ಪಂಜಾಬ್ ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಸಂಭವಿಸಿದೆ. ಇನ್ನೇನು ಐದು ತಿಂಗಳಲ್ಲಿ ಆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಅಲ್ಲಿನ ರಾಜಕೀಯದಲ್ಲಿ ಸಂಚಲನ ಉಂಟುಮಾಡುವಂತಹ ಹಾಗೂ ಆಢಳಿತಾರೂಢ ಶಿರೋಮಣಿ ಅಕಾಲಿದಳ- ಬಿಜೆಪಿ ಮೈತ್ರಿ ಸರ್ಕಾರಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಇದು ಘಟಿಸಿದೆ. ಇತ್ತೀಚೆಗಷ್ಟೇ ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿರುವ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಹೊಸ ಪಕ್ಷವೊಂದನ್ನು ಹುಟ್ಟು ಹಾಕಿದ್ದಾರೆ. ಅದರ ಹೆಸರು ಅವಾಜ್-ಇ- ಪಂಜಾಬ್.
ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ)ಯ ನೇತೃತ್ವವನ್ನು ಬಿಜೆಪಿಗೆ ರಾಜೀನಾಮೆ ನೀಡಿ ಆಗಸ್ಟ್ ನಲ್ಲಿ ಹೊರಬಂದಿರುವ ಸಿಧು ವಹಿಸಿಕೊಳ್ಳುತ್ತಾರೆಂಬ ವದಂತಿ ಕೇಳಿಬಂದಿತ್ತು. ಅಷ್ಟೇ ಅಲ್ಲ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗುವುದೆಂಬ ಮಾತು ಹರಡಿತ್ತು. ಆದರೆ ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇದಕ್ಕೊಪ್ಪದ ಹಿನ್ನೆಲೆಯಲ್ಲಿ ಸಿಧು ಹೊಸ ಪಕ್ಷ ರಚಿಸಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ.
ಸಿಧು ಅವರ ಅವಾಜ್-ಇ- ಪಂಜಾಬ್ ಎಂಬ ಹೆಸರಿನ ಈ ಪಕ್ಷ ಪಂಜಾಬ್ ನಲ್ಲಿ ಹೊಸ ಶಕೆಯನ್ನು ಆರಂಭಿಸುವ ಉದ್ದೇಶ ಹೊಂದಿದೆ. ಕಾಂಗ್ರೆಸ್ ಹೊರತುಪಡಿಸಿದರೆ ಪಂಜಾಬಿನಲ್ಲಿ ಅಕಾಲಿದಳವೇ ಪ್ರಮುಖ ಪಕ್ಷವಾಗಿದೆ. ಅದರೆ ಇದು ಸ್ವತಂತ್ರವಾಗಿ ಆಡಳಿತ ನಡೆಸುವ ಸ್ಥಿತಿಯಲ್ಲಿಲ್ಲದ ಕಾರಣ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಕೇಂದ್ರ ಸರ್ಕಾರಕ್ಕೂ ಅಕಾಲಿದಳ ಬೆಂಬಲ ನೀಡಿದೆ. ಆದರೆ ಸಿಧು ಅಕಾಲಿದಳದ ಕಟ್ಟಾ ವಿರೋಧಿಯಾಗಿರುವುದು ಹೊಸ ಬೆಳವಣಿಗೆಗಳನ್ನು ಸೃಷ್ಟಿಸುವ ಸಾಧ್ಯತೆ ಇದೆ.
