ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ವತಿಯಿಂದ ನಾಡಹಬ್ಬ ದಸರಾ ಸೆ.22 ರಿಂದ ಅ.2ರವರೆಗೆ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಹಲವು ವಿಭಿನ್ನ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳೊಂದಿಗೆ ವೈಭವಯುತವಾಗಿ 10 ದಿನಗಳ ಕಾಲ ಆಚರಿಸಲಾಗುತ್ತಿದೆ ಎಂದು ನಗರಸಭೆ ಅಧ್ಯಕ್ಷೆ ಜೆ.ಸಿ. ಗೀತಾ ರಾಜ್‌ಕುಮಾರ್ ತಿಳಿಸಿದರು.
ಅವರು ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಾಡಹಬ್ಬ ದಸರಾ ಆಚರಿಸಲಾಗುತ್ತಿದ್ದು, ಸೆ.22ರಂದು ಬೆಳಿಗ್ಗೆ 10.30ಕ್ಕೆ ನಗರಸಭೆ ಸಭಾಂಗಣದಲ್ಲಿ ಹಿರಿಯ ಸಮಾಜ ಸೇವಕರಾದ ಎಚ್.ವಿ. ಶಿವರುದ್ರಪ್ಪ ಈ ಬಾರಿ ನಾಡಹಬ್ಬಕ್ಕೆ ಚಾಲನೆ ನೀಡುತ್ತಿದ್ದಾರೆ ಎಂದರು.
ನಗರಸಭೆ ಆವರಣದ ವೇದಿಕೆಯಲ್ಲಿ ಇದೆ ದಿನ ಬೆಳಿಗ್ಗೆ 9 ಗಂಟೆಗೆ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರಿಂದ ಭಾವಗೀತೆ ಮತ್ತು ಸುಗಮ ಸಂಗೀತಾ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6 ಗಂಟೆಗೆ ಶಿವಮೊಗ್ಗ ಝೇಂಕಾರ ಮೆಲೋಡಿಸ್ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ.
23ರಂದು ಬೆಳಿಗ್ಗೆ 9.30ಕ್ಕೆ ಜನ್ನಾಪುರ ಬಂಟರ ಭವನದಲ್ಲಿ ಮಹಿಳೆಯರಿಗೆ ಇಂಧನ ರಹಿತ ಅಡುಗೆ ಸ್ಪರ್ಧೆ ಆಯೋಜಿಸಲಾಗಿದ್ದು, ಆರ್ಟ್ ಆಫ್ ಲೀವಿಂಗ್ ಯೋಗ ಶಿಕ್ಷಕಿ ಭಾಗ್ಯಮೂರ್ತಿ ಉದ್ಘಾಟಿಸುವರು. ನಗರಸಭೆ ಆವರಣದ ವೇದಿಕೆಯಲ್ಲಿ ಸಂಜೆ 6 ಗಂಟೆಗೆ ಜನ್ನಾಪುರ ಡಾ.ಬಿ.ಆರ್. ಅಂಬೇಡ್ಕರ್ ಜಾನಪದ ಕಲಾ ಸಂಘದಿಂದ ಕಿರುನಾಟಕ ಮತ್ತು ಜಾನಪದ ಗೀತೆಗಳ ಗಾಯನ ಹಾಗೂ ನ್ಯೂಟೌನ್ ಮಿತ್ರಕಲಾ ಮಂಡಳಿಯಿಂದ ಸಂಗ್ಯಾ ಬಾಳ್ಯಾ ಜಾನಪದ ನಾಟ ಪ್ರದರ್ಶನ ಕಾರ್ಯಕ್ರಮ ನಡೆಯಲಿದ್ದು, ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ, ಹಿರಿಯ ನಗರಸಭಾ ಸದಸ್ಯ ವಿ. ಕದಿರೇಶ್ ಉದ್ಘಾಟಿಸುವರು ಎಂದರು.
24ರಂದು ಸಂಜೆ 6 ಗಂಟೆಗೆ ಭದ್ರಾ ಸುಗಮ ಸಂಗೀತಾ ವೇದಿಕೆಯಿಂದ ಸುಗಮ ಸಂಗೀತ ಹಾಗೂ ಆರ್.ಜೆ. ಕಲಾ ತಂಡದವರಿಂದ ಜಾನಪದ ಮತ್ತು ಸುಗಮ ಕಾರ್ಯಕ್ರಮ ನಗರಸಭೆ ಆವರಣದ ವೇದಿಕೆಯಲ್ಲಿ ನಡೆಯಲಿದ್ದು, ನಗರಸಭೆ ಹಿರಿಯ ಸದಸ್ಯ ಬಿ.ಕೆ. ಮೋಹನ್ ಕಾರ್ಯಕ್ರಮ ಉದ್ಘಾಟಿಸುವರು.
25ರಂದು ಬೆಳಿಗ್ಗೆ 9.30ಕ್ಕೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಗರದ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ಮಹಿಳಾ ಕ್ರೀಡಾ ಕೂಟ ಆಯೋಜಿಸಲಾಗಿದ್ದು, 3 ಬಾರಿ ಖೋ ಖೋ ರಾಷ್ಟ್ರ ಪ್ರಶಸ್ತಿ ವಿಜೇತ ಮಹಿಳಾ ಕ್ರೀಡಾಪಟು ಎಸ್. ಜಾನಕಿ ಸುರೇಶ್ ಕ್ರೀಡಾಕೂಟ ಉದ್ಘಾಟಿಸುವರು ಎಂದರು.
