ಕಲ್ಪ ಮೀಡಿಯಾ ಹೌಸ್ | ಬೆಂಗಳೂರು | ಲೇಖನ: ಶಿವಮೊಗ್ಗ ರಾಮ್ |
ರಾಜಧಾನಿಯ ಅಂಜಲಿ ಸ್ಕೂಲ್ ಆಫ್ ಮ್ಯೂಸಿಕ ಆ್ಯಂಡ್ ಡಾನ್ಸ್‌ನ ವಿದುಷಿ ಕೆ.ಆರ್. ಅಂಜಲಿ ಅವರ ಶಿಷ್ಯೆ ಧೃತಿ ಸಿಂಹ ಭರತನಾಟ್ಯ ರಂಗ ಪ್ರವೇಶಕ್ಕೆ ಅಡಿ ಇಡಲು ಸಿದ್ಧರಾಗಿದ್ದಾರೆ. ಮಾ. 16ರ ಸಂಜೆ 5:30ಕ್ಕೆ ಜೆಸಿ ರಸ್ತೆ ಎಡಿಎ ರಂಗಮಂದಿರದಲ್ಲಿ ‘ನಾಟ್ಯ ನಿವೇದನಂ’ ವಿಜೃಂಭಿಸಲಿದೆ.
ಕೋಲಾರ ಮೂಲದ ಸಮೀರ ಸಿಂಹ- ಸುಕೃತಾ ರಾವ್ ಅವರ ಪುತ್ರಿ ಧೃತಿ ರಂಗಪ್ರವೇಶಕ್ಕೆ ಅನನ್ಯ ಸಂಸ್ಥೆಯ ನಿರ್ದೇಶಕ ಡಾ. ರಾಘವೇಂದ್ರ ರಾವ್, ಭರತನಾಟ್ಯ ವಿದುಷಿ ಮಾಲಿನಿ ರವಿಶಂಕರ್ ಮತ್ತು ಬೆಂಗಳೂರು ನಗರ ವಿವಿ ಕುಲಪತಿ ಲಿಂಗರಾಜ ಗಾಂಧಿ ಸಾಕ್ಷಿಯಾಗಲಿದ್ದಾರೆ. ಆರನೇ ವಯಸ್ಸಿನಿಂದಲೇ ನರ್ತನ ಕಲಿಕೆಗೆ ಮುಂದಾದ ಧೃತಿ ಹಿಂದಿರುಗಿ ನೋಡಿದ್ದೇ ಇಲ್ಲ. ಭರತನಾಟ್ಯ ಜ್ಯೂನಿಯರ್, ಸೀನಿಯರ್ ಮತ್ತು ಗಂಧರ್ವ ಮಹಾವಿದ್ಯಾಲಯದ ಮಧ್ಯಮ ಪರೀಕ್ಷೆಗಳಲ್ಲಿ ಅತ್ಯುನ್ನತ ಶ್ರೇಣಿ ಪಡೆದು ಉತ್ತೀರ್ಣಳಾಗಿರುವುದು ಬಹು ವಿಶೇಷ.
