ ಮತ್ತು ಜೀವನ ಎರಡು ಕಲೆಯೇ!
ಕಲ್ಪ ನ್ಯೂಸ್: ಚಿತ್ರ ಕಲೆಯಲ್ಲಿ ಅರಳಿದ ನಿಮ್ಮ ಮೆಚ್ಚಿನ ಸೊಬಗು?
ರವಿ: ಇಂತಹದ್ದೇ ಅಂತ ಹೇಳಲಾಗದು. ಕೃತಿ ರಚನೆಯ ನಂತರ ಒಮ್ಮೆ ಅದು ಸುಂದರವಾಗಿ ಕಂಡರೆ ಮತ್ತೊಮ್ಮೆ ಅಷ್ಟೇನೂ ಚೆನ್ನಾಗಿಲ್ಲ ಎನ್ನಿಸುತ್ತದೆ. ಇದು ನಿರಂತರವಾಗಿರುತ್ತಾದ್ದರಿಂದ ಯಾವೊಂದನ್ನೂ ಮೆಚ್ಚಿನದು ಎನ್ನಲಾಗದು.
ಕಲ್ಪ ನ್ಯೂಸ್: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ನಿಮ್ಮ ಮನದಳಾದ ಮಾತು?
ರವಿ: ದೇಶಕ್ಕೆ ಸಮರ್ಥ ನಾಯಕತ್ವದ ಕೊರತೆಯ ಸಮಯದಲ್ಲಿ ಒಂದು ಶಕ್ತಿಯಂತೆ ಮೂಡಿ ಬಂದ ವ್ಯಕ್ತಿ ಮೋದಿ. ನಮ್ಮ ಕಾಲಘಟ್ಟದಲ್ಲಿ ನಾವು ಬಗೆಹರಿಯಲಾರದು ಎಂದ ಕೆಲವು ಸಮಸ್ಯೆಗಳನ್ನು ಪರಿಹರಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ ಟೀಕಾಕಾರರು ಹೇಳುವಂತೆ ಸ್ವಲ್ಪ ಮಟ್ಟಿಗಿನ ಸರ್ವಾಧಿಕಾರಿ ಧೋರಣೆಯು ಕಾಣಿಸಿಕೊಳ್ಳುವುದಕ್ಕೆ ಸಮರ್ಥ ವಿರೋಧ ಪಕ್ಷದ ಕೊರತೆಯೂ ಕಾರಣವಿರಬಹುದು. ಪ್ರೀತಿಸುವವರು ಹಾಗೂ ವಿರೋಧಿಸುವವರನ್ನು ಸಮಾನವಾಗಿ ಪಡೆದ ನಾಯಕ ಬೇರೆ ಯಾರಿಲ್ಲ ಅನ್ನಿಸುತ್ತೆ. ಒಟ್ಟಿನಲ್ಲಿ ಮೋದಿ ಜನ ಸಾಮಾನ್ಯರ ಪಾಲಿಗೆ ಇಂದು ಆಶಾ ಕಿರಣ ಅನ್ನುವುದು ನಿಜ!
ಕಲ್ಪ ನ್ಯೂಸ್: ವಿಶ್ವವಿಖ್ಯಾತ ಚಿತ್ರ ಕಲಾವಿದ ಲಿಯೋ ನಾರ್ಡೊ ಡವಿಂಚಿ ಅವರ ಬಗ್ಗೆ ರವಿ ಅವರ ಮನದಾಳದ ಮಾತುಗಳು?
ರವಿ: ವಿಶ್ವವಿಖ್ಯಾತ ಚಿತ್ರ ಕಲಾವಿದ ಲಿಯೋ ನಾರ್ಡೊ ಡವಿಂಚಿ ಅವರ ನಮಗೆ ಗೊತ್ತಿರುವ ಹಾಗೆ ಆತ ರಚಿಸಿದ ಮೊನಾಲಿಸ ಕೃತಿಯು ವಿಶ್ವದ ಅತಿ ಹೆಚ್ಚು ವೀಕ್ಷಣೆಗೊಳಗಾದ ಕೃತಿ, ಆತ ಕೇವಲ ಚಿತ್ರ ಕಲಾವಿದ ಮಾತ್ರ ಅಲ್ಲ. ವೈದ್ಯ ಎಂಜಿನೀಯರ್, ವಾಸ್ತು ಶಿಲ್ಪಿ ಎಲ್ಲವೂ ಆಗಿದ್ದ! ಅಪರೂಪಕ್ಕೆ ಕೆಲವು ಚೇತನಗಳು ಭೂಮಿಯಲ್ಲಿ ಅವತರಿಸುತ್ತವೆ ಅಂತಹ ಅಧ್ಬುತ ಪ್ರತಿಭೆ ಡ ವಿಂಚಿ.
ಇಂತಹ ಸಾಧಕನಿಗೆ ಸಂದ ಪ್ರಶಸ್ತಿಗಳು:
- ಕರ್ನಾಟಕ ಲಲಿತಕಲಾ ಅಕಾಡೆಮಿಯ 2018ನೆಯ ಸಾಲಿನ ಗೌರವ ಪ್ರಶಸ್ತಿ
- ಮೈಸೂರಿನ ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗದವರು ದಸರೆಯ ಪ್ರಯುಕ್ತ ಜಂಟಿಯಾಗಿ ನೀಡಿದ ಸವಿಗನ್ನಡ ಸಾಂಸ್ಕೃತಿಕ ಪ್ರಶಸ್ತಿ
- ವಿಶ್ವ ಕಲಾ ಭೂಷಣ ಪ್ರಶಸ್ತಿ
Get in Touch With Us info@kalpa.news Whatsapp: 9481252093
Discussion about this post