ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ನಟನಂ ಬಾಲನಾಟ್ಯ ಕೇಂದ್ರದ ವಿದ್ಯಾರ್ಥಿನಿ ವಿದುಷಿ ಕು. ಪ್ರೀತಿ ತೆನ್ನರಸು ಅವರ ಭರತನಾಟ್ಯ ರಂಗಪ್ರವೇಶ ಸಮಾರಂಭವನ್ನು ನ.16ರ ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ನಮ್ಮ ಕೇಂದ್ರದ 23ನೇ ರಂಗಪ್ರವೇಶ ಇದಾಗಿದೆ ಎಂದು ಕೇಂದ್ರದ ಗುರು ಹಾಗೂ ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್.ಕೇಶವಕುಮಾರ್ ಪಿಳ್ಳೈ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
2002ರಲ್ಲಿ ಜನಿಸಿದ ಕು. ಪ್ರೀತಿ ತೆನ್ನರಸು ನೃತ್ಯ ಯಾತ್ರೆಯನ್ನು ಬಾಲ್ಯದಿಂದಲೇ ಆರಂಭಿಸಿ, ಆರನೇ ವಯಸ್ಸಿನಲ್ಲೇ ವೇದಿಕೆಗೆ ಪಾದಾರ್ಪಣೆ ಮಾಡಿದರು. ಇವರು ತಮ್ಮ ನೃತ್ಯಾಭ್ಯಾಸವನ್ನು 2008ರಲ್ಲಿ ಡಾ.ಕೆ.ಎಸ್. ಪವಿತ್ರಾ ಅವರಿಂದ ಆರಂಭಿಸಿ, ನಂತರ ನಮ್ಮ ಕೇಂದ್ರದಲ್ಲಿ ನೃತ್ಯವನ್ನು ಮುಂದುವರಿಸಿ ಕರ್ನಾಟಕ ಸರ್ಕಾರದಿಂದ ನಡೆಸಲಾದ ಭರತನಾಟ್ಯ ಕಿರಿಯ-ಹಿರಿಯ ಪರೀಕ್ಷೆಗಳಲ್ಲಿ ವಿಶಿಷ್ಟ ಶ್ರೇಣಿಯನ್ನು ಪಡೆದಿದ್ದಾರೆ. ಹಲವು ವಿಶ್ವವಿದ್ಯಾಲಯಗಳಲ್ಲಿ ವಿಷಾರದ ಪ್ರಥಮ ಮತ್ತು ವಿಷಾರದ ಪೂರ್ಣ ಪರೀಕ್ಷೆಗಳಲ್ಲಿ ಶ್ರೇಷ್ಠ ಅಂಕಗಳಿಸಿ, ತೇರ್ಗಡೆ ಹೊಂದಿದ್ದು ಇವರು ಭರತನಾಟ್ಯ ಪರೀಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಶಿವಮೊಗ್ಗದ ಹಲವು ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಜೆಎನ್‍ಸಿಸಿ ಕಾಲೇಜಿನಲ್ಲಿ ಬಿ.ಇ. ಪದವಿ ಪೂರ್ಣಗೊಳಿಸಿದ್ದಾರೆ. ಪ್ರತಿಷ್ಠಿತ ಐಟಿ ಸಂಸ್ಥೆಯಾದ ಟಿಸಿಎಸ್‍ನಲ್ಲಿ ಬೆಂಗಳೂರಿನಲ್ಲಿ ಕಳೆದ ಒಂದು ವರ್ಷದಿಂದ ತಮ್ಮ ವೃತ್ತಿ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ಜಿಲ್ಲೆ, ರಾಜ್ಯಮಟ್ಟದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಅವರು ಭರತನಾಟ್ಯದ ಮೆರಗು ತೋರಿಸಿದ್ದಾರೆ. ಹಾಗೂ ಹಲವಾರು ರಾಜ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ. ಗಿನ್ನೀಸ್ ಸರ್ಟಿಫಿಕೇಟ್ ಜೊತೆಗೆ ಲಿಮ್ಕಾ ದಾಖಲೆ ಮತ್ತು ಆಟ್ರ್ಸ್ ಬುಕ್ ದಾಖಲೆ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶಿಸಿ ಗೌರವ ಪಡೆದಿದ್ದಾರೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿ.ಪಂ. ಮಾಜಿ ಸದಸ್ಯ ಕೆ.ಈ. ಕಾಂತೇಶ್, ಆಲ್ಕೋಳದಲ್ಲಿರುವ ಮಿನಲ್ ಕ್ಲಿನಿಕ್‍ನ ಡಾ. ಜಿ.ಎಸ್. ಸಂತೋಷ್ ಇನ್ನಿತರರು ಭಾಗವಹಿಸಲಿದ್ದು, ಭರತನಾಟ್ಯ ಗುರು ಡಾ. ಕೆ.ಎಸ್. ಪವಿತ್ರ, ಜೆಎನ್‍ಎನ್‍ಸಿಇ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸುದೀಪ್ ಮನೋಹರ್, ಅರಬಿಂದೋ ಪಿಯು ಕಾಲೇಜಿನ ಉಪಪ್ರಾಂಶುಪಾಲೆ ಆಶಾ ಎಂ.ಇ., ಜ್ಞಾನಸಾಗರ ಸೆಂಟ್ರಲ್ ಶಾಲೆಯ ಸಹಾಯಕ ಶಿಕ್ಷಕ ಸಚ್ಚಿನ್ ಜಿ.ಟಿ. ಅವರನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕು. ಪ್ರೀತಿ ತೆನ್ನರಸು, ತಂದೆ ತೆನ್ನರಸು ಎಂ., ತಾಯಿ ಕಲಾವತಿ ಟಿ. ಹಾಗೂ ಕುಮಾರಸ್ವಾಮಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















