ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಈ ವರ್ಷದ ಶಿವಮೊಗ್ಗ(Shivamogga) ದಸರಾ ಸಂಭ್ರಮಕ್ಕೆ ಚಿತ್ರರಂಗ ಹಾಗೂ ಕಿರುತೆರೆಯ ಗಣ್ಯರ ದಂಡೇ ಹರಿದುಬರಲಿದೆ. ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ-ನಟಿಯರು, ನಿರ್ದೇಶಕರು, ಗಾಯಕರು ಹಾಗೂ ಕಿರುತೆರೆ ಕಲಾವಿದರು ಭಾಗವಹಿಸಲಿದ್ದಾರೆ.
ಅ.11ರಂದು ಶ್ರೀನಾಥ್ರಿಂದ ದಸರಾ ಉದ್ಘಾಟನೆ
ಅಕ್ಟೋಬರ್ 11ರಂದು ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ದಸರಾ (Dasara) ಉತ್ಸವಕ್ಕೆ ಹಿರಿಯ ನಟ ಶ್ರೀನಾಥ್ ಅವರು ಅದ್ಧೂರಿ ಚಾಲನೆ ನೀಡಲಿದ್ದಾರೆ. ಈ ಮೂಲಕ ಶಿವಮೊಗ್ಗ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.
ಅ.13ರಂದು ಮಹಿಳಾ ದಸರಾ
ಅಕ್ಟೋಬರ್ 13ರಂದು ಕುವೆಂಪು ರಂಗಮಂದಿರದಲ್ಲಿ ಮಹಿಳಾ ದಸರಾ ಆಯೋಜಿಸಲಾಗಿದೆ. ಹಿರಿಯ ನಟಿ ಅಭಿನಯ ಹಾಗೂ ಸರಿಗಮಪ ಖ್ಯಾತಿಯ ಗಾಯಕಿ ಸುರಕ್ಷಾ ದಾಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಅ.14ರಂದು ಚಲನಚಿತ್ರ ದಸರಾ
ಚಿತ್ರಪ್ರೇಮಿಗಳಿಗಾಗಿ ಅಕ್ಟೋಬರ್ 14ರಂದು ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಚಲನಚಿತ್ರ ದಸರಾ ಆಯೋಜಿಸಲಾಗಿದೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹಾಗೂ ನಟಿ ಸಂಗೀತಾ ಅನಿಲ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ‘ಮಾಲ್ಗುಡಿ ಡೇಸ್’ ಖ್ಯಾತಿಯ ಮಾಸ್ಟರ್ ಮಂಜುನಾಥ್ ಹಾಗೂ ಮಾಸ್ಟರ್ ರೋಹಿತ್ ಶ್ರೀನಾಥ್ ಭಾಗವಹಿಸುವ ‘ಪ್ರತಿಬಿಂಬ’ ಕಿರುಚಿತ್ರಗಳ ಹಬ್ಬ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ಸ್ಥಳೀಯ ಹಿರಿಯ ಕಲಾವಿದರನ್ನು ಅಭಿನಂದಿಸಿ ಗೌರವಿಸಲಾಗುತ್ತದೆ.
ಮಕ್ಕಳ ದಸರಾ, ಕಲಾ ದಸರಾಕ್ಕೆ ಕಲಾವಿದರ ಮೆರುಗು
ಅಕ್ಟೋಬರ್ 15ರಂದು ನಡೆಯಲಿರುವ ಮಕ್ಕಳ ದಸರಾದಲ್ಲಿ ಗಾಯಕಿ ಕೀರ್ತಿ ಎಸ್. ಹಾಗೂ ಕಲಾ ದಸರಾದಲ್ಲಿ ಮಿಮಿಕ್ರಿ ಗೋಪಿ ಅವರು ತಮ್ಮ ಕಲಾ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಅಕ್ಟೋಬರ್ 17ರಂದು ನಟ ಆತೀಶ್ ಎಸ್. ಶೆಟ್ಟಿ ಹಾಗೂ ಅಕ್ಟೋಬರ್ 18ರಂದು ನಡೆಯಲಿರುವ ‘ಭಕ್ತಿ ಝೇಂಕಾರ’ ಕಾರ್ಯಕ್ರಮದಲ್ಲಿ ನಟಿ ಪದ್ಮಾ ವಾಸಂತಿ ಭಾಗವಹಿಸಲಿದ್ದಾರೆ.
