ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರಾಷ್ಟ್ರದ ಭವ್ಯ ಭವಿಷ್ಯ ಯುವಜನಾಂಗವನ್ನು ಅವಲಂಭಿಸಿದ್ದು, ಯುವಕರು ಬದಲಾವಣೆ ಹಾಗೂ ಪ್ರಗತಿಗೆ ಸದಾ ಸಿದ್ದರಾಗಿರಬೇಕು ಎಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಸಿ. ರವೀಂದ್ರ ಕರೆ ನೀಡಿದರು.
ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿ, ಬಿಕಾಂ ಹಾಗೂ ಬಿಸಿಎ ವಿದ್ಯಾರ್ಥಿಗಳಿಗಾಗಿ ನಾಲ್ಕು ದಿನಗಳ ಓರಿಯೆಂಟೇಷನ್ (Orientation) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Also Read>> ಶಿವಮೊಗ್ಗ | ನಟಿ ಅದಿತಿ ಅವರಿಂದ ನಾಳೆ ‘ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್’ ಉದ್ಘಾಟನೆ
ಯುವ ಜನತೆ ರಾಷ್ಟ್ರದ ರಚನಾತ್ಮಕ ಮತ್ತು ಕ್ರಿಯಾತ್ಮಕ ಶಕ್ತಿಯ ಪ್ರತಿನಿಧಿಗಳಾಗಿದ್ದು, ರಾಷ್ಟ್ರದ ಭವ್ಯ ಭವಿಷ್ಯವು ಯುವಜನಾಂಗವನ್ನು ಅವಲಂಬಿಸಿದೆ. ಯುವಕರು ಬದಲಾವಣೆ ಹಾಗೂ ಪ್ರಗತಿಗೆ ಸದಾ ಸಿದ್ಧರಾಗಿರಬೇಕು ಎಂದು ಹೇಳಿದರು.
ಒಂದು ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿ ಅದರ ಶಿಕ್ಷಣವನ್ನು ಅವಲಂಬಿಸಿದೆ. ಉನ್ನತ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಮುಂಚೂಣಿಯಲ್ಲಿದ್ದು, ಸುಸಜ್ಜಿತ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ಮಾಹಿತಿ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ನೀಡುತ್ತಿದೆ ಎಂದರು.
ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣದ ದೃಷ್ಟಿಯಿಂದ ಸಂಸ್ಥೆ ಯಶಸ್ವಿಯಾಗಿ 13 ವರ್ಷಗಳನ್ನು ಪೂರೈಸಿದ್ದು, ಪ್ರತಿ ವರ್ಷವೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಹಲವು ರ‍್ಯಾಂಕ್’ಗಳನ್ನು ಪಡೆಯುತ್ತಿದೆ ಎಂದು ಹೇಳಿದರು.
ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್. ಕೋಟೋಜಿರಾವ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ದಶೆಯಲ್ಲಿಯೇ ಬದುಕನ್ನು ಪ್ರೀತಿಸುವುದು, ಗೌರವಿಸುವುದು ಹಾಗೂ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
Also Read>> ನೀರು ತಡೆದರೆ ಭಾರತದ ಮೇಲೆ ಯುದ್ಧ ಖಚಿತ | ಭಾರತಕ್ಕೆ ಪಾಕ್ ಬೆದರಿಕೆ
ಅಧ್ಯಾಪಕರಾದ ಪ್ರಕಾಶ್ ಉಪಾಧ್ಯಾಯ, ಪ್ರಶಾಂತ್ ಕುಮಾರ್, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕ ವರ್ಗದವರು ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಬಿಂದು ಪ್ರಾರ್ಥಿಸಿ, ಅಧ್ಯಾಪಕರಾದ ಪೂರ್ಣಿಮಾ ಕಾರ್ಯಕ್ರಮವನ್ನು ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















