ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ | ವರದಿ: ಮಧುರಾಮ್ |
ಹಿರಿಯ ನಾಗರಿಕರನ್ನು ಗೌರವಿಸುವ ಉದ್ದೇಶದಿಂದ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವೇ ಅವ್ಯವಸ್ಥೆಯಿಂದ ಕೂಡಿತ್ತು ಎಂದು ನೈಸರ್ಗಿಕ ಬಾಡಿ ಬಿಲ್ಡರ್ ರಘು ರಾಮಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ ಹಂಚಿಕೊಂಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ನಿಗದಿತ ಸಮಯಕ್ಕೆ ಆರಂಭವಾಗದೆ, ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ನಾಗರಿಕರು ಹಲವು ಸಮಯ ಕಾಯುವಂತಾಯಿತು ಎಂದು ಅವರು ಆರೋಪಿಸಿದ್ದಾರೆ.
ಶಿವಮೊಗ್ಗ (Shivamogga) ಜಿಲ್ಲೆಯ ವಿವಿಧ ಭಾಗಗಳಿಂದ ಮಾತ್ರವಲ್ಲದೆ ನೂರಾರು ಕಿಲೋಮೀಟರ್ ದೂರದಿಂದಲೂ ಹಿರಿಯ ನಾಗರಿಕರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅನೇಕರು ವಯೋಸಹಜ ಸಮಸ್ಯೆಗಳ ಜತೆಗೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸಮಯಕ್ಕೆ ಕಾರ್ಯಕ್ರಮ ಆರಂಭವಾಗದೆ ಅವರನ್ನು ಕಾಯಿಸಿರುವುದು ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ.
Shivamogga: ಸಮಯಕ್ಕೆ ಬಾರದ ಜನಪ್ರತಿನಿಧಿಗಳು
ಸ್ಥಳೀಯ ಶಾಸಕ ಚನ್ನಬಸಪ್ಪ ಅವರನ್ನು ಹೊರತುಪಡಿಸಿ ಬಹುತೇಕ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಮಯಕ್ಕೆ ಹಾಜರಾಗಿರಲಿಲ್ಲ ಎಂದು ರಘು ರಾಮಪ್ಪ ಅವರು ವಿಡಿಯೋದಲ್ಲಿ ಆಕ್ಷೇಪಿಸಿದ್ದಾರೆ.
ಹಿರಿಯ ನಾಗರಿಕರಿಗಾಗಿ ಕಾರ್ಯಕ್ರಮ ಆಯೋಜಿಸಿ, ಅವರ ಸಮಯ ಮತ್ತು ಆರೋಗ್ಯವನ್ನು ಕಡೆಗಣಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ. ಕಾರ್ಯಕ್ರಮಗಳು ಕೇವಲ ಸರ್ಕಾರಿ ಅನುದಾನ ಬಳಕೆಗೆ ಸೀಮಿತವಾಗದೆ, ಅದರ ಉದ್ದೇಶ ಈಡೇರುವ ರೀತಿಯಲ್ಲಿ ಆಯೋಜನೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Also Read>> ಶಿವಮೊಗ್ಗ, 5 ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿ ಬಂಧನ, ಏನಿದು ಪ್ರಕರಣ?
ಯುವಕರ ಕಾರ್ಯಕ್ರಮಗಳಿಗೆ ನೀಡುವ ಆದ್ಯತೆ ಹಿರಿಯ ನಾಗರಿಕರ ಕಾರ್ಯಕ್ರಮಗಳಿಗೂ ದೊರೆಯಬೇಕು. ಹಿರಿಯರು ಎಂದ ಮಾತ್ರಕ್ಕೆ ಅವರನ್ನು ಕಡೆಗಣಿಸುವ ಮನೋಭಾವ ಇರಬಾರದು. ಅವರಿಗೆ ಗೌರವ ನೀಡುವುದು ಸಮಾಜ ಹಾಗೂ ಆಡಳಿತದ ಜವಾಬ್ದಾರಿ ಎಂದು ಅವರು ಹೇಳಿದ್ದಾರೆ.
ಹಿರಿಯ ನಾಗರಿಕರ ದಿನಾಚರಣೆಯಲ್ಲೇ ಹಿರಿಯರು ಅತಂತ್ರ ಸ್ಥಿತಿಗೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












