ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಹುಬ್ಬಳ್ಳಿ ರೈಲ್ವೆ ವಿಭಾಗದ Hubli Railway Division ವತಿಯಿಂದ 40ನೇ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ (DRUCC) ಸಭೆ ಇಂದು ಹುಬ್ಬಳ್ಳಿಯ ರೈಲ್ವೆ ಕಾರ್ಯಾಗಾರದ ಸೆಮಿನಾರ್ ಹಾಲ್ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಬೇಲಾ ಮೀನಾ Bela Meena ಮಾತನಾಡಿ, ಅಮೃತ ಭಾರತ ಯೋಜನೆಯಡಿ (ABSS) ವಿಭಾಗದ ಹಲವು ರೈಲು ನಿಲ್ದಾಣಗಳನ್ನು ಸ್ಥಳೀಯತೆ, ಐತಿಹಾಸಿಕತೆ ಹಾಗೂ ಪ್ರವಾಸೋದ್ಯಮದ ವೈಶಿಷ್ಟ್ಯಗಳಿಗೆ ಅನುಗುಣವಾಗಿ ಪುನರ್ ಅಭಿವೃದ್ಧಿಪಡಿಸಲಾಗುತ್ತಿದ್ದು , ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಒದಗಿಸುವುದು ಇಲಾಖೆಯ ಪ್ರಮುಖ ಧ್ಯೇಯವಾಗಿದೆ ಎಂದರು .
ಅಳ್ನಾವರ, ಬಾದಾಮಿ, ಕೊಪ್ಪಳ ಹಾಗೂ ಹೊಸಪೇಟೆ ರೈಲು ನಿಲ್ದಾಣಗಳ ABSS ಪುನರಾಭಿವೃದ್ದಿ ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಅದೇ ರೀತಿ ಹಂತ ಹಂತವಾಗಿ ವಾಸ್ಕೋ-ಡ-ಗಾಮಾ ಹಾಗೂ ಬಳ್ಳಾರಿ ರೈಲು ನಿಲ್ದಾಣಗಳಲ್ಲಿ ಸುವ್ಯವಸ್ಥಿತ ಮತ್ತು ಆಧುನಿಕ ಮಟ್ಟದ ಉನ್ನತೀಕರಣ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದರು.
ವಿಭಾಗೀಯ ಹಿರಿಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ DRUCC ಕಾರ್ಯದರ್ಶಿಗಳಾದ ಡಾ. ಕಾರ್ತಿಕ್ ವಿ. ಹೆಗಡೆಕಟ್ಟಿ ಮಾತನಾಡಿ, ರೈಲು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ರಾಜ್ಯ ರೈಲ್ವೆ ಪೊಲೀಸ್ (GRP) ಹಾಗೂ ರೈಲ್ವೆ ರಕ್ಷಣಾ ಪಡೆ (RPF) ಸಿಬ್ಬಂದಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯ ಸ್ಥಳಗಳಲ್ಲಿ CCTV ಮೂಲಕ ನಿಗಾವಹಿಸಲಾಗುತ್ತಿದೆ ಎಂದು ತಿಳಿಸಿದರು.
Also read: ಹುಬ್ಬಳ್ಳಿ-ಸೋಲಾಪುರ ದೈನಂದಿನ ಪ್ಯಾಸೆಂಜರ್ ರೈಲು ನಿಲುಗಡೆ ಮುಂದುವರಿಕೆ
ಸಭೆಯಲ್ಲಿ DRUCC ಸದಸ್ಯರಾದ ಶ್ರೀ ಚಂದ್ರಕಾಂತ ಗವಾಸ್ (ಗೋವಾ) ಮಾತನಾಡಿ, ರೈಲುಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿ, ಈ ಬಗ್ಗೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಇನ್ನೋರ್ವ ಸದಸ್ಯರಾದ ವಿ.ಜಿ. ಹಿರೇಗೌಡರ ಮಾತನಾಡಿ, ಗದಗ ಗೂಡ್ಸ್ ಶೆಡ್ನಲ್ಲಿ ದಾಸ್ತಾನುಗಳ ಲೋಡಿಂಗ್ ಮತ್ತು ಅನ್ಲೋಡಿಂಗ್ ಕಾರ್ಯಗಳಿಗೆ ಅನುಕೂಲವಾಗುವಂತೆ ಮೇಲ್ಗಡೆ ತಗಡಿನ ಶೆಡ್ ನಿರ್ಮಿಸಬೇಕೆಂದು ಆಗ್ರಹಿಸಿದರು.
ಸದಸ್ಯರಾದ ಡಿ.ಆರ್. ರಾಟಿ ಮಾತನಾಡಿ, ಹುಬ್ಬಳ್ಳಿ ವಿಜಯಪುರ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಕಡ್ಲಿಮಟ್ಟಿ, ಸೀತಿಮನಿ ಹಾಗೂ ಕೂಡಲ ಸಂಗಮ ರೋಡ್ ಹಾಲ್ಟ್ ನಿಲ್ದಾಣಗಳಲ್ಲಿ ನಿಲುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ, ನೋಂದಾಯಿತ ಪ್ರಯಾಣಿಕರ ಸಂಘಗಳು, ಜನಪ್ರತಿನಿಧಿಗಳಿಂದ ನೇಮಕಗೊಂಡವರು , ವಾಣಿಜ್ಯೋದ್ಯಮಿಗಳು, ವ್ಯಾಪಾರಿ ಸಂಘಗಳು ಹಾಗೂ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ DRUCC ಸದಸ್ಯರುಗಳಾದ ಕಿರಣ ದೀನನಾಥ ನಾಯ್ಕ, ಆರ್. ಗೋಪಾಲ ಕೃಷ್ಣ, ವಿ.ಜಿ. ಹಿರೇಗೌಡರ, ಡಿ.ಆರ್. ರಾಟಿ, ಚನ್ನವೀರ ಮುಂಗುರವಾಡಿ, ಗಿರಿಧರ ಸೊಂತ, ಕೆ.ಎಂ. ಕೊಟ್ರೇಶ, ಚಂದ್ರಕಾಂತ ಗವಾಸ್ ಹಾಗೂ ಅಗಸ್ಟೊ ಕೋಸ್ಟಾ ಭಾಗವಹಿಸಿದ್ದರು.
ಸಭೆಯಲ್ಲಿ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕರುಗಳಾದ ಟಿ .ವಿ.ಭೂಷಣ, ಶ್ರೀ.ಪ್ರೇಮಚಂದ್ರ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