ಸಿಧು ಜೊತೆ ಭಾರತ ಹಾಕಿ ತಂಡದ ಮಾಜಿ ನಾಯಕ ಹಾಗೂ ಅಕಾಲಿದಳದ ಹಾಲಿ ಶಾಸಕ ಪರ್ಗತ್ ಸಿಂಗ್ ಮತ್ತು ಪಕ್ಷೇತರ ಸದಸ್ಯ ಬೇನ್ಸ್ ಕೈಜೋಡಿಸಿದ್ದಾರೆ. ಪರ್ಗತ್ ಅವರು ಪಕ್ಷದ ನಾಯಕತ್ವವನ್ನು ಟೀಕಿಸಿದ್ದಕ್ಕಾಗಿ ಇತ್ತೀಚೆಗಷ್ಟೇ ಅವರನ್ನು ಅಕಾಲಿದಳದಿಂದ ಅಮಾನತುಗೊಳಿಸಲಾಗಿತ್ತು. ಬೇನ್ಸ್ ಸಹ ಅಕಾಲಿದಳದಿಂದ ಟಿಕೆಟ್ ಸಿಗಲಿಲ್ಲ ಎಂದು ಅದರ ವಿರುದ್ದ ಸೆಡ್ಡು ಹೊಡೆದು ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದವರು. ಈಗ ಹೊಸ ಪಕ್ಷ ಕಟ್ಟಿರುವ ಸಿಧು ಮುಂದಿನ ಚುನಾವಣೆಯಲ್ಲಿ ಎಎಪಿ ಜೊತೆ ಸೇರಿ ಸ್ಪರ್ಧಿಸಿ ಹೊಸ ಸರ್ಕಾರ ರಚಿಸುವ ವಿಶ್ವಾಸದಲ್ಲಿದ್ದಾರೆ ಎನ್ನಲಾಗುತ್ತಿದೆ. ಪಂಜಾಬ್ ನಲ್ಲಿ ನಡೆದ ಈ ನಾಟಕೀಯ ಬೆಳವಣಿಗೆಯಿಂದ ಅಲ್ಲಿನ ಸರ್ಕಾರ ಗಂಭೀರ ಚಿಂತನೆ ನಡೆಸುವಂತಾಗಿದೆ. ಅಕಾಲಿದಲ, ಕಾಂಗ್ರೆಸ್ ಮತ್ತು ಬಿಜೆಪಿ ಮೂರೇ ಪಕ್ಷಗಳು ಆ ರಾಜ್ಯದಲ್ಲಿವೆ. ಈಗ ಎಎಪಿ ಮತ್ತು ಸಿಧು ಅವರ ಅವಾಜ್ -ಇ- ಪಂಜಾಬ್ ನಿಂದ ನಾಲ್ಕು ಪಕ್ಷಗಳು ಚುನಾವಣೆಯಲ್ಲಿ ಸೆಣೆಸುವಂತಾಗಿದೆ.
10 ವರ್ಷಗಳಿಂದ ಆಡಳಿತಾರೂಢವಾಗಿರುವ ಅಕಾಲಿದಳದ ಬಗ್ಗೆ ಸಾಕಷ್ಟು ಭ್ರಮನಿರಸನ ಅಲ್ಲಿನ ಜನತೆಯಲ್ಲಿ ಮೂಡಿರುವುದು ಸತ್ಯ. ಇದರ ಲಾಭವನ್ನು ಈ ಮೂವರು ನಾಯಕರು ಸದುಪಯೋಗಪಡಿಸಿಕೊಳ್ಳಲು ತಂತ್ರ ಹೆಣೆದಿದ್ದಾರೆ. ಅಲ್ಲಿನ ಪ್ರತಿಯೊಬ್ಬ ಮತದಾರನ ಅಚ್ಚುಮೆಚ್ಚಿನ ಕ್ರಿಕೆಟ್ ಮತ್ತು ಹಾಕಿ ಆಟಗಾರರಾದ ಸಿಧು ಮತ್ತು ಪರ್ಗತ್, ಎಎಪಿ ಜೊತೆಗೆ ಗೌಪ್ಯವಾಗಿಯೇ ವ್ಯವಹರಿಸುತ್ತಿದ್ದಾರೆಂಬ ಮಾತು ಕೇಳಿಬರುತ್ತಿದೆ. ಸೀಟು ಹೊಂದಾಣಿಕೆ ಸಹಿತ ಹಲವು ವಿಚಾರಗಳು ಈಗಾಗಲೆ ಇತ್ಯರ್ಥವಾಗಿವೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಚುನಾವಣೆ ಘೋಷಣೆ ಮುನ್ನವೇ ಸೂಕ್ತ ತಯಾರಿ ನಡೆಸುವುದು ಅವರ ಮುಂದಿರುವ ತಂತ್ರವಾಗಿದೆ ಎಂದು ಹೇಳಲಾಗುತ್ತಿದೆ..
