ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯುತ್ ಕೇಬಲ್ ವೈರ್ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗ ತಾಲೂಕಿನ ಭದ್ರಾಪುರ ಗ್ರಾಮದ ನಿವಾಸಿ ವಾಗೀಶ ಅವರ ಜಮೀನಿನಲ್ಲಿ ಜುಲೈ 25ರಂದು ಸುಮಾರು ₹1,10,000 ಮೌಲ್ಯದ ವಿದ್ಯುತ್ ಕೇಬಲ್ ವೈರ್ ಕಳುವಾಗಿತ್ತು. ಈ ಕುರಿತು ನೀಡಿದ ದೂರಿನ ಆಧಾರದ ಮೇಲೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಗೆ ಹೊಳೆಹೊನ್ನೂರು ಪೊಲೀಸ್ ಇನ್‌ಸ್ಪೆಕ್ಟರ್ ಶಿವಪ್ರಸಾದ್ ಎಂ ಅವರ ನೇತೃತ್ವದಲ್ಲಿ ಪಿಎಸ್‌ಐ ಶಾಂತಲಾ ಹಾಗೂ ಸಿಬ್ಬಂದಿಗಳಾದ ಅಣ್ಣಪ್ಪ, ಪ್ರಸನ್ನ, ಪ್ರಕಾಶ ನಾಯ್ಕ, ಮಂಜುನಾಥ ಮತ್ತು ಜಿಲ್ಲಾ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ, ಇಂದ್ರೇಶ ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.
Also read>> ಬಾರಕೂರು | ಭಂಡಾರಕೇರಿ ಶ್ರೀಗಳ ಚಾರ್ತುಮಾಸ್ಯ | ಇಂದು ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?
ಖಚಿತ ಮಾಹಿತಿ ಆಧಾರವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಿವಮೊಗ್ಗದ ವಿದ್ಯಾನಗರ ನಿವಾಸಿ ತೇಜಸ್ ಎಸ್ @ ತೇಜು ಹಾಗೂ ಭದ್ರಾವತಿಯ ಮಲ್ಲಿಗೆನಹಳ್ಳಿ ನಿವಾಸಿ ಅನಿಲ್ ಎಲ್ @ ರೊಡ್ಡ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಕಳುವಾಗಿದ್ದ ₹1,10,000 ಮೌಲ್ಯದ ಸುಮಾರು 110 ಮೀಟರ್ ವಿದ್ಯುತ್ ಕೇಬಲ್ ವೈರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಪ್ತಿ ಮಾಡಿದ ಒಟ್ಟು ಮಾಲಿನ ಮೌಲ್ಯವನ್ನು ಸುಮಾರು ₹1,30,000 ಎಂದು ಅಂದಾಜಿಸಲಾಗಿದೆ.
ಪೊಲೀಸರ ಈ ಕಾರ್ಯಾಚರಣೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









