ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
(Shivamogga) ನಗರದ ಅಮೀರ್ ಅಹಮದ್ ವೃತ್ತವನ್ನು ‘ಸಾವರ್ಕರ್ ವೃತ್ತ’ (Savarkar Circle) ಎಂದು ಕರೆಯಲಾಗುತ್ತಿದೆ ಎಂಬ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಬೆನ್ನಲ್ಲೇ ಶಾಸಕ ಎಸ್.ಎನ್. ಚನ್ನಬಸಪ್ಪ ಸ್ಪಷ್ಟನೆ ನೀಡಿದ್ದಾರೆ. ಅಮೀರ್ ಅಹಮದ್ ವೃತ್ತಕ್ಕೆ ಸಾವರ್ಕರ್ ಹೆಸರು ಇಡುವ ವಿಚಾರದಲ್ಲಿ ತಾವು ಯಾವುದೇ ವಿವಾದಕ್ಕೆ ಹೋಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಚೆನ್ನಬಸಪ್ಪ, “ವಿನಾಕಾರಣ ವಿವಾದಗಳು ಬೇಡ. ಎಲ್ಲರೂ ಒಗ್ಗೂಡಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವವನ್ನು ವಿಜೃಂಭಣೆಯಿಂದ ನಡೆಸೋಣ” ಎಂದು ಮನವಿ ಮಾಡಿದರು.
‘ಅಮೀರ್ ಅಹಮದ್ ವೃತ್ತ’ ವಿಚಾರದಲ್ಲಿ ಚರ್ಚೆಗೆ ಹೋಗಲ್ಲ
1973ರಲ್ಲಿಯೇ ನಗರಸಭೆಯಿಂದ ಅಮೀರ್ ಅಹಮದ್ ವೃತ್ತ ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಕುರಿತು ತಾವು ಯಾವುದೇ ಚರ್ಚೆಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
“ನಾವು ಯಾವುದರ ಬಗ್ಗೆಯೂ ಡಿಸ್ಪ್ಯೂಟ್ ಮಾಡಿಲ್ಲ. ಯಾರೋ ಮಾತನಾಡಿಕೊಂಡು ಹೋಗಿರುವುದಕ್ಕೆ ನಾನು ದಿಕ್ಕು ಕೊಡುವುದಕ್ಕೆ ಆಗುವುದಿಲ್ಲ” ಎಂದು ಅವರು ಹೇಳಿದರು.
ಅಧಿಕೃತವಾಗಿ ‘ಸಾವರ್ಕರ್ ವೃತ್ತ’ ಎಂಬ ಹೆಸರು ಎಲ್ಲಿಯೂ ಇಲ್ಲ. ಆದರೆ ಸಾರ್ವಜನಿಕರ ಅಪೇಕ್ಷೆ ಇದ್ದರೆ ಮುಂದಿನ ದಿನಗಳಲ್ಲಿ ಈ ಕುರಿತು ಅಗತ್ಯ ಕ್ರಮದ ಬಗ್ಗೆ ಪರಿಶೀಲಿಸಲಾಗುವುದು ಎಂದು ಶಾಸಕ ಚೆನ್ನಬಸಪ್ಪ ತಿಳಿಸಿದರು.
Also read>> ಶಿವಮೊಗ್ಗ ಗಣೇಶ ವಿಸರ್ಜನೆಗೆ ಹೈಅಲರ್ಟ್ | ಎಷ್ಟು ಸಿಬ್ಬಂದಿ, ಸಿಸಿಟಿವಿ ನಿಯೋಜನೆ? 35 ಮಂದಿ ಗಡಿಪಾರು
Shivamogga ಈಗಾಗಲೇ ‘ಸಾವರ್ಕರ್ ನಗರ’ ಹೆಸರಿದೆ
ಶಿವಮೊಗ್ಗದಲ್ಲಿ ಈಗಾಗಲೇ ಸಾವರ್ಕರ್ ನಗರದ ಹೆಸರಿದ್ದು, ಸಾವರ್ಕರ್ ಅವರ ಹೆಸರಿನಲ್ಲಿ ಇನ್ನಷ್ಟು ಕೆಲಸಗಳನ್ನು ಮಾಡಬೇಕಾದ ಅಗತ್ಯವಿದ್ದರೆ ಅದಕ್ಕೆ ತಮ್ಮ ಬೆಂಬಲ ಹಾಗೂ ಶಕ್ತಿ ನೀಡಲಾಗುವುದು ಎಂದು ಅವರು ಹೇಳಿದರು.
ಹಿಂದೂ ಮಹಾಸಭಾ ಗಣಪತಿ ಉತ್ಸವದ ಹಿನ್ನೆಲೆಯಲ್ಲಿ ನಿರ್ಮಿಸಿರುವ ಬ್ಯಾಕ್‌ಡ್ರಾಪ್‌ನಲ್ಲಿಯೂ ಸಾವರ್ಕರ್ ಅವರ ಹೆಸರು ಮತ್ತು ಭಾವಚಿತ್ರವನ್ನು ಬಳಸಲಾಗಿದೆ ಎಂದು ಅವರು ಉಲ್ಲೇಖಿಸಿದರು.
