ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಶೇಷಾದ್ರಿಪುರದ ಪ್ಲಾಟ್ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ವಾರ್ಷಿಕೋತ್ಸವ ಹಾಗೂ ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವವು ಭಕ್ತಿಭಾವದಿಂದ ಹಾಗೂ ವೈಭವದಿಂದ ಜರುಗಿತು.
ಈ ಅಂಗವಾಗಿ ಶ್ರೀ ಸುಶಮೀಂದ್ರ ಪಾರಾಯಣ ಸಮಿತಿಯ ಸದಸ್ಯರು ಪಾರಾಯಣ ಸೇವೆ ಸಲ್ಲಿಸಿದರು. ಬಳಿಕ ಶ್ರೀ ಗುರುರಾಯರಿಗೆ ಫಲಪಂಚಾಮೃತಾಭಿಷೇಕ, ವಿಶೇಷ ಅಲಂಕಾರ ಹಾಗೂ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಶ್ರೀ ಸುಶಮೀಂದ್ರ ಭಜನಾ ಮಂಡಳಿಯ ಸದಸ್ಯರು ಹಾಗೂ ಇತರ ಭಕ್ತರು ಭಕ್ತಿಗೀತೆಗಳನ್ನು ಗಾಯನ ಮಾಡುವ ಮೂಲಕ ಧಾರ್ಮಿಕ ವಾತಾವರಣವನ್ನು ನಿರ್ಮಿಸಿದರು. ನಂತರ ನಡೆದ ರಥೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀ ಗುರುರಾಯರ ಕೃಪೆಗೆ ಪಾತ್ರರಾದರು. ಮಹಾಮಂಗಳಾರತಿ ಹಾಗೂ ಅಲಂಕಾರ ಪಂಕ್ತಿ ಸೇವೆಗಳು ಭಕ್ತಿಭಾವದಿಂದ ನೆರವೇರಿದವು.
Also read>> ಶಿವಮೊಗ್ಗದಲ್ಲಿ ಭೀಕರ ಅಪಘಾತ | ಮರಕ್ಕೆ ಡಿಕ್ಕಿ ಹೊಡೆದ ಕಾರು ಛಿದ್ರ-ಛಿದ್ರ | ಯುವಕ ಸ್ಥಳದಲ್ಲೇ ಸಾವು
ಸಂಜೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುತ್ಯಾಲನಗರದ ಶ್ರೀ ಗುರುರಾಜ ಭಜನಾ ಮಂಡಳಿ ಸದಸ್ಯರು ಭಜನಾ ಸೇವೆ ಸಲ್ಲಿಸಿದರು. ಬಳಿಕ ಅಷ್ಟಾವಧಾನ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ವಾರ್ಷಿಕೋತ್ಸವ ಮತ್ತು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸಿದ ಭಕ್ತರು ಶ್ರೀ ಗುರುರಾಯರ ದರ್ಶನ ಪಡೆದು ಆಶೀರ್ವಾದ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










