ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
“ಅಧ್ಯಾತ್ಮವೇ ಭಾರತದ ಶಕ್ತಿ. ಅಧ್ಯಾತ್ಮದ ಶಕ್ತಿಯ ಮೂಲಕವೇ ಭಾರತವು ವಿಶ್ವಗುರುವಾಗಲು ಸಾಧ್ಯ. ಅದಕ್ಕೂ ಮೊದಲು ನಾವು ನಮ್ಮ (Spirituality) ಅಧ್ಯಾತ್ಮದ ಆಂತರ್ಯವನ್ನು ಅರಿತುಕೊಳ್ಳಬೇಕು,” ಎಂದು (One World One Family Mission) ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಶಿವಮೊಗ್ಗ ದಲ್ಲಿ (Shivamogga) ಹೇಳಿದರು.
ನಗರದಲ್ಲಿ ಸೋಮವಾರ ನಡೆದ ‘ದಿವ್ಯ ಸಂಜೆ’ ಸಂವಾದ ಕಾರ್ಯಕ್ರಮದಲ್ಲಿ ಖ್ಯಾತ ಚಿತ್ರನಟ ನೀರ್ನಳ್ಳಿ ರಾಮಕೃಷ್ಣ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಭಾರತದ ಅಧ್ಯಾತ್ಮದ ಬಗ್ಗೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕುತೂಹಲ ಹೆಚ್ಚುತ್ತಿದೆ ಎಂದು ಹೇಳಿದರು.
ಟರ್ಕಿ, ಇರಾನ್, ಅಮೆರಿಕ, ಚೀನಾ ಹಾಗೂ ಜಪಾನ್ ಸೇರಿದಂತೆ ಹಲವು ದೇಶಗಳ ಜನರು ಭಾರತೀಯ ಅಧ್ಯಾತ್ಮದ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಭಾರತೀಯರ ‘ವಸುಧೈವ ಕುಟುಂಬಕಂ’ ಪರಿಕಲ್ಪನೆಯಲ್ಲಿ ಪಂಚಭೂತಗಳಾದ ಭೂಮಿ, ನೀರು, ಗಾಳಿ, ಆಕಾಶ ಸೇರಿದಂತೆ ಪ್ರಕೃತಿ ಹಾಗೂ ವನ್ಯಜೀವಿಗಳೂ ನಮ್ಮ ಕುಟುಂಬದ ಭಾಗವಾಗಿವೆ ಎಂದು ಅವರು ವಿವರಿಸಿದರು.
‘ಸಕ್ಸಸ್ ಈಕ್ವಲ್ಸ್ ಟು ಮನಿ’ ಎನ್ನುವ ಸೂತ್ರವೇ ತಪ್ಪು
ಒಬ್ಬ ವ್ಯಕ್ತಿಯ ಯಶಸ್ಸನ್ನು ಅಳೆಯಲು ಹಣವನ್ನೇ ಮಾನದಂಡವನ್ನಾಗಿ ಬಳಸುತ್ತಿರುವುದು ಸಮಾಜದ ಹಲವು ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿದೆ. ‘ಸಕ್ಸಸ್ ಈಕ್ವಲ್ಸ್ ಟು ಮನಿ’ ಎನ್ನುವ ಸೂತ್ರವೇ ತಪ್ಪು. ನಿಸ್ವಾರ್ಥ ಸೇವಾ ಮನೋಭಾವ ಬೆಳೆಸದೇ ಇರುವ ಶಿಕ್ಷಣಕ್ಕೆ ಯಾವುದೇ ಅರ್ಥವಿಲ್ಲ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಅಭಿಪ್ರಾಯಪಟ್ಟರು.
ಮಕ್ಕಳು ಆತ್ಮಹತ್ಯೆಗೆ ಯತ್ನಿಸುತ್ತಿರುವ ಘಟನೆಗಳು ಮನಸ್ಸನ್ನು ಕಲಕುತ್ತವೆ. ಅಮೆರಿಕದಂತಹ ದೇಶಗಳ ಆಸ್ಪತ್ರೆಗಳ ತುರ್ತು ನಿಗಾ ಘಟಕಗಳಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ಶಿಕ್ಷಣ ನೀಡದೆ ಈ ಪರಿಸ್ಥಿತಿಯನ್ನು ಬದಲಾಯಿಸುವುದು ಕಷ್ಟ ಎಂದು ಹೇಳಿದರು.