Also Read>> ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಖ್ಯಾತ ನಟ ಪ್ರಭುದೇವ ಭೇಟಿ | ವಿಶೇಷ ಪೂಜೆ ಸಮರ್ಪಣೆ
ಬೆಳೆಯುವ ಸಿರಿ
ಸದ್ಯ ಸಿಎ (ಇಂಟರ್) ಪರೀಕ್ಷೆಗೆ ಅಧ್ಯಯನ ಮಾಡುತ್ತಿರುವ ಧೃತಿ, ಮಣಿಪಾಲ ವಿವಿಯಲ್ಲಿ ಆನ್ಲೈನ್ ಮೂಲಕ ಬಿಕಾಂ ಪರೀಕ್ಷೆಯನ್ನೂ ತೆಗೆದುಕೊಂಡಿದ್ದಾರೆ. ಭರತನಾಟ್ಯ ವಿದ್ವತ್ ಪಾಠಾಂತರವಾಗಿದ್ದು, ಆ ಪರೀಕ್ಷೆಗೆ ತಾಲೀಮು ನಡೆಸುವ ಹಂತದಲ್ಲೇ ರಂಗಾ ರೋಹಣವೂ ಸಂಪನ್ನಗೊಳ್ಳುತ್ತಿದೆ. ಪ್ರತಿದಿನವೂ 4 ತಾಸು ಸತತವಾಗಿ ನೃತ್ಯದ ಅಭ್ಯಾಸ, ಕಬ್ಬಿಣದ ಕಡಲೆಯಾದ ಸಿಎ-ಎಲ್ಲವನ್ನೂ ಎದುರಿಸುವ ಕಣದಲ್ಲಿ ಧೃತಿಗೆಡದೆ ಸೆಣಸುತ್ತಿರುವ ಧೃತಿಯ ಛಾತಿಯನ್ನು ಮೆಚ್ಚಲೇ ಬೇಕು. ಈಗಾಗಲೇ ಹಂಪಿ ಉತ್ಸವ, ಹನುಮ ಜಯಂತಿ ಉತ್ಸವ, ವೈಕುಂಠ ಏಕಾದಶಿ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಧೃತಿ ಗುರುವಿನೊಂದಿಗೆ ಹೆಜ್ಜೆ ಹಾಕಿ ಕ್ರಿಯಾಶೀಲತೆ ಪ್ರದರ್ಶಿಸಿರುವುದು ಬೆಳೆಯುವ ಸಿರಿಯ ದರ್ಶನ ಮಾಡಿಸಿದೆ.
ಸಾಮಾನ್ಯವಾಗಿ ಸಂಗೀತ -ನೃತ್ಯ, ಕಸೂತಿ ಸೇರಿದಂತೆ ಬಹುತೇಕ ಲಲಿತ ಕಲೆಗಳು ಹೆಣ್ಣು ಮಕ್ಕಳಿಗೆ ತಾಯಿ- ತಂದೆಯರ ಪ್ರೇರಣೆ- ಪ್ರೋತ್ಸಾಹದಿಂದಲೇ ಒಲಿಯುತ್ತವೆ. ಯುವ ಕಲಾವಿದೆ ಧೃತಿ ಮನೆಯಲ್ಲೂ ಇದೇ ಪರಿಸರ ಇರುವ ಕಾರಣಕ್ಕೆ ನೃತ್ಯ ಈಕೆಗೆ ಒಲಿದಿದೆ. ಸಮೀರ ಸಿಂಹ ಮೂಲತಃ ಕೋಲಾರದವರು. ಮೆಟ್ರೋದಲ್ಲಿ ವೃತ್ತಿಯೊಂದಿಗೆ ಭಾರತೀಯ ಸನಾತನ ಸಂಸ್ಕೃತಿ ಸಂಪ್ರದಾಯ ಮತ್ತು ಆಚರಣೆಗಳನ್ನು ದಂಪತಿ ಮನೆಯಲ್ಲಿ ಅನುಸರಿಸಿಕೊಂಡು ಬರುತ್ತಿರುವವರು.
