ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ಆರೋಗ್ಯ ವ್ಯವಸ್ಥೆಯಲ್ಲಿ ಫಾರ್ಮಸಿಸ್ಟ್‌ಗಳು ಕೇವಲ ಔಷಧ ವಿತರಕರಾಗದೆ, ಚಿಕಿತ್ಸಾ ಗುಣಮಟ್ಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಅವರಿಗೆ ಸಿಗಬೇಕಾದ ಸೂಕ್ತ ಗೌರವ ಮತ್ತು ಮಾನ್ಯತೆ ಇನ್ನೂ ದೊರೆಯುತ್ತಿಲ್ಲ ಎಂದು ಔಷಧ ನಿಯಂತ್ರಣ ಇಲಾಖೆಯ ಉಪ ಔಷಧ ನಿಯಂತ್ರಕರಾದ ಡಾ. ಖಾಲಿದ್ ಅಹಮದ್ ಖಾನ್ ಹೇಳಿದರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಕರ್ನಾಟಕ ರಾಜ್ಯ ಔಷಧ ವಿಜ್ಞಾನ ಪರಿಷತ್ತು, ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ, ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್, ಜಿಲ್ಲಾ ಫಾರ್ಮಸಿಸ್ಟ್ ಅಸೋಸಿಯೇಷನ್ ಸಂಯುಕ್ತಾಶ್ರದಲ್ಲಿ ಭಾನುವಾರ ಔಷಧ ವಿತರಕರಿಗಾಗಿ ಏರ್ಪಡಿಸಿದ್ದ ನಿರಂತರ ಫಾರ್ಮಸಿ ಶಿಕ್ಷಣದ ಮೂಲಕ ಔಷಧ ವಿಜ್ಞಾನಿಗಳ ಸಾಮರ್ಥ್ಯ ಮತ್ತು ರೋಗಿಗಳ ಆರೈಕೆಯಲ್ಲಿ ಉತ್ತಮಪಡಿಸುವ ಬಗೆ ಕುರಿತ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ಫಾರ್ಮಸಿಸ್ಟ್ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸಾಮಾಜಿಕ ಬದ್ಧತೆಯ ಜವಾಬ್ದಾರಿ. ಇಂದಿನ ಡಿ.ಫಾರ್ಮ್ ಪದವೀಧರರು, ವೈದ್ಯರಿಗೂ ಔಷಧಿ ಕುರಿತು ಸಲಹೆ ನೀಡುವ ಮಟ್ಟದ ಪರಿಣತಿ ಹೊಂದಿದ್ದು, ನಿರಂತರ ಜ್ಞಾನ ನವೀಕರಣದ ಮೂಲಕ ತಮ್ಮ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಿಕೊಳ್ಳಬೇಕು ಎಂದು ಕರೆ ನೀಡಿದರು.
Also read: Jan Vishwas Act 2026: Revised Railway Penalty Rules Likely from July 1
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಔಷಧ ವಿಜ್ಞಾನ ಪರಿಷತ್ತಿನ ಕುಲಸಚಿವರಾದ ಡಾ. ಸಿರ್ಸೆ ಕ್ರಾಂತಿಕುಮಾರ್ ಮಾತನಾಡಿ, ಕರ್ನಾಟಕ ರಾಜ್ಯ ಔಷಧ ವಿಜ್ಞಾನ ಪರಿಷತ್ತು, ದೇಶದಲ್ಲೇ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಮೈಕ್ರೋಚಿಪ್ ಅಳವಡಿಸಿದ ನೋಂದಣಿ ಪ್ರಮಾಣಪತ್ರ, ಕ್ಯೂಆರ್ ಕೋಡ್ ಆಧಾರಿತ ಗುರುತಿನ ಚೀಟಿ ಹಾಗೂ ಮೊಬೈಲ್ ಆಪ್ ಸೇವೆಗಳ ಮೂಲಕ ಫಾರ್ಮಸಿಸ್ಟ್‌ಗಳಿಗೆ ಸುಲಭ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಒದಗಿಸಲಾಗಿದೆ. ನಿರಂತರ ಕಲಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಔಷಧ ಮಾಹಿತಿ ಕೇಂದ್ರ ಹಾಗೂ ಕೌಶಲ್ಯಾಭಿವೃದ್ದಿ ಕೇಂದ್ರ ಆರಂಭಿಸಿರುವುದಾಗಿ ಹೇಳಿದರು.
ಫಾರ್ಮಸಿ ಶಿಕ್ಷಣ ಮತ್ತು ಸಂಶೋಧನೆಗೆ ಉತ್ತೇಜನವಾಗಿ ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಸಂಶೋಧನಾ ಅನುದಾನ, ಉಪನ್ಯಾಸಕರಿಗೆ ವಿದೇಶಿ ಕಾರ್ಯಾಗಾರಗಳಲ್ಲಿ ಭಾಗವಹಿಸಲು ಸಹಾಯಧನ ಹಾಗೂ ಫಾರ್ಮಸಿ ಟ್ರಸ್ಟ್ ಮೂಲಕ ವೈದ್ಯಕೀಯ ತುರ್ತು ನೆರವು ಮತ್ತು ವಿಮಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಾಗಾರದಲ್ಲಿ ಸಹಾಯಕ ಔಷಧ ನಿಯಂತ್ರಕರಾದ ಡಾ. ವೀರೇಶ್ ಬಾಬು, ವಿಶಾಲಾಕ್ಷಿ ವೈದ್ಯಕೀಯ ಕ್ಷೇತ್ರದಲ್ಲಿ ಕಮ್ಯುನಿಟಿ ಫಾರ್ಮಸಿಸ್ಟ್‌ಗಳ ಪಾತ್ರ ಕುರಿತು ಮಾತನಾಡಿದರು. ಪಾಸಿಟಿವ್ ಮೈಂಡ್ ಆಸ್ಪತ್ರೆಯ ಮನೋವೈದ್ಯರಾದ ಡಾ. ಅರವಿಂದ್ ಎಸ್.ಟಿ. ಅವರು ಮಾನಸಿಕ ಒತ್ತಡ ನಿರ್ವಹಣೆ, ಸಕಾರಾತ್ಮಕ ಚಿಂತನೆ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ಎನ್.ಶ್ರೀಹರ್ಷಾ ‘ಜೈ ಔಷಧ ವಿಜ್ಞಾನ’ ಘೋಷವಾಕ್ಯ ಧ್ವನಿಸಿದರು. ಶಿವಮೊಗ್ಗ ಜಿಲ್ಲಾ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಮಧುಕರ್ ಶೆಟ್ಟಿ, ಜಿಲ್ಲಾ ಫಾರ್ಮಸಿಸ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಗಣೇಶ್ ಎಸ್ ಉಪಸ್ಥಿತರಿದ್ದರು. ಸಂಜನಾ ಮತ್ತು ಲಿಖಿತ ನಿರೂಪಿಸಿ, ಶಿವಕುಮಾರ್ ಕೆ.ಎಲ್. ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