ಮಕ್ಕಳ ಪ್ರತಿಭೆ ಗುರುತಿಸಲು ಅವಕಾಶ ನೀಡಬೇಕು
ಮಕ್ಕಳು ದೊಡ್ಡವರಾದ ಬಳಿಕ ಏನಾಗಬೇಕು ಎಂಬುದನ್ನು ಅವರೇ ನಿರ್ಧರಿಸಬೇಕು. ಪ್ರತಿಯೊಬ್ಬ ಮಗುವಿಗೂ ಒಂದಲ್ಲ ಒಂದು ಪ್ರತಿಭೆಯನ್ನು ದೇವರು ನೀಡಿಯೇ ಭೂಮಿಗೆ ಕಳುಹಿಸಿದ್ದಾನೆ. ಆ ಪ್ರತಿಭೆಯನ್ನು ಮಕ್ಕಳು ಗುರುತಿಸಿಕೊಳ್ಳಲು ಮತ್ತು ಅದೇ ಕ್ಷೇತ್ರದಲ್ಲಿ ಬೆಳೆಯಲು ಸಮಾಜ ಅವಕಾಶ ಕಲ್ಪಿಸಬೇಕು. ಎಲ್ಲರೂ ವೈದ್ಯರಾಗಬೇಕು ಅಥವಾ ಒಂದೇ ವೃತ್ತಿಯನ್ನು ಆಯ್ಕೆ ಮಾಡಬೇಕು ಎನ್ನುವುದು ಸರಿಯಲ್ಲ ಎಂದು ಹೇಳಿದರು.
ಭಾರತವನ್ನು ವಿಶ್ವಗುರುವನ್ನಾಗಿಸುವಲ್ಲಿ ನಿಸ್ವಾರ್ಥ ಸೇವೆ, ಮಾನವೀಯತೆ, ಅಧ್ಯಾತ್ಮ ಮತ್ತು ಪ್ರಕೃತಿಯ ಮೇಲಿನ ಕಾಳಜಿ ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಪ್ರತಿಪಾದಿಸಿದರು.
Also Read>> ತಾಳಗುಪ್ಪ–ಬೆಂಗಳೂರು, ಯಶವಂತಪುರ–ಶಿವಮೊಗ್ಗ ಇಂಟರ್‌ಸಿಟಿ ಸಂಚಾರದಲ್ಲಿ ಮಹತ್ವದ ಬದಲಾವಣೆ
5 ಕೋಟಿ ಸಸ್ಯ ನೆಡುವ ಸಂಕಲ್ಪ
‘ವಸುಧೈವ ಕುಟುಂಬಕಂ’ ಪರಿಕಲ್ಪನೆಯಡಿ ಪ್ರಕೃತಿಯ ಸಂರಕ್ಷಣೆಯೂ ನಮ್ಮ ಜವಾಬ್ದಾರಿಯಾಗಿದೆ. ವಕೀಲರ ಸಂಘದ ಸಹಯೋಗದಲ್ಲಿ ಕರ್ನಾಟಕ ರಾಜ್ಯದಲ್ಲಿ 5 ಕೋಟಿ ಸಸ್ಯಗಳನ್ನು ನೆಡುವ ಸಂಕಲ್ಪ ಮಾಡಲಾಗಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಮಾಹಿತಿ ನೀಡಿದರು.
ನಿಸ್ವಾರ್ಥ ಸೇವೆಯ ಆದರ್ಶ
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕಮರೂರಿನ ಶ್ರೀ ಸತ್ಯ ಸಾಯಿ ಸರ್ವನಿಕೇತನಂ ಗುರುಕುಲದ ಪ್ರಧಾನ ಪಾಲಕರಾದ ಶಿವಪ್ರಸಾದ್ ಭಟ್, “ಪ್ರಪಂಚದ ಬಹುತೇಕ ಸಮಸ್ಯೆಗಳಿಗೆ ‘ಒಂದು ಜಗತ್ತು, ಒಂದು ಕುಟುಂಬ’ ಪರಿಕಲ್ಪನೆಯು ಪರಿಹಾರವಾಗಬಲ್ಲದು,” ಎಂದು ಹೇಳಿದರು.