ಸಮೀರರ ತಾಯಿಯೂ ಹರಿದಾಸರ ಪದಗಳಲ್ಲಿ ವಿಶೇಷವಾದ ಶ್ರದ್ಧೆ, ಕಳಕಳಿ ಹೊಂದಿರುವ ಹಿರಿಯ ಜೀವ. ಮಗಳು ನಾಟ್ಯಕಲೆಯಲ್ಲಿ ನೈಪುಣ್ಯತೆ ಹೊಂದಬೇಕೆಂದು ಸಮೀರ ಸಿಂಹ ಸಾಕಷ್ಟು ಸಮಯವನ್ನು ಮಗಳ ಕ್ರಿಯಾಶೀಲತೆ ವರ್ಧನೆಗೆ ಮೀಸಲಿಟ್ಟರು. ಅದರ ಫಲವಾಗಿಯೇ ‘ನಾಟ್ಯ ನಿವೇದನಂ’ ಶೀರ್ಷಿಕೆ ಅಡಿಯಲ್ಲಿ ರಂಗಾರೋಹಣ ಸಂಪನ್ನಗೊಳ್ಳುತ್ತಿರುವುದು ವಿಶೇಷದಲ್ಲಿ ವಿಶೇಷವಾಗಿದೆ.
ಬೆಂಗಳೂರಿನ ಬಸವೇಶ್ವರನಗರದ ಉದ್ಯಾನವನದಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಅಲ್ಲಿ ನಡೆಯುತ್ತಿದ್ದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಗಮನ ಸೆಳೆದವು. 4 ವರ್ಷದ ಧೃತಿ ತನ್ನ ಅಪ್ಪ-ಅಮ್ಮನಿಗೆ ಮನದಾಳದ ಭಾವ ತಿಳಿಸಿದಳು. ನೃತ್ಯ ಕಲಿಯುವ ಅಪೇಕ್ಷೆಯನ್ನು ಮಾನ್ಯ ಮಾಡಿದ ಸಿಂಹ ದಂಪತಿಗೆ ಮೊದಲು ಕಂಡ ಗುರುವೇ ವಿದುಷಿ ಅಂಜಲಿ. ಯಾವ ಅಡೆ ತಡೆಗಳಿಗೆ ಅಂಜದೇ- ಅಳುಕದೇ ಧೃತಿಯೂ ನಾಟ್ಯಾಭ್ಯಾಸ ಮಾಡಿ ವಿದ್ವತ್ ಹಂತಕ್ಕೆ ಬಂದಿರುವುದು ಸಾಧನೆಯೇ ಸರಿ.

ಮನೆಯಲ್ಲಿ ಅಮ್ಮ ಹಾಡುತಿದ್ದ ದೇವರ ನಾಮಗಳು, ಅಜ್ಜಿ ಅನುಸರಿಸುತ್ತಿದ್ದ ಸಂಪ್ರದಾಯ, ತಂದೆಯ ಅನುಷ್ಠಾನ, ತಮ್ಮನ ಕ್ರೀಡಾ ಉತ್ಸಾಹ ಮತ್ತು ಸಹೋದರತ್ವದ ಕಳಕಳಿ- ಇದರೊಂದಿಗೆ ಸ್ವಯಂ ಶ್ರದ್ಧೆ- ಎಲ್ಲವೂ ಸೇರಿ ಧೃತಿಯನ್ನು ಒಬ್ಬ ದೃಢ ಕಲಾ ಆರಾಧಕಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದವು. ಸತತ 12 ವರ್ಷಗಳ ಕಾಲ ವಿದುಷಿ ಮತ್ತು ಕ್ರಿಯಾಶೀಲ, ಸೃಜನಾಶೀಲ ಚಟುವಟಿಕೆಗಳ ಆಗರವೇ ಆಗಿರುವ ಅಂಜಲಿ ಗರಡಿಯಲ್ಲಿ ಈ ಬಾಲಕಲಾವಿದೆ ಪಳಗಿದಳು.
