ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳು ಶಾಲಾ-ಕಾಲೇಜು ಜೀವನವನ್ನು ಸದುಪಯೋಗಪಡಿಸಿಕೊಳ್ಳಬೇಕು. ಪಠ್ಯಪುಸ್ತಕಗಳನ್ನು ಆಳವಾಗಿ ಅಧ್ಯಯನ ಮಾಡುವ ಮೂಲಕ ಕ್ರಿಯಾಶೀಲ ಮನೋಭಾವ ಬೆಳೆಸಿಕೊಳ್ಳಬೇಕು. ಕೇವಲ ಸಿದ್ಧಮಾದರಿ ಜೆರಾಕ್ಸ್ ಟಿಪ್ಪಣಿಗಳನ್ನು ಓದುವುದರಿಂದ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು; ಆದರೆ ಅದು ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು.
ನಗರದ ದೇವರಾಜ ಅರಸ್ ಬಡಾವಣೆಯ ಎಸ್.ಜೆ.ಎಸ್.ಕೆ. ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಆಯೋಜಿಸಿದ್ದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದ ಬಡಾವಣೆಯ ನಿವಾಸಿ ಸಂದೇಶ್ ಉಪಾಧ್ಯ ಅವರು ತಮ್ಮ ತಂದೆ ಶಂಕರ ನಾರಾಯಣ ಉಪಾಧ್ಯ ಅವರ ಸ್ಮರಣಾರ್ಥ ದತ್ತಿ ಸ್ಥಾಪಿಸಿದ್ದರು. ಅದರ ಆಶಯದಂತೆ ಸಮಾಜಸೇವೆ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಕುರಿತು ತಾಯಿಮನೆ ಸುದರ್ಶನ್ ಉಪನ್ಯಾಸ ನೀಡಿದರು.
Also read>> ರಾಜ್ಯ ಸಂಪುಟ ವಿಸ್ತರಣೆ ಅಂತಿಮ | ಇಂದು ಸಂಜೆ 4ಕ್ಕೆ ನೂತನ ಸಚಿವರ ಪ್ರಮಾಣವಚನ
ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಮನೋಭಾವ, ಸಾಮರ್ಥ್ಯ, ಸಮಯ ಮತ್ತು ಪ್ರಾಮಾಣಿಕತೆ ಇದ್ದರೆ ಪ್ರತಿಯೊಬ್ಬರೂ ಉತ್ತಮ ಕಾರ್ಯಗಳನ್ನು ಮಾಡಬಹುದು. ಸೇವೆ ಎನ್ನುವುದು ದೊಡ್ಡ ಕಾರ್ಯಗಳಲ್ಲಷ್ಟೇ ಅಲ್ಲ; ಸಣ್ಣ ಸಣ್ಣ ಜವಾಬ್ದಾರಿಯುತ ನಡೆಗಳಲ್ಲಿಯೂ ಅಡಗಿದೆ. ರಸ್ತೆಯಲ್ಲಿ ಬಿದ್ದ ಕಸವನ್ನು ಎತ್ತಿ ಕಸದ ಬುಟ್ಟಿಗೆ ಹಾಕುವುದೂ ಸಮಾಜಸೇವೆಯೇ ಎಂದು ಅವರು ತಿಳಿಸಿದರು.
ಕೆ.ಸಿ. ಶಾಂತಪ್ಪ ಅವರು ತಮ್ಮ ತಂದೆ ದಿವಂಗತ ಚನ್ನಬಸಪ್ಪ ಕಡೂರಳ್ಳಿ ಅವರ ಸ್ಮರಣಾರ್ಥ ಸ್ಥಾಪಿಸಿರುವ ದತ್ತಿಯ ಆಶಯದಂತೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಮಹತ್ವ ಕುರಿತು ಸಾಹಿತಿ ಟಿ. ಮಂಜಪ್ಪ ಉಪನ್ಯಾಸ ನೀಡಿದರು.
ಕನ್ನಡವು ಜಗತ್ತಿನ ಪ್ರಾಚೀನ ಹಾಗೂ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದೆ. ಮಾತನಾಡಲು, ಬರೆಯಲು ಮತ್ತು ಓದಲು ಸುಲಭವಾದ ನಮ್ಮ ಕನ್ನಡ ಲಿಪಿಯನ್ನು ವಿನೋಬಾ ಭಾವೆ ಅವರು ಲಿಪಿಗಳ ರಾಣಿ ಎಂದು ಕೊಂಡಾಡಿದ್ದಾರೆ. ವಿದ್ಯಾರ್ಥಿಗಳು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಆಸಕ್ತಿಯಿಂದ ಅಭ್ಯಾಸ ಮಾಡಬೇಕು. ಕಾಲೇಜಿನ ಗ್ರಂಥಾಲಯವನ್ನು ಸಮರ್ಪಕವಾಗಿ ಬಳಸಿಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್ ಮಾತನಾಡಿ, ದತ್ತಿ ಉಪನ್ಯಾಸಗಳು ವಿದ್ಯಾರ್ಥಿಗಳಿಗೆ ಜೀವನೋಪಯೋಗಿ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳಾಗಿವೆ ಎಂದು ಹೇಳಿದರು. ವೇದಿಕೆಯಲ್ಲಿ ಗಿರೀಶ್ ಆರ್.ಎಚ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು. ನವನೀತಾ ಪ್ರಾರ್ಥನೆ ಹಾಡಿದರು. ಉಪನ್ಯಾಸಕ ಶಿವಕುಮಾರ್ ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









