ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ (RPF) ಪ್ರಯಾಣಿಕರ ಸುರಕ್ಷತೆ, ಮಕ್ಕಳ ರಕ್ಷಣೆ ಹಾಗೂ ಸಾರ್ವಜನಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.
“ಜನ-ಜಾಗರಣ” ಅಭಿಯಾನದ ಅಂಗವಾಗಿ ಜೂನ್ 18ರಂದು ಚಿಕ್ಕಜಾಜೂರು ರೈಲು ನಿಲ್ದಾಣ ಹಾಗೂ ರೈಲು ಸಂಖ್ಯೆ 56519 ಕೆಎಸ್ಆರ್ ಬೆಂಗಳೂರು–ಹೊಸಪೇಟೆ ಪ್ಯಾಸೆಂಜರ್ ರೈಲಿನಲ್ಲಿ ಆರ್ಪಿಎಫ್ ಹಾಗೂ ಸಿಗ್ನಲ್ ವಿಭಾಗದ ಸಿಬ್ಬಂದಿಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
Also Read>> ಕೊಲ್ಲಂ | ಬಸ್ ನಿಲ್ದಾಣಕ್ಕೆ ಟಿಪ್ಪರ್ ಲಾರಿ ಡಿಕ್ಕಿ, ಮಗು ಸೇರಿ ಮೂವರು ಸಾವು
ಈ ವೇಳೆ ಪ್ರಯಾಣಿಕರಿಗೆ ಅಪರಿಚಿತರಿಂದ ಆಹಾರ ಪದಾರ್ಥಗಳನ್ನು ಸ್ವೀಕರಿಸಬಾರದು, ತಮ್ಮ ಸಾಮಾನುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಹಾಗೂ ಸರ ಕಳವು ಸೇರಿದಂತೆ ವಿವಿಧ ಕಳ್ಳತನಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ತಿಳಿಸಲಾಯಿತು.
ಜೊತೆಗೆ ಫುಟ್ಬೋರ್ಡ್‌ನಲ್ಲಿ ಪ್ರಯಾಣಿಸುವುದು, ರೈಲು ಹಳಿಗಳನ್ನು ಅಕ್ರಮವಾಗಿ ದಾಟುವುದು ಹಾಗೂ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಸಾಗಿಸುವುದರಿಂದ ಉಂಟಾಗುವ ಅಪಾಯಗಳ ಕುರಿತು ಅರಿವು ಮೂಡಿಸಲಾಯಿತು. ತುರ್ತು ಸಂದರ್ಭಗಳಲ್ಲಿ ರೈಲ್ವೆ ಸಹಾಯವಾಣಿ ಸಂಖ್ಯೆ 139 ಅನ್ನು ಬಳಸುವಂತೆ ಸಲಹೆ ನೀಡಲಾಯಿತು.
ಇನ್ನೊಂದೆಡೆ “ನನ್ಹೆ ಫರಿಶ್ತೆ” ಯೋಜನೆಯಡಿ ಜೂನ್ 21ರಂದು ರೈಲು ಸಂಖ್ಯೆ 17309ರಲ್ಲಿ ಯಾವುದೇ ಪ್ರಯಾಣದ ದಾಖಲೆಗಳಿಲ್ಲದೆ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳನ್ನು ಆರ್ಪಿಎಫ್ ಅರಸೀಕೆರೆ ತಂಡ ರಕ್ಷಿಸಿದೆ.
ಎಸ್-8 ಬೋಗಿಯಲ್ಲಿ ಮಕ್ಕಳು ಪ್ರಯಾಣಿಸುತ್ತಿರುವ ಮಾಹಿತಿ ಸಿಕ್ಕ ತಕ್ಷಣ ಉಪನಿರೀಕ್ಷಕರು ಹಾಗೂ ಸಿಬ್ಬಂದಿ ರೈಲಿಗೆ ತೆರಳಿ ಮಕ್ಕಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದರು. ವಿಚಾರಣೆಯಲ್ಲಿ ತುಮಕೂರಿನ ವಸತಿ ಶಾಲೆಯ 11 ಮತ್ತು 12 ವರ್ಷದ ಇಬ್ಬರು ವಿದ್ಯಾರ್ಥಿಗಳು, ಮೊಹರಂ ರಜೆ ಹಿನ್ನೆಲೆ ಪೋಷಕರು ಕರೆದುಕೊಂಡು ಹೋಗದ ಕಾರಣ ಬೇಸರಗೊಂಡು ಶಾಲೆಯಿಂದ ಹೊರಬಂದು ಹುಬ್ಬಳ್ಳಿ ಕಡೆಗೆ ತೆರಳಲು ರೈಲು ಹತ್ತಿರುವುದಾಗಿ ತಿಳಿದುಬಂದಿದೆ.
Also Read>> ಮಳೆಗಾಲದ ಪ್ರಯಾಣಿಕರ ಸುರಕ್ಷತೆಗೆ ನೈಋತ್ಯ ರೈಲ್ವೆಯ ಮುನ್ನೆಚ್ಚರಿಕಾ ಕ್ರಮಗಳೇನು?
ನಂತರ ಅಗತ್ಯ ಕಾನೂನು ಕ್ರಮಗಳನ್ನು ಅನುಸರಿಸಿ ಮಕ್ಕಳನ್ನು ಹಾಸನ ಜಿಲ್ಲಾ ಮಕ್ಕಳ ರಕ್ಷಣಾ ಘಟಕ/ಚೈಲ್ಡ್‌ಲೈನ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಮುಂದಿನ ಆರೈಕೆ, ಸಮಾಲೋಚನೆ ಹಾಗೂ ಪುನರ್ವಸತಿ ಕ್ರಮಗಳನ್ನು ಸಂಬಂಧಿತ ಇಲಾಖೆ ಕೈಗೊಳ್ಳಲಿದೆ.
ಆರ್ಪಿಎಫ್ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಮಕ್ಕಳು ಯಾವುದೇ ಅಪಾಯದಿಂದ ಪಾರಾಗಿದ್ದು, ಪ್ರಯಾಣಿಕರ ಸುರಕ್ಷತೆ ಹಾಗೂ ಮಕ್ಕಳ ರಕ್ಷಣೆಯಲ್ಲಿ ಮೈಸೂರು ವಿಭಾಗದ RPF ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Darling Krishna, Milana Nagaraj ’s Love Mocktail 3 Premieres This 21st on Zee Kannada



















