Read - 3 minutes
ಪಶ್ಚಿಮ ಕರಾವಳಿಯ ಕ್ರೈಸ್ತರು ಮತ್ತೊಮ್ಮೆ ಸಂಪ್ರದಾಯಗಳ ಸುಗ್ಗಿಯಾದ ಸಾಂಪ್ರದಾಯಿಕ ಮೊಂತಿ ಹಬ್ಬ ಅಥವಾ ಸ್ಥಳೀಯ ತುಳುಭಾಷೆಯಲ್ಲಿ ‘ಕುರಲ್ ಪರ್ಬ’ ವನ್ನು ಆಚರಿಸಲು ಸಿದ್ಧವಾಗುತ್ತಿದ್ದಾರೆ. ನಿರೀಕ್ಷೆಗೆ ತಕ್ಕಂತೆ ಮಳೆಯಾಗದಿದ್ದರೂ ಹಬ್ಬವನ್ನು ಆಚರಿಸುವ ಹುಮ್ಮಸ್ಸು ಕಡಿಮೆಯಾಗಿಲ್ಲ. ಸುರಿದ ಮಿತವಾದ ಮಳೆಯಿಂದ ಹಸಿರಿನಿಂದ ಸಮೃದ್ಧವಾಗಿ ಬೆಳೆದ ಗಿಡಮರಗಳು ತಮ್ಮ ರೆಂಬೆಕೊಂಬೆಗಳನ್ನು ಹರಡಿ ಮೈಕೊಡವಿ ಎದ್ದುನಿಂತಾಗ, ಹಸಿರು ಬಟ್ಟೆಯನ್ನು ಹೊದ್ದುಕೊಂಡಂತೆ ಕಾಣುವ ಗಿರಿ-ಕಂದರಗಳು ಗುನುಗುನಿಸುವಾಗ, ಸಮೃದ್ಧ ಫಸಲಿನ ತೃಪ್ತಿಯಿಂದ ನಸುನಗುವ ಹೊಲಗದ್ದೆಗಳು, ಜುಳುಜುಳು ನೀರಿನಿಂದ ಹರಿಯುವ ಪುಟ್ಟ ತೊರೆಗಳು ಈ ಸುಂದರ ಹಬ್ಬಕ್ಕೆ ಹಿಮ್ಮೇಳವನ್ನು ಒದಗಿಸುತ್ತಿವೆ. ಇದೊಂದು ಸಂಬ್ರಮದ ಕಾಲ.
ಪಶ್ಚಿಮ ಕರಾವಳಿಯ ಕೊಂಕಣಿ ಕ್ರೈಸ್ತರು ಆಚರಿಸುವ ‘ಮೇರಿ ಮಾತೆಯ ಹುಟ್ಟಿದ ಹಬ್ಬ’ ಕೇರಳದ ಜನರ ಓಣಂ ಆಚರಣೆ ಹಾಗೂ ಹಿಂದೂ ಬಾಂಧವರು ಆಚರಿಸುವ ಚೌತಿಹಬ್ಬದೊಂದಿಗೆ ಸಾಮ್ಯತೆ ಹೊಂದಿದೆ. ಭಾರತದ ಮೂರು ಪ್ರಮುಖ ಧರ್ಮಗಳಾದ ಹಿಂದೂ, ಇಸ್ಲಾಮ್, ಕ್ರೈಸ್ತರ ಹಬ್ಬಗಳು ಕ್ರಮವಾಗಿ ಗಣೇಶ ಚತುರ್ಥಿ, ಬಕ್ರೀದ್ ಹಾಗೂ ಮೊಂತಿ ಹಬ್ಬ ಒಂದೇ ವಾರದೊಳಗೆ ಆಚರಣೆಯಾಗುವುದು ನಿಜವಾಗಿಯೂ ಭಾರತದ ಧಾರ್ಮಿಕ ಭಾವೈಕ್ಯತೆ ಕನ್ನಡಿ ಹಿಡಿದಂತಿದೆ.