ನಾಟ್ಯ, ಜಾನಪದ ವೈಭವಕ್ಕೆ ಪೃಥ್ವಿ ಅಂಬಾರ್
ಅಕ್ಟೋಬರ್ 19ರಂದು ನಡೆಯಲಿರುವ ನಾಟ್ಯ ಹಾಗೂ ಜಾನಪದ ವೈಭವ ಕಾರ್ಯಕ್ರಮದಲ್ಲಿ ನಟ ಹಾಗೂ ನಿರ್ದೇಶಕ ಪೃಥ್ವಿ ಅಂಬಾರ್ ಭಾಗವಹಿಸಲಿದ್ದಾರೆ. ನಾಟ್ಯ ಮತ್ತು ಜಾನಪದ ಕಲೆಯ ವೈವಿಧ್ಯತೆಯೊಂದಿಗೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದ್ದಾರೆ.
ಅ.20ರಂದು ಯುವ ದಸರಾ ಮ್ಯೂಸಿಕಲ್ ನೈಟ್
ಯುವ ಜನತೆಯ ನೆಚ್ಚಿನ ಕಾರ್ಯಕ್ರಮವಾಗಿರುವ ಯುವ ದಸರಾ ಮ್ಯೂಸಿಕಲ್ ನೈಟ್ ಅಕ್ಟೋಬರ್ 20ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಟ-ಸಂಗೀತ ನಿರ್ದೇಶಕ ಸಾಧು ಕೋಕಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯುವಜನರನ್ನು ಆಕರ್ಷಿಸುವ ಸಂಗೀತ ಹಾಗೂ ಮನರಂಜನಾ ಕಾರ್ಯಕ್ರಮಗಳೊಂದಿಗೆ ಯುವ ದಸರಾ ವಿಶೇಷ ಗಮನ ಸೆಳೆಯುವ ನಿರೀಕ್ಷೆಯಿದೆ.
Also Read>> ರಾಜ್ಯ ಜನತೆಗೆ ಮತ್ತೊಂದು ದರ ಏರಿಕೆ ಶಾಕ್? ನಂದಿನಿ ಹಾಲು, ಬಸ್ ಟಿಕೆಟ್ ದುಬಾರಿ ಸಾಧ್ಯತೆ
ಅ.21ರಂದು ಸಾಂಸ್ಕೃತಿಕ ಹಬ್ಬಕ್ಕೆ ತೆರೆ
ಅಕ್ಟೋಬರ್ 21ರಂದು ಗಾಯಕಿ ಸುರೇಖಾ ಹೆಗಡೆ ಅವರ ‘ಸಂಗೀತ ಸೀಮೋಲ್ಲಂಘನ’ ಕಾರ್ಯಕ್ರಮದೊಂದಿಗೆ ಶಿವಮೊಗ್ಗ ದಸರಾ ಸಾಂಸ್ಕೃತಿಕ ಹಬ್ಬಕ್ಕೆ ಅದ್ಧೂರಿ ತೆರೆ ಬೀಳಲಿದೆ.
ಚಿತ್ರರಂಗ, ಕಿರುತೆರೆ, ಸಂಗೀತ, ನಾಟ್ಯ, ಜಾನಪದ ಹಾಗೂ ವಿವಿಧ ಕಲಾ ಪ್ರಕಾರಗಳ ಗಣ್ಯರ ಭಾಗವಹಿಸುವಿಕೆಯಿಂದ ಈ ಬಾರಿಯ ಶಿವಮೊಗ್ಗ ದಸರಾ ಮತ್ತಷ್ಟು ವೈಭವಯುತವಾಗಿ ನಡೆಯುವ ನಿರೀಕ್ಷೆಯಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