ಕನಸು ಬಹಳ ದೊಡ್ಡದು
ಸಿಎ- ಭರತನಾಟ್ಯ ವಿದ್ವತ್ ಪರೀಕ್ಷೆ ತಯಾರಿಯನ್ನು ಧೃತಿ ಸಮಗ್ರವಾಗಿ ನಡೆಸುತ್ತಿದ್ದು, ಎರಡಕ್ಕೂ ಏಕಕಾಲದಲ್ಲಿ ವಿಜಯದ ಗುರಿ ಇಟ್ಟುಕೊಂಡಿರುವುದು ಯುವ ಸಮುದಾಯಕ್ಕೆ ಮಾದರಿ ಆಗಿದೆ. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಎರಡೂ ಪರೀಕ್ಷೆಯನ್ನು ಪೂರ್ಣಗೊಳಿಸಿ ತನ್ನದೇ ಆದಂತಹ ವೃತ್ತಿಪರ ಸಂಸ್ಥೆ (ಸಿಎ ಪ್ರಾಕ್ಟೀಸ್ ಆಫೀಸ್) ಮತ್ತು ಭರತನಾಟ್ಯ ಬೋಧಿಸುವಂತಹ ಸಂಸ್ಥೆಯನ್ನು ಕಟ್ಟಬೇಕು. ವೃತ್ತಿ ಬದುಕಿಗೆ ನೆರವಾದರೆ ಪ್ರವೃತ್ತಿ ಜೀವನದ ಉದ್ದಕ್ಕೂ… ಎಂದು ನಂಬಿಕೊಂಡು ಅನೇಕ ಮಕ್ಕಳಿಗೆ ನೃತ್ಯದ ಪಾಠಗಳನ್ನು ಮಾಡಬೇಕು ಎಂಬುದು ಈ ಯುವಕಲಾವಿದೆಯ ಬಹುದೊಡ್ಡ ಕನಸು. ಈ ಕನಸಿನ ಹಿಂದೆ ಈಕೆ ತನ್ನ ತಂದೆಯ ತ್ಯಾಗಗಳನ್ನು ಬಹು ಧನ್ಯತೆಯಿಂದ ಸ್ಮರಿಸಿಕೊಳ್ಳುತ್ತಾರೆ. ನನ್ನ ನೃತ್ಯ ಕಲಿಕೆಗಾಗಿ ನೆರವು ನೀಡಲಿ ಸಾಕಷ್ಟು ಸಮಯ ಮೀಸಲಾಗಿಟ್ಟು, ದೊಡ್ಡ ಅಪೇಕ್ಷೆಗಳನ್ನೇ ಕಟ್ಟಿಕೊಂಡ ಅಪ್ಪನಿಗೆ ನಾನು ಏನನ್ನಾದರೂ ಕೊಡುಗೆಯಾಗಿ ಕೊಡಬೇಕು ಎಂದರೆ ಅದು ನನ್ನ ಸಾಧನೆಯಿಂದ ಮಾತ್ರ ಸಾಧ್ಯ ಎನ್ನುತ್ತಾಳೆ ಈ ವಿದ್ಯಾರ್ಥಿನಿ.
ಗುರುವಿನಂತೆ ನಾನೂ ಆಗಬೇಕು
ಸದಾ ಕ್ರಿಯಾಶೀಲವಾಗಿ ಇದ್ದು, ರಚನಾತ್ಮಕ ಚಟುವಟಿಕೆಗಳನ್ನೇ ಮಾಡುತ್ತಿರಬೇಕು ಎಂಬುದಕ್ಕೆ ಈಕೆಗೆ ತನ್ನ ಗುರು ಅಂಜಲಿಯವರನ್ನೇ ಪ್ರತಿಮೆ ಮತ್ತು ಪ್ರತೀಕವಾಗಿ ಇರಿಸಿಕೊಂಡಿದ್ದಾಳೆ. ಬಹುಮುಖಿ ಅಂಜಲಿ ಅವ ರಂತೆಯೇ ನಾನೂ ವೈವಿಧ್ಯಮಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು, ಈ ಸಮಾಜಕ್ಕೆ ಏನನ್ನಾದರೂ ಹೊಸತನ್ನು ಕೊಡುಗೆಯಾಗಿ ನೀಡಬೇಕು ಎಂಬ ಉತ್ಕಟ ಹಂಬಲ ಧೃತಿಗೆ ಇದೆ. ಇವೆಲ್ಲವಕ್ಕೂ ಸಮಗ್ರ ಕುಟುಂಬದ ಬೆಂಬಲ ಇರುವುದು ‘ಸುಕೃತ’ವೇ ಆಗಿದೆ.