25ರಂದು ಸಂಜೆ 6 ಗಂಟೆಗೆ ನಗರಸಭೆ ಆವರಣದ ವೇದಿಕೆಯಲ್ಲಿ ಅಪರಂಜಿ ಅಭಿನಯ ಶಾಲೆ ವತಿಯಿಂದ ನಾಟಕ ಪ್ರದರ್ಶನ ಮತ್ತು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ದಸರಾ ಕವಿಗೋಷ್ಠಿ ಹಾಗೂ ಕಥೆ ಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್ ಉದ್ಘಾಟಿಸುವರು.
26ರಂದು ಬೆಳಿಗ್ಗೆ 10 ಗಂಟೆಗೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ಹಿರಿಯ ಕುಸ್ತಿಪಟು ಎಚ್. ವಾಸುದೇವ್ ಉದ್ಘಾಟಿಸುವರು. ಸಂಜೆ 6 ಗಂಟೆಗೆ ನಗರಸಭೆ ಆವರಣದ ವೇದಿಕೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ನಗರಸಭೆ ಹಿರಿಯ ಸದಸ್ಯ ಟಿಪ್ಪುಸುಲ್ತಾನ್ ಉದ್ಘಾಟಿಸುವರು ಎಂದರು.
27ರಂದು ಕನಕಮಂಟಪ ಮೈದಾನದಲ್ಲಿ ಬೆಳಿಗ್ಗೆ 10 ಗಂಟೆಗೆ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಕಬಡ್ಡಿ ಕೇಸರಿ ಪ್ರಶಸ್ತಿ ವಿಜೇತ ಎಚ್.ಎಲ್. ರಂಗನಾಥ್ ಉದ್ಘಾಟಿಸುವರು.28ರಂದು ಬೆಳಿಗ್ಗೆ 9.30ಕ್ಕೆ ನ್ಯೂಟೌನ್ ಸರ್.ಎಂ.ವಿ ಒಳಾಂಗಣ ಕ್ರೀಡಾಂಗಣದಲ್ಲಿ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಇದೆ ಮೊದಲ ಬಾರಿಗೆ ಏರ್ಪಡಿಸಲಾಗಿದ್ದು, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ರಾಬರ್ಟ್ ಡಿಸೋಜ ಉದ್ಘಾಟಿಸುವರು. ಸಂಜೆ 6 ಗಂಟೆಗೆ ಕನಕ ಮಂಟಪ ಮೈದಾನದಲ್ಲಿ ನಗರದ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳು ಮತ್ತು ಮಹಿಳಾ ಸ್ವ-ಸಹಾಯ ಸಂಘಗಳ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.
29ರಂದು ಸಂಜೆ 6 ಗಂಟೆಗೆ ಕನಕಮಂಟಪ ಮೈದಾನದಲ್ಲಿ ಚರಣ್ ಸಂಗೀತ ಮೆಲೋಡಿಯಿಂದ ಆರ್ಕೇಸ್ಟ್ರಾ ನಡೆಯಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು.
30ರಂದು ಸಂಜೆ 6 ಗಂಟೆಗೆ ಕನಕಮಂಟಪ ಮೈದಾನದಲ್ಲಿ ಕಾಮಿಡಿ ಕಿಲಾಡಿಗಳು ಹಾಗೂ ಗಾಯಕರಿಂದ ನೃತ್ಯ/ಸಂಗೀತ/ಕಾಮಿಡಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ. ಸಂಗಮೇಶ್ವರ್ ಉದ್ಘಾಟಿಸುವರು ಎಂದರು.
ಉಳಿದಂತೆ ಅ.1ರಂದು ಬೆಳಿಗ್ಗೆ 10 ಗಂಟೆಗೆ ಆಯುಧ ಪೂಜೆ ಹಾಗೂ 2ರಂದು ಮಧ್ಯಾಹ್ನ 3 ಗಂಟೆಗೆ ದಸರಾ ಮೆರವಣಿಗೆ ಲೋಯರ್ ಹುತ್ತಾ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ ನಡೆಯಲಿದ್ದು, ಸಂಜೆ 6 ಗಂಟೆಗೆ ಕನಕಮಂಟಪ ಮೈದಾನದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ. ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಪರುಸಪ್ಪ ಕುರುಬರ ಬನ್ನಿ ಮುಡಿಯುವರು ಎಂದರು.
ದಸರಾ ವಿವಿಧ ಸಮಿತಿಗಳ ಅಧ್ಯಕ್ಷರಾದ ಕೆ. ಸುದೀಪ್ ಕುಮಾರ್, ಕೆ. ಉದಯ್ ಕುಮಾರ್, ವಿ. ಕದಿರೇಶ್, ಚನ್ನಪ್ಪ, ಬಿ.ಎಂ. ಮಂಜುನಾಥ್, ಬಿ.ಪಿ. ಸರ್ವಮಂಗಳ ಭೈರಪ್ಪ, ಪೌರಾಯುಕ್ತ ಕೆ.ಎನ್. ಹೇಮಂತ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್. ಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post