ಸದ್ಗುರು ಶ್ರೀ ಮಧುಸೂದನ ಸಾಯಿಯವರು ಸಂಪೂರ್ಣ ಉಚಿತ ಶಿಕ್ಷಣ, ಆರೋಗ್ಯ ಹಾಗೂ ಪೌಷ್ಟಿಕ ಆಹಾರ ಒದಗಿಸುವ ಮೂಲಕ ನಾವೆಲ್ಲರೂ ಒಂದೇ ಕುಟುಂಬದವರು ಎಂಬ ಸಂದೇಶ ಸಾರುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆ ಮಾನವಕುಲಕ್ಕೇ ಆದರ್ಶವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಎಸ್. ರುದ್ರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
‘ನಾನು ಬದಲಾಗಿದ್ದೇನೆ; ಅಪ್ಪ-ಅಮ್ಮನೇ ಆಶ್ಚರ್ಯಪಡುತ್ತಾರೆ’
ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡ ಶ್ರೀ ಸತ್ಯ ಸಾಯಿ ಸರ್ವನಿಕೇತನಂ ಗುರುಕುಲದ 8ನೇ ತರಗತಿ ವಿದ್ಯಾರ್ಥಿ, ಭದ್ರಾಪುರ ಗ್ರಾಮದ ಸಚಿನ್, “ನಾನು ಈಗ ಸಾಕಷ್ಟು ಬದಲಾಗಿದ್ದೇನೆ. ಮೊದಲು ನನಗೆ ಹೆಚ್ಚು ಕೋಪ ಬರುತ್ತಿತ್ತು. ಈಗ ನನ್ನನ್ನು ನೋಡಿದರೆ ನನ್ನ ಅಪ್ಪ-ಅಮ್ಮನೇ ಆಶ್ಚರ್ಯಪಡುತ್ತಾರೆ,” ಎಂದು ಹೇಳಿದರು.
“ಗುರುಕುಲದಲ್ಲಿ ನನಗೆ ಪ್ರವೇಶ ಸಿಕ್ಕಿದ್ದು ಪೂರ್ವಜನ್ಮದ ಪುಣ್ಯ. ಮೊದಲು ಇಂಗ್ಲಿಷ್ ಎಂದರೆ ತುಂಬಾ ಭಯವಾಗುತ್ತಿತ್ತು. ಇಂದು ಇಂಗ್ಲಿಷ್ ಮಾತನಾಡಬಲ್ಲೆ. ಕ್ರೀಡಾ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದೇನೆ. ಸಮಾಜ, ಗಣಿತ, ವಿಜ್ಞಾನ ವಿಷಯಗಳ ಜೊತೆಗೆ ವೇದ, ಉಪನಿಷತ್ತು ಹಾಗೂ ಭಗವದ್ಗೀತೆಯಂತಹ ಪರಾ ವಿದ್ಯೆಯನ್ನೂ ಕಲಿಯುತ್ತಿದ್ದೇನೆ,” ಎಂದು ತಮ್ಮ ಅನುಭವ ಹಂಚಿಕೊಂಡರು.
ಗ್ರಾಮೀಣ ಮಕ್ಕಳಿಗೆ ಉಚಿತ ಶಿಕ್ಷಣ
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕಮರೂರು ಗ್ರಾಮದಲ್ಲಿ ‘ಶ್ರೀ ಸತ್ಯ ಸಾಯಿ ಸರ್ವನಿಕೇತನಂ’ ವಸತಿ ಶಾಲೆ 2019ರಿಂದ ಕಾರ್ಯನಿರ್ವಹಿಸುತ್ತಿದೆ. 40 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ 6ರಿಂದ 8ನೇ ತರಗತಿವರೆಗೆ ಸುಮಾರು 200 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಇವರಲ್ಲಿ ಶೇ.67.50ರಷ್ಟು ವಿದ್ಯಾರ್ಥಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದು, ಶೇ.42ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಸೇರಿದವರು. ಶೇ.69.10ರಷ್ಟು ವಿದ್ಯಾರ್ಥಿಗಳು ಮೊದಲ ತಲೆಮಾರಿನ ಕಲಿಕಾರ್ಥಿಗಳಾಗಿದ್ದು, ಅವರ ಕುಟುಂಬದಲ್ಲಿ ಈ ಹಿಂದೆ ಯಾರೂ ಉನ್ನತ ಶಿಕ್ಷಣ ಪಡೆದಿಲ್ಲ ಎಂಬುದು ವಿಶೇಷವಾಗಿದೆ.
ಇದೇ ಕ್ಯಾಂಪಸ್‌ನಲ್ಲಿ ‘ಸಾಯಿ ಸ್ವಾಸ್ಥ್ಯ ವೆಲ್‌ನೆಸ್ ಸೆಂಟರ್’ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿದೆ.
ಸಂತರಿಂದ ಭಾರತಕ್ಕೆ ಗೌರವ: ಈಶ್ವರಪ್ಪ
“ಸಾಧು, ಸಂತರ ನಿಸ್ವಾರ್ಥ ಸೇವೆಯೇ ಜಗತ್ತಿನಲ್ಲಿ ಭಾರತಕ್ಕೆ ಗೌರವ ಸಿಗಲು ಮುಖ್ಯ ಕಾರಣ” ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
“ದಿವ್ಯ ಸಂಜೆ” ಸಂವಾದದ ನಂತರ ಸದ್ಗುರು ಶ್ರೀ ಮಧುಸೂದನ ಸಾಯಿ ಅವರಿಂದ ಸ್ಮರಣಿಕೆ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಸಾಕಷ್ಟು ಜನರು ಕೊಡುತ್ತಾರೆ. ಆದರೆ ಆಧ್ಯಾತ್ಮಿಕತೆಯನ್ನು ಯಾರೂ ಕೊಡುವುದಿಲ್ಲ. ಆಧ್ಯಾತ್ಮಿಕತೆ ಇಲ್ಲದಿದ್ದರೆ ನೆಮ್ಮದಿ ಇಲ್ಲ ಎಂದು ಅಭಿಪ್ರಾಯಪಟ್ಟರು.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸಲ್ಲಿಸುತ್ತಿರುವ ಸೇವೆಯು ಜಗತ್ತಿಗೆ ಮಾದರಿಯಾಗಿದೆ. ಇಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾರ್ಥಿಗಳು 10 ವರ್ಷಗಳ ನಂತರ ಸೇವೆ ಮಾಡಲು ತಯಾರಾಗುವುದಾಗಿ ಹೇಳಿದ್ದಾರೆ. ಅದು ಖಂಡಿತವಾಗಿ ಯಶಸ್ವಿಯಾಗುತ್ತದೆ ಎಂದು ಆಶಯ ಹಂಚಿಕೊಂಡರು.
ಪ್ರವೇಶ ಪ್ರಕ್ರಿಯೆ
ಶ್ರೀ ಸತ್ಯ ಸಾಯಿ ಲೋಕಸೇವಾ ಗುರುಕುಲಂ ಸಮೂಹ ಶಿಕ್ಷಣ ಸಂಸ್ಥೆಗಳ ಎಲ್ಲ ಕ್ಯಾಂಪಸ್‌ಗಳಲ್ಲಿ 6ನೇ ತರಗತಿಗೆ ಪ್ರತಿ ವರ್ಷ 25 ಮಕ್ಕಳನ್ನು ಪ್ರವೇಶ ಮಾಡಿಕೊಳ್ಳಲಾಗುತ್ತದೆ. ಈ ಪೈಕಿ 15 ಸೀಟುಗಳನ್ನು ಆನ್‌ಲೈನ್ ಅರ್ಜಿಗಳ ಮೂಲಕ ಭರ್ತಿ ಮಾಡಲಾಗುತ್ತದೆ. ಉಳಿದ 10 ಸೀಟುಗಳನ್ನು ಅತ್ಯಂತ ಬಡ ಕುಟುಂಬಗಳ ಮಕ್ಕಳಿಗಾಗಿ ಮೀಸಲಿಡಲಾಗುತ್ತದೆ.
ಸದ್ಗುರು ಶ್ರೀ ಮಧುಸೂದನ ಸಾಯಿ ಪರಿಚಯ
ಭಗವಾನ್ ಶ್ರೀ ಸತ್ಯ ಸಾಯಿ ಬಾಬಾ ಅವರು ಬೋಧಿಸಿದ ‘ಪ್ರೀತಿ ಮತ್ತು ಸೇವೆ’ಯ ಆದರ್ಶಗಳ ತಳಹದಿಯ ಮೇಲೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ ಎಂಬ ಸೇವಾ ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ.
ಪ್ರಸ್ತುತ 100 ದೇಶಗಳಿಗೆ ವಿಸ್ತರಿಸಿರುವ ಈ ಅಭಿಯಾನದ ಮೂಲಕ ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕ ಆಹಾರವನ್ನು ಕೋಟ್ಯಂತರ ಜನರಿಗೆ ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