ಪ್ರೌಢ ಶಿಕ್ಷಣ ಹಂತದಿಂದಲೂ ಬ್ಯಾಡ್ಮಿಂಟನ್, ವಾಲಿಬಾಲ್ ಕ್ರೀಡೆಗಳಲ್ಲಿ ತನ್ನನ್ನು ವಿಶೇಷವಾಗಿ ಗುರುತಿಸಿಕೊಂಡಿರುವ ಧೃತಿ, ಎನ್‌ಸಿಸಿ ಯಲ್ಲೂ ತರಬೇತಿ ಪಡೆದಿರುವ ಕೆಡೆಟ್. ಬಿಡುವಿನ ವೇಳೆಯಲ್ಲಿ ಚಿತ್ರ ಬರೆಯುವುದು, ಶಾಸ್ತ್ರೀಯ ಸಂಗೀತ ಕೇಳುವುದು, ನಮ್ಮ ಸಂಸ್ಕೃತಿಯ ಬೇರುಗಳನ್ನು ತಿಳಿದುಕೊಳ್ಳುವಲ್ಲಿ ಈ ಯುವತಿಗೆ ಅಪಾರವಾದ ಆಸಕ್ತಿ. 80 ವಸಂತ ಕಂಡಿರುವ ಅಜ್ಜಿ ಈಕೆಯ ನೃತ್ಯದ ಬಗ್ಗೆ ಸಾಕಷ್ಟು ವಿಮರ್ಶಾತ್ಮಕವಾಗಿ ತಿಳಿ ಹೇಳುತ್ತಾ ಇನ್ನೂ ಇನ್ನೂ ಸಾಧನೆ ಮಾಡಬೇಕು ಎಂದು ಪ್ರೇರಣೆ ನೀಡುತ್ತಾರೆ. ಇವು ಮೊಮ್ಮಗಳ ಮುಂದಣ ಹೆಜ್ಜೆಗಳಿಗೆ ಸ್ಫೂರ್ತಿಯಾಗಿದೆ. ಇವೆಲ್ಲಾ ನೆಲೆಗಳನ್ನು ಬಳಸಿಕೊಂಡು ಈಕೆ ಮಹೋನ್ನತ ಮೈಲುಗಲ್ಲು ಗಳನ್ನು ಸ್ಥಾಪಿಸಲಿ ಎಂಬುದೇ ಕಲಾಸಕ್ತ ಮನಸುಗಳ ಹಾರೈಕೆ.
ಸಿಂಹದ ನಡೆ ಪ್ರಾಪ್ತಿಯಾಗಲಿ
ಸಂಸ್ಕಾರವಂತ ತಂದೆ- ತಾಯಿಗೆ ಸಂಸ್ಕೃತಿ ಬಿಂಬಿಸುವಂತಹ ಮಕ್ಕಳು ಜನಿಸುವುದು ಅಪರೂಪದಲಿ ಅಪರೂಪ. ಹಾಗಾಗಿ ಅದನ್ನು ‘ಸುಕೃತ’ ಎನ್ನುತ್ತಾರೆ ಹಿರಿಯರು. ಸಮೀರ ಸಿಂಹ- ಸುಕೃತಾ ಅವರ ಕುಟುಂಬದ ಹೆಮ್ಮೆಯ ಪ್ರತಿಭೆ ಧೃತಿ ‘ಸಿಂಹ’ದ ನಡೆಯನ್ನೇ ಅನುಸರಿಸಿ ಅಗ್ರಗಣ್ಯ ಕಲಾವಿದೆ ಆಗಲಿಎಂದು ಹಾರೈಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post