ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಕಳುವಾಗಿದ್ದ ಹಾಗೂ CEIR ಪೋರ್ಟಲ್‌ನಲ್ಲಿ ದೂರು ದಾಖಲಿಸಲಾಗಿದ್ದ 50 ಮೊಬೈಲ್ (Mobile) ಫೋನ್‌ಗಳನ್ನು ದೊಡ್ಡಪೇಟೆ ಪೊಲೀಸರು ಪತ್ತೆಹಚ್ಚಿ, ಅವುಗಳ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
2023, 2024, 2025 ಹಾಗೂ 2026ನೇ ಸಾಲಿನಲ್ಲಿ ಮೊಬೈಲ್ ಫೋನ್‌ಗಳು ಕಳುವಾಗಿರುವ ಕುರಿತು ಸಾರ್ವಜನಿಕರು CEIR ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದರು. ಈ ಮೊಬೈಲ್‌ಗಳನ್ನು ಪತ್ತೆಹಚ್ಚುವಂತೆ ಇಲಾಖೆಯ ಮೇಲಾಧಿಕಾರಿಗಳು ನೀಡಿದ ನಿರ್ದೇಶನದ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಸತ್ಯನಾರಾಯಣ್ ವೈ. ರವ ಅವರ ಮಾರ್ಗದರ್ಶನದಲ್ಲಿ ಠಾಣೆಯ ಅಪರಾಧ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
Also read>> ತುಂಡು ತುಂಡಾದ ದೇಹ, ಸಿಗದ ರುಂಡ, 2 ಹಚ್ಚೆಗಳೇ ಕ್ಲ್ಯೂ | ಆರೋಪಿ ಸಿಕ್ಕಿದ್ದೇ ರೋಚಕ ಕಹಾನಿ
ತಂಡದಲ್ಲಿ ಪಿಎಸ್‌ಐ ಎಂ.ಎನ್. ಅಂಬಿಗೇರ್, ಎಎಸ್‌ಐ ನಾಗರಾಜ್ ಸಿ.ಆರ್., ಪಾಲಾಕ್ಷನಾಯ್ಕ, ಸಂದೀಪ್ ಎಸ್.ಡಿ., ಬಸವರಾಜ್ ಹೊರಗಿ, ಗುರುನಾಯ್ಕ, ಚಂದ್ರನಾಯ್ಕ, ಗಣೇಶ, ಮನೋಹರ್ ಹಾಗೂ ಪುನೀತ್ ರಾವ್ ಅವರು ಕಾರ್ಯನಿರ್ವಹಿಸಿದ್ದರು.
ವಿಶೇಷ ತಂಡವು ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ, ಕಳುವಾಗಿದ್ದ 50 ಮೊಬೈಲ್ ಫೋನ್‌ಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದೆ. ಪತ್ತೆಯಾದ ಮೊಬೈಲ್ ಫೋನ್‌ಗಳನ್ನು ಈ ದಿನ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಕಳುವಾಗಿದ್ದ ಮೊಬೈಲ್‌ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಿಂದಿರುಗಿಸುವಲ್ಲಿ ಉತ್ತಮ ಕಾರ್ಯನಿರ್ವಹಿಸಿದ ದೊಡ್ಡಪೇಟೆ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








