ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೈಯಕ್ತಿಕ ಬದುಕನ್ನು ಉತ್ತಮವಾಗಿ ನಿರ್ವಹಿಸುವುದರ ಜೊತೆಗೆ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಮನೋಭಾವ ಪ್ರತಿಯೊಬ್ಬರಲ್ಲೂ ಇರಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಶಿವಮೊಗ್ಗ ನಗರದ ಗಾಂಧಿ ಬಜಾರ್‌ನ ತುಳಜಾಭವನ್ನಲ್ಲಿ ಭಾವಸಾರ ಕ್ಷತ್ರಿಯ ಮಹಾಜನ ಸಮಾಜ ಹಾಗೂ ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ಭಾವಸಾರ ಸಮಾಜದ 75 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.
ಭಾವಸಾರ ಸಮಾಜವು ಸ್ವಾಭಿಮಾನಕ್ಕೆ ಹೆಸರಾಗಿದ್ದು, ಹೃದಯ ಶ್ರೀಮಂತಿಕೆಯುಳ್ಳ ಸಮಾಜವಾಗಿದೆ. ಜೀವನದಲ್ಲಿ ಯಶಸ್ಸು ಸಾಧಿಸಿದವರು ತಮ್ಮನ್ನು ಬೆಳೆಸಿದ ಸಮಾಜವನ್ನು ಮರೆಯಬಾರದು. ಆದರೆ ಕೆಲವರು ತಾವು ಹತ್ತಿದ ಏಣಿಯನ್ನೇ ಒದೆಯುವ ಮೂಲಕ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ
ಇಂದಿನ ಯುವಕರ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ವಿವಿಧ ವರದಿಗಳ ಪ್ರಕಾರ ಶೇ.60ರಷ್ಟು ಮಕ್ಕಳ ಮಾನಸಿಕ ಸಮತೋಲನದ ಮೇಲೆ ಪರಿಣಾಮ ಬೀರಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಬಿ.ವೈ. ರಾಘವೇಂದ್ರ ಹೇಳಿದರು.
ಪ್ರತಿ 3 ಸಾವಿರ ಜನರಿಗೆ ಒಬ್ಬ ಮಾನಸಿಕ ಆರೋಗ್ಯ ತಜ್ಞರ ಅಗತ್ಯವಿದೆ ಎಂಬ ವರದಿಗಳಿವೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡುವ ಕಾರ್ಯಕ್ರಮಗಳು ಅವರ ಜೀವನ ಮಟ್ಟವನ್ನು ಸುಧಾರಿಸಲು ಸಹಕಾರಿಯಾಗುತ್ತವೆ ಎಂದರು.
ಮಕ್ಕಳು ಸಮಾಜದ ಮತ್ತು ದೇಶದ ಆಸ್ತಿಯಾಗಬೇಕು: ಕೆ.ಎಸ್. ಈಶ್ವರಪ್ಪ
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ಹೊಸ ಚಿಂತನೆಗಳು ಹಾಗೂ ಭಕ್ತಿಯ ವಿಚಾರದಲ್ಲಿ ಭಾವಸಾರ ಸಮಾಜ ಯಾವತ್ತೂ ಹಿಂದೆ ಬಿದ್ದಿಲ್ಲ ಎಂದು ಹೇಳಿದರು.
Also read>> ಬಿ. ನಾಗೇಂದ್ರರನ್ನು ಸಂಪುಟದಿಂದ ಕೈ ಬಿಡಬೇಕು: ಆರಗ ಜ್ಞಾನೇಂದ್ರ ಆಗ್ರಹ
ದೇಶದ ಅಭಿವೃದ್ಧಿಗೆ ಉತ್ತಮ ಚಿಂತನೆ ಹೊಂದಿರುವ ನಾಗರಿಕರು ಅಗತ್ಯವಿದ್ದು, ಬುದ್ಧಿವಂತಿಕೆಯಿಂದ ಸರಿಯಾದ ನಿರ್ಧಾರಗಳನ್ನು ಕೈಗೊಂಡರೆ ದೇಶವೂ ಅಭಿವೃದ್ಧಿಯಾಗುತ್ತದೆ ಎಂದರು.
ಇಂದಿನ ಮಕ್ಕಳು ಸಮಾಜದ ಆಸ್ತಿ ಹಾಗೂ ದೇಶದ ಆಸ್ತಿಯಾಗಬೇಕು. ವಿದ್ಯಾರ್ಥಿಗಳ ಭವಿಷ್ಯ ಉತ್ತಮ ಅಂಕಗಳ ಜೊತೆಗೆ ಉತ್ತಮ ವ್ಯಕ್ತಿತ್ವದ ಮೇಲೂ ಅವಲಂಬಿತವಾಗಿದೆ. ಆದ್ದರಿಂದ ಯುವಕರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾವಸಾರ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ ವಹಿಸಿದ್ದರು. ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಹೊಸದುರ್ಗದ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಆರ್.ಡಿ. ಸೀತಾರಾಮ್, ಭದ್ರಾವತಿಯ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ದುಗ್ಗೇಶ್ ತೇಲ್ಕರ್, ಮುಖಂಡರಾದ ಡಾ. ಪುರುಷೋತ್ತಮ್, ಶ್ರೀಧರಮೂರ್ತಿ ನವಲೆ, ಖಜಾಂಚಿ ಸತ್ಯನಾರಾಯಣ, ಪ್ರಭಾಕರ್ ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