ಮತದಾರರಲ್ಲಿ ರಿಂಗಣಿಸುತ್ತಿರುವ ತನ್ನ ನೀತಿಗಳ ಬಗ್ಗೆ, ಕಾರ್ಯವೈಖರಿಗಳ ಬಗ್ಗೆ ಮೊದಲೇ ಅಕಾಲಿದಳ ಚಿಂತಿತವಾಗಿದೆ. ಇನ್ನೊಂದೆಡೆ, ಕಾಂಗ್ರೆಸ್ ಮತ್ತು ಎಎಪಿ ಸಹ ನಿದ್ದೆಗೆಡುವಂತೆ ಈ ಬೆಳವಣಿಗೆ ಮಾಡಿದೆ. ಕಾಂಗ್ರೆಸ್ ಸಾಕಷ್ಟು ನಿರೀಕ್ಷೆಗಳನ್ನು ಮುಂದಿನ ಚುನಾವಣೆ ಬಗ್ಗೆ ಹೊಂದಿತ್ತು. ಎಎಪಿ ಸಹ ಇದೇ ಆಶಾಭಾವನೆಯಲ್ಲಿತ್ತು. ಏಕೆಂದರೆ ಅಕಾಲಿದಳದ ಬಗ್ಗೆ ಇರುವ ನಕಾರಾತ್ಮಕ ಬೆಳವಣಿಗೆ ತನಗೆ ಅನುಕೂಲವಾಗಲಿದೆ ಎಂದೇ ಎಎಪಿ ಮತ್ತು ಕಾಂಗ್ರೆಸ್ ಭಾವಿಸಿದ್ದವು.
ಸಿಧು ಈ ಎಲ್ಲ ಅವಕಾಶಗಳನ್ನು ಈಗ ಗುಡಿಸಿಹಾಕುವುದು ನಿಶ್ಚಿತವಾಗಿದೆ. ಎಎಪಿ ತನ್ನನ್ನು ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಎಂಧು ಘೋಷಿಸಲಿಲಲ್ಲ ಎಂಬ ಸಿಟ್ಟಿದೆ. ಅದನ್ನು ಚುನಾವನೆ ಮೂಲಕ ತೀರಿಸಿಕೊಳ್ಳುವರೇ ಅಥವಾ ಅದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವರೇ ಎನ್ನುವುದು ಇನ್ನೂ ಬೆಳಕಿಗೆ ಬಂದಿಲ್ಲ. ಕೆಲವು ಮಾಹಿತಿಗಳ ಪ್ರಕಾರ, ಪಂಜಾಬ್ ಎಎಪಿ ಮುಖ್ಯಸ್ಥ ಹಿಮ್ಮತ್ ಸಿಂಗ್ ಜೊತೆ ಸಿಧು ಮಾತುಕತೆ ನಡೆಸಿದ್ದಾರೆ. ಮೈತ್ರಿ ಬಗ್ಗೆ ಒಪ್ಪಿಗೆ ಸಿಕ್ಕಿದೆ. ಈ ಮಧ್ಯೆ ಎಎಪಿಯ ಪ್ರಮುಖನಾಗಿದ್ದ ಸುಖ್ ಸಿಂಗ್ ಅವರನ್ನು ಎಎಪಿ ವಜಾ ಮಾಡಿದ ಕಾರಣ ಪಕ್ಷ ತನ್ನ ಮೊದಲಿನ ಹೆಸರನ್ನು ಉಳಿಸಿಕೊಂಡಿಲ್ಲ. ಈ ಪಕ್ಷದ ಬಂಡಾಯ ನಾಯಕರು ಮತ್ತು ಕಾರ್ಯಕರ್ತರು ಸಿಧು ಪಕ್ಷ ಸೇರುವುದು ನಿಶ್ಚಿತವಾಗಿದೆ. ಇದು ಆಪಕ್ಷದ ಮುಖಂಡ ಹಿಮ್ಮತ್ಗೆ ನಿದ್ದೆ ಬಾರದಂತೆ ಮಾಡಿದೆ. ಹೊರಬಂದ ಈ ಬಂಡಾಯಗಾರರು ತಮ್ಮದು ನೈಜ ಎಎಪಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಕೇಜ್ರಿವಾಲ್ ಸಹ ಸಿಧು ಜೊತೆ ಮಾತುಕತೆ ನಡೆಸಿದ್ದರಾದರೂ ಪರಿಣಾಮ ಬೀರಲಿಲ್ಲ. ಹೀಗಿರುವಾಗ ಸಿಧು ಅವರೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಬಹುದೇ ಎನ್ನುವ ಚಚೇ ರಾಜ್ಯದಲ್ಲಿ ನಡೆಯುತ್ತಿದೆ.
