ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಲ್ಲಿ ಹಾವು ಕಡಿತ ಹಾಗೂ ನಾಯಿ ಕಡಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮುಂಜಾಗ್ರತಾ ಕ್ರಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದರ ಜೊತೆಗೆ ತಕ್ಷಣ ಚಿಕಿತ್ಸೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಹಾವು ಕಡಿತ ಆಡಿಟ್, ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ, ರಾಷ್ಟ್ರೀಯ ಹಾವು ಕಡಿತ ತಡೆ ಮತ್ತು ನಿಯಂತ್ರಣ ಯೋಜನೆ ಹಾಗೂ ರಾಷ್ಟ್ರೀಯ ಅಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮಗಳ ಕುರಿತ ಟಾಸ್ಕ್‌ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಾವು ಅಥವಾ ನಾಯಿ ಕಡಿತವಾದ ತಕ್ಷಣ ಸಾರ್ವಜನಿಕರು ನಾಟಿ ವೈದ್ಯರ ಬಳಿ ಹೋಗದೆ, ಸೂಕ್ತ ಪ್ರಥಮ ಚಿಕಿತ್ಸೆ ಪಡೆದು ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು. ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು ಸೇರಿದಂತೆ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದರು.
ನಾಯಿ ಕಡಿತ ಪ್ರಕರಣಗಳ ವಿವರ
ಜಿಲ್ಲೆಯಲ್ಲಿ ಒಟ್ಟು 13,325 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಭದ್ರಾವತಿ (3,157), ಶಿವಮೊಗ್ಗ (2,910), ಸಾಗರ (2,287), ಶಿಕಾರಿಪುರ (1,583), ಸೊರಬ (1,360), ತೀರ್ಥಹಳ್ಳಿ (1,023) ಹಾಗೂ ಹೊಸನಗರ (1,005) ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಯಾವುದೇ ಸಾವು ವರದಿಯಾಗಿಲ್ಲ ಎಂದು ಮಾಹಿತಿ ನೀಡಿದರು.
ಕೆಎಫ್‌ಡಿ ಹಾಗೂ ಅಸಾಂಕ್ರಾಮಿಕ ರೋಗಗಳ ಮೇಲ್ವಿಚಾರಣೆ
ಕೆಎಫ್‌ಡಿ ಪ್ರಕರಣಗಳು ಕಡಿಮೆಯಾಗಿದ್ದರೂ ಸಕ್ರಿಯ ಸವೇಕ್ಷಣಾ ಕ್ರಮಗಳನ್ನು ಮುಂದುವರಿಸಬೇಕು. ಜೂನ್ ಮೊದಲ ವಾರದಲ್ಲಿ ಕೊನೆಯ ಪ್ರಕರಣ ದಾಖಲಾಗಿದೆ. ಅಸಹಜ ಮಂಗ ಮರಣ ಕಂಡುಬಂದರೆ ತಕ್ಷಣ ಗ್ರಾಮ ಪಂಚಾಯತ್, ಪಶುಸಂಗೋಪನಾ ಮತ್ತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಹಾಗೂ ಪೋಸ್ಟ್‌ಮಾರ್ಟಂ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
Also read>> ಸೊರಬ : ರಾಜಕೀಯ ಭಿನ್ನಾಭಿಪ್ರಾಯ ಬದಿಗೊತ್ತು : ದೇವಾಂಗ ಸಮುದಾಯಕ್ಕೆ ಕರೆ
ಜಿಲ್ಲೆಯಲ್ಲಿ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಕುಡಿಯುವ ನೀರನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರೀಕ್ಷೆಗೆ ಒಳಪಡಿಸಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳ ಜೊತೆಗೆ ಎಲ್ಲಾ ಹಾಸ್ಟೆಲ್‌ಗಳಲ್ಲಿ ನೀರಿನ ಗುಣಮಟ್ಟ ಪರಿಶೀಲನೆ ಕಡ್ಡಾಯವಾಗಬೇಕು. ಸ್ವಚ್ಛತೆಯೊಂದಿಗೆ ಆಹಾರ ತಯಾರಿ ಮತ್ತು ಸಂಗ್ರಹಣೆ ಮೇಲೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಇಲಿ ಜ್ವರ ತಡೆಗೆ ಸಲಹೆಗಳು
ಇಲಿ ಜ್ವರ ತಡೆಯಲು ಅರಿವು ಮೂಡಿಸಬೇಕು. ಇಲಿಗಳ ಓಡಾಟ ನಿಯಂತ್ರಿಸಿ, ಆಹಾರ ಮತ್ತು ನೀರನ್ನು ಮುಚ್ಚಿಡಬೇಕು. ಜ್ವರ, ಮೈಕೈ ನೋವು, ಜಾಂಡಿಸ್ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ನಾಯಿ ಕಡಿತದ ನಂತರ ಏನು ಮಾಡಬೇಕು?
