ಇಸ್ಲಾಮಾಬಾದ್:ಅ:28 ಪನಾಮಾ ದಾಖಲೆಯಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೆಸರು ಬಹಿರಂಗವಾಗಿರುವ ಹಿನ್ನಲೆಯಲ್ಲಿ ಪಾಕ್ ನಲ್ಲಿ ಷರೀಫ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ನಲ್ಲಿ 2 ತಿಂಗಳ ಕಾಲ ಸೆಕ್ಷನ್-144ನ್ನು ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನವಾಜ್ ಷರೀಫ್ ಅವರ ಇಬ್ಬರು ಪುತ್ರರು ಹಾಗೂ ಪುತ್ರಿ ಬ್ರಿಟನ್ನಿನಲ್ಲಿ ಆಸ್ತಿ ಹೊಂದಿರುವುದು ಏಪ್ರಿಲ್ ತಿಂಗಳಿನಲ್ಲಿ ಬಹಿರಂಗವಾಗಿದ್ದ ಪನಾಮಾ ದಾಖಲೆಗಳಲ್ಲಿ ಬಯಲಾಗಿತ್ತು. ಷರೀಫ್ ಅವರು ತಮ್ಮ ಕುಟುಂಬದ ಆಸ್ತಿ ವಿವರದಲ್ಲಿ ಇದನ್ನು ಉಲ್ಲೇಖಿಸಿರಲಿಲ್ಲ. ಪನಾಮಾ ದಾಖಲೆಗಳಲ್ಲಿ ಹೆಸರು ಬಹಿರಂಗವಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಬೇಕೆಂದು ಪ್ರತಿಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಆಗ್ರಹಿಸುತ್ತಿದೆ.
ನವಾಜ್ ಷರೀಫ್ ಅವರ ವಿರುದ್ಧ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕ್ರಮಕೈಗೊಂಡಿರುವ ಅಲ್ಲಿನ ಅಧಿಕಾರಿಗಳು, ಮುಂದಿನ 2 ತಿಂಗಳ ಕಾಲ ಇಸ್ಲಾಮಾಬಾದ್ ನಲ್ಲಿ ಸೆಕ್ಷನ್-144 ಜಾರಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇಸ್ಲಾಮಾಬಾದ್ ನಲ್ಲಿ ಯಾವುದೇ ಪ್ರತಿಭಟನೆಗಳು, ಸಮಾವೇಶಗಳು ನಡೆಯದಂತೆ ಕ್ರಮಕೈಗೊಳ್ಳಲಾಗಿದೆ.
Discussion about this post