ನಾಲ್ಕನೆಯ ರಂಗವಾಗಿ ಹೊರಹೊಮ್ಮಿರುವ ಸಿಧು ಪಕ್ಷದಿಂದ ಕಾಂಗ್ರೆಸ್ ಗೆ ಹೆಚ್ಚು ಹಾನಿಯಾಗಲಿದೆ. ಹಾಲಿ ಮುಖ್ಯಮಂತ್ರಿ ಬಾದಲ್ ಅವರ ವಿರುದ್ಧವಿರುವ ಮತಗಳನ್ನೆಲ್ಲ ತಾನು ಬಾಚಿಕೊಳ್ಳುವ ಆಸೆ ಕಾಂಗ್ರೆಸ್ ಗಿತ್ತು. ಆದರೆ ಎಎಪಿ ಸಹ ಇದಕ್ಕಾಗಿ ತನ್ನ ಸಾಹಸವನ್ನು ಮುಂದುವರೆಸಿತ್ತು. ಆ ಪಕ್ಷವು ಇಬ್ಭಾಗವಾಗಿದ್ದರಿಂದ ಕಾಂಗ್ರೆಸ್ ಮತ್ತೆ ಕನಸು ಕಂಡಿತ್ತು. ಆದರೆ ಸಿಧು ಪಕ್ಷ ಈ ಎಲ್ಲ ಕನಸುಗಳಿಗೆ ತಡೆ ಹಾಕಿದೆ. ಮತ್ತೆ ಅಕಾಲಿದಳವೇ ನೇರ ಪೈಪೋಟಿ ನೀಡಬಹುದು. ಸಿಧು ಪಕ್ಷ ಈ ಮೂರೂ ಪಕ್ಷಗಳ ಮತವನ್ನು ಕಸಿದುಕೊಂಡು ಮುನ್ನುಗ್ಗಬಹುದೆ ಎನ್ನುವ ಪ್ರಶ್ನೆಗೆ ಸದ್ಯ ಉತ್ತರವಿಲ್ಲ.
ವ್ಯಕ್ತಿಯ ಜನಪ್ರಿಯತೆ ಬೇರೆ. ರಾಜಕೀಯ ಬೇರೆ. ಮತ ಹಾಕುವವರು ಲಾಭ-ನಷ್ಟಗಳನ್ನು ಗಮನಿಸುತ್ತಾರೆ. ದೇಸದ ಹಲವು ರಾಜ್ಯಗಳಲ್ಲಿ ಸಿನಿಮಾ ನಟರು, ಕ್ರಿಕೆಟಿಗರು, ರಾಜಕಿಯ ಮಾಡಿದ್ದು ಕಣ್ಣೆದುರಿರುವಾಗ ಸುಲಭವಾಗಿ ಸಿಧುವನ್ನು ಅಲ್ಲಿನ ಮತದಾರ ಮೇಲಕ್ಕೆತ್ತುತ್ತಾನೆಯೇ ಎನ್ನುವುದಕ್ಕೆ ಕಾಲವೇ ಉತ್ತರ ಹೇಳಬೇಕು.
Discussion about this post