ಮೊಂತಿ ಹಬ್ಬದ ಆರಂಭ
ಸಂಪ್ರದಾಯಗಳಿಂದ ತುಂಬಿದ ಮೊಂತಿ ಹಬ್ಬದ ಆರಂಭದ ಬಗ್ಗೆ ಅನೇಕ ಅಭಿಪ್ರಾಯಗಳಿವೆ. ಈ ಹಬ್ಬದ ಬೇರುಗಳು ಪೋರ್ಚುಗೀಸ್ ಸಂಪ್ರದಾಯದಿಂದ ಹಿಡಿದು ಸ್ಥಳೀಯ ತುಳುನಾಡವರೆಗೂ ಹಬ್ಬಿವೆ.
ಶ್ರಾವಣ ಮಾಸ ಕಳೆದು ಬರುವ ಭಾದ್ರಪದ ಮಾಸದ ನಾಲ್ಕನೇ ದಿನವೇ ಗಣೇಶ ಚತುರ್ಥಿ. ಈ ಹಬ್ಬವನ್ನು ಕುಟುಂಬದ ಎಲ್ಲಾ ಸದಸ್ಯರು ಜೊತೆಗೂಡಿ ಒಂದೂವರೆ ದಿನದಿಂದ ಹತ್ತು ದಿನಗಳವರೆಗೂ ಆಚರಿಸುತ್ತಾರೆ. ಈ ಹಬ್ಬದ ಪ್ರಯುಕ್ತ ಗಣೇಶನ ವಿಗ್ರಹವನ್ನು ಕೂರಿಸಿ ಹತ್ತು ದಿನಗಳ ಕಾಲ ಪ್ರತಿನಿತ್ಯ ಹೂಗಳಿಂದ ಪೂಜಿಸಲಾಗುತ್ತದೆ. ಹಬ್ಬದ ಒಂದು ದಿನ ಹೊಸ ಪೈರನ್ನು ತಂದು ಎಲ್ಲರೂ ಹಂಚಿಕೊಳ್ಳುತ್ತಾರೆ.
ಹದಿನಾರನೇ ಶತಮಾನದಲ್ಲಿ ಪೋರ್ಚುಗೀಸರು ಗೋವಾಕ್ಕೆ ಬಂದಿಳಿದರು. 1519 ರಲ್ಲಿ ಆಲ್ಫೊನ್ಸೊ ಆಲ್ಬುಕರ್ಕ್ ಎಂಬವ ಓಲ್ಡ್ ಗೋವಾದ ಎತ್ತರದ ದಿಬ್ಬವೊಂದರ ಮೇಲೆ ಪುಟ್ಟ ಚರ್ಚೊಂದನ್ನು ನಿರ್ಮಿಸಿದ. ಅದಕ್ಕೆ ‘ದಿಬ್ಬದ ಮೇಲಿನ ಮಾತೆಯ ಮಂದಿರ’ ಎಂದು ಹೆಸರಿತ್ತ. ಆ ಪುಟ್ಟ ಚರ್ಚ್ ಇಂದಿಗೂ ಅಸ್ತಿತ್ವದಲ್ಲಿದೆ. ಆ ಚರ್ಚ್ ನಲ್ಲಿ ‘ಮೊಂತಿ ಮಾತೆಯ ಹಬ್ಬ’ ಸೆಪ್ಟೆಂಬರ್ 8 ರಂದು ಇಂದಿಗೂ ನಡೆಯುತ್ತದೆ.
ಬಹುಸಂಸ್ಕೃತಿಗಳ ಪರಿಸರದಲ್ಲಿ ಜೀವಿಸುತ್ತಿರುವ ಕ್ರೈಸ್ತರು ಇತರ ಧರ್ಮಗಳ ಹಲವು ಸಂಪ್ರದಾಯಗಳನ್ನು ಅನುಕರಿಸಿ ಮಾತೆ ಮರಿಯಮ್ಮನವರಿಗೆ ಹೂಗಳನ್ನು ಅರ್ಪಿಸಿ ಹಬ್ಬವನ್ನು ಆಚರಿಸಿದರು. ಹೀಗೆ ವಿವಿಧ ಧರ್ಮಗಳ ಸಂಪ್ರದಾಯಗಳು ಮಿಳಿತು ಮೊಂತಿ ಹಬ್ಬದ ಸಂಪ್ರದಾಯ ಆರಂಭವಾಯಿತು. ಹೊಸ ಪೈರನ್ನು ಹಂಚಿಕೊಳ್ಳುವ ಸಂಪ್ರದಾಯವೂ ಮುಂದುವರಿಯಿತು.
ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಬಂಟ್ವಾಳದ ಫರಂಗಿಪೇಟೆಯ ‘ಮೊಂತೆ ಮರಿಯಾನೊ’ ಅಂದರೆ ‘ಮೇರಿ ಮಾತೆಯ ದಿಬ್ಬ’ ಎಂಬಲ್ಲಿ ಗೋವಾದ ಯಾಜಕರಾದ ಸ್ವಾಮಿ ಜೋಕಿಮ್ ಡಿ’ಸೋಜಾರವರು ಆ ದೇವಾಲಯದ ವಾರ್ಷಿಕ ಹಬ್ಬವನ್ನು ಮೇರಿ ಮಾತೆಯ ಹುಟ್ಟು ಹಬ್ಬವಾದ ಸೆಪ್ಟೆಂಬರ್ 8 ರಂದು ನಿಗದಿಗೊಳಿಸಿದರು. ಈ ಕಾರಣದಿಂದ ಈ ಹಬ್ಬಕ್ಕೆ ‘ಮೊಂತಿ ಹಬ್ಬ’ ಎಂಬ ಹೆಸರು ಬಂತು.
ತರಕಾರಿಗಳಿಂದ ಸಮೃದ್ಧವಾದ ಭೋಜನವನ್ನು ಸೇವಿಸುವ ಸಂಪ್ರದಾಯವು ಖಂಡಿತವಾಗಿ ಪೋರ್ಚುಗೀಸ್ ಅಥವಾ ಗೋವಾ ಮೂಲದಿಂದ ಬಂದದ್ದಲ್ಲ, ಬದಲಾಗಿ ತುಳುನಾಡಿನದು. ಮಳೆಗಾಲ ಮೀನುಗಾರಿಕೆಗೆ ನಿಷೇಧವಿರುವುದರಿಂದ ಈ ಹಬ್ಬಕ್ಕೆ ಪ್ರಕೃತಿಯಲ್ಲಿ ದೊರೆಕುವ ತರಕಾರಿಗಳನ್ನು ಉಪಯೋಗಿಸುವುದು ಅನಿವಾರ್ಯ. ಉಡುಪಿ, ಕುಂದಾಪುರದ ಪ್ರದೇಶಗಳಲ್ಲಿ ತರಕಾರಿಗೆ ಬದಲಾಗಿ ಉತ್ತಮ ಮೀನಿನ ಖಾದ್ಯಗಳನ್ನು ತಯಾರಿಸುವುದು ವಾಡಿಕೆ. ನಿಷೇಧ ಕಳೆದು ಮೀನುಗಾರಿಕೆ ಆರಂಭಿಸಿದುದರಿಂದ ಸಿಕ್ಕಿದ ಉತ್ತಮ ಮೀನುಗಳು ಹಬ್ಬಕ್ಕೆ ಉಪಯೋಗವಾಗುತ್ತವೆ.
