ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಹಿತಿ ತಂತ್ರಜ್ಞಾನ ಯುಗವೆಂಬ ಆಯುಧದಲ್ಲಿ ಒಳಿತು ಕೆಡಕುಗಳ ತುದಿಯಿದ್ದು, ಬಳಕೆಯಲ್ಲಿ ವಿವೇಕ ಮತ್ತು ಬದುಕಿನಲ್ಲಿ ಸಂಸ್ಕಾರ ಅವಶ್ಯಕ ಸಾಧನವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.
ನಗರದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ವತಿಯಿಂದ ಶನಿವಾರ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿನಿ ಸಾಂಸ್ಕೃತಿಕ ಸಂಘ, ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡಾ ವಿಭಾಗ, ಯುವ ರೆಡ್ ಕ್ರಾಸ್, ರೇಂಜರ್ಸ್ ಘಟಕ, ಆರೋಗ್ಯ ಪಥ, ಎನ್.ಸಿ. ಸಿ ಘಟಕಗಳ ಉದ್ಘಾಟನಾ ಸಮಾರಂಭವನ್ನು ದೀಪ ಬೇಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಡೆ-ನುಡಿ, ನಡವಳಿಕೆ ಹಾಗೂ ಜೀವನ ಮೌಲ್ಯಗಳನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ಪರಿಪೂರ್ಣತೆಯತ್ತ ಸಾಗುವುದೇ ನಿಜವಾದ ಸಂಸ್ಕೃತಿ. ಇಂತಹ ಸೌಜನ್ಯ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿ ಘಟಕಗಳು ಅತ್ಯುತ್ತಮ ವೇದಿಕೆಗಳಾಗಿವೆ.
ಪ್ರಕೃತಿ, ಸಂಸ್ಕೃತಿ ಮತ್ತು ವಿಕೃತಿ ಎಂಬ ಮೂರು ಆಯಾಮಗಳು ಸಮಾಜದಲ್ಲಿ ಸದಾ ಇವೆ. ವಿದ್ಯಾಭ್ಯಾಸ ಮಾಡುತ್ತಿರುವ ಯುವಜನತೆ ಪ್ರಕೃತಿಯಲ್ಲಿ ದೊರೆಯುವ ಕಲ್ಲಿನಂತಿರುತ್ತಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರು ಎಂಬ ಶಿಲ್ಪಿಗಳು ಆ ಕಲ್ಲಿಗೆ ಜ್ಞಾನ, ಮೌಲ್ಯ ಹಾಗೂ ಸಂಸ್ಕೃತಿಯ ರೂಪ ನೀಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಅನೇಕ ಸವಾಲುಗಳು ಉಳಿಪೆಟ್ಟಿನಂತೆ ಎದುರಾಗುತ್ತವೆ. ಅವುಗಳನ್ನು ಧೈರ್ಯ, ತಾಳ್ಮೆ ಮತ್ತು ದೃಢತೆಯಿಂದ ಎದುರಿಸಿದಾಗ ಮಾತ್ರ ಆ ಕಲ್ಲು ಪೂಜನೀಯ ಶಿಲೆಯಾಗಿ ರೂಪುಗೊಳ್ಳುತ್ತದೆ. ಇಲ್ಲವಾದರೆ ಅದು ವಿಕೃತ ರೂಪ ಪಡೆಯುವ ಅಪಾಯವಿದೆ.
ಕಲಿಕೆಯಲ್ಲಿ ದೃಢ ಸಂಕಲ್ಪ ಅತ್ಯಗತ್ಯ. ವಿದ್ಯಾರ್ಥಿಗಳು ತಮ್ಮ ಪೋಷಕರ ತ್ಯಾಗ ಮತ್ತು ಶ್ರಮವನ್ನು ಸದಾ ನೆನಪಿನಲ್ಲಿಟ್ಟುಕೊಂಡು ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಬೇಕು. ವಿಶೇಷವಾಗಿ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಆತ್ಮಗೌರವದಿಂದ ಬದುಕನ್ನು ಕಟ್ಟಿಕೊಳ್ಳಬೇಕು. ಶಿಕ್ಷಣವೇ ವ್ಯಕ್ತಿಗೆ ಆತ್ಮವಿಶ್ವಾಸ, ಸ್ವಾಭಿಮಾನ ಹಾಗೂ ಸ್ವಾವಲಂಬನೆಯ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದರು.