“ಅದಕ್ಕಿಂತ ಜಾಸ್ತಿ ಇನ್ನೇನು ಬೇಕು?” ಎಂದು ಶಾಸಕ ಚೆನ್ನಬಸಪ್ಪ ಪ್ರಶ್ನಿಸಿದರು.
ಅಮೀರ್ ಅಹಮದ್ ವೃತ್ತದ ಹೆಸರಿನ ವಿಚಾರವನ್ನು ಮುಂದಿಟ್ಟುಕೊಂಡು ಅನಗತ್ಯ ವಿವಾದ ಸೃಷ್ಟಿಸುವ ಬದಲು, ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸುವತ್ತ ಎಲ್ಲರೂ ಗಮನಹರಿಸಬೇಕು ಎಂದು ಅವರು ಮನವಿ ಮಾಡಿದರು.
‘ವಂದೇ ಮಾತರಂ’ ಮಹಾದ್ವಾರಕ್ಕೆ ಬಂಕಿಮಚಂದ್ರ ಚಟ್ಟೋಪಾಧ್ಯಾಯರಿಗೆ ಗೌರವ
ಇದೇ ವೇಳೆ ಗಣೇಶೋತ್ಸವದ ಅಂಗವಾಗಿ ನಿರ್ಮಿಸಲಾಗಿರುವ ‘ವಂದೇ ಮಾತರಂ’ ಮಹಾದ್ವಾರದ ಬಗ್ಗೆಯೂ ಶಾಸಕ ಚೆನ್ನಬಸಪ್ಪ ಮಾತನಾಡಿದರು. ಮಹಾದ್ವಾರ ನಿರ್ಮಾಣವನ್ನು ಸಮರ್ಥಿಸಿಕೊಂಡ ಅವರು, ಇದು ‘ವಂದೇ ಮಾತರಂ’ ಗೀತೆಯ ರಚನೆಕಾರ ಬಂಕಿಮಚಂದ್ರ ಚಟ್ಟೋಪಾಧ್ಯಾಯರಿಗೆ ಸಲ್ಲಿಸಿರುವ ಗೌರವ ಎಂದು ಹೇಳಿದರು.
“ನಮ್ಮ ಜೀವನದ ಅಸ್ತಿತ್ವವೇ ವಂದೇ ಮಾತರಂ. ಗಣೇಶೋತ್ಸವದ ಸಂದರ್ಭದಲ್ಲಿ ವಂದೇ ಮಾತರಂ ಮಹಾದ್ವಾರ ನಿರ್ಮಿಸಿರುವುದರಲ್ಲಿ ತಪ್ಪೇನಿದೆ?” ಎಂದು ಅವರು ಪ್ರಶ್ನಿಸಿದರು.
ಸಾರ್ವಜನಿಕ ಗಣೇಶೋತ್ಸವದ ಮೂಲಕ ದೇಶ ಕಟ್ಟುವ ಕಾರ್ಯಕ್ಕೆ ವೇದಿಕೆ ನಿರ್ಮಾಣವಾಯಿತು ಎಂದು ಅವರು ಹೇಳಿದರು. ಶಿವಮೊಗ್ಗದಿಂದಲೂ ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಹಲವು ಚಟುವಟಿಕೆಗಳು ನಡೆದಿದ್ದು, ಆ ಕಾರ್ಯ ಇಂದಿಗೂ ಮುಂದುವರಿಯುತ್ತಿದೆ ಎಂದರು.
ರಾಜಬೀದಿ ಉತ್ಸವಕ್ಕೆ ಒಗ್ಗಟ್ಟಿನ ಕರೆ
ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ವಿವಿಧ ಸಿದ್ಧತೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಯಾವುದೇ ಅನಗತ್ಯ ವಿವಾದಗಳಿಗೆ ಅವಕಾಶ ನೀಡದೆ, ಎಲ್ಲರೂ ಒಗ್ಗೂಡಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂಬ ಸಂದೇಶವನ್ನು ಶಾಸಕ ಚೆನ್ನಬಸಪ್ಪ ನೀಡಿದ್ದಾರೆ.
ಅಮೀರ್ ಅಹಮದ್ ವೃತ್ತದ ಹೆಸರಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗೆ ತೆರೆ ಎಳೆಯುವ ಪ್ರಯತ್ನವಾಗಿ ಮಾತನಾಡಿದ ಅವರು, ಅಧಿಕೃತವಾಗಿ ‘ಸಾವರ್ಕರ್ ವೃತ್ತ’ ಎಂಬ ಹೆಸರು ಜಾರಿಯಲ್ಲಿಲ್ಲ; ಆದರೆ ಸಾರ್ವಜನಿಕರ ಅಪೇಕ್ಷೆಯಿದ್ದರೆ ಮುಂದಿನ ಕ್ರಮದ ಕುರಿತು ಪರಿಶೀಲಿಸಲಾಗುವುದು ಎಂಬ ನಿಲುವನ್ನು ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