ಮುಂಜಾವಿನ ತಾರೆ ಮಾತೆ ಮರಿಯಳ ಜನನ
ಭಗವಂತನ ನವ ಸೃಷ್ಟಿಯ ಆರಂಭ ಮಾತೆ ಮರಿಯಳ ಜನನದಿಂದ ಆಗುತ್ತದೆ. ಮರಿಯಳ ಜನನವು ದೇವರು ವಾಗ್ದಾನಿಸಿದ ಮಾನವಕುಲಕ್ಕೆ ವಿಮೋಚನೆ ನೀಡುವ ಸೂರ್ಯನಾದ ಯೇಸುಕ್ರಿಸ್ತರ ಉದಯವನ್ನು ಮುಂಚಿತವಾಗಿ ತಿಳಿಸಿತು. ಪಾಪದ ಕಳಂಕವು ತಟ್ಟದಂತೆ ಮಾತೆ ಮರಿಯಳನ್ನು ದೇವರು ಕಾಪಾಡಿದರು. ಪಾಪದ ಹಾಗೂ ದಂಡನೆಯ ಯುಗವು ಕಳೆದು ಕೃಪಾವರಗಳ ಹಾಗೂ ಕ್ಷಮೆಯ ಯುಗಾರಂಭದ ಸುವಾರ್ತೆಯು ಮರಿಯಳ ಹುಟ್ಟಿನ ಮೂಲಕ ಮಾನವಕುಲಕ್ಕೆ ಲಭಿಸಿತು.
ದೇವರಿತ್ತ ಪೃಕೃತಿಯ ಫಲಗಳು
ಯಹೂದ್ಯ ಜನತೆಯ ಸಂಪ್ರದಾಯಗಳಲ್ಲಿ ಪ್ರಕೃತಿಯ ಪ್ರಥಮ ಫಲಗಳ ಸಮರ್ಪಣೆ ದೇವರಿಗೆ ಮೆಚ್ಚುಗೆಯಾಗುವುದು ಎಂಬ ನಂಬಿಕೆಯಿದೆ. ನಲ್ವತ್ತು ವರ್ಷಗಳ ದೀರ್ಘ ಮರುಭೂಮಿಯ ಪ್ರಯಾಣದ ನಂತರ, ‘ಹಾಲು-ಜೇನಿ’ನಿಂದ ತುಂಬಿ ಹರಿಯುತ್ತಿದ್ದ ವಾಗ್ದತ್ತ ನಾಡಿಗೆ ಅವರನ್ನು ದೇವರು ಕರೆದೊಯ್ದಾಗ, ಅಲ್ಲಿ ಅವರು ನೆಲೆನಿಂತು ವ್ಯವಸಾಯದಿಂದ ಸಮೃದ್ಧ ಜೀವನ ಸಾಗಿಸುವ ಭಾಗ್ಯ ಅವರದಾಯಿತು. ದೇವರ ಈ ಮಹತ್ಕಾರ್ಯವನ್ನು ಸ್ಮರಿಸಿ, ಕೃತಜ್ಞತಾಭಾವದೊಂದಿಗೆ ಭೂಮಿಯ ಪ್ರಥಮ ಫಲಗಳನ್ನು ಅವರು ದೇವರಿಗೆ ಸಮರ್ಪಿಸಿದರು.
ಮಕ್ಕಳಿಲ್ಲದೆ ಬರಡಾಗಿದ್ದ ಜೋಕಿಮ್ ಮತ್ತು ಆನ್ನಮ್ಮರ ಜೀವನದಲ್ಲಿ ಮರಿಯಳ ಹುಟ್ಟು ಅವರಲ್ಲಿ ‘ಹೊಸ ಸುಗ್ಗಿ’ಯನ್ನು ತಂದಿತು. ಈ ಭೂಮಿಯಲ್ಲಿ ದೇವರೊಡಗೂಡಿ ದುಡಿದು ಈ ಭೂಮಿಯನ್ನು ಅಭಿವೃದ್ಧಿಪಡಿಸಬೇಕೆಂಬ ಉದ್ದೇಶದಿಂದ ದೇವರು ಮನುಜನನ್ನು ಸೃಷ್ಟಿಸಿದ್ದಾರೆ. ಆದರೆ ಮನುಷ್ಯ ಈ ಉದ್ದೇಶವನ್ನು ಮರೆತು ಸ್ವಾರ್ಥ ಚಿಂತನೆಯಿಂದ ಇಡೀ ಸೃಷ್ಟಿಯನ್ನು ಹಾಳುಗೆಡವಿ ವಿಕೃತಗೊಳಿಸುತ್ತಿದ್ದಾನೆ. ಗಣಿಗಾರಿಕೆಯಿಂದ ಸುಂದರ ಬೆಟ್ಟಗುಡ್ಡಗಳನ್ನು ಕಡಿದು ಹಾಳುಗೆಡವುತ್ತಿದ್ದಾನೆ, ನೀರುಣಿಸುವ ಕೆರೆ ತೊರೆಗಳನ್ನು ಮಟ್ಟಮಾಡಿ ಕಾಂಕ್ರಿಟ್ಮಯಗೊಳಿಸುತ್ತಿದ್ದಾನೆ, ಕಾರ್ಖಾನೆಗಳು, ವಾಹನಗಳ ವಿಷಬರಿತ ಹೊಗೆಯಿಂದ ಗಾಳಿಯನ್ನು ಕಲುಷಿತಗೊಳಿಸುತ್ತಿದ್ದಾನೆ, ಪರಿಸರವನ್ನು ಕೆಡಿಸುತ್ತಿದ್ದಾನೆ. ಮಾನವ ಜೀವದ ಸೆಲೆಯಾದ ಪೃಕೃತಿಮಾತೆಗೆ ನಮಿಸಿ ಅವಳ ಗಾಯಗಳಿಗೆ ಸಾಂತ್ವನದ ಮುಲಾಮನ್ನು ಹಚ್ಚುವ ಸುಂದರ ಹಬ್ಬವೂ ಆಗಿದೆ ‘ಮೊಂತಿಹಬ್ಬ’.
ಕುಟುಂಬ ಐಕ್ಯತೆಗೆ ಪ್ರಾಧಾನ್ಯತೆ
ಈ ಹಬ್ಬ ‘ಕುಟುಂಬದ ಹಬ್ಬ’ವೆಂದು ಹಿಂದಿನಿಂದಲೂ ಪ್ರಖ್ಯಾತಿ ಪಡೆದಿದೆ. ಈ ಹಬ್ಬಕ್ಕೆ ಕುಟುಂಬದ ಎಲ್ಲ ಸದಸ್ಯರು ಒಗ್ಗಟ್ಟಿನಿಂದ ಒಗ್ಗೂಡುತ್ತಾರೆ. ದೇವಾಲಯದಲ್ಲಿ ಬಲಿಪೂಜೆಯ ಸಂದರ್ಭದಲ್ಲಿ ಆಶೀರ್ವದಿಸಿದ ಹೊಸ ಪೈರಿನ ಕಾಳುಗಳನ್ನು ಮನೆಗೊಯ್ದು ಭಕ್ತಿಯಿಂದ ಪ್ರಾರ್ಥನೆ ಹಾಗೂ ಹಾಡಿನ ಮೂಲಕ ದೇವರನ್ನು ಸ್ತುತಿಸಿ, ಆ ಹೊಸ ಬತ್ತದ ಅಕ್ಕಿಯನ್ನು ಪುಡಿಮಾಡಿ ಹಾಲು ಅಥವಾ ತೆಂಗಿನ ರಸದಲ್ಲಿ ಮಿಶ್ರಮಾಡಿ ಸೇವಿಸುತ್ತಾರೆ. ಕುಟುಂಬದ ಐಕ್ಯತೆಯ ದ್ಯೋತಕವಾಗಿ ಬತ್ತದ ಕಾಳುಗಳನ್ನು ವಿದೇಶದಲ್ಲಿರುವ ಕುಟುಂಬದ ಸದಸ್ಯರಿಗೂ ಕಳುಹಿಸಿಕೊಡುತ್ತಾರೆ. ಜೊತೆಯಾಗಿ ಭುಜಿಸುವ ಕುಟುಂಬ ಜೊತೆಯಾಗಿ ಬಾಳುವಂತೆ ಕುಟುಂಬದ ಸದಸ್ಯರ ಮಧ್ಯೆ ಏಕತೆ, ಒಗ್ಗಟ್ಟು, ಒಮ್ಮನಸ್ಸು ಬೆಳೆಯಲು ‘ಮೊಂತಿ ಹಬ್ಬ’ ಕಾರಣವಾಗುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಹಬ್ಬದ ದಿನದಂದು ಜೊತೆಸೇರಲು ಸಾಧ್ಯವಿಲ್ಲದಿದ್ದ ಪಕ್ಷದಲ್ಲಿ, ಹಬ್ಬವನ್ನು ಎಲ್ಲರು ಜೊತೆಸೇರುವ ಬೇರೊಂದು ಸಂದರ್ಭದಲ್ಲಿ ಆಚರಿಸುವ ಪರಿಪಾಠವಿದೆ.