Also read: 11-Year-Old Mysuru Girl Writes Children’s Ramayana in Just 15 Days
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಬಿ.ವಿ.ಗೀತಾ ಮಾತನಾಡಿ, ಜೀವನದ ಪ್ರತಿಯೊಂದು ಹೆಜ್ಜೆಯೂ ಅತ್ಯಂತ ಅಮೂಲ್ಯವಾಗಿದ್ದು, ನಮ್ಮ ಬದುಕಿನ ಗುರಿಯನ್ನು ತೋರಿಸಿದ ಪ್ರತಿಯೊಬ್ಬರನ್ನು ಗುರುಗಳಾಗಿ ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲಿಯೂ ಅಪಾರವಾದ ಸಾಮರ್ಥ್ಯ ಅಡಗಿದೆ. ಆದರೆ ಆ ಶಕ್ತಿಯನ್ನು ಯಾವ ದಿಕ್ಕಿನಲ್ಲಿ ಮತ್ತು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದೇ ನಮ್ಮ ಸಾಧನೆಯನ್ನು ನಿರ್ಧರಿಸುತ್ತದೆ ಎಂದು ಹೇಳಿದರು.
ಕುವೆಂಪು ವಿವಿ ದೈಹಿಕ ಶಿಕ್ಷಣ ವಿಭಾಗ ನಿವೃತ್ತ ಸಹ ನಿರ್ದೇಶಕ ಜಿ.ಎಸ್.ನಾಗರಾಜ ಮಾತನಾಡಿ, ಕ್ರೀಡೆ ಎಂಬುದು ಎಲ್ಲಾ ಸಂಕೋಲನೆಯನ್ನು ಮೀರಿ ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಶಕ್ತಿಯಾಗಿದೆ. ಆಧುನಿಕ ಜೀವನಶೈಲಿ, ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆ ಮತ್ತು ದೈಹಿಕ ಚಟುವಟಿಕೆಗಳ ಕೊರತೆಯಿಂದ ಇಂದಿನ ಯುವಪೀಳಿಗೆ ದೈಹಿಕ ಸಾಮರ್ಥ್ಯವನ್ನು ಕ್ರಮೇಣ ಕಳೆದುಕೊಳ್ಳುತ್ತಿದೆ. ಆರೋಗ್ಯಕರ ಜೀವನಕ್ಕಾಗಿ ಪ್ರತಿಯೊಬ್ಬರೂ ದಿನದ ಕೆಲವು ಗಂಟೆಗಳನ್ನಾದರೂ ದೈಹಿಕ ವ್ಯಾಯಾಮ, ಕ್ರೀಡೆ ಅಥವಾ ಯೋಗಕ್ಕೆ ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಕಮಲಾ ನೆಹರು ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಚಾಲಕರಾದ ಆಶಾಲತಾ.ಎಂ, ನವೀನಕುಮಾರ್, ವಿವಿಧ ಘಟಕಗಳ ಮುಖ್ಯಸ್ಥರಾದ ಸುಶ್ಮಿತಾ ಕಶ್ಯಪ್, ವಿದ್ಯಾಶ್ರೀ.ಬಿ.ಕೆ, ಡಾ.ನಾಗೇಶ್.ಬಿ, ಅರ್ಪಿತಾ, ಮಮತಾ.ಪಿ.ಎನ್, ಡಾ.ಅನ್ನಪೂರ್ಣ, ಕಾವ್ಯಶ್ರೀ.ಡಿ.ಎಂ, ಅಮಿತ್.ಬಿ.ಎಸ್, ರಂಜಿತಾ.ಎಲ್, ರಮ್ಯಾ.ಆರ್, ಮಾನಸ.ಜೆ.ಎ, ಅಪೂರ್ವ.ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