ಜಿಲ್ಲಾ ಸವೇಕ್ಷಣಾಧಿಕಾರಿ ಡಾ. ನಾಗರಾಜ್ ನಾಯ್ಕ್ ಮಾಹಿತಿ ನೀಡಿದ್ದು, ನಾಯಿ ಅಥವಾ ಪ್ರಾಣಿ ಕಡಿದ ತಕ್ಷಣ ಗಾಯವನ್ನು ಸಾಬೂನು ಮತ್ತು ಹರಿಯುವ ನೀರಿನಿಂದ ಕನಿಷ್ಠ 15 ನಿಮಿಷಗಳ ಕಾಲ ತೊಳೆಯಬೇಕು. ನಂತರ ಸಮೀಪದ ಆಸ್ಪತ್ರೆ ಅಥವಾ ಆಂಟಿ-ರೇಬೀಸ್ ಕ್ಲಿನಿಕ್‌ಗೆ ತೆರಳಿ ವೈದ್ಯರ ಸಲಹೆಯಂತೆ ರೇಬೀಸ್ ಲಸಿಕೆ ಪೂರ್ಣಗೊಳಿಸಬೇಕು. ಗಾಯಕ್ಕೆ ಮಣ್ಣು, ಸಗಣಿ, ಕಾಫಿ ಪುಡಿ ಅಥವಾ ಸಾಸಿವೆ ಎಣ್ಣೆ ಹಚ್ಚಬಾರದು. ಸಾಕು ನಾಯಿ ಕಡಿದರೂ ನಿರ್ಲಕ್ಷ್ಯ ಬೇಡ ಹಾಗೂ ಚಿಕಿತ್ಸೆ ಮಧ್ಯದಲ್ಲಿ ನಿಲ್ಲಿಸಬಾರದು ಎಂದು ತಿಳಿಸಿದರು.
ಹಾವು ಕಡಿತ ಪ್ರಕರಣಗಳ ವಿವರ
ಜಿಲ್ಲೆಯಲ್ಲಿ ಒಟ್ಟು 606 ಹಾವು ಕಡಿತ ಪ್ರಕರಣಗಳು ದಾಖಲಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಶಿಕಾರಿಪುರ (141 ಪ್ರಕರಣ, 1 ಸಾವು), ಶಿವಮೊಗ್ಗ (122), ಭದ್ರಾವತಿ (113), ಸೊರಬ (72), ಹೊಸನಗರ (64 ಪ್ರಕರಣ, 1 ಸಾವು), ತೀರ್ಥಹಳ್ಳಿ (49) ಹಾಗೂ ಸಾಗರ (45 ಪ್ರಕರಣ, 4 ಸಾವು) ವರದಿಯಾಗಿದೆ.
ಹಾವು ಕಡಿತವಾದಾಗ ಸಂತ್ರಸ್ತರನ್ನು ಹೆದರದಂತೆ ಸಮಾಧಾನಪಡಿಸಿ, ಕಡಿದ ಭಾಗವನ್ನು ಅಲುಗಾಡಿಸದಂತೆ ನೇರವಾಗಿ ಮಲಗಿಸಿ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಬೇಕು. ಬಿಗಿಯಾಗಿ ಕಟ್ಟಿ ಬಂಧಿಸುವುದು, ಗಾಯವನ್ನು ಕತ್ತರಿಸುವುದು, ಬಾಯಿಯಿಂದ ವಿಷ ಹೀರುವುದು ಅಥವಾ ಮೂಢನಂಬಿಕೆಯ ಚಿಕಿತ್ಸೆಗೆ ಒಳಗಾಗುವುದು ತಪ್ಪು ಎಂದು ಎಚ್ಚರಿಸಿದರು.
ಇಲಿ ಜ್ವರ ಪ್ರಕರಣಗಳು
ಜಿಲ್ಲೆಯಲ್ಲಿ ಈವರೆಗೆ 102 ಇಲಿ ಜ್ವರ ಪ್ರಕರಣಗಳು ಕಂಡುಬಂದಿದ್ದು, ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅಸಾಂಕ್ರಾಮಿಕ ರೋಗಗಳ ಕುರಿತು ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್, ಆರ್‌ಸಿಎಚ್‌ಓ ಡಾ. ಓ. ಮಲ್ಲಪ್ಪ, ಡಾ. ಗುಡುದಪ್ಪ ಕಸಬಿ ಸೇರಿದಂತೆ ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