ಮೊಂತಿ ಹಬ್ಬ: ಹೆಣ್ಣಿನ ಗೌರವದ ದ್ಯೋತಕ
ತಂತ್ರಜ್ಞಾನದಲ್ಲಿ ಮುನ್ನಡೆಯುತ್ತಿರುವ ಈ ಇಪ್ಪತ್ತೊಂದನೇ ಶತಮಾನದಲ್ಲೂ ನಮ್ಮ ತಾಯಿ, ಅಕ್ಕ-ತಂಗಿಯರಿಗೆ ಸಮಾಜದಲ್ಲಿ ಗೌರವ, ಸ್ಥಾನ-ಮಾನ ಸಿಗುತ್ತಿಲ್ಲ ಎಂಬುದು ಸತ್ಯ. ಪುರುಷನೊಡನೆ ಸರಿಸಮವಾಗಿ ಪ್ರಾರ್ಥಿಸಲೂ ಕೂಡಾ ಅವಳು ಹೋರಾಟ ನಡೆಸಬೇಕಾಗಿದೆ ಎಂಬುದನ್ನು ಪ್ರಸ್ತುತ ನಡೆಯುತ್ತಿರುವ ಘಟನೆಗಳು ನಮಗೆ ಸ್ಪಷ್ಟಪಡಿಸುತ್ತವೆ. ಇತ್ತೀಚೆಗೆ ನಡೆದ ರಿಯೋ ಒಲಿಂಪಿಕ್ಸ್ ನಲ್ಲಿ ನೂರಾ ಇಪ್ಪತ್ತು ಕೋಟಿ ಭಾರತೀಯರ ಮಾನವನ್ನು ಉಳಿಸಿದ್ದು ಸಾಕ್ಷಿ ಮತ್ತು ಸಿಂಧು ಎಂಬ ಇಬ್ಬರು ಹೆಣ್ಣು ಮಕ್ಕಳು ಎಂಬುದು ಮಾರ್ಮಿಕ ಸತ್ಯ. ಭಾರತವನ್ನು ವಿಶ್ವಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿದ ಸೆಪ್ಟೆಂಬರ್ 4 ರಂದು ಸಂತ ಪದವಿಗೇರಿಸಲ್ಪಟ್ಟ ಕೊಲ್ಕತ್ತಾದ ಮದರ್ ತೆರೆಸಾ ಭಾರತದ ಹೆಮ್ಮೆಯ ಪುತ್ರಿ ಒಬ್ಬ ಹೆಣ್ಣೇ.
ಮಾತೆ ಮರಿಯಳ ಜನನದ ಹಬ್ಬವು ದೇವರು ಪುರುಷನಿಗೆ ಪೂರಕವಾಗಿ ಸೃಷ್ಟಿಸಿದ ಹೆಣ್ಣನ್ನು ನಾವು ಗೌರವದಿಂದ ಕಂಡು ಪುರಸ್ಕರಿಸಬೇಕೆಂದು ನಮಗೆ ಕರೆಕೊಡುತ್ತದೆ. ದೇವರ ಸುಂದರ ಸೃಷ್ಟಿಯಾದ ಪ್ರಾತಃಕಾಲದ ತಾರೆ ಮಾತೆ ಮರಿಯಮ್ಮ, ಸರ್ವರಿಗು ಸದ್ಬುದ್ದಿಯನ್ನು ಕೊಡಲಿ.
ಲೇಖಕರು: ಪರಮಪೂಜ್ಯ ಡಾ. ಜೆರಾಲ್ಡ್ ಲೋಬೊ
ಉಡುಪಿಯ ಧರ್ಮಾಧ್ಯಕ್ಷರು
Discussion